ತುಮಕೂರಿಗೆ ಪ್ರಧಾನಿ ಮೋದಿ : ಸಿದ್ಧಗಂಗಾ ಮಠಕ್ಕೆ ಭೇಟಿ

Published : Jan 02, 2020, 07:19 AM IST
ತುಮಕೂರಿಗೆ ಪ್ರಧಾನಿ ಮೋದಿ : ಸಿದ್ಧಗಂಗಾ ಮಠಕ್ಕೆ ಭೇಟಿ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ರಾಜ್ಯ ಪ್ರವಾಹ ಕೈಗೊಳ್ಳುತ್ತಿದ್ದಾರೆ. ಇಂದು ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ರಾಜ್ಯದಲ್ಲಿ ಇರಲಿದ್ದಾರೆ. 

ತುಮಕೂರು [ಡಿ.02]:  ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಕಿಸಾನ್‌ ಸಮ್ಮಾನ್‌’ ಯೋಜನೆಯ ಮೂರನೇ ಕಂತಿನ ಹಣ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತುಮಕೂರಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಸಿದ್ಧಗಂಗಾ ಮಠಕ್ಕೂ ಭೇಟಿ ನೀಡಲಿದ್ದು, ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಮಾಡಲಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳ ಜತೆಗೆ ಕಿರು ಸಂವಾದವನ್ನೂ ನಡೆಸಲಿದ್ದಾರೆ.

ತುಮಕೂರಿನಿಂದ ಬೆಂಗಳೂರಿಗೆ ಮರಳಲಿರುವ ಅವರು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್‌ಡಿಒ) ಭೇಟಿ ನೀಡಲಿದ್ದಾರೆ. ಶುಕ್ರವಾರ ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್‌ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಳಿಕ ದಿಲ್ಲಿಗೆ ಮರಳಲಿದ್ದಾರೆ.

3ನೇ ಬಾರಿಗೆ:

ಪ್ರಧಾನಿ ಮೋದಿ ಅವರು ತುಮಕೂರಿಗೆ ಭೇಟಿ ನೀಡುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ ಫುಡ್‌ಪಾರ್ಕ್ ಹಾಗೂ ಎಚ್‌ಎಎಲ್‌ ಶಂಕುಸ್ಥಾಪನೆಗಾಗಿ ಜಿಲ್ಲೆಗೆ ಆಗಮಿಸಿದ್ದ ಅವರು, ಈಗ ಕೃಷಿ ಸಮ್ಮಾನ್‌ ಯೋಜನೆಯ ಹಣ ಬಿಡುಗಡೆ ಹಾಗೂ ದೇಶದ 32 ಮಂದಿ ಪ್ರಗತಿಪರ ರೈತರಿಗೆ ‘ಕೃಷಿ ಕರ್ಮಣ್‌ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮಕ್ಕಾಗಿ ತುಮಕೂರಿಗೆ ಭೇಟಿ ನೀಡುತ್ತಿದ್ದಾರೆ. ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸುಮಾರು 1.5 ಲಕ್ಷ ಮಂದಿ ಸೇರುವ ನಿರೀಕ್ಷೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದು, ಸುಮಾರು 60 ಸಾವಿರಕ್ಕೂ ಹೆಚ್ಚು ರೈತರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲೆಡೆ ಎಲ್‌ಸಿಡಿ ಸ್ಕ್ರೀನ್‌ ಅಳವಡಿಸಲಾಗಿದೆ.

ಸಿದ್ಧಗಂಗಾ ಮಠಕ್ಕೆ ಭೇಟಿ:

ಗುರುವಾರ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿರುವ ಮೋದಿ ಅವರು ನಂತರ ನೇರವಾಗಿ ಕಾಪ್ಟರ್‌ ಮೂಲಕ ಮಧ್ಯಾಹ್ನ ತುಮಕೂರಿಗೆ ತಲುಪಲಿದ್ದಾರೆ. ನಂತರ ರಸ್ತೆ ಮಾರ್ಗವಾಗಿ ಮಧ್ಯಾಹ್ನ 2.30ರ ವೇಳೆಗೆ ಸಿದ್ಧಗಂಗಾ ಮಠಕ್ಕೆ ತೆರಳಿ ಶಿವೈಕ್ಯ ಶ್ರೀಗಳ ಗದ್ದುಗೆ ದರ್ಶನ ಮಾಡಲಿದ್ದಾರೆ. ತಮ್ಮ ಭೇಟಿಯ ನೆನಪಿಗಾಗಿ ಬಿಲ್ವಪತ್ರೆ ಗಿಡವೊಂದನ್ನು ನೆಡಲಿದ್ದಾರೆ. ಸಿದ್ಧಗಂಗಾ ಶ್ರೀಗಳ ಮ್ಯೂಸಿಯಂ ಉದ್ಘಾಟಿಸಲಿರುವ ಅವರು, ಬಳಿಕ ಮಠದಲ್ಲಿ ಆಯ್ದ 100 ವಿದ್ಯಾರ್ಥಿಗಳ ಜತೆಗೆ ಕಿರು ಸಂವಾದವನ್ನೂ ನಡೆಸಲಿದ್ದಾರೆ.

ಗುರುವಾರ ರಾಜ್ಯಕ್ಕೆ ಮೋದಿ, ಬೆಂಗಳೂರಿನ ಕೆಲವು ಕಡೆ ಸಂಚಾರ ನಿಷೇಧ...

ಕೃಷಿ ಸಮ್ಮಾನ್‌ ಕಾರ‍್ಯಕ್ರಮ:

ಆ ನಂತರ ನಗರದ ಜೂನಿಯರ್‌ ಕಾಲೇಜು ಮೈದಾನಕ್ಕೆ ತೆರಳಿ ಅಲ್ಲಿ ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಕೃಷಿ ಸಮ್ಮಾನ್‌ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ನರೇಂದ್ರ ಸಿಂಗ್‌ ತೋಮರ್‌, ಡಿ.ವಿ.ಸದಾನಂದ ಗೌಡ, ಸುರೇಶ್‌ ಅಂಗಡಿ, 12 ರಾಜ್ಯಗಳ ಕೃಷಿ ಸಚಿವರು, ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಸೋಮಣ್ಣ, ಮಾಧುಸ್ವಾಮಿ ಇತರರು ಪಾಲ್ಗೊಳ್ಳಲಿದ್ದಾರೆ. ಮೋದಿ ಕಾರ್ಯಕ್ರಮಕ್ಕಾಗಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಸರ್ವ ರೀತಿಯಿಂದಲೂ ಸಜ್ಜಾಗಿದೆ. ಈಗಾಗಲೇ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ತುಮಕೂರಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ