ಬೆಂಗಳೂರು: ಸಾಲು ಸಾಲು ರಜೆ ಊರಿಗೆ ಹೊರಟ ಜನ, ಸುಲಿಗೆಗೆ ಇಳಿದ ಖಾಸಗಿ ಬಸ್‌ಗಳು..!

By Kannadaprabha NewsFirst Published Mar 8, 2024, 10:28 AM IST
Highlights

ಮಿತಿಮೀರಿ ಟಿಕೆಟ್ ದರ ವಸೂಲಿ ಮಾಡುತ್ತಿದ್ದ ಖಾಸಗಿ ಬಸ್‌ಗಳ ವಿರುದ್ಧ ಸಾರಿಗೆ ಇಲಾಖೆ ಕಾರ್ಯಾಚರಣೆ ನಡೆಸಿತು. ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರಿಗೆ ನೀಡಿದ್ದ ಟಿಕೆಟ್ ಹಾಗೂ ಅದರಲ್ಲಿ ನಮೂದಾಗಿದ್ದ ಮೊತ್ತವನ್ನು ತವನ್ನು ಪರಿಶೀಲಿಸಿ ದುಪ್ಪಟ್ಟು ಪ್ರಯಾಣ ದರ ವಸೂಲಿ ಮಾಡಿದ್ದ 5ಕ್ಕೂ ಹೆಚ್ಚಿನ ಬಸ್‌ಗಳಿಗೆ ಭಾರೀ ದಂಡ ವಿಧಿಸಲಾಯಿತು.

ಬೆಂಗಳೂರು(ಮಾ.08):  ಶಿವರಾತ್ರಿ ಹಬ್ಬ ಸೇರಿದಂತೆ ಮೂರು ದಿನಗಳ ರಜೆ ಇರುವ ಕಾರಣ ಗುರುವಾರ ರಾತ್ರಿ ಬೆಂಗಳೂರಿನಿಂದ ಬೇರೆ ಜಿಲ್ಲೆಗಳಿಗೆ ಭಾರೀ ಪ್ರಮಾಣದಲ್ಲಿ ಜನರು ತೆರಳಿದ್ದು, ಮೆಜೆಸ್ಟಿಕ್ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು.

ರಾತ್ರಿ ಮೆಜೆಸ್ಟಿಕ್, ಶಾಂತಿನಗರ, ಮೈಸೂರು ರಸ್ತೆ ಬಸ್ ನಿಲ್ದಾಣ ಸೇರಿದಂತೆ ಇನ್ನಿತರ ಬಸ್ ನಿಲ್ದಾಣ ಹಾಗೂ ಪಿಕಪ್ ಪಾಯಿಂಟ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಮೈಸೂರು ರಸ್ತೆ, ತುಮಕೂರು ರಸ್ತೆ, ಮೆಜೆಸ್ಟಿಕ್, ಕೆಆರ್ ಪುರ, ಎಲೆಕ್ಟ್ರಾನಿಕ್ ಸಿಟಿ ರಸ್ತೆ ಸೇರಿದಂತೆ ಮತ್ತಿತರ ಪ್ರಮುಖ ಮಾರ್ಗಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಪ್ರಯಾಣಿಕರ ಒತ್ತಡವನ್ನು ನಿಭಾಯಿಸಲು ಕೆಎಸ್ಸಾರ್ಟಿಸಿಯಿಂದ ಗುರುವಾರ ರಾತ್ರಿ 1.500 ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ ಮಾಡಲಾಯಿತು. ಸುಗಮ ಸೇವೆ ನೀಡಲು ಪ್ರಮುಖ ನಿಲ್ದಾಣಗಳಲ್ಲಿ ಹೆಚ್ಚುವರಿ ಸಿಬ್ಬಂದಿ, ಅಧಿಕಾರಿಗಳು ತಡರಾತ್ರಿ 1 ಗಂಟೆಯವರೆಗೆ ಕಾರ್ಯನಿರ್ವಹಿಸಿದರು. ನಗರದ ವಿವಿಧ ಬಡಾವಣೆಗಳಿಂದ ಬಸ್ ನಿಲ್ದಾಣಗಳಿಗೆ ಬರುವ ಜನರಿಗಾಗಿ ರಾತ್ರಿ ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿತ್ತು. ಚಾಮರಾಜಪೇಟೆ, ಬನಶಂಕರಿ, ಯಶವಂತಪುರ ಸೇರಿದಂತೆ ಇನ್ನಿತರ ಬಸ್ ನಿಲ್ದಾಣ, ಬಡಾವಣೆಗಳಿಂದ ಬಿಎಂಟಿಸಿ ಬಸ್‌ಗಳು ಸೇವೆ ನೀಡಿದವು.

ನಿವೃತ್ತ ಸಾರಿಗೆ ನೌಕರರಿಗೂ ವೇತನ ಹೆಚ್ಚಳ ಬಾಕಿಗೆ ಸಚಿವ ರಾಮಲಿಂಗಾರೆಡ್ಡಿ ಒಪ್ಪಿಗೆ

ದುಪ್ಪಟ್ಟು ದರ: ದಂಡ

ಇದೇ ವೇಳೆ ಮಿತಿಮೀರಿ ಟಿಕೆಟ್ ದರ ವಸೂಲಿ ಮಾಡುತ್ತಿದ್ದ ಖಾಸಗಿ ಬಸ್‌ಗಳ ವಿರುದ್ಧ ಸಾರಿಗೆ ಇಲಾಖೆ ಕಾರ್ಯಾಚರಣೆ ನಡೆಸಿತು. ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರಿಗೆ ನೀಡಿದ್ದ ಟಿಕೆಟ್ ಹಾಗೂ ಅದರಲ್ಲಿ ನಮೂದಾಗಿದ್ದ ಮೊತ್ತವನ್ನು ತವನ್ನು ಪರಿಶೀಲಿಸಿ ದುಪ್ಪಟ್ಟು ಪ್ರಯಾಣ ದರ ವಸೂಲಿ ಮಾಡಿದ್ದ 5ಕ್ಕೂ ಹೆಚ್ಚಿನ ಬಸ್‌ಗಳಿಗೆ ಭಾರೀ ದಂಡ ವಿಧಿಸಲಾಯಿತು.

click me!