ಇನ್ಮುಂದೆ ಹೋಂ ಐಸೋಲೇಷನ್‌ ಇಲ್ಲ, ಕೋವಿಡ್‌ ಕೇಂದ್ರಕ್ಕೆ ದಾಖಲು: ಸುಧಾಕರ್‌

By Kannadaprabha NewsFirst Published May 22, 2021, 10:28 AM IST
Highlights

* ಹೋಂ ಐಸೋಲೇಷನ್‌ನಿಂದ ಸೋಂಕು ವ್ಯಾಪಕ ಹರಡಿಕೆ
* ವೈದ್ಯರ ನೇಮಕಾತಿ ಪ್ರಕ್ರಿಯೆ ಪೂರ್ಣ
* ರಾಜ್ಯದಲ್ಲಿ ಆಕ್ಸಿಜನ್‌, ಲಸಿಕೆಗೆ ಯಾವುದೇ ಕೊರತೆ ಇಲ್ಲ 

ದಾವಣಗೆರೆ/ಹಾವೇರಿ(ಮೇ.22): ಹೋಂ ಐಸೋಲೇಷನ್‌ಗೊಳಗಾದ ಕೋವಿಡ್‌ ಸೋಂಕಿತರಿಂದಲೇ ಇತರರಿಗೂ ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಕೋವಿಡ್‌ ಸೋಂಕಿತರಿಗೆ ಹೋಂ ಐಸೋಲೇಷನ್‌ಗೆ ಅವಕಾಶ ನೀಡದೇ, ಕಡ್ಡಾಯವಾಗಿ ಕೋವಿಡ್‌ ಕೇರ್‌ ಸೆಂಟರ್‌ನಲ್ಲೇ ದಾಖಲು ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಜಿಲ್ಲಾಡಳಿತಕ್ಕೆ ಆದೇಶಿಸಿದ್ದಾರೆ. 

ದಾವಣಗೆರೆ ನಗರದಲ್ಲಿ ಶುಕ್ರವಾರ ಜಿಲ್ಲೆಯ ಕೋವಿಡ್‌ ಸ್ಥಿತಿಗತಿ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್‌ ಸೋಂಕಿತರಿಗೆ ಇನ್ನು ಹೋಂ ಐಸೋಲೇಷನ್‌ ಇಲ್ಲ. ನೇರವಾಗಿ ಅಂತಹವರನ್ನು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ದಾಖಲಿಸಬೇಕು. ಹೀಗೆ ಮಾಡುವುದರಿಂದ ಇತರರಿಗೂ ಸೋಂಕು ಹರಡುವುದನ್ನು ತಡೆಯಬಹುದು ಎಂದರು. ಉತ್ತಮ ಸೌಲಭ್ಯವಿರುವ ಹಾಸ್ಟೆಲ್‌, ಸರ್ಕಾರಿ-ಖಾಸಗಿ ಸಮುದಾಯ ಭವನಗಳನ್ನು ಗುರುತಿಸಿ, ಕೋವಿಡ್‌ ಕೇರ್‌ ಸೆಂಟರ್‌ ಆಗಿ ಪರಿವರ್ತಿಸಬೇಕು ಎಂದು ಸೂಚಿಸಿದರು.

"

2150 ವೈದ್ಯರ ನೇಮಕ: 

ರಾಜ್ಯದಲ್ಲಿ 2150 ವೈದ್ಯರು, 780 ತಜ್ಞ ವೈದ್ಯರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು 2 ದಿನಗಳಲ್ಲೇ ಆ ಎಲ್ಲರಿಗೂ ಸ್ಥಳ ನಿಯುಕ್ತಿ ಆದೇಶ ಸಿಗಲಿದೆ. ವೈದ್ಯರು, ತಜ್ಞ ವೈದ್ಯರ ಸ್ಥಳ ನಿಯೋಜನೆಯಾಗುತ್ತಿದ್ದಂತೆಯೇ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯೂ ನೀಗಲಿದೆ ಎಂದು ಸಚಿವ ಸುಧಾಕರ್‌ ಮಾಹಿತಿ ನೀಡಿದರು. ಆಕ್ಸಿಜನ್‌ ಬೆಡ್‌, ವೆಂಟಿಲೇಟರ್‌ ಬಳಕೆಗೆ ಸಂಬಂಧಿಸಿದಂತೆ ಲಭ್ಯವಿರುವ ಸಿಬ್ಬಂದಿಗೆ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸೂಕ್ತ ತರಬೇತಿ ಕೊಡಿಸಬೇಕು ಎಂದು ದಾವಣಗೆರೆ ಜಿಲ್ಲಾ ಕೋವಿಡ್‌ ಸಭೆಯಲ್ಲಿ ತಿಳಿಸಿದರು.

ಕೊರೋನಾ ಮಣಿಸಲು 12 ಬೆಸ್ಟ್‌ ವಿಧಾನ: ಕೇಂದ್ರದಿಂದ ಬಿಡುಗಡೆ!

ಬ್ಲ್ಯಾಕ್‌ ಫಂಗಸ್‌ ಬಗ್ಗೆ ಆತಂಕ ಬೇಡ

ರಾಜ್ಯದಲ್ಲಿ ಬ್ಲ್ಯಾಕ್‌ ಫಂಗಸ್‌ ಸೋಂಕು ಕಂಡು ಬಂದಿದ್ದು ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕುವಂತೆ ಮಾಡಲಾಗಿದೆ. ಅಗತ್ಯವಿರುವ ಔಷಧಿ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಯಾರೂ ಸಹ ಆತಂಕ ಪಡುವ ಪ್ರಮೇಯವಾಗಲೀ, ಅಗತ್ಯವಾಗಲೀ ಇಲ್ಲ ಎಂದು ಸುಧಾಕರ್‌ ತಿಳಿಸಿದರು.

ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು, ಕೋವಿಡ್‌ ಚಿಕಿತ್ಸೆಯಲ್ಲಿ ಅತಿಯಾದ ಸ್ಟಿರಾಯ್ಡ್‌ ಬಳಕೆ, ಅನಿಯಂತ್ರಿತ ಮಧುಮೇಹ ಮತ್ತಿತರೆ ಕಾರಣಗಳಿಂದಾಗಿ ಈ ಸೋಂಕು ಉಂಟಾಗುತ್ತಿದೆ. ಕೋವಿಡ್‌ ಚಿಕಿತ್ಸೆ ಪಡೆದು, ಗುಣಮುಖರಾಗಿ ಬಿಡುಗಡೆಯಾದವರ ಆರೋಗ್ಯ ತಪಾಸಣೆಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಬಿಡುಗಡೆಯಾದ ದಿನದಿಂದ 3 ದಿನ, 7 ದಿನ, 15 ದಿನಗಳ ಅವಧಿಯಲ್ಲಿ ಅಂತಹವರಿಗೆ ಯಾವ ಬಗೆಯ ಪರೀಕ್ಷೆ ಮಾಡಬೇಕೆಂಬುದನ್ನು ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದರು.

ವಾರದ ಬಳಿಕ ಸೋಂಕಿನ ಪ್ರಮಾಣ ಇಳಿಕೆ

ಇನ್ನೊಂದು ವಾರ ಮಾತ್ರ ಸೋಂಕಿನ ಪ್ರಮಾಣ ಹೆಚ್ಚಾಗಬಹುದು. ನಂತರ ಕಡಿಮೆಯಾಗಲಿದೆ. ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ, ರಾಜ್ಯದ ಇತರೆ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿತ್ತು. ಈಗ ಅಲ್ಲೆಲ್ಲಾ ಕಡಿಮೆಯಾಗಿದೆ ಎಂದು ಸಚಿವ ಸುಧಾಕರ್‌ ಹೇಳಿದರು.

ಈಗ ಕೆಲ ಜಿಲ್ಲೆಗಳಲ್ಲಿ ನಿಧಾನವಾಗಿ ಸೋಂಕು ಏರಿಕೆಯಾಗುತ್ತಿದೆ. ಆರಂಭದಲ್ಲಿ ಸೋಂಕು ಏರಿಕೆಯಾಗಿದ್ದ ಜಿಲ್ಲೆಗಳಲ್ಲಿ ಈಗ ಕಡಿಮೆಯಾಗಿದೆ. ಶೇ.47ರಷ್ಟು ಪಾಸಿಟಿವಿಟಿ ಇದ್ದಂತಹ ಜಿಲ್ಲೆಗಳಲ್ಲಿ ಈಗ ಶೇ.23-24ಕ್ಕೆ ಬಂದಿದೆ. ಇನ್ನೂ ಒಂದು ವಾರ ಬಹುಶಃ ಸೋಂಕಿನ ಪ್ರಮಾಣ ಏರಿಕೆಯಾಗಬಹುದು. ಅಷ್ಟರಲ್ಲಿ ನಾವು, ಸಚಿವರು, ಶಾಸಕರು, ಅಧಿಕಾರಿಗಳು ಬಿಗಿಯಾದ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು. ತಜ್ಞರು ಜೂನ್‌ ಅಂತ್ಯದ ವೇಳೆಗೆ ಸೋಂಕು ಹತೋಟಿಗೆ ಬರಲಿದೆ ಎಂದಿದ್ದಾರೆ. ಎರಡನೇ ಅಲೆ ಬಹಳಷ್ಟುಕಡಿಮೆ ಆಗಲಿದೆ ಎಂದು ತಜ್ಞರು ವರದಿ ಕೊಟ್ಟಿದ್ದಾರೆ. ತಜ್ಞರು ಹೇಳಿದಂತೆಯೆ ಇಲ್ಲಿ ವರೆಗೆ ನಡೆದಿದೆ. ನಾವು ಸಹ ಜೂನ್‌ ಅಂತ್ಯದ ವೇಳೆಗೆ ಎರಡನೆ ಅಲೆ ಕಡಿಮೆ ಆಗುತ್ತದೆ ಎಂದು ನಂಬಿದ್ದೇವೆ ಎಂದರು.

ಗ್ರಾಮೀಣ ಭಾಗಗಳಲ್ಲಿ ಶೇ.40, 45, 47ರಷ್ಟು ಪಾಸಿಟಿವಿಟಿ ಏರಿಕೆಯಾಗಿ, ಶೇ.23-26ಕ್ಕಿ ಇಳಿದಿದೆ. ಗ್ರಾಮೀಣ ಭಾಗದಲ್ಲೂ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಕೊರೋನಾ ಸೋಂಕು ನಿಯಂತ್ರಣಕ್ಕೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಆಕ್ಸಿಜನ್‌, ಲಸಿಕೆ ಕೊರತೆ ಇಲ್ಲ

ರಾಜ್ಯದಲ್ಲಿ ಆಕ್ಸಿಜನ್‌ಗೆ ಯಾವುದೇ ಸಮಸ್ಯೆ ಇಲ್ಲ, ಕೇಂದ್ರದಿಂದಲೂ ಸಾಕಷ್ಟು ಪ್ರಮಾಣದ ಆಕ್ಸಿಜನ್‌ ಬಂದಿದೆ. 10 ಲಕ್ಷ ರೆಮಿಡಿಸಿವರ್‌ ಸಹ ರಾಜ್ಯಕ್ಕೆ ಪೂರೈಕೆಯಾಗಿದೆ. ಲಸಿಕೆ ಕೊರತೆಯೂ ಇಲ್ಲ. ಈಗ ನ್ಯೂಕರ್‌ ಮೈಕೋಸಿಸ್‌ಗೆ ಔಷಧಿ ಕೊರತೆ ಇದ್ದು, ಆ ಔಷಧಿ ಕೊಡಿಸುವುದಕ್ಕೆ ಕೇಂದ್ರ ಸಚಿವ ಸದಾನಂದಗೌಡ ಅವರು ಶತಪ್ರಯತ್ನ ಮಾಡುತ್ತಿದ್ದಾರೆ ಎಂದು ಸಚಿವ ಸುಧಾಕರ್‌ ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!