ಸರ್ಕಾರದ ವಿರುದ್ಧ ಹಕ್ಕುಚ್ಯುತಿ ಮಂಡಿಸ್ತೀನಿ: ಸಿದ್ದರಾಮಯ್ಯ

By Kannadaprabha NewsFirst Published May 22, 2021, 11:15 AM IST
Highlights

* ನಾನು ಡೀಸಿಗಳ ಸಭೆಯಲ್ಲಿ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದೆ
* ಸಭೆ ನಡೆಸಲು ಹೊರಟಿರಲಿಲ್ಲ
* ಪ್ರತಿಪಕ್ಷ ನಾಯಕರಿಗೆ ಮಾಹಿತಿ ನಕಾರ ಹಕ್ಕುಚ್ಯುತಿ
 

ಬೆಂಗಳೂರು(ಮೇ.22): ಕೊರೋನಾದಿಂದ ರಾಜ್ಯದಲ್ಲಿ ಉಂಟಾಗಿರುವ ಪರಿಸ್ಥಿತಿ ಮತ್ತು ಸೋಂಕಿತರ ಪ್ರಾಣ ರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾ​ಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ತಡೆಯೊಡ್ಡಿರುವ ಸರ್ಕಾರದ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸುವುದಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಡೆಸಲು ಉದ್ದೇಶಿಸಿದ್ದು ಜಿಲ್ಲಾ​ಕಾರಿಗಳ ಸಭೆ ಅಥವಾ ಪ್ರಗತಿ ಪರಿಶೀಲನೆ ಸಭೆ ಅಲ್ಲ. ಕೇವಲ ಮಾಹಿತಿ ಪಡೆಯಲು ಮುಂದಾಗಿದ್ದೆ ಅಷ್ಟೆ. ಸಾಂವಿಧಾನಿಕ ಹುದ್ದೆಯಾದ ಪ್ರತಿಪಕ್ಷದ ನಾಯಕರಿಗೆ ಮಾಹಿತಿ ನಿರಾಕರಿಸುವುದು ಹಕ್ಕುಚ್ಯುತಿಯಾಗುತ್ತದೆ. ಹೀಗಾಗಿ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸಲು ಉದ್ದೇಶಿಸಿದ್ದೇನೆ ಎಂದರು.

ಕೊರೋನಾದಿಂದಾಗಿ ರಾಜ್ಯ ಸೂತಕದ ಮನೆಯಾಗಿದೆ. ಆಕ್ಸಿಜನ್‌, ಬೆಡ್‌, ವೆಂಟಿಲೇಟರ್‌ ಸಿಗದೆ ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಯಾ ಜಿಲ್ಲೆಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾ​ಧಿಕಾರಿಗಳಿಂದ ಮಾಹಿತಿ ಪಡೆಯಲು ಉದ್ದೇಶಿಸಿದ್ದೆ. ಇದಕ್ಕೆ ಸರ್ಕಾರ ಅನುಮತಿ ನಿರಾಕರಿಸಿದೆ. 2009ರಲ್ಲಿಯೂ ಸರ್ಕಾರ ಇದೇ ನಿಲುವು ಅನುಸರಿಸಿತ್ತು. ಸರ್ಕಾರದ ಹುಳುಕು ಹೊರ ಬರುತ್ತದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳು ಜಿಲ್ಲಾ​ಕಾರಿಗಳಿಂದ ಮಾಹಿತಿ ಸಂಗ್ರಹಿಸಲು ಅನುಮತಿ ನಿರಾಕರಿಸಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

'ಕೊರೋನಾ ಕೇಸ್‌ ಕಮ್ಮಿ ತೋರಿಸಲು ಟೆಸ್ಟ್‌ ಇಳಿಕೆ'

ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೊಡಿ ಎಂದು ಈವರೆಗೆ 12 ಪತ್ರಗಳನ್ನು ಬರೆದಿದ್ದೇನೆ. ಉತ್ತರ ಬಂದಿಲ್ಲ. ಉತ್ತರಿಸುವ ಸೌಜನ್ಯವೂ ಮುಖ್ಯಮಂತ್ರಿಯವರಿಗೆ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜನತೆಗೆ ದ್ರೋಹವೆಸಗುತ್ತಿವೆ ಎಂದು ಕಿಡಿಕಾರಿದರು.

ಕೊರೋನಾ ನಿಯಂತ್ರಣ ಮತ್ತು ಸೋಂಕಿತರ ಪ್ರಾಣ ರಕ್ಷಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರುಪಯುಕ್ತ ಎಂಬುದು ಸಾಬೀತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನತೆ ಸರ್ಕಾರಕ್ಕೆ ಹಾಗೂ ಸಿಎಂ ಅವರಿಗೆ ಶಾಪ ಹಾಕುತ್ತಿರುವುದೇ ಇದಕ್ಕೆ ಸಾಕ್ಷಿ.

ಪ್ರಧಾನಿ ನರೇಂದ್ರ ಮೋದಿಯವರೂ ಪ್ರತಿಪಕ್ಷಗಳ ಯಾವುದೇ ಪತ್ರಕ್ಕೂ ಉತ್ತರ ನೀಡುವುದಿಲ್ಲ. ಅದೇ ನಿಲುವನ್ನು ಯಡಿಯೂರಪ್ಪ ಅವರೂ ಅನುಸರಿಸುತ್ತಿದ್ದಾರೆ. ಸತ್ಯ ಹೇಳಿದರೆ ಕೇಸು ದಾಖಲಿಸುವ, ಬಂಧಿ​ಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದಕ್ಕೆ ನಮ್ಮ ಪಕ್ಷದ ಕಾರ್ಯಕರ್ತರು ಹೆದರಬಾರದು ಎಂದರು.

ಪ್ರವಾಹ ಪರಿಹಾರದಲ್ಲಿ ತಾರತಮ್ಯ:

ಪ್ರವಾಹ ಪರಿಹಾರದ ವಿಚಾರದಲ್ಲಿಯೂ ಕೇಂದ್ರ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಗುಜರಾತ್‌ಗೆ ಒಂದು ಸಾವಿರ ಕೋಟಿ ರು. ಪರಿಹಾರ ಘೋಷಣೆ ಮಾಡಿರುವ ಪ್ರಧಾನಿಯವರು ಚಂಡಮಾರುತದಿಂದ ತತ್ತರಿಸಿರುವ ಕರ್ನಾಟಕಕ್ಕೆ ನಯಾಪೈಸೆ ಕೊಟ್ಟಿಲ್ಲ. ಚಂಡಮಾರುತದಿಂದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಹಾನಿ ಸಂಭವಿಸಿದೆ. ಆದರೂ ಪರಿಹಾರ ಕೊಟ್ಟಿಲ್ಲ ಎಂದರು.
 

click me!