Yellow Board Vehicle: ಯೆಲ್ಲೋ ಬೋರ್ಡ್‌ ವಾಹನಕ್ಕೆ ಎಫ್‌ಸಿ ಪಡೆಯಲು ಪೊಲೀಸರ ಎನ್ಒಸಿ ಕಡ್ಡಾಯ?

By Kannadaprabha News  |  First Published Jan 7, 2023, 9:58 AM IST

ಪ್ರತಿ ವರ್ಷ ವಾಹನಗಳಿಗೆ ಸದೃಢತೆ ಪ್ರಮಾಣ (ಎಫ್‌ಸಿ) ಮಾಡಿಸುವ ಸಂದರ್ಭದಲ್ಲಿಯೇ ಸಂಚಾರಿ ನಿಯಮ ಉಲ್ಲಂಘನೆ ದಂಡದ ಬಾಕಿ ಮೊತ್ತ ವಸೂಲಿ ಮಾಡುವ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಪೊಲೀಸ್‌ ಇಲಾಖೆಯು ಸಾರಿಗೆ ಇಲಾಖೆ ಮುಖ್ಯ ಕಾರ್ಯದರ್ಶಿಗಳಿಗೆ ಅಗತ್ಯ ಕಾನೂನುನಿಗೆ ತಿದ್ದುಪಡಿ ತರುವಂತೆ ಪ್ರಸ್ತಾವನೆ ಸಲ್ಲಿಸಿದೆ.


ಬೆಂಗಳೂರು (ಜ.7) : ಪ್ರತಿ ವರ್ಷ ವಾಹನಗಳಿಗೆ ಸದೃಢತೆ ಪ್ರಮಾಣ (ಎಫ್‌ಸಿ) ಮಾಡಿಸುವ ಸಂದರ್ಭದಲ್ಲಿಯೇ ಸಂಚಾರಿ ನಿಯಮ ಉಲ್ಲಂಘನೆ ದಂಡದ ಬಾಕಿ ಮೊತ್ತ ವಸೂಲಿ ಮಾಡುವ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಪೊಲೀಸ್‌ ಇಲಾಖೆಯು ಸಾರಿಗೆ ಇಲಾಖೆ ಮುಖ್ಯ ಕಾರ್ಯದರ್ಶಿಗಳಿಗೆ ಅಗತ್ಯ ಕಾನೂನುನಿಗೆ ತಿದ್ದುಪಡಿ ತರುವಂತೆ ಪ್ರಸ್ತಾವನೆ ಸಲ್ಲಿಸಿದೆ. ಅದರಲ್ಲಿ ಯೆಲ್ಲೋ ಬೋರ್ಡ್‌ ವಾಹನಗಳ ವಾರ್ಷಿಕ ಸದೃಢ ಪ್ರಮಾಣ ಪತ್ರ ಪಡೆಯುವ ಸಂದರ್ಭದಲ್ಲಿ ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಬಾಕಿ ದಂಡ ಪಾವತಿಸಿರುವ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಕಡ್ಡಾಯವಾಗಿ ಸಲ್ಲಿಸಬೇಕು ಎಂಬ ಕಾನೂನು ಜಾರಿಗೊಳಿಸಲು ಕೋರಿದೆ.

ರಾಜ್ಯದಲ್ಲಿ ಒಟ್ಟು 30,42,350 ವಾಣಿಜ್ಯ ಉದ್ದೇಶದ ವಾಹನಗಳಿಗಳಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ಈ ವಾಹನಗಳ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ಪೈಕಿ ಶೇ.50ರಷ್ಟುಪ್ರಕರಣಗಳಲ್ಲಿ ದಂಡ ಪಾವತಿಯೇ ಆಗಿಲ್ಲ. ನೂರಾರು ಕೋಟಿ ರು. ದಂಡ ಮೊತ್ತ ಬಾಕಿ ಇದೆ. ಕೆಲ ಪ್ರಕರಣಗಳಲ್ಲಿ ದಶಕಗಳಿಗಿಂತಲೂ ಹಿಂದಿನ ಪ್ರಕರಣಗಳು ಬಾಕಿ ಇವೆ. ರಸ್ತೆ ಬಳಿ ತಪಾಸಣೆ ನvಸುವ ಏಕೈಕ ಮಾರ್ಗದಿಂದಲೇ ಎಲ್ಲಾ ವಾಹನಗಳ ಬಾಕಿ ದಂಡ ವಸೂಲಿ ಸಾಧ್ಯವಿಲ್ಲ ಎಂಬುದನ್ನು ಪೊಲೀಸ್‌ ಇಲಾಖೆ ಮನಗಂಡಿದೆ. ಹೀಗಾಗಿ, ಯೆಲ್ಲೋ ಬೋರ್ಡ್‌ ವಾಹನಗಳು((Yellow board vehicles) ಪ್ರತಿ ವರ್ಷ ಸದೃಢ ಪ್ರಮಾಣ ಪತ್ರಪಡೆಯಲು ಕಡ್ಡಾಯವಾಗಿ ಆಗಮಿಸುತ್ತದೆ. ಆ ಸಂದರ್ಭದಲ್ಲಿ ದಂಡ ಮೊತ್ತ ವಸೂಲಿ ಮಾಡಬೇಕು ಎಂದು ಪೊಲೀಸ್‌ ಇಲಾಖೆಯು ಚಿಂತನೆ ನಡೆಸಿದೆ.

Tap to resize

Latest Videos

ಬಾಗಲಕೋಟೆಯಲ್ಲಿ ಯೆಲ್ಲೋ ಬೋರ್ಡ್‌​ ವರ್ಸಸ್​​ ವೈಟ್​ ಬೋರ್ಡ್‌ ಕಾರು ಚಾಲಕರ ಹೋರಾಟ

ನಿತ್ಯ 30000 ಕೇಸ್‌:

ರಸ್ತೆ, ಸಿಗ್ನಲ್‌, ಪಾರ್ಕಿಂಗ್‌(Road, signal, Parking) ಸೇರಿದಂತೆ ಹಲವೆಡೆ ಡಿಜಿಟಲ್‌ ತಂತ್ರಜ್ಞಾನ ಅಳವಡಿಕೆಯಿಂದ ಸಂಚಾರಿ ನಿಯಮ ಉಲ್ಲಂಘನೆ ಪತ್ತೆ ಕೆಲಸ ಸುಲಭವಾಗಿದೆ. ಬೆಂಗಳೂರಿನಲ್ಲಿಯೇ ನಿತ್ಯ 30 ಸಾವಿರಕ್ಕೂ ಅಧಿಕ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತವೆ. 15 ದಿನದೊಳಗೆ ವಾಹನ ಮಾಲೀಕರ ಮನೆಗೆ ದಂಡದ ನೋಟಿಸ್‌ ಕಳಿಸಲಾಗುತ್ತದೆ. ಆದರೆ, ಅರ್ಧದಷ್ಟುಮಂದಿ ದಂಡ ಪಾವತಿಸುವುದೇ ಇಲ್ಲ ಎನ್ನುತ್ತಾರೆ ಬೆಂಗಳೂರು ಸಂಚಾರ ಪೊಲೀಸ್‌ ವಿಭಾಗದ ವಿಶೇಷ ಆಯುಕ್ತ ಡಾ.ಎಂ.ಎಸ್‌.ಸಲೀಂ.

ಆರ್‌ಟಿಒ ಕಚೇರಿಯಲ್ಲಿ ದಂಡ:

ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿಯೇ ಸಂಚಾರಿ ನಿಯಮ ಉಲ್ಲಂಘನೆಯ ದಂಡ ಬಾಕಿ ಮೊತ್ತ ಪಾವತಿಸುವ ಕೇಂದ್ರ ತೆರೆಯಲು ಕೂಡ ಪೊಲೀಸ್‌ ಇಲಾಖೆ ಸಿದ್ಧವಿದೆ. ಈ ಕೇಂದ್ರದಲ್ಲಿಯೇ ವಾಹನದ ಎಲ್ಲಾ ದಂಡ ಮೊತ್ತವು ಪಾವತಿ ಆಗಿದೆ ಎಂಬ ನಿರಾಕ್ಷೇಪಣ ಪತ್ರವನ್ನು ಕೂಡಾ ನೀಡಲಾಗುತ್ತದೆ. ಈ ಕೇಂದ್ರಕ್ಕೆ ಅಗತ್ಯ ಸ್ಥಳಾವಕಾಶವನ್ನು ನೀಡವಂತೆ ಸಾರಿಗೆ ಇಲಾಖೆಗೆ ಪೊಲೀಸ್‌ ಇಲಾಖೆ ಮನವಿ ಮಾಡಿದೆ.

ಸದ್ಯ ಎಫ್‌ಸಿಗೆ ಏನೆಲ್ಲಾ ದಾಖಲಾತಿ ನೀಡಬೇಕು?

ಎಂಟು ವರ್ಷದೊಳಗಿನ ವಾಹನಗಳಿಗೆ ಪ್ರತಿ ಎರಡು ವರ್ಷಕ್ಕೊಮ್ಮೆ, ಎಂಟು ವರ್ಷ ಮೇಲ್ಪಟ್ಟವಾಹನಗಳಿಗೆ ಪ್ರತಿ ವರ್ಷ ಸದೃಢತೆ ಪ್ರಮಾಣ ಪತ್ರ ಮಾಡಿಸಬೇಕು. ಈ ಸಂದರ್ಭದಲ್ಲಿ ವಿಮೆ, ಮಾಲಿನ್ಯ ಪ್ರಮಾಣ ಪತ್ರ, ತೆರಿಗೆ ಪತ್ರ, ವಾಹನ ನೋಂದಣಿ ದಾಖಲಾತಿ ನೀಡಬೇಕು. ಈ ಹೆಚ್ಚುವರಿಯಾಗಿ ದಂಡ ಮೊತ್ತ ಕುರಿತ ನಿರಾಕ್ಷೇಪಣ ಪತ್ರ ಕಡ್ಡಾಯಗೊಳಿಸಲಾಗುತ್ತಿದೆ.

Yellow board movie ಕ್ಯಾಬ್‌ ಚಾಲಕರಿಗೆ ಗೌರವಿಸುವ ಚಿತ್ರ ಯಲ್ಲೋ ಬೋರ್ಡ್‌: Kiccha Sudeep

ವಾಣಿಜ್ಯ ವಾಹನ ಮಾಲೀಕರ ವಿರೋಧ

ಡಿಜಿಟಲ್‌ ತಂತ್ರಜ್ಞಾನದ ಮೂಲಕ ದಾಖಲಿಸುವ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣವು ಹೆಚ್ಚು ಸುಳ್ಳು/ತಪ್ಪು (ಫೇಕ್‌) ಆಗಿರುತ್ತವೆ. ಅನಿವಾರ್ಯವಾಗಿ ದಂಡ ಕಟ್ಟಬೇಕಾಗುತ್ತದೆ. ಅಲ್ಲದೆ, ಕೇಂದ್ರ ಸರ್ಕಾರದ ಮೋಟರ್‌ ವಾಹನ ಕಾಯ್ದೆಯಲ್ಲಿ ದಂಡ ಬಾಕಿಗಾಗಿ ಸದೃಢತೆ ಪ್ರಮಾಣಪತ್ರ ನಿರಾಕರಿಸಬಾರದು ಎಂಬ ನಿಯಮವಿದೆ. ವಾಣಿಜ್ಯ ವಾಹನಗಳ ಚಾಲಕರು ದಿನದ ದುಡಿಮೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದು, ಅಂತಹವರಿಗೆ ಈ ನಿಯಮ ದೊಡ್ಡ ಪೆಟ್ಟು ನೀಡುತ್ತದೆ. ರಾಜ್ಯ ಸರ್ಕಾರ ಈ ನಿಯಮ ಜಾರಿಗೆ ಅನುಮತಿ ನೀಡಬಾರದು ಎಂದು ಕರ್ನಾಟಕ ಟ್ರಾವೆಲ್‌ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ವಿರೋಧ ವ್ಯಕ್ತಪಡಿಸಿದ್ದಾರೆ.

click me!