ಕರ್ನಾಟಕ ಸರ್ಕಾರದಿಂದ ಗುಡ್ ನ್ಯೂಸ್ : ಬಡವರಿಗೆ ಅಪಾರ್ಟ್ಮೆಂಟ್

By Web DeskFirst Published Nov 20, 2018, 8:17 AM IST
Highlights

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಇದೀಗ ಗುಡ್ ನ್ಯೂಸ್ ಒಂದನ್ನು ನೀಡಿದೆ. ಬಡವರಿಗೆ ಅಪಾರ್ಟ್ ಮೆಂಟ್ ನಿರ್ಮಿಸಿ ಕೊಡಲು ಉದ್ದೇಶಿಸಲಾಗಿದೆ. 

ಬೆಂಗಳೂರು :  ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯನ್ನು ಮಾರ್ಪಾಡುಗೊಳಿಸಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದ್ದು, ನೆಲಮಹಡಿ ಜತೆಗೆ ಮೂರು ಮಹಡಿ (ಜಿ ಪ್ಲಸ್‌ ತ್ರಿ) ಬದಲಿಗೆ ನೆಲಮಹಡಿ ಜತೆಗೆ 14 ಮಹಡಿಗಳನ್ನು ನಿರ್ಮಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಕಳೆದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಿವೇಶನ ಮತ್ತು ಮನೆ ಇಲ್ಲದ ಬಡ ವರ್ಗದವರಿಗೆ ವಸತಿ ಸೌಲಭ್ಯ ಕಲ್ಪಿಸಲು ನಿರ್ಧರಿಸಿ ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯನ್ನು ರೂಪಿಸಲಾಗಿತ್ತು. ಬೆಂಗಳೂರು ಮತ್ತು ಸುತ್ತಮುತ್ತ ಭೂಮಿ ಲಭ್ಯತೆ ಕಷ್ಟವಾಗಿರುವ ಕಾರಣ ಇರುವ ಭೂಮಿಯಲ್ಲಿ ಹೆಚ್ಚು ಮನೆಗಳನ್ನು ನಿರ್ಮಿಸಿ ಹೆಚ್ಚು ಮಂದಿಗೆ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರದಲ್ಲಿ ರೂಪಿಸಲಾಗಿರುವ ಯೋಜನೆಯನ್ನು ಮಾರ್ಪಾಡುಗೊಳಿಸಲಾಗಿದ್ದು, ನೆಲಮಹಡಿ ಜತೆಗೆ ಮೂರು ಮಹಡಿ ನಿರ್ಮಾಣ ಮಾಡುವ ಬದಲು ನೆಲಮಹಡಿ ಜತೆಗೆ 14 ಮಹಡಿ ಮಾದರಿಯ ಅಪಾರ್ಟ್‌ಮೆಂಟ್‌ ನಿರ್ಮಿಸಲು ನಿರ್ಧರಿಸಲಾಗಿದೆ. ವಸತಿ ಯೋಜನೆಯನ್ನು ಲಿಫ್ಟ್‌ ಸಹಿತ ನಿರ್ಮಾಣಕ್ಕೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಬಡವರಿಗೆ ಕೈಗೆಟುವ ದರದಲ್ಲಿ ವಸತಿಗಳನ್ನು ಕಲ್ಪಿಸುವುದು ಮುಖ್ಯ ಉದ್ದೇಶವಾಗಿದೆ. ಯೋಜನೆಯಲ್ಲಿ ಒಂದು ಬೆಡ್‌ ರೂಂ ಮತ್ತು ಎರಡು ಬೆಡ್‌ ರೂಂನ ವಸತಿಗಳನ್ನು ನಿರ್ಮಿಸಲಾಗುವುದು. ಯೋಜನೆಯಡಿ ವಸತಿ ಹಂಚಿಕೆಯಾಗುವ ಫಲಾನುಭವಿಗಳಿಗೆ ಕೇಂದ್ರ ಸರ್ಕಾರವು .1.5 ಲಕ್ಷ ಆರ್ಥಿಕ ನೆರವು ನೀಡಲಿದೆ. ಸಾಮಾನ್ಯ ವರ್ಗದವರಿಗೆ .1.2 ಲಕ್ಷ ಮತ್ತು ಎಸ್‌ಸಿ/ಎಸ್‌ಟಿ ವರ್ಗದವರಿಗೆ .2 ಲಕ್ಷ ನೆರವನ್ನು ರಾಜ್ಯಸರ್ಕಾರವು ನೆರವು ಒದಗಿಸಲಿದೆ ಎಂದು ಹೇಳಿದರು.

ಯೋಜನೆಗಾಗಿ ಇಂದಿರಾಗಾಂಧಿ ವಸತಿ ಯೋಜನೆ, ಅಂಬೇಡ್ಕರ್‌ ವಸತಿ, ಬಸವ ವಸತಿ ಯೋಜನೆ ಮತ್ತು ಪ್ರಧಾನಮಂತ್ರಿ ಅವಾಸ್‌ ಯೋಜನೆಯಿಂದ ಬರುವ ಹಣವನ್ನು ಕ್ರೋಢೀಕರಿಸಲಾಗುವುದು. ವಿವಿಧ ಯೋಜನೆಯಿಂದ ಸಂಗ್ರಹವಾಗುವ ಮೊತ್ತದಲ್ಲಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ವಿವರಿಸಿದರು.

ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಶುದ್ಧ ನೀರು

ನಗರದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಕಲುಷಿತ ನೀರು ಪ್ರವೇಶದಂತೆ ಕ್ರಮ ಕೈಗೊಳ್ಳಲು ಒಳಹರಿವನ್ನು ಶುದ್ದೀಕರಿಸಲು ಘಟಕವೊಂದನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, .285.95 ಕೋಟಿ ಒದಗಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಅಲ್ಲದೇ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ 30 ಕೆರೆಗಳಿಗೆ ಕೆ.ಆರ್‌.ಪುರ ಎಸ್‌ಟಿಪಿಯಿಂದ ಸಂಸ್ಕರಿಸಿ ತ್ಯಾಜ್ಯ ನೀರನ್ನು ತುಂಬಿಸುವ ಏತ ನೀರಾವರಿ ಯೋಜನೆಗೆ .100 ಕೋಟಿ ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

click me!