
ವರದಿ: ಆತ್ಮಭೂಷಣ್
ಮಂಗಳೂರು: ದೇಶದ ಎಲ್ಲೆಡೆ ಬೀದಿ ಶ್ವಾನಗಳಿಗೆ ಪ್ರತ್ಯೇಕ ಆಹಾರ ನೀಡುವ ವ್ಯವಸ್ಥೆ ಜಾರಿಗೆ ತರುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಬೆನ್ನಿಗೇ ಕೇಂದ್ರ ಸರ್ಕಾರಿ ಸ್ವಾಮ್ಯದ ಮಂಗಳೂರಿನ ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಶ್ವಾನಗಳ ಆಹಾರಕ್ಕಾಗಿಯೇ ಪ್ರತ್ಯೇಕ ಸ್ಥಳವನ್ನು ಗುರುತಿಸಿ ಕಾರ್ಯಗತಗೊಳಿಸಿದೆ. ಈ ಮೂಲಕ ಸರ್ಕಾರಿ ಸ್ವಾಮ್ಯದ ಕಂಪನಿಯೊಂದು ಸಾರ್ವಜನಿಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಇತರರಿಗೆ ಮಾದರಿ ಎನಿಸಿದೆ.
ಎನ್‌ಎಂಪಿಎ ಒಳಗೆ ಹಾಗೂ ಹೊರ ಆವರಣದಲ್ಲಿ ಶ್ವಾನಗಳಿಗೆ ಈ ಮೊದಲು ಎಲ್ಲೆಂದರಲ್ಲಿ ಆಹಾರ ನೀಡಲಾಗುತ್ತಿತ್ತು. ಅಲ್ಲದೆ ಬೀದಿ ಶ್ವಾನಗಳ ಕಾಟವೂ ಹೇರಳವಾಗಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸುವ ಹೊತ್ತಿಗೆ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಶ್ವಾನಗಳಿಗೆ ಆಹಾರ ಒದಗಿಸಬೇಕು ಎಂಬ ಇರಾದೆಯನ್ನು ಎನ್‌ಎಂಪಿಎ ಆಡಳಿತ ಮಂಡಳಿ ಹೊಂದಿತ್ತು.
ಪ್ರಸಕ್ತ ಎನ್‌ಎಂಪಿಎ ಒಳಗೆ ಶ್ವಾನಗಳಿಗೆ ಆಹಾರ ವಲಯ(ಕಮ್ಯುನಿಟಿ ಡಾಗ್ ಫೀಡಿಂಗ್ ಏರಿಯಾ) ಸ್ಥಾಪಿಸಲಾಗಿದೆ. ಒಳ ಆವರಣದ ಆರೇಳು ಕಡೆ ಹಾಗೂ ಟೌನ್‌ಶಿಪ್‌ನ 20 ಕಡೆಗಳಲ್ಲಿ ಶ್ವಾನಗಳಿಗೆ ಆಹಾರ ವಲಯ ಗುರುತಿಸಲಾಗಿದೆ. ಈ ಎಲ್ಲ ಕಡೆಗಳಲ್ಲೂ ಪ್ರತ್ಯೇಕವಾಗಿಯೇ ಶ್ವಾನಗಳಿಗೆ ಆಹಾರ ನೀಡಲಾಗುತ್ತಿದೆ.
ಎನ್‌ಎಂಪಿಎಯ ಆವರದಲ್ಲಿ ಶ್ವಾನಪ್ರಿಯರು ಮಾತ್ರವಲ್ಲ ಭದ್ರತೆ ಹೊಣೆಹೊತ್ತಿರುವ ಕೇಂದ್ರ ಕೈಗಾರಿಕಾ ಭದ್ರತಾಪಡೆ ಸಿಬ್ಬಂದಿ ಕೂಡ ಆಹಾರ ಪೂರೈಸುತ್ತಿದ್ದಾರೆ. ನಿತ್ಯವೂ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ವೇಳೆ ಶ್ವಾನಗಳಿಗೆ ಆಹಾರ ನೀಡಲಾಗುತ್ತಿದೆ. ಅದಕ್ಕೆಂದೇ ಪ್ರತ್ಯೇಕ ಶೆಡ್ ನಿರ್ಮಿಸಲಾಗಿದ್ದು, ನೀರಿಗೆ ಹಾಗೂ ಆಹಾರಕ್ಕೆ ಪಾತ್ರೆ ಇರಿಸಲಾಗಿದೆ. ಹೀಗಾಗಿ ಇಲ್ಲಿ ಆಹಾರ ಪೋಲಾಗುವುದು, ಎಲ್ಲೆಂದರಲ್ಲಿ ಎಸೆಯುವುದು, ಆಹಾರಕ್ಕಾಗಿ ಶ್ವಾನಗಳ ಕಿತ್ತಾಟ, ಓಡಾಟ, ಕಲಹಗಳು ಏರ್ಪಡದೆ ತಮ್ಮ ಪಾಡಿಗೆ ಶ್ವಾನಗಳು ಇರುವಂತಾಗಿದೆ.
ಸುಪ್ರೀಂ ಕೋರ್ಟ್ ಆದೇಶವನ್ನು ತಕ್ಷಣದಲ್ಲಿ ಅನುಷ್ಠಾನಿಸುವಲ್ಲಿ ಎನ್‌ಎಂಪಿಎ ನಿರ್ಗಮನ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ವಿಶೇಷ ಮುತುವರ್ಜಿ ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಶ್ವಾನಗಳಿಗೆ ಕಾಯಂ ಆಗಿ ಆಹಾರ ಪೂರೈಕೆಗೆ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ.
ಶ್ವಾನಗಳ ಆರೈಕೆ ಜವಾಬ್ದಾರಿಯನ್ನು ಮಂಗಳೂರಿನ ಶಕ್ತಿನಗರದಲ್ಲಿರುವ ಅನಿಮಲ್ ಕೇರ್ ಟ್ರಸ್ಟ್ ನೋಡಿಕೊಳ್ಳುತ್ತಿದೆ. ಈ ಟ್ರಸ್ಟ್ ಜೊತೆ ಎನ್‌ಎಂಪಿಎ ಒಪ್ಪಂದ ಕೂಡ ಮಾಡಿಕೊಂಡಿದೆ.
ಶ್ವಾನ ಸೇರಿದಂತೆ ಯಾವುದೇ ಪ್ರಾಣಿಗಳಿಗೆ ಅಪಘಾತವಾದರೆ, ಅದನ್ನು ರಕ್ಷಿಸಲು ಎನ್‌ಎಂಪಿಎ ಬೊಲೆರೋ ವಾಹನ ಕೊಡುಗೆ ನೀಡಿದೆ. ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇದು ಕಾರ್ಯನಿರ್ವಹಿಸುತ್ತಿದ್ದು, ಎನ್‌ಎಂಪಿಎಗೆ ಮೊದಲ ಆದ್ಯತೆ. ಅಲ್ಲದೆ ಅನಿಮಲ್ ಕೇರ್ ಟ್ರಸ್ಟ್‌ಗೆ ಆಪರೇಷನ್ ಸಲಕರಣೆಗಳನ್ನು ಎನ್‌ಎಂಪಿಎ ಒದಗಿಸುವ ಭರವಸೆ ನೀಡಿದೆ ಎಂದು ಅನಿಮಲ್ ಕೇರ್ ಟ್ರಸ್ಟ್‌ನ ಟ್ರಸ್ಟಿ ಸುಮಾ ಆರ್. ನಾಯಕ್ ಹೇಳುತ್ತಾರೆ.
ಇದಲ್ಲದೆ ಬೀಡಾಡಿ(ಬೀದಿಯಲ್ಲಿ ಅಲೆಯುವ) ಗೋವುಗಳಿಗೂ ಎನ್‌ಎಂಪಿಎ ಗೋಶಾಲೆ ತೆರೆದಿದ್ದು, ಕಳೆದ 8 ತಿಂಗಳಿಂದ ಕಾರ್ಯನಿರ್ವಹಿಸುತ್ತಿದೆ. ಸುಮಾರು 60 ಗೋವುಗಳು ಇಲ್ಲಿವೆ. ಹಾಸನದಿಂದ ಗೋಶಾಲೆಗೆ ಪಶು ಆಹಾರ ಪೂರೈಕೆಯಾಗುತ್ತಿದೆ. ಎನ್‌ಎಂಪಿಎ ಸಿಎಸ್ಆರ್ ನಿಧಿ ಉಪಯೋಗಿಸುತ್ತಿದ್ದು, ವ್ಯವಹಾರ ಜೊತೆಗೆ ಪರಿಸರ, ಪ್ರಾಣಿಗಳ ವಿಚಾರದಲ್ಲೂ ಎನ್‌ಎಂಪಿಎ ಮಾದರಿ ನಡೆ ಅನುಸರಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಹೊರಡಿಸಿದ ವೇಳೆ ಎನ್‌ಎಂಪಿಎ ಕೂಡ ತ್ವರಿತವಾಗಿ ಶ್ವಾನಗಳಿಗೆ ಪ್ರತ್ಯೇಕ ಶೆಡ್ ನಿರ್ಮಿಸುವ ಮೂಲಕ ಪ್ರಾಣಿಗಳ ಬಗೆಗೆ ಕಾಳಜಿಯನ್ನು ತೋರಿಸಿದೆ. ಶ್ವಾನಗಳಿಗೆ ಪ್ರತ್ಯೇಕ ಆಹಾರ ವಲಯ ನಿರ್ಮಿಸಿರುವುದು ದ.ಕ. ಜಿಲ್ಲೆಯಲ್ಲಿ ಇದೇ ಪ್ರಥಮ. ಮಹಾನಗರ ಪಾಲಿಕೆಯಲ್ಲಿ ಶ್ವಾನಗಳಿಗೆ ಪ್ರತ್ಯೇಕ ಆಹಾರ ವಲಯ ರಚನೆ ಬಗ್ಗೆ ಸಭೆ ನಡೆದರೂ ಕಾರ್ಯರೂಪಕ್ಕೆ ಬರಲು ಬಾಕಿ ಇದೆ.
-ಸುಮಾ ಆರ್.ನಾಯಕ್, ಟ್ರಸ್ಟಿ, ಅನಿಮಲ್ ಕೇರ್ ಟ್ರಸ್ಟ್, ಮಂಗಳೂರು
ಅಧ್ಯಕ್ಷರ ವಿಶೇಷ ಕಾಳಜಿಯಿಂದ ಎಲ್ಲರಿಗೆ ಮಾದರಿಯಾಗುವಂತೆ ಕಮ್ಯುನಿಟಿ ಡಾಗ್ ಫೀಡಿಂಗ್ ಏರಿಯಾವನ್ನು ಎನ್‌ಎಂಪಿಎ ಆವರಣದಲ್ಲಿ ತೆರೆಯಲಾಗಿದೆ. ಈ ಮೂಲಕ ಎನ್‌ಎಂಪಿಎ ಸಾರ್ವಜನಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ಇದು ಎಲ್ಲರಿಗೆ ಮಾದರಿಯಾಗಿದೆ.
-ಮಧುಸೂದನ್, ನೋಡಲ್ ಅಧಿಕಾರಿ, ಪೋರ್ಟ್ ಅನಿಮಲ್ ಪ್ಲೇನ್ ಮೆನೇಜ್‌ಮೆಂಟ್, ಎನ್‌ಎಂಪಿಎ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ