
ನಟ ಪ್ರಕಾಶ್ ರಾಜ್ ಅವರು ತಮ್ಮ ಮತದಾರರ ಗುರುತಿನ ಚೀಟಿ (Voter ID) ವಿಷಯಕ್ಕೆ ಸಂಬಂಧಿಸಿದಂತೆ ಮಾಡಿದ್ದ ಆರೋಪಗಳ ಬೆನ್ನಲ್ಲೇ ರಂಗಕ್ಕಿಳಿದ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಅವರು ಸುದೀರ್ಘ ಪರಿಶೀಲನೆ ನಡೆಸಿದ್ದು, ನಟನ ಆರೋಪಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಪ್ರಕಾಶ್ ರಾಜ್ ಅವರ ದೂರಿನ ಆಧಾರದ ಮೇಲೆ, ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ಬೂತ್ ಮಟ್ಟದ ಅಧಿಕಾರಿ (BLO) ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ನಟ ಪ್ರಕಾಶ್ ರಾಜ್ ಅವರ ನೋಂದಾಯಿತ ವಿಳಾಸವಾದ 'ಫ್ಲಾಟ್ ಸಂಖ್ಯೆ 266, ಗಾರ್ಡನ್ ಅಪಾರ್ಟ್‌ಮೆಂಟ್, ವಿಠಲ್ ಮಲ್ಯ ರಸ್ತೆ, ಬೆಂಗಳೂರು-560001' ಎಂಬಲ್ಲಿಗೆ ಬಿಎಲ್‌ಒ ನೇರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪ್ರಕಾಶ್ ರಾಜ್ ಅವರು ಪ್ರಸ್ತುತ ಆ ವಿಳಾಸದಲ್ಲೇ ವಾಸವಾಗಿಲ್ಲದೇ ಬೇರೆಡೆಗೆ ಸ್ಥಳಾಂತರಗೊಂಡಿರುವುದು ಕಂಡುಬಂದಿದೆ.
ಸದರಿ ಅಪಾರ್ಟ್‌ಮೆಂಟ್‌ನ ಮಾಲೀಕರನ್ನು ಬಿಎಲ್‌ಒ ದೂರವಾಣಿ ಮೂಲಕ ಸಂಪರ್ಕಿಸಿ ವಿಚಾರಣೆ ನಡೆಸಿದಾಗ, "ನಟ ಪ್ರಕಾಶ್ ರಾಜ್ ಅವರು ಕಳೆದ ಸುಮಾರು 4 ವರ್ಷಗಳಿಂದ ಈ ಫ್ಲಾಟ್‌ನಲ್ಲಿ ವಾಸವಾಗಿಲ್ಲ. ಪ್ರಸ್ತುತ ಅಲ್ಲಿ ಬೇರೆ ಬಾಡಿಗೆದಾರರು ವಾಸಿಸುತ್ತಿದ್ದಾರೆ" ಎಂಬ ಮಾಹಿತಿ ಲಭ್ಯವಾಗಿದೆ. ಇದಲ್ಲದೆ, ಅಪಾರ್ಟ್‌ಮೆಂಟ್‌ನ ವ್ಯವಸ್ಥಾಪಕರು ಹಾಗೂ ನೆರೆಹೊರೆಯವರನ್ನು ವಿಚಾರಿಸಿ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.
ಈ ಎಲ್ಲಾ ಮಾಹಿತಿಗಳ ಆಧಾರದ ಮೇಲೆ ಕಾನೂನುಬದ್ಧವಾಗಿ 'ಮಹಜರ್' ಸಿದ್ಧಪಡಿಸಲಾಗಿದೆ. ಭಾರತೀಯ ಚುನಾವಣಾ ಆಯೋಗದ (ECI) ಕಟ್ಟುನಿಟ್ಟಿನ ನಿಯಮಾವಳಿಗಳ ಪ್ರಕಾರವೇ ಪ್ರಕಾಶ್ ರಾಜ್ ಅವರ ಹೆಸರನ್ನು 'ಸ್ಥಳಾಂತರಗೊಂಡಿದೆ (Shifted)' ಎಂದು ವರದಿಯಲ್ಲಿ ನಮೂದಿಸಲಾಗಿದೆ ಎಂದು ಪಾಲಿಕೆ ಸ್ಪಷ್ಟಪಡಿಸಿದೆ.
ಈ ಎಲ್ಲಾ ಪ್ರಕ್ರಿಯೆಗಳ ನಂತರ ಬೆಂಗಳೂರು ಕೇಂದ್ರ ಪಾಲಿಕೆ ಆಯುಕ್ತ ಜಗದೀಶ್ ಅವರು ನಟ ಪ್ರಕಾಶ್ ರಾಜ್ ಅವರಿಗೆ ಸ್ವತಃ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಸಂಭಾಷಣೆಯಲ್ಲಿ "ತಮ್ಮ ವೋಟರ್ ಐಡಿಯಲ್ಲಿ ನೀಡಲಾಗಿದ್ದ ಹಳೆಯ ವಿಳಾಸದಲ್ಲಿ ತಾನು ಪ್ರಸ್ತುತ ವಾಸವಾಗಿಲ್ಲ" ಎಂಬುದನ್ನು ನಟ ಪ್ರಕಾಶ್ ರಾಜ್ ಸ್ವತಃ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಪ್ರಸ್ತುತ ತಾವು ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೇರೊಂದು ವಿಳಾಸದಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ.
ಈ ವೇಳೆ ಪಾಲಿಕೆ ಆಯುಕ್ತ ಜಗದೀಶ್ ಅವರು ಪ್ರಕಾಶ್ ರಾಜ್ ಅವರಿಗೆ ಸೂಕ್ತ ನಿಯಮಾವಳಿಗಳನ್ನು ವಿವರಿಸಿದ್ದಾರೆ. ಪ್ರಸ್ತುತ ಅವರು ವಾಸವಿರುವ ಹೊಸ ವಿಳಾಸದ ವ್ಯಾಪ್ತಿಗೆ ಬರುವ ಬಿಎಲ್‌ಒ ಮೂಲಕ 'ನಮೂನೆ-6' (Form-6) ಅರ್ಜಿಯನ್ನು ಸಲ್ಲಿಸಿ, ಹೊಸ ವಿಳಾಸಕ್ಕೆ ವೋಟರ್ ಐಡಿ ವರ್ಗಾಯಿಸಿಕೊಳ್ಳಬಹುದು. ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಸೂಕ್ತ ಕ್ರಮ ವಹಿಸಿ ಹೊಸ ವಿಳಾಸದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲಾಗುವುದು ಎಂದು ಸೂಚಿಸಿದ್ದಾರೆ.
ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗಿದೆ ಅಥವಾ ವ್ಯತ್ಯಾಸವಾಗಿದೆ ಎಂದು ನಟ ಪ್ರಕಾಶ್ ರಾಜ್ ಅವರು ಮಾಡಿದ್ದ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ, ಪ್ರಕ್ರಿಯೆಯು ಸಂಪೂರ್ಣವಾಗಿ ಕಾನೂನುಬದ್ಧವಾಗಿಯೇ ನಡೆದಿದೆ ಎಂದು ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ