
ಬೆಂಗಳೂರು (ಮೇ.10): ಕೊರೋನಾ ಸೋಂಕು ತಡೆಗೆ ರಾಜ್ಯ ಸರ್ಕಾರ ಘೋಷಿಸಿರುವ ಜನತಾ ಕರ್ಫ್ಯೂ ಕೊನೆಯ ದಿನವಾದ ಭಾನುವಾರದಂದು ನಿಯಮ ಮುರಿದು ರಸ್ತೆಗಿಳಿದ ಜನರ ವಿರುದ್ಧ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಗತ್ಯ ವಸ್ತುಗಳ ಖರೀದಿ ಹೊರತುಪಡಿಸಿ ಬೇಕಾಬಿಟ್ಟಿ ರಸ್ತೆಗಿಳಿದಿರುವವರಿಗೆ ಭಾನುವಾರವೂ ಬಿಸಿ ಮುಟ್ಟಿಸಲಾಗಿದ್ದು 7169ಕ್ಕೂ ಅಧಿಕ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಮಾತ್ರವಲ್ಲದೆ ನೂರಾರು ಪ್ರಕರಣ ದಾಖಲಿಸಿ ದಂಡವನ್ನೂ ವಿಧಿಸಿದ್ದಾರೆ.
ಇಷ್ಟುಮಾತ್ರವಲ್ಲದೆ ಈಗ ವಶಪಡಿಸಿಕೊಂಡಿರುವ ಹಾಗೂ ಇನ್ನು ಮುಂದಿನ ದಿನಗಳಲ್ಲಿ ವಶಪಡಿಸಿಕೊಳ್ಳುವ ಎಲ್ಲ ರೀತಿಯ ವಾಹನಗಳನ್ನು ಮೇ 24ರವರೆಗೆ ಮಾಲೀಕರಿಗೆ ಮರಳಿ ನೀಡಲಾಗುವುದಿಲ್ಲ ಎಂದು ಕೆಲವೆಡೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಸುಮ್ಮನೆ ಹೊರ ಬಂದರೆ ಹುಷಾರ್: ವಾಹನದಲ್ಲಿ ಹೋಗುವಂತಿಲ್ಲ, ನಡೆದೇ ಹೋಗಬೇಕು! ..
ಶನಿವಾರವಷ್ಟೇ 3268 ವಾಹನ ಜಪ್ತಿ ಮಾಡಲಾಗಿದ್ದ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಭಾನುವಾರ ಮತ್ತೆ 3,214 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಜಿಲ್ಲೆಯಲ್ಲಿ 333 ಪ್ರಕರಣ ದಾಖಲಿಸಿದ್ದು ಒಟ್ಟು 2.25 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ. ರಾಜಧಾನಿ ಬೆಂಗಳೂರಿನ ವಿವಿಧೆಡೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ ತಪಾಸಣೆ ನಡೆಸುತ್ತಿದ್ದ ಪೊಲೀಸರು 2227 ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ 318 ವಾಹನ ಜಪ್ತಿ ಮಾಡಿ 189 ಪ್ರಕರಣ ದಾಖಲಿಸಲಾಗಿದ್ದು 86 ಸಾವಿರ ದಂಡ ವಸೂಲಿ ಮಾಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 306 ವಾಹನ ಜಪ್ತಿ ಮಾಡಿ 67 ಸಾವಿರ ದಂಡ ವಿಧಿಸಿದ್ದಾರೆ.
ಇನ್ನುಳಿದಂತೆ ಮೈಸೂರುರಲ್ಲಿ 234, ಹಾವೇರಿ 175, ಕೊಡಗು 159, ಚಿಕ್ಕಮಗಳೂರು 135, ದಕ್ಷಿಣ ಕನ್ನಡ 133, ಗದಗ 89, ಧಾರವಾಡ 70, ತುಮಕೂರಲ್ಲಿ 60, ಕೊಪ್ಪಳ 39, ಉಡುಪಿಯಲ್ಲಿ 10 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ