ಈ ತಿಂಗಳು 2ನೇ ಡೋಸ್‌ ಪಡೆವವರಿಗೆ ಆದ್ಯತೆ

By Kannadaprabha News  |  First Published Aug 7, 2021, 8:44 AM IST

*  ಮೇನಲ್ಲಿ ಮೊದಲ ಡೋಸ್‌ ಪಡೆದ 35 ಲಕ್ಷ ಜನರು ಈಗ 2ನೇ ಡೋಸ್‌ಗೆ ಅರ್ಹ
*  ಮೊದಲ ಡೋಸ್‌ ಲಸಿಕೆ ಕಡಿಮೆ ನೀಡಿ, 2ನೇ ಡೋಸ್‌ಗೆ ಒತ್ತು
*  ಗೊಂದಲ ಇದ್ದರೆ 104ಕ್ಕೆ ಕರೆ ಮಾಡಿ
 


ಬೆಂಗಳೂರು(ಆ.07): ರಾಜ್ಯದಲ್ಲಿ ಈ ತಿಂಗಳು ಕೊರೋನಾ ಲಸಿಕೆಯ ಎರಡನೇ ಡೋಸ್‌ಗೆ ಹೆಚ್ಚು ಒತ್ತು ನೀಡಲು ಸರ್ಕಾರ ನಿರ್ಧರಿಸಿದ್ದು, ಆದ್ಯತೆಯ ಮೇರೆಗೆ ಎರಡನೇ ಡೋಸ್‌ ನೀಡುವಂತೆ ರಾಜ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಸೂಚನೆ ನೀಡಿದೆ.

ಮೇ ತಿಂಗಳಿನಲ್ಲಿ ಲಸಿಕೆ ಪಡೆದ ರಾಜ್ಯದ ಸುಮಾರು 35 ಲಕ್ಷ ಮಂದಿ ಈಗ ಎರಡನೇ ಡೋಸ್‌ ಪಡೆಯಲು ಅರ್ಹರಾಗುತ್ತಿದ್ದಾರೆ. ಇವರೆಲ್ಲರಿಗೂ ಸರಿಯಾದ ಸಂದರ್ಭದಲ್ಲಿ ಎರಡನೇ ಡೋಸ್‌ ನೀಡುವುದು ಅನಿವಾರ್ಯ ಆಗಿದೆ. ರಾಜ್ಯದಲ್ಲಿ ಆಗಸ್ಟ್‌ ತಿಂಗಳಿನಲ್ಲಿ ಸುಮಾರು 30 ಲಕ್ಷ ಡೋಸ್‌ಗಳನ್ನು ಎರಡನೇ ಡೋಸ್‌ ಪಡೆಯುವವರಿಗೆಂದೇ ಮೀಸಲಿಡಬೇಕಿದೆ. ಆದ್ದರಿಂದ ಮೊದಲ ಡೋಸ್‌ ಲಸಿಕೆ ನೀಡುವುದನ್ನು ಸ್ವಲ್ಪ ಕಡಿಮೆ ಮಾಡಿ ಎರಡನೇ ಡೋಸ್‌ಗೆ ಒತ್ತು ನೀಡಲು ಆರೋಗ್ಯ ಇಲಾಖೆಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

Latest Videos

undefined

ಕೋಲಾರದ ಮಾಲೂರಿನಲ್ಲಿ ಕೋವ್ಯಾಕ್ಸಿನ್‌ ಘಟಕ ಜೂನ್‌ ಅಥವಾ ಜುಲೈಯಲ್ಲಿ ಕಾರ್ಯಾರಂಭ ಮಾಡಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ಅಲ್ಲಿ ಉತ್ಪಾದನೆಯಾದ ಲಸಿಕೆಗೆ ಗುಣಮಟ್ಟದ ಸಮಸ್ಯೆ ಆಗಿರುವುದರಿಂದ ಬಳಕೆಗೆ ಲಭ್ಯ ಆಗಿಲ್ಲ. ಆದ್ದರಿಂದ ಸಿಗುತ್ತಿರುವ ಲಸಿಕೆಯಲ್ಲೇ ಲಸಿಕಾ ಅಭಿಯಾನವನ್ನು ನಿರ್ವಹಿಸಬೇಕಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋವಿಡ್ ವ್ಯಾಕ್ಸಿನ್ ಕುರಿತ ಈ ಮಿಥ್ಯೆಗಳಿಗೆ ಬಲಿಯಾಗಬೇಡಿ!

ಮೊದಲ ಡೋಸ್‌ ಪಡೆಯಲು ಅವಕಾಶ ನೀಡುತ್ತಿದ್ದರೂ ಎರಡನೇ ಡೋಸ್‌ಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಗುರುವಾರ 5 ಲಕ್ಷ ಡೋಸ್‌ ಲಸಿಕೆ ಬಂದಿದ್ದು, ಶುಕ್ರವಾರ ಸಹ ಲಸಿಕೆ ಬರುವ ಸಾಧ್ಯತೆ ಇದೆ. ಲಸಿಕೆಯ ಪೂರೈಕೆ ನಿಧಾನವಾಗಿ ಹೆಚ್ಚಳವಾಗುತ್ತಿದೆ ಎಂದು ಲಸಿಕೆ ಅಭಿಯಾನದ ಉಪ ನಿರ್ದೇಶಕಿ ಡಾ. ರಜನಿ ನಾಗೇಶ್‌ ರಾವ್‌ ಹೇಳಿದ್ದಾರೆ.

ಜಿಲ್ಲೆಗಳಿಗೆ ಹಂಚಿಕೆಯಾದ ಲಸಿಕೆಯನ್ನು ಸಂಪೂರ್ಣ ಬಳಸಿ, ಎರಡನೇ ಡೋಸ್‌ಗೆ ಆದ್ಯತೆ ನೀಡಬೇಕು. ಮೊದಲ ಡೋಸ್‌ ಲಸಿಕೆ ಪಡೆದ ಫಲಾನುಭವಿಗಳ ಎರಡನೇ ಡೋಸ್‌ ಪಡೆಯುವ ದಿನವನ್ನು ಪೂರ್ವ ನಿಗದಿ ಮಾಡಬೇಕು. ಕೋವಿನ್‌ ಪೋರ್ಟಲ್‌ನಲ್ಲಿ ಎರಡನೇ ಡೋಸ್‌ ಲಸಿಕೆ ವಿತರಣೆಗೆ ಪ್ರತ್ಯೇಕ ಸ್ಲಾಟ್‌ಗಳ ವ್ಯವಸ್ಥೆ ಮಾಡಬೇಕು. ಕೋವಿಶೀಲ್ಡ್‌ ಲಸಿಕೆಯಲ್ಲಿ ಹೆಚ್ಚಿನ ಡೋಸ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆಯನ್ನು ಎರಡನೇ ಡೋಸ್‌ಗೆ ಮಾತ್ರ ಬಳಸಬೇಕು. ಲಸಿಕಾ ಕೇಂದ್ರಗಳಲ್ಲಿ ಎರಡನೇ ಡೋಸ್‌ಗಾಗಿ ಪ್ರತ್ಯೇಕ ದಿನ ಅಥವಾ ಸಮಯವನ್ನು ನಿಗದಿಪಡಿಸಬೇಕು. ಮೊದಲ ಮತ್ತು ಎರಡನೇ ಡೋಸ್‌ ಲಸಿಕೆಗೆ ಫಲಾನುಭವಿಗಳು ಪ್ರತ್ಯೇಕವಾಗಿ ಸಾಲಿನಲ್ಲಿ ನಿಲ್ಲಲು ವ್ಯವಸ್ಥೆ ಮಾಡಬೇಕು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ನಿರ್ದೇಶಕಿ ಅರುಂಧತಿ ಚಂದ್ರಶೇಖರ್‌ ಸೂಚಿಸಿದ್ದಾರೆ.

ಗೊಂದಲ ಇದ್ದರೆ 104ಕ್ಕೆ ಕರೆ ಮಾಡಿ

ಲಸಿಕೆ ಪಡೆದರೂ ಸರಿಯಾಗಿ ನೋಂದಣಿ ಆಗಿಲ್ಲ, ಲಸಿಕೆ ಪಡೆದಿರುವ ಸಂದೇಶ ಬಂದಿಲ್ಲ, ಪ್ರಮಾಣ ಪತ್ರ ಬಂದಿಲ್ಲ ಮುಂತಾದ ಲಸಿಕೆ ಸಂಬಂಧಿ ಸಮಸ್ಯೆಗಳ ಬಗ್ಗೆ ಸಹಾಯವಾಣಿ ಸಂಖ್ಯೆ 104ಕ್ಕೆ ಕರೆ ಮಾಡಬಹುದು. ಈ ನಂಬರ್‌ಗೆ ಕರೆ ಮಾಡಿದರೆ ಆಯಾ ಜಿಲ್ಲೆಗಳಲ್ಲಿನ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಡಾ.ರಜನಿ ನಾಗೇಶ್‌ರಾವ್‌ ಹೇಳಿದ್ದಾರೆ.

click me!