Aero India 2023: ಇಂದಿನಿಂದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ: ಪ್ರಧಾನಿ ಮೋದಿ ಚಾಲನೆ

Published : Feb 13, 2023, 05:30 AM IST
Aero India 2023: ಇಂದಿನಿಂದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ: ಪ್ರಧಾನಿ ಮೋದಿ ಚಾಲನೆ

ಸಾರಾಂಶ

ಉದ್ಯಾನನಗರಿ ಬೆಂಗಳೂರಿನಲ್ಲಿ ಸೋಮವಾರದಿಂದ ನಡೆಯಲಿರುವ 14ನೇ ಆವೃತ್ತಿಯ ‘ಏರೋ ಇಂಡಿಯಾ-2023’ ವೈಮಾನಿಕ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

ಬೆಂಗಳೂರು (ಫೆ.13): ಉದ್ಯಾನನಗರಿ ಬೆಂಗಳೂರಿನಲ್ಲಿ ಸೋಮವಾರದಿಂದ ನಡೆಯಲಿರುವ 14ನೇ ಆವೃತ್ತಿಯ ‘ಏರೋ ಇಂಡಿಯಾ-2023’ ವೈಮಾನಿಕ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಐದು ದಿನಗಳ ಕಾಲ ನಡೆಯಲಿರುವ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನವನ್ನು ಎರಡನೇ ಬಾರಿಗೆ ನರೇಂದ್ರ ಮೋದಿ ಉದ್ಘಾಟಿಸುತ್ತಿದ್ದು, ಮುಂದಿನ ಐದು ದಿನ ಸಿಲಿಕಾನ್‌ ಸಿಟಿಯ ನಭದಲ್ಲಿ ಲೋಹದ ಹಕ್ಕಿಗಳ ಕಲರವ ಜೋರಾಗಲಿದೆ. 2015ರಲ್ಲೂ ಮೋದಿ ಅವರು ಏರ್‌ ಶೋ ಉದ್ಘಾಟಿಸಿದ್ದರು.

ಆವೃತ್ತಿಯಿಂದ ಆವೃತ್ತಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಏರೋ ಇಂಡಿಯಾ ಈ ಬಾರಿಯೂ ತನ್ನ ಪ್ರದರ್ಶನ ವ್ಯಾಪ್ತಿಯನ್ನು ಶೇ.35ರಷ್ಟುವಿಸ್ತಾರಗೊಳಿಸಿಕೊಂಡಿದೆ. ಹೀಗಾಗಿ ಕಳೆದ ವರ್ಷಕ್ಕಿಂತ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚು ಹೂಡಿಕೆ ಬರುವ ನಿರೀಕ್ಷೆಯಿದ್ದು, ಪ್ರಸ್ತುತ ಖಚಿತಪಟ್ಟಿರುವ ಒಡಂಬಡಿಕೆಗಳ ಮೂಲಕವೇ 75 ಸಾವಿರ ಕೋಟಿ ರು. ಹೂಡಿಕೆ ನಿರೀಕ್ಷಿಸಲಾಗಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

35 ಸಾವಿರ ಚ.ಮೀ. ವ್ಯಾಪ್ತಿಯಲ್ಲಿ ಪ್ರದರ್ಶನ: 2021ರಲ್ಲಿ ನಡೆದ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನದಲ್ಲಿ 600 ಮಂದಿ ಪ್ರದರ್ಶಕರು ಭಾಗವಹಿಸಿದ್ದರು. ಈ ಸಂಖ್ಯೆ ಪ್ರಸಕ್ತ ವೈಮಾನಿಕ ಪ್ರದರ್ಶನದಲ್ಲಿ 809ಕ್ಕೆ ಹೆಚ್ಚಳವಾಗಿದೆ. ಕಳೆದ ವರ್ಷ 55 ದೇಶಗಳು ಮಾತ್ರ ಪ್ರದರ್ಶನದಲ್ಲಿ ಭಾಗವಹಿಸಿದ್ದು, ಪ್ರಸ್ತುತ 98 ದೇಶಗಳು ತಮ್ಮ ಭಾಗವಹಿಸುವಿಕೆ ಖಚಿತಪಡಿಸಿವೆ. ಒಟ್ಟು 251 ಒಡಂಬಡಿಕೆ ಸಿದ್ಧಗೊಂಡಿದ್ದು, ಕಳೆದ ವರ್ಷ 23 ಸಾವಿರ ಚದರ ಮೀಟರ್‌ ವ್ಯಾಪ್ತಿಗೆ ಸೀಮಿತವಾಗಿದ್ದ ಪ್ರದರ್ಶನ ವ್ಯವಸ್ಥೆಯು ಈ ಬಾರಿ 35,000 ಚದರ ಮೀಟರ್‌ ವ್ಯಾಪ್ತಿಗೆ ವಿಸ್ತರಿಸಿದೆ. ಎರಡು ಹೆಚ್ಚುವರಿ ಪ್ರದರ್ಶನ ಹಾಲ್‌ಗಳನ್ನೂ ಸೇರಿಸಿದ್ದೇವೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ರಕ್ಷಣಾ ರಫ್ತು 25000 ಕೋಟಿಗೆ ಹೆಚ್ಚಿಸುವ ಗುರಿ: ಕೇಂದ್ರ ಸಚಿವ ರಾಜನಾಥ್‌ ಸಿಂಗ್‌

67 ವಿಮಾನಗಳ ಪ್ರದರ್ಶನ: ಕಳೆದ ಬಾರಿ 64 ವಿಮಾನಗಳು ವೈಮಾನಿಕ ಪ್ರದರ್ಶನ ನೀಡಿದ್ದವು. ಈ ಬಾರಿ ಸಾರಂಗ್‌, ಸೂರ್ಯಕಿರಣ್‌ ವೈಮಾನಿಕ ಪ್ರದರ್ಶನ ತಂಡ, ಸುಖೋಯ್‌, ರಫೇಲ್‌, ತೇಜಸ್‌ ಸೇರಿದಂತೆ ಒಟ್ಟು 67 ವಿಮಾನಗಳು ಪ್ರದರ್ಶನ ನೀಡಲಿವೆ. ಉಳಿದಂತೆ ಸ್ಟ್ಯಾಟಿಕ್‌ ಡಿಸ್‌ಪ್ಲೇಯಲ್ಲಿ 36 ವಿಮಾನಗಳು ಪ್ರದರ್ಶನಗೊಳ್ಳಲಿವೆ.

ಮೊದಲ ಮೂರು ದಿನ ವಹಿವಾಟಿಗೆ ಸೀಮಿತ: ಐದು ದಿನಗಳ ವೈಮಾನಿಕ ಪ್ರದರ್ಶನದಲ್ಲಿ ಮೊದಲ ಮೂರು ದಿನಗಳನ್ನು (ಫೆ.13-15) ಬ್ಯುಸಿನೆಸ್‌ ದಿನಗಳಾಗಿ ಪರಿಗಣಿಸಿದ್ದು, ಈ ವೇಳೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಫೆ.16 ಮತ್ತು ಫೆ.17ರಂದು ಸಾರ್ವಜನಿಕರಿಗೆ ವೈಮಾನಿಕ ಪ್ರದರ್ಶನ ನೋಡಲು ಅವಕಾಶ ನೀಡಲಾಗುವುದು.

ಮೊದಲ ದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏರೋ ಇಂಡಿಯಾಗೆ ಚಾಲನೆ ನೀಡಲಿದ್ದಾರೆ. ಬಳಿಕ ಸಿಇಒಗಳ ಕಾನ್‌ಕ್ಲೇವ್‌ ನಡೆಯಲಿದೆ. ಫೆ.14ರಂದು ವಿಮಾನ ಹಾರಾಟ ಪ್ರದರ್ಶನ, ರಕ್ಷಣಾ ಸಚಿವರ ಕಾನ್‌ಕ್ಲೇವ್‌, ಸೆಮಿನಾರ್‌ಗಳು ನಡೆಯಲಿದೆ. ಫೆ.15ರಂದು ಫ್ಲೈಯಿಂಗ್‌ ಡಿಸ್‌ಪ್ಲೇ, ಮಂಥನ್‌, ಸೆಮಿನಾರ್‌, ಬಂಧನ್‌ (ಒಡಂಬಡಿಕೆಗಳು) ನಡೆಯಲಿವೆ.

32 ದೇಶಗಳ ರಕ್ಷಣಾ ಸಚಿವರು ಭಾಗಿ: ಎರಡನೇ ದಿನ ಸ್ಪೀಡ್‌ ಎಂಬ ಶೀರ್ಷಿಕೆ ಅಡಿಯಲ್ಲಿ ರಕ್ಷಣಾ ಸಚಿವರ ಕಾನ್‌ಕ್ಲೇವ್‌ ನಡೆಯಲಿದ್ದು, ಇದರಲ್ಲಿ 32 ವಿದೇಶಿ ರಕ್ಷಣಾ ಸಚಿವರು, 29 ದೇಶಗಳ ವಾಯುಪಡೆ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಸಂಶೋಧನೆ ಮತ್ತು ಅಭಿವೃದ್ಧಿ, ಜೆವಿ, ತರಬೇತಿ, ಸ್ಪೇಸ್‌, ಎಐ, ಸೈಬರ್‌ ಸೆಕ್ಯೂರಿಟಿ ಸೇರಿದಂತೆ ಹಲವು ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಯಲಿದೆ.

ಇಂಡಿಯನ್‌ ಪೆವಿಲಿಯನ್‌ ವಿಶೇಷ: ಭಾರತ ನಿರ್ಮಿತ ಯುದ್ಧ ವಿಮಾನ, ಹೆಲಿಕಾಪ್ಟರ್‌ ಹಾಗೂ ತಂತ್ರಜ್ಞಾನಗಳ ಪ್ರದರ್ಶನಕ್ಕಾಗಿಯೇ ಪ್ರತ್ಯೇಕವಾಗಿ ಇಂಡಿಯನ್‌ ಪೆವಿಲಿಯನ್‌ ನಿರ್ಮಾಣ ಮಾಡಲಾಗಿದೆ. ಇದರಲ್ಲಿ 115 ಕಂಪನಿಗಳು ಹಾಗೂ 227 ಉತ್ಪನ್ನಗಳ ಪ್ರದರ್ಶನ ನಡೆಯಲಿದೆ. ಇದರಲ್ಲಿ 149 ಉತ್ಪನ್ನಗಳನ್ನು ಭೌತಿಕವಾಗಿಯೇ ಪ್ರದರ್ಶಿಸಲಾಗುವುದು.

ಏರೋ ಇಂಡಿಯಾ ವಿಶೇಷ
ಪ್ರದರ್ಶಕರ ಸಂಖ್ಯೆ -809
ಭಾಗವಹಿಸುವ ಒಟ್ಟು ದೇಶಗಳು- 98
ವೈಮಾನಿಕ ಪ್ರದರ್ಶನ ನೀಡಲಿರುವ ವಿಮಾನ: 67
ವೈಮಾನಿಕ ವಸ್ತು ಪ್ರದರ್ಶನ ವ್ಯಾಪ್ತಿ: 35 ಸಾವಿರ ಚ.ಮೀ.
ಒಟ್ಟು ಒಡಂಬಡಿಕೆ - 251
ಕರ್ನಾಟಕ ರಾಜ್ಯದ ಒಡಂಬಡಿಕೆ - 32
ಒಪ್ಪಂದಗಳ ಒಟ್ಟು ಮೊತ್ತ- 75,000 ಕೋಟಿ ರು.
ಭಾಗವಹಿಸುವ ವಿದೇಶಿ ರಕ್ಷಣಾ ಸಚಿವರು - 32
ವಿವಿಧ ದೇಶಗಳ ವಾಯುಪಡೆ ಮುಖ್ಯಸ್ಥರು: 29

ಯಶ್‌, ರಿಷಬ್‌ ಸೇರಿ ಗಣ್ಯರಿಂದ ಮೋದಿ ಭೇಟಿ: ರಾಜಭವನದಲ್ಲಿ ಅನೌಪಚಾರಿಕ ಮಾತುಕತೆ

ಏರ್‌ ಶೋ ಹೇಗಿರಲಿದೆ?
- ಸೋಮವಾರದಿಂದ ಆರಂಭವಾಗಲಿರುವ ವೈಮಾನಿಕ ಪ್ರದರ್ಶನದ ಅಂಗವಾಗಿ 5 ದಿನಗಳ ಕಾಲ ಸಿಲಿಕಾನ್‌ ಸಿಟಿ ನಭದಲ್ಲಿ ಲೋಹದ ಹಕ್ಕಿಗಳ ಕಲರವ ಮೂಡಲಿದೆ. ಯುದ್ಧ ವಿಮಾನಗಳ ಅಬ್ಬರ, ಸೂರ್ಯಕಿರಣ್‌ನಂತಹ ಏರೋಬ್ಯಾಟಿಕ್‌ ತಂಡದ ಕಸರತ್ತು, ಸಾರಂಗ್‌ನಂತಹ ಹೆಲಿಕಾಪ್ಟರ್‌ಗಳ ಅತ್ಯಾಕರ್ಷಕ ಪ್ರದರ್ಶನ ಗಮನ ಸೆಳೆಯಲಿದೆ.

- ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಬಳಿಕ, ಎಂಕೆ 2 ಮೂರು ಜೆಟ್‌ಗಳು ಆಗಸದಲ್ಲಿ ತಿರಂಗ ಧ್ವಜ ಹೊತ್ತು ಪ್ರದರ್ಶನ ನೀಡಲಿವೆ. ಭಾರತೀಯ ವಾಯುಪಡೆ ಧ್ವಜವನ್ನು ಹಾರಿಸುತ್ತ ಎಂಐ 17 ನಾಲ್ಕು ಹೆಲಿಕಾಪ್ಟರ್‌ಗಳು ರೋಮಾಂಚನ ಉಂಟುಮಾಡಲಿವೆ.

- ಹಗುರ ಬಳಕೆಯ ಹೆಲಿಕಾಪ್ಟರ್‌ ಭೀಮ (ಎಲ್‌ಯುಎಚ್‌), ಆಧುನಿಕ ಹಗುರ ಹೆಲಿಕಾಪ್ಟರ್‌ ದಕ್ಷ ಎಂಕೆ-3 (ಐಸಿಜಿ), ರುದ್ರ ಎಂಕೆ-4 (ಐಎ), ಪ್ರಚಂಡ ಹಾಗೂ ಸಾರಂಗ ಎಎಲ್‌ಎಚ್‌ ಎಂಕೆ-1 ತಂಡ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲಿವೆ.

- ಬಳಿಕ ಗುರುಕುಲ್‌ ಫಾರ್ಮೇಶನ್‌ನಲ್ಲಿ ಎಲ್‌ಸಿಎ, ಎಚ್‌ಎಡಬ್ಲೂಕೆ-1, ಐಜೆಟಿ, ಎಚ್‌ಟಿಟಿ-40 ಏರ್‌ಕ್ರಾಫ್ಟ್‌ಗಳು ಪ್ರದರ್ಶನ ನೀಡಲಿದೆ. ನೇತ್ರ ಫಾರ್ಮೇಶನ್‌ನಲ್ಲಿ ಇಎಂಬಿ-145 ಎಇಡಬ್ಲೂ ಆ್ಯಂಡ್‌ ಸಿ ಏರ್‌ಕ್ರಾಫ್ಟ್‌, ಸುಕೋಯ್‌-30 ಎಂಕೆಐ ಹಾಗೂ ಮಿಗ್‌-29 ಸಾಮರ್ಥ್ಯ ಪ್ರದರ್ಶನ ನೀಡಲಿವೆ.

- ಅರ್ಜುನ್‌ ಫಾರ್ಮೇಶನ್‌ನಲ್ಲಿ ಮಿಗ್‌-29, ಜಾಗ್‌, ಎಂ-2000, ರಫೇಲ್‌ನಿಂದ ಅಬ್ಬರದ ಶಕ್ತಿ ಪ್ರದರ್ಶನ ನಡೆಯಲಿದೆ. ಬಳಿಕ ಎಲ್‌ಸಿಎ ತೇಜಸ್‌ನ 9 ಯುದ್ಧ ವಿಮಾನಗಳು, ತ್ರಿಶೂಲ್‌ ಫಾರ್ಮೇಶನ್‌ನಲ್ಲಿ ಸುಖೋಯ್‌-30 ಅಬ್ಬರ ಸೃಷ್ಟಿಸಲಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ