ಎಚ್ಚರಿಕೆಗೂ ಡೊಂಟ್‌ ಕೇರ್‌: ಖಾಸಗಿ ಬಸ್‌ ದರ ಸುಲಿಗೆ..!

By Kannadaprabha NewsFirst Published Sep 30, 2022, 3:30 AM IST
Highlights

ಬೆಂಗಳೂರಿನಿಂದ ವಿವಿಧ ಊರುಗಳ ಟಿಕೆಟ್‌ ದರ 2 ಪಟ್ಟು ದುಬಾರಿ, ಗೌರಿ- ಗಣೇಶ ಹಬ್ಬದ ವೇಳೆ ನೀಡಿದ್ದ ಎಚ್ಚರಿಕೆಗೂ ಕ್ಯಾರೇ ಇಲ್ಲ

ಬೆಂಗಳೂರು(ಸೆ.30):  ದಸರಾ ಹಬ್ಬದ ಸಂದರ್ಭದಲ್ಲಿಯೂ ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ಸುಲಿಗೆ ಮುಂದುವರೆಸಿದ್ದು, ಬೆಂಗಳೂರಿನಿಂದ ರಾಜ್ಯ ವಿವಿಧೆಡೆ ತೆರಳುವ ಖಾಸಗಿ ಬಸ್‌ಗಳ ಟಿಕೆಟ್‌ ದರ ದುಪ್ಪಟ್ಟಾಗಿದೆ. ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಸಾರಿಗೆ ಸಚಿವರು ಹೆಚ್ಚು ದರ ವಸೂಲಿ ಮಾಡದಂತೆ ಮನವಿ ಮಾಡಿದ್ದಲ್ಲದೇ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರು. ಸಾರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಸಾಕಷ್ಟು ಕಡೆ ಖಾಸಗಿ ಬಸ್‌ಗಳ ಮೇಲೆ ದಾಳಿ ನಡೆಸಿ ಹೆಚ್ಚು ಟಿಕೆಟ್‌ ದರ ವಸೂಲಿ ಮಾಡಿದವರಿಗೆ ದಂಡ ವಿಧಿಸಿದ್ದರು. ಆದರೆ ಈ ಯಾವ ಕ್ರಮಕ್ಕೂ ಬಗ್ಗದ ಖಾಸಗಿ ಬಸ್‌ ಸಂಸ್ಥೆಗಳು ದಸರಾ ರಜೆಯಲ್ಲಿಯೂ ಟಿಕೆಟ್‌ ದರ ಏರಿಕೆ ಮಾಡಿವೆ. ದಸರಾ ಹಬ್ಬದ ವೇಳೆಯಲ್ಲಾದರೂ ಖಾಸಗಿ ಬಸ್‌ಗಳ ದುಬಾರಿ ದರಕ್ಕೆ ಕಡಿವಾಣ ಬೀಳಬಹುದು ಎಂಬ ಪ್ರಯಾಣಿಕರ ನಿರೀಕ್ಷೆ ಹುಸಿಯಾಗಿದೆ.

ಅ.1ರ ಶನಿವಾರದಿಂದ ಅ.5ರವರೆಗೂ ಸಾಲು ಸಾಲು ರಜೆಗಳಿವೆ. ಶುಕ್ರವಾರ ಸಂಜೆಯಿಂದಲೇ ಟೆಕ್ಕಿಗಳು, ಕಂಪನಿ ಉದ್ಯೋಗಿಗಳು ಸೇರಿದಂತೆ ಹಲವರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳಲು ಮುಂದಾಗುತ್ತಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಖಾಸಗಿ ಬಸ್‌ಗಳು ಶುಕ್ರವಾರದಿಂದಲೇ ಟಿಕೆಟ್‌ ದರ ದುಪ್ಪಟ್ಟು ಹೆಚ್ಚಿಸಿ ಸುಲಿಗೆ ಆರಂಭಿಸಿವೆ. ಖಾಸಗಿ ಬಸ್‌ಗಳ ವೆಬ್‌ಸೈಟ್‌, ಬಸ್‌ ಬುಕ್ಕಿಂಗ್‌ ಆ್ಯಪ್‌ಗಳ ಮಾಹಿತಿ ಪ್ರಕಾರ, ಮಂಗಳವಾರ (ಅ.5) ರಾತ್ರಿವರೆಗೂ ಬೆಂಗಳೂರಿನಿಂದ ರಾಜ್ಯದ ವಿವಿಧೆಡೆ ಸಂಚರಿಸುವ ಖಾಸಗಿ ಬಸ್‌ಗಳ ದರ ಸಾಮಾನ್ಯ ದಿನಗಳಿಗಿಂತ ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ.

ಗಣೇಶ ಹಬ್ಬ: ಪ್ರಯಾಣಿಕರ ಸುಲಿಗೆಗಿಳಿದ ಖಾಸಗಿ ಬಸ್ ಮಾಲೀಕರಿಗೆ ಶ್ರೀರಾಮುಲು ವಾರ್ನಿಂಗ್

ಎಷ್ಟು ದರ ಹೆಚ್ಚಳ?

ಬೆಂಗಳೂರಿನಿಂದ ಉಡುಪಿಗೆ ಸಾಮಾನ್ಯ ದಿನಗಳಲ್ಲಿ ಪ್ರಯಾಣ ದರ ಎಸಿ ಸ್ಲೀಪರ್‌, ಕ್ಲಬ್‌ ಕ್ಲಾಸ್‌ ಸೇರಿದಂತೆ ವಿವಿಧ ಖಾಸಗಿ ಬಸ್‌ಗಳಲ್ಲಿ .700- 750 ಇದ್ದು, ಸೆ. 30ರಿಂದ ಅ.4ರವರೆಗೆ .1,400ರಿಂದ 1,800 ಆಗಿದೆ. ಅದೇ ರೀತಿ, ಬೆಳಗಾವಿಗೆ .800-900 ಇದ್ದದ್ದು, .1,100ರಿಂದ 1,500 ಆಗಿದೆ. ಹುಬ್ಬಳ್ಳಿಗೆ .750-800 ಬದಲಿಗೆ 1,200ರಿಂದ 1,500 ಆಗಿದೆ. ಕಲಬುರಗಿಗೆ 800-900 ಇದ್ದದ್ದು 1,200- 1500 ಆಗಿದೆ.

ಬಹುತೇಕ ಬಸ್‌ಗಳ ಬುಕ್ಕಿಂಗ್‌ ಪೂರ್ಣ

ಶನಿವಾರದಿಂದ ಸತತ ಐದು ದಿನ ರಜೆ ಹಿನ್ನೆಲೆ ಬೆಂಗಳೂರಿನಿಂದ ಸಾಕಷ್ಟುಮಂದಿ ಊರುಗಳಿಗೆ ತೆರಳುತ್ತಿದ್ದಾರೆ. ಹೀಗಾಗಿ, ಖಾಸಗಿ ಬಸ್‌ಗಳ ಬಹುತೇಕ ಬುಕ್ಕಿಂಗ್‌ ಪೂರ್ಣಗೊಂಡಿದೆ. ಕೆಲ ಟ್ರಾವಲ್‌ ಏಜೆನ್ಸಿಗಳು ಬೇಡಿಕೆ ಹಿನ್ನೆಲೆ ಹೆಚ್ಚುವರಿ ಬಸ್‌ ಬಿಡಲು ಚಿಂತನೆ ನಡೆಸಿವೆ.
 

click me!