
ಬೆಂಗಳೂರು (ಮೇ.24): ರಾಜ್ಯದಲ್ಲಿ ಮೇ 15 ರಿಂದ 21ರ ಅವಧಿಯಲ್ಲಿ ವಾಡಿಕೆ ಪ್ರಮಾಣಕ್ಕಿಂತ ಸುಮಾರು ಶೇ.350ರಷ್ಟು ಹೆಚ್ಚಿನ ಪ್ರಮಾಣದ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಕೃಷಿಕರು ತತ್ತರಿಸಿ ಹೋಗಿದ್ದಾರೆ. ಅಪಾರದ ಪ್ರಮಾಣದ ಬೆಳೆ ಹಾನಿಯಾಗಿದೆ. ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚಿನ ಮಳೆಯಾಗಿದ್ದರಿಂದ ಸಮಸ್ಯೆಯಾಗಿದೆ ಎಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ.
ಸಾಮಾನ್ಯವಾಗಿ ಮೇ 15 ರಿಂದ 21ರ ಅವಧಿಯಲ್ಲಿ ರಾಜ್ಯದಲ್ಲಿ ಕೇವಲ 17.8 ಮಿ.ಮೀ. ಮಳೆ ನಿರೀಕ್ಷೆ ಮಾಡಲಾಗುತ್ತದೆ. ಆದರೆ, ರಾಜ್ಯದಲ್ಲಿ ಈ ಬಾರಿ ಬರೋಬ್ಬರಿ 79.6 ಮಿ.ಮೀ. ಮಳೆಯಾಗಿದೆ. ಇದು ವಾಡಿಕೆ ಪ್ರಮಾಣಕ್ಕಿಂತ ಶೇ.347 ರಷ್ಟು ಹೆಚ್ಚು. ಕರಾವಳಿ ಜಿಲ್ಲೆಗಳಲ್ಲಿ ಈ ಅವಧಿಯಲ್ಲಿ 29.3 ಮಿ.ಮೀ. ಮಳೆಯಾಗಬೇಕು. ಆದರೆ, 157.9 ಮಿ.ಮೀ. ಮಳೆಯಾಗಿದ್ದು, ವಾಡಿಕೆ ಪ್ರಮಾಣಕ್ಕಿಂತ ಶೇ.439 ರಷ್ಟು ಹೆಚ್ಚಾಗಿದೆ. ಅದೇ ರೀತಿ ದಕ್ಷಿಣ ಒಳನಾಡಿನಲ್ಲಿ ವಾಡಿಕೆ ಪ್ರಕಾರ 20.9 ಮಿ.ಮೀ. ಮಳೆಯಾಗಬೇಕು. 72 ಮಿ.ಮೀ. ಮಳೆಯಾಗಿದ್ದು, ಶೇ.245 ರಷ್ಟು ಹಾಗೂ ಉತ್ತರ ಒಳನಾಡಿನಲ್ಲಿ 11.6 ಮಿ.ಮೀ. ಮಳೆಯಾಗಬೇಕು.
70.3 ಮಿ.ಮೀ. ಮಳೆಯಾಗಿದ್ದು, ಶೇ.506 ರಷ್ಟು ಹೆಚ್ಚಿನ ಮಳೆಯಾಗಿದೆ ಎಂದ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನು ಒಟ್ಟಾರೆ ರಾಜ್ಯದಲ್ಲಿ ಪೂರ್ವ ಮುಂಗಾರು ಅವಧಿಯಲ್ಲಿ (ಮಾರ್ಚ್‌ನಿಂದ ಮೇ 21)188 ಮಿ.ಮೀ. ಮಳೆಯಾಗಿದ್ದು, ಶೇ.115ರಷ್ಟು ಹೆಚ್ಚಿನ ಮಳೆಯಾಗಿದೆ. ಕರಾವಳಿಯಲ್ಲಿ ಶೇ.157 ರಷ್ಟು(247.7 ಮಿ.ಮೀ.), ಉತ್ತರ ಒಳನಾಡಿನಲ್ಲಿ ಶೇ.171ರಷ್ಟು (159.6 ಮಿ.ಮೀ.) ಹಾಗೂ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ.82 ರಷ್ಟು (200.2 ಮಿ.ಮೀ.) ಹೆಚ್ಚಿನ ಮಳೆಯಾಗಿದೆ.
ಇನ್ನು 3 ದಿನದಲ್ಲಿ ರಾಜ್ಯಕ್ಕೆ ಮುಂಗಾರು?: ಸಾಮಾನ್ಯವಾಗಿ ಜೂನ್ ಮೊದಲ ವಾರ ರಾಜ್ಯವನ್ನು ಪ್ರವೇಶಿಸುವ ಮುಂಗಾರು ಮಳೆ ಮಾರುತಗಳು ಈ ಬಾರಿ ಮೇ 27 ಅಥವಾ ಮೇ 28ರ ವೇಳೆಗೆ ಆಗಮಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪೂರ್ವ ಮುಂಗಾರು ಅಬ್ಬರ ತಗ್ಗುವ ಮೊದಲೇ ಮುಂಗಾರು ಕೂಡ ಪ್ರವೇಶಿಸುತ್ತಿರುವುದರಿಂದ ಭಾರಿ ಮಳೆಯ ನಿರೀಕ್ಷೆ ಇದೆ.
ಕರಾವಳಿಯ ಮೂರೂ ಜಿಲ್ಲೆಗೆ ರೆಡ್ ಅಲರ್ಟ್: ಪೂರ್ವಮುಂಗಾರಿನ ಅಬ್ಬರ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದ್ದು, ಕರಾವಳಿಯ ಮೂರೂ ಜಿಲ್ಲೆಗಳಿಗೆ ಶನಿವಾರದಿಂದ ಒಂದು ವಾರ ರೆಡ್ ಅಲರ್ಟ್ ಘೋಷಿಸಲಾಗಿದೆ. ಗಂಟೆಗೆ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯುದಂತೆ ಸೂಚಿಸಲಾಗಿದೆ. ಹೀಗಾಗಿ ಮೀನುಗಾರರು ವಾಪಸಾಗಿದ್ದಾರೆ.
ಒಂದು ವಾರದಲ್ಲಿ ಎಲ್ಲಿ ಎಷ್ಟು ಮಳೆ?
ಪ್ರದೇಶ ನಿರೀಕ್ಷೆ ಸುರಿದ ಮಳೆ ಎಷ್ಟು ಹೆಚ್ಚು?
ಕರಾವಳಿ ಜಿಲ್ಲೆಗಳು- 29.3 ಮಿ.ಮೀ. 157.9 ಮಿ.ಮೀ. ಶೇ.439
ದಕ್ಷಿಣ ಒಳನಾಡು- 20.9 ಮಿ.ಮೀ. 72 ಮಿ.ಮೀ. ಶೇ.245
ಉತ್ತರ ಒಳನಾಡು- 11.6 ಮಿ.ಮೀ. 70.3 ಮಿ.ಮೀ. ಶೇ.506
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ