
ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಅತ್ಯಾ1ಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿರುವ ತೀರ್ಪು ಸುತ್ತ ಹಲವು ಚರ್ಚೆ ನಡೆಯುತ್ತಿದೆ. ವಿಶೇಷ ನ್ಯಾಯಾಲಯವು ತೀರ್ಪು ನೀಡಿದ ಆದೇಶದ ಪ್ರತಿಯ ಮೊದಲ ಸಾಲಿನಲ್ಲಿ ಸಂಸ್ಕೃತ ಶ್ಲೋಕವೊಂದನ್ನು ಉಲ್ಲೇಖಿಸಿದ್ದು, ಇದರೊಂದಿಗೆ ನ್ಯಾಯಾಲಯದ ನಿಲುವು ಮತ್ತಷ್ಟು ಪ್ರಭಾವ ಬೀರುತ್ತದೆ.
"ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ
ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾಃ ಕ್ರಿಯಾಃ||" ಎಂಬ ಶ್ಲೋಕವನ್ನು ತೀರ್ಪಿನ ಆರಂಭದಲ್ಲಿ ಉಲ್ಲೇಖಿಸಲಾಗಿದೆ.
ಅಂದರೆ, "ಮಹಿಳೆಯರನ್ನು ಪೂಜಿಸುವ ತಾಣದಲ್ಲಿ ದೇವತೆಯು ನೆಲೆಸುತ್ತಾಳೆ. ಅವರು ಗೌರವಿಸಲ್ಪಡದ ಸ್ಥಳದಲ್ಲಿ ಎಲ್ಲಾ ಕರ್ಮಫಲಗಳು ದೊರಕುತ್ತದೆ. ಎಲ್ಲಿ ಮಹಿಳೆಯರನ್ನು ಅಪಮಾನದಿಂದ ಕಾಣಲಾಗುತ್ತದೆಯೋ ಅಲ್ಲಿ ಧರ್ಮಕರ್ಮಗಳು ನಿಷ್ಫಲವಾಗುತ್ತವೆ" ಎಂಬ ಅರ್ಥವಿರುವ ಈ ಶ್ಲೋಕ, ಭಾರತೀಯ ಸಮಾಜದ ಮೂಲಭೂತ ಮೌಲ್ಯಗಳನ್ನೇ ಪ್ರತಿಬಿಂಬಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನ್ಯಾಯಾಲಯ ಬರೋಬ್ಬರಿ 480 ಪುಟಗಳ ತೀರ್ಪು ಪ್ರಕಟಿಸಿದೆ.
2024ರಲ್ಲಿ ಈ ಪ್ರಕರಣ ಬಹಿರಂಗವಾಯಿತಾಗಿತ್ತು, ಆಗ ಮಹಿಳೆಯರ ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಭಾರಿ ಚರ್ಚೆಗೆ ಕಾರಣವಾಗಿದ್ದವು. ಈ ವಿಡಿಯೋಗಳನ್ನು ಪೆನ್-ಡ್ರೈವ್ ಮೂಲಕ ಹಂಚಿಕೊಂಡು ಮಹಿಳೆಯರ ಮೇಲೆ ಭಯದ ವಾತಾವರಣ ಸೃಷ್ಟಿಸುವುದು ಮತ್ತು ಸಮಾಜದಲ್ಲಿ ಆತಂಕ ಉಂಟುಮಾಡುವುದು ಈ ಕೃತ್ಯದ ಉದ್ದೇಶವಾಗಿತ್ತು ಎಂದು ಆರೋಪಿಸಲಾಗಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿತು. ಎಸ್‌ಐಟಿ ರಚನೆಯ ನಂತರ ಅನೇಕ ಮಹಿಳೆಯರಿಂದ ದೂರುಗಳು ದಾಖಲಾಗಿದವು. ಅಂತಹ ಒಂದು ಸಂತ್ರಸ್ತೆಯ ದೂರಿನ ಹಿನ್ನೆಲೆಯಲ್ಲಿ ನಡೆದ ವಿಚಾರಣೆ ಈಗ ತೀರ್ಪಿಗೆ ಬಿದ್ದಿದ್ದು, ನ್ಯಾಯಾಲಯವು ಈ ಘಟನೆಗೆ ಸೂಕ್ತ ನ್ಯಾಯ ಒದಗಿಸಿದೆ.
ಪ್ರಜ್ವಲ್ ರೇವಣ್ಣ ಗೆ ಜೀವಾವಧಿ ಶಿಕ್ಷೆ ಹಿನ್ನಲೆ ಅವರ ಕುಟುಂಬ ಹಾಗೂ ಜೆಡಿಎಸ್ ಪಕ್ಷದಲ್ಲಿ ಭಾರೀ ತಲ್ಲಣ ನಡೆಯುತ್ತಿದೆ. ಜಯನಗರದ ರೇವಣ್ಣ ಮನೆಯಲ್ಲಿ ನೀರವ ಮೌನ ಆವರಿಸಿದೆ. ಮುಂದಿನ ಕಾನೂನು ಹೋರಾಟ ಗಳ ಬಗ್ಗೆ ಕಾನೂನು ತಜ್ಞರ ಮೊರೆ ಹೋಗಲು ತೀರ್ಮಾನಿಸಲಾಗಿದ್ದು, ಸದ್ಯಕ್ಕೆ ಮಾದ್ಯಮ ಗಳಿಂದಲೂ ರೇವಣ್ಣ ಕುಟುಂಬ ಅಂತರ ಕಾಯ್ದೆ ಕೊಂಡಿದೆ.
ಈ ತೀರ್ಪು ಜೆಡಿಎಸ್ ಪಕ್ಷಕ್ಕೆ ದೊಡ್ಡ ಹೊಡೆತವಾಗಿದೆ. ಕಳೆದ ಲೋಕಸಭಾ ಚುನಾವಣೆಯ ವೇಳೆ ಲೈಂಗಿಕ ದೌರ್ಜನ್ಯ ವಿಡಿಯೋಗಳು ಹರಿದಾಡುತ್ತಿದ್ದಾಗಲೇ ಪಕ್ಷದ ಅಂತಕದ ತಳಮಳ ಶುರುವಾಗಿತ್ತು. ನಂತರ ಪ್ರಕರಣ ದಾಖಲಾಗಿದ್ದು, ಪ್ರಜ್ವಲ್ ಬಂಧನಕ್ಕೆ ದಾರಿ ಮಾಡಿತ್ತು. ಇದೀಗ ಶಿಕ್ಷೆಯ ಘೋಷಣೆಯು ಜೆಡಿಎಸ್‌ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈ ತೀರ್ಪು ಜೆಡಿಎಸ್ ನಾಯಕರಿಗೆ ಭಾರೀ ಮುಜುಗರವನ್ನುಂಟುಮಾಡಿದೆ. ಪಕ್ಷದ ಹಿರಿಯ ನಾಯಕ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಕಾರ್ಯಕರ್ತರು, ನಾಯಕರು ಎಲ್ಲರೂ ಮಾಧ್ಯಮಗಳಿಂದ ದೂರವಿದ್ದು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಕ್ಷದ ಪ್ರಮುಖ ಕಾರ್ಯಕರ್ತರೂ ಮಾಧ್ಯಮಗಳಲ್ಲಿ ಮಾತನಾಡುವ ಸ್ಥಿತಿಯಲ್ಲಿಲ್ಲ. ಪಕ್ಷದ ಮಹಿಳಾ ಕಾರ್ಯಕರ್ತರಿಗೂ ಈ ತೀರ್ಪು ಭಾರೀ ಸಂಕೋಚವನ್ನುಂಟು ಮಾಡಿದೆ. ಚುನಾವಣಾ ಆಧಾರಿತ ರಾಜಕೀಯದಲ್ಲಿರುವ ಜೆಡಿಎಸ್ ಮುನ್ನಡೆ ಕಾಯ್ದುಕೊಳ್ಳಲು ಹೊರಾಟ ಮಾಡುತ್ತಿರುವ ಈ ಸಮಯದಲ್ಲಿ, ಈ ತೀರ್ಪು ಭಾರೀ ಸಂಕಷ್ಟವನ್ನು ತಂದಿರಬಹುದು.
ಶಿಕ್ಷೆ ಘೋಷಣೆಗೆ ಮೊದಲು, ರೇವಣ್ಣ ಕುಟುಂಬದವರು ಜಾಮೀನು ಸಿಗಬಹುದೆಂಬ ಹಾಗೂ ಶಿಕ್ಷೆಯ ಪ್ರಮಾಣ ಕಡಿಮೆಯಾಗಬಹುದೆಂಬ ನಿರೀಕ್ಷೆ ಹೊಂದಿದ್ದರು. ಆದರೆ ನ್ಯಾಯಾಲಯದ ತೀರ್ಪು ಎಲ್ಲಾ ನಿರೀಕ್ಷೆಗಳಿಗೆ ಕತ್ತರಿ ಹಾಕಿದಂತಾಗಿದೆ. ಜೆಡಿಎಸ್ ಇತಿಹಾಸದಲ್ಲಿ ಈ ಮಟ್ಟದ ಕಾನೂನು ಹೊಡೆತವನ್ನು ದೇವೇಗೌಡರ ಕುಟುಂಬ ಈವರೆಗೆ ಎದುರಿಸಿಲ್ಲ. ಈವರೆಗೆ ಯಾವುದೇ ಪ್ರಕರಣದಲ್ಲಿ ಆರೋಪ ಸಾಬೀತಾಗದ ಹಿನ್ನೆಲೆ ಇದ್ದರೂ, ಪ್ರಜ್ವಲ್ ಪ್ರಕರಣದ ತೀರ್ಪು ಕುಟುಂಬದ ಗೌರವಕ್ಕೆ ದೊಡ್ಡ ಧಕ್ಕೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ