Chamarajanagar: ಏ.9ಕ್ಕೆ ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ?: ಸಫಾರಿಗೆ ಹೋಗ್ತಾರಂತೆ ಮೋದಿ

By Kannadaprabha NewsFirst Published Mar 31, 2023, 10:42 PM IST
Highlights

ಏ.9ರಂದು ಮೈಸೂರಿನಲ್ಲಿ ಪ್ರಾಜೆಕ್ಟ್ ಟೈಗರ್‌ ಸುವರ್ಣ ಮಹೋತ್ಸವದ ಸಮಾರಂಭದ ಬಳಿಕ ದೇಶದ ಪ್ರಸಿದ್ಧ ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.
 

ಗುಂಡ್ಲುಪೇಟೆ (ಮಾ.31): ಏ.9ರಂದು ಮೈಸೂರಿನಲ್ಲಿ ಪ್ರಾಜೆಕ್ಟ್ ಟೈಗರ್‌ ಸುವರ್ಣ ಮಹೋತ್ಸವದ ಸಮಾರಂಭದ ಬಳಿಕ ದೇಶದ ಪ್ರಸಿದ್ಧ ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಮೈಸೂರಲ್ಲಿ ಏ.9 ರಂದು ಪ್ರಾಜೆಕ್ಟ್ ಟೈಗರ್‌ ಸುವರ್ಣ ಮಹೋತ್ಸವ ಆಚರಣೆಗೆ ಪ್ರಧಾನಿ ಮೋದಿ ಬರಲಿದ್ದು ಈ ಸಮಯದಲ್ಲಿ ಹುಲಿ ಸಂರಕ್ಷಿತ ಪ್ರದೇಶವಾದ ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ ಕೊಡುವ ಸಾಧ್ಯತೆ ಹೆಚ್ಚಾಗಿದೆ. ಮೈಸೂರಿನಿಂದ ಕಾರ್ಯಕ್ರಮ ಮುಗಿಸಿದ ಬಳಿಕ ಹೆಲಿಕಾಪ್ಟರ್‌ನಲ್ಲಿ ನೇರವಾಗಿ ಬಂಡೀಪುರಕ್ಕೆ ಪ್ರಧಾನಿ ಮೋದಿ ಬರಲಿದ್ದು ಬಂಡೀಪುರ ಅರಣ್ಯದಲ್ಲಿ ಸಫಾರಿ ನಡೆಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಅಲ್ಲದೆ ಅರಣ್ಯ ಇಲಾಖೆಯೂ ಸಾಕಷ್ಟು ತಯಾರಿಯನ್ನು ನಡೆಸುತ್ತಿದ್ದು ಬಂಡೀಪುರಕ್ಕೆ ಹೋಗುವ ಮಾರ್ಗದ ಮೇಲುಕಾಮನಹಳ್ಳಿ ಬಳಿಯ ಸಫಾರಿ ಕೇಂದ್ರದ ಬಳಿ ಹೆಲಿಪ್ಯಾಡ್‌ ಮಾಡಲಾಗುತ್ತಿದೆ. ಅಲ್ಲದೆ ಹೆದ್ದಾರಿಯನ್ನು ದುರಸ್ತಿ ಮಾಡಲಾಗುತ್ತಿದೆ. ಈ ಸಂಬಂಧ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್‌ಕುಮಾರ್‌ ಮಾತನಾಡಿದ್ದು, ಪ್ರಧಾನಿ ಬಂಡೀಪುರಕ್ಕೆ ಭೇಟಿ ಕೊಡುವ ಸಾಧ್ಯತೆಯಿದೆ. ಈ ಕಾರಣದಿಂದ ಅರಣ್ಯ ಇಲಾಖೆ ತಯಾರಿ ನಡೆಸಿದೆ ಎಂದಿದ್ದಾರೆ. 

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನಲೆ: ಆತ್ಮವಿಶ್ವಾಸ ಹೆಚ್ಚಿಸಲು ವಿದ್ಯಾರ್ಥಿಗಳಿಗೆ ಗುಲಾಬಿ ಹೂವು, ಸಿಹಿ ವಿತರಣೆ

ಪ್ರಧಾನಿ ಭೇಟಿಯ ವೇಳೆ ಓಂಕಾರ ವಲಯದಂಚಿನ ರೈತರ ಜಮೀನಿನಲ್ಲಿ ವಿದ್ಯುತ್‌ ತಗುಲಿ ನಿತ್ರಾಣಗೊಂಡ ಆನೆಯ ಜೀವ ಉಳಿಸಿದ ಸಿಬ್ಬಂದಿಗೆ ಸ್ಮರಣಿಕೆ ಕೊಡುವುದು ಮತ್ತು ಇನ್ನಿತರ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದರು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ತಮಿಳುನಾಡಿನ ಮಧುಮಲೈ ಹಾಗೂ ಕೇರಳದ ವೈನಾಡು ಅರಣ್ಯ ಪ್ರದೇಶದ ಗಡಿ ಹೊಂದಿದೆ. 1973 ರಲ್ಲಿ ಹುಲಿ ಯೋಜನೆ ಘೋಷಿಸಿದ ವೇಳೆ ಕೇವಲ ಬಂಡೀಪುರದಲ್ಲಿ ಕೇವಲ 10 ರಿಂದ 15 ಹುಲಿಗಳಿದ್ದವು. ಆದರೀಗ ಹುಲಿಗಳ ಸಂಖ್ಯೆ 150 ದಾಟಿದೆ. ದೇಶದ ಪ್ರಧಾನಿ ಮೋದಿ ಕರ್ನಾಟಕದ ಅರಣ್ಯ ಪ್ರದೇಶದಲ್ಲಿ ಸಫಾರಿ ನಡೆಸುವುದು ಒಂದು ಅವಿಸ್ಮರಣೀಯ ಕ್ಷಣವಾಗಲಿದೆ.

ಎನ್‌ಟಿಸಿಎ ಸಭೆ ನಡೆಸಿದ್ದ ಕೇಂದ್ರ ಸಚಿವ: ಹುಲಿ ಯೋಜನೆಯಾಗಿ 50 ವರ್ಷ ತುಂಬಿದ ಹಿನ್ನೆಲೆ ಬಂಡೀಪುರದಲ್ಲಿ ಹೊಸ ವರ್ಷದ ಆರಂಭದಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸಭೆಯನ್ನು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ನಡೆಸಿದ್ದರು. ಇದೇ ಸಮಯದಲ್ಲಿ ಪರಿಸರ ಕಾಳಜಿ ಮೂಡಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ ಬಂಡೀಪುರ ಮಿತ್ರ ಸಫಾರಿ ಬಸ್‌ಗೆ ಸಚಿವ ಭೂಪೇಂದ್ರ ಯಾದವ್‌ ಚಾಲನೆ ನೀಡಿದ್ದರು. ಬಂಡೀಪುರ ಕಾಡಂಚಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಅರಣ್ಯ ವೀಕ್ಷಣೆಗೆ ಬಂಡೀಪುರ ಮಿತ್ರ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ.

ಹುಲಿ ಯೋಜನೆಗೆ ಸುವರ್ಣ ಸಂಭ್ರಮ: ಬಂಡೀಪುರ ಅರಣ್ಯ 1973 ರಲ್ಲಿ ಹುಲಿ ಯೋಜನೆ ಘೋಷಣೆಗೂ ಮುನ್ನ ಬಂಡೀಪುರ ಅರಣ್ಯಕ್ಕೆ ಮೈಸೂರು ಮಹಾರಾಜರು 1931 ರ ಸಮಯದಲ್ಲಿ ವೇಣುಗೋಪಾಲ ವನ್ಯಜೀವಿ ಉದ್ಯಾನವನ ಎಂಬ ಹೆಸರು ಇಟ್ಟಿದ್ದರು. ಈಗ ಬಂಡೀಪುರ ಹುಲಿ ಯೋಜನೆಗೆ ಸುವರ್ಣ ಸಂಭ್ರಮ. ಹುಲಿ ಯೋಜನೆ ಘೋಷಣೆಗೂ ಮುನ್ನ ಬಂಡೀಪುರ ಅರಣ್ಯದ 90 ಚದರ ಕಿಮಿ ಅರಣ್ಯಕ್ಕೆ ವೇಣು ಗೋಪಾಲ ವನ್ಯಜೀವಿ ಉದ್ಯಾನವನ ಎಂದು ಮಹಾರಾಜರು ಹೆಸರಿಟ್ಟಿದ್ದರು. 1973 ರಲ್ಲಿ ಹುಲಿ ಯೋಜನೆಯಡಿ 800 ಚದರ ಕಿಮಿ ಪ್ರದೇಶಕ್ಕೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಎಂದು ಹೆಸರು ಬಂತು.

ಕಲಘಟಗಿ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಬಿಗ್ ಫೈಟ್: ಹಾಲಿ‌ ಶಾಸಕನ ವಿರುದ್ಧ ಭುಗಿಲೆದ್ದ ಅಸಮಾಧಾನ

ಐಜಿಪಿ ಮಧುಕರ್‌ ಪರಿಶೀಲನೆ: ಪ್ರಧಾನಿ ಮೋದಿ ಬಂಡೀಪುರ ಭೇಟಿ ಹಿನ್ನಲೆ ದಕ್ಷಿಣ ವಲಯದ ಐಜಿಪಿ ಮಧುಕರ್‌ ಪ್ರವೀಣ್‌ ಪವಾರ್‌ ಹೆಲಿಪ್ಯಾಡ್‌, ಕೆಕ್ಕನಹಳ್ಳಿ ಗಡಿ ಹಾಗೂ ಬೋಳುಗುಡ್ಡ ವೀಕ್ಷಣೆ ಮಾಡಿದರು. ಚಾಮರಾಜನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ ಅವರೊಂದಿಗೆ ಹೆಲಿಪ್ಯಾಡ್‌, ಕೆಕ್ಕನಹಳ್ಳಿ ಗಡಿ ಹಾಗೂ ಬಂಡೀಪುರ ವಲಯದ ಬೋಳುಗುಡ್ಡ ಸ್ಥಳವನ್ನು ಖುದ್ದು ಪರಿಶೀಲನೆ ನಡೆಸಿದರು. ಈ ಸಮಯದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉದೇಶ, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಹಾಗೂ ಪೊಲೀಸ್‌ ಸಿಬ್ಬಂದಿ ಇದ್ದರು.

click me!