
ಮೈಸೂರು (ಅ.03): ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಕಾರ್ಯಕರ್ತರೊಂದಿಗೆ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ವಿಶಿಷ್ಟ ಹೆಜ್ಜೆ ಇಟ್ಟಿದ್ದಾರೆ. ತಮ್ಮೊಂದಿಗೆ ಪಕ್ಷಕ್ಕಾಗಿ ಹೆಗಲುಕೊಟ್ಟು ದುಡಿಯುವ ಬಿಜೆಪಿ ಕಾರ್ಯಕರ್ತರಿಗೋಸ್ಕರ ಅವರು ಮೈಸೂರಿನಲ್ಲಿರುವ ಒಂದು ಮಲ್ಟಿಪ್ಲೆಕ್ಸ್‌ನ ಇಡೀ ಸ್ಕ್ರೀನ್‌ನ ಟಿಕೆಟ್‌ಗಳನ್ನು ಖರೀದಿಸಿ, ಸಿನಿಮಾ ನೋಡಲು ಆಹ್ವಾನಿಸಿದ್ದಾರೆ.
ಪ್ರತಾಪ್ ಸಿಂಹ ಅವರು ಮೈಸೂರಿನ ಡಿಆರ್‌ಸಿ (DRC) ಚಿತ್ರಮಂದಿರದ ಎರಡನೇ ಸ್ಕ್ರೀನ್‌ನಲ್ಲಿರುವ ಎಲ್ಲಾ 197 ಟಿಕೆಟ್‌ಗಳನ್ನು ತಮ್ಮ ವೈಯಕ್ತಿಕ ಹಣದಲ್ಲಿ ಖರೀದಿಸಿದ್ದಾರೆ. ಈ ಟಿಕೆಟ್‌ಗಳಲ್ಲಿ ಲಕ್ಷುರಿ ಕ್ಲಾಸ್ (15), ಪ್ರೀಮಿಯಲ್ (131) ಮತ್ತು ಸ್ಟಾಂಡರ್ಡ್ (51) ಸೀಟುಗಳು ಸೇರಿವೆ. ಈ ಎಲ್ಲಾ ಟಿಕೆಟ್‌ಗಳ ಒಟ್ಟು ಮೊತ್ತ ₹69,000 ಆಗಿದೆ. ಈ ಹಣವನ್ನು ಭರಿಸಿ ಅವರು 'ಕಾಂತಾರ ಚಾಪ್ಟರ್-1' ಸಿನಿಮಾ ವೀಕ್ಷಿಸಲು ವ್ಯವಸ್ಥೆ ಮಾಡಿದ್ದಾರೆ.
ಈ ಕುರಿತು ಸ್ವತಃ ಮಾಹಿತಿ ಹಂಚಿಕೊಂಡಿರುವ ಪ್ರತಾಪ್ ಸಿಂಹ ಅವರು, ನಾಳೆ (ಅ.04) ಸಂಜೆ 4 ಗಂಟೆಗೆ ಕಾರ್ಯಕರ್ತರೆಲ್ಲರೂ ಒಡಗೂಡಿ ಕಾಂತಾರ-1 ಸಿನಿಮಾ ನೋಡೋಣ. ಡಿಆರ್‌ಸಿ ಯಲ್ಲಿ ಫುಲ್ ಸ್ಕ್ರೀನ್ ಬುಕ್ ಮಾಡಿದ್ದೇನೆ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಹ್ವಾನ ನೀಡಿದ್ದಾರೆ. ಈ ಕ್ರಮವು ತಮ್ಮ ವೈಯಕ್ತಿಕ ಮನರಂಜನೆಗಿಂತ ಹೆಚ್ಚಾಗಿ, ತಮ್ಮ ರಾಜಕೀಯ ಹೋರಾಟಗಳಲ್ಲಿ ಜೊತೆಯಾಗಿ ನಿಲ್ಲುವ ಕಾರ್ಯಕರ್ತರ ಶ್ರಮವನ್ನು ಗುರುತಿಸುವ ಮತ್ತು ಅವರಿಗೆ ಗೌರವ ನೀಡುವ ಉದ್ದೇಶವನ್ನು ಹೊಂದಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಪ್ರತಾಪ್ ಸಿಂಹ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ:
ವೆಂಕಟೇಶ್ ಎಂಬುವವರು, 'ಒಬ್ಬ ಸಂಸದನಿಗೆ ಕಾರ್ಯಕರ್ತರು ಇದಾರೆ ಅನ್ನೋ ನೆನಪೇ ಇರೋಲ್ಲ. ಅಂಥದ್ರಲ್ಲಿ ನೀವು ಎಲ್ಲರೊಂದಿಗೆ ಹೋಗ್ತಾ ಇದ್ದೀರಾ.. ತುಂಬಾ ಖುಷಿ ಆಗುತ್ತೆ' ಎಂದು ಬರೆದಿದ್ದಾರೆ.
ಕಸ್ತೂರಿ ಆರ್ಗಾನಿಕ್ ಸಂಸ್ಥೆಯ ರಘು ಅವರು, 'ಸಾಮಾನ್ಯವಾಗಿ ಸಿನಿಮಾ ನೋಡುವ ಶಕ್ತಿ ಎಲ್ಲರಿಗೂ ಇರುತ್ತೆ. ಆದರೆ ನಿಮ್ಮಂತಹ ದೇಶಭಕ್ತರ ಜೊತೆಗೆ ಸಿನಿಮಾ ನೋಡಲು ಅದೃಷ್ಟ ಮಾಡಿರಬೇಕು ಅಂತ ನಾನು ಭಾವಿಸುತ್ತೇನೆ ಸರ್' ಎಂದು ಪ್ರತಿಕ್ರಿಯಿಸಿದ್ದಾರೆ.
ಶಿವ ಚಂದ್ರ ಎಂಬ ಅಭಿಮಾನಿಯೊಬ್ಬರು ನಂಜನಗೂಡಿನ ಕಾರ್ಯಕರ್ತರಿಗೂ ಇದೇ ರೀತಿ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಹರ್ಷಾ ಹೆಗಡೆ ಎಂಬುವವರು, 'ತಾವು ALREADY ವಿರೋಧಿಗಳಿಗೆ ಎಷ್ಟೋ ಸಲ ಕಾಂತಾರ ತೋರಿಸಿಬಿಟ್ಟಿದ್ದೀರಿ ಬುಡಿ ಸಾರ್..' ಎಂದು ಹಾಸ್ಯಭರಿತವಾಗಿ ಕಾಮೆಂಟ್ ಮಾಡಿದ್ದಾರೆ.
ಸಾರ್ವಜನಿಕ ನಾಯಕರು ಈ ರೀತಿ ಕಾರ್ಯಕರ್ತರೊಂದಿಗೆ ಬೆರೆತು, ಅವರ ಖುಷಿಗೆ ಪಾಲುದಾರರಾಗುವುದು ಪಕ್ಷದ ಸಂಘಟನೆಗೆ ಮತ್ತು ನಾಯಕ-ಕಾರ್ಯಕರ್ತರ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗುತ್ತದೆ. ಒಟ್ಟಾರೆ, ಪ್ರತಾಪ್ ಸಿಂಹ ಅವರ ಈ ನಿರ್ಧಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ