ರಾಜ್ಯದಲ್ಲಿ ಸಂಪನ್ಮೂಲ ಕ್ರೋಢಿಕರಿಸುವ ಉದ್ದೇಶದಿಂದ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಹೆಚ್ಚಳ ಮಾಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ ತೈಲ ಬೆಲೆ ಏರಿಕೆ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಬೆಂಗಳೂರು (ಜೂ. 17): ಸಂಪನ್ಮೂಲ ಕ್ರೋಢಿಕರಿಸುವ ಉದ್ದೇಶದಿಂದ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಹೆಚ್ಚಳ ಮಾಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ ತೈಲ ಬೆಲೆ ಏರಿಕೆ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇದೆ. ಬಿಜೆಪಿಯವರ ಆಡಳಿತಾವಧಿಯಲ್ಲಿ 14 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿದ್ದರು. ಆಗ ಇವರೆಲ್ಲ ಎಲ್ಲಿದ್ದರು. ಬಿಜೆಪಿಯವರು ಪ್ರತಿಭಟನೆ ಮಾಡುವುದಕ್ಕು ಮುನ್ನ ಇದನ್ನು ಯೋಚಿಸಲಿ. ಅಭಿವೃದ್ಧಿ ಕಾರ್ಯಗಳಾಗಬೇಕು ಎಂಬ ಉದ್ದೇಶದಿಂದ ಬೆಲೆ ಹೆಚ್ಚಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಗೋಸ್ಕರ ಬೆಲೆ ಏರಿಕೆ ಮಾಡಿದ್ದಾರೆ ಎಂದು ವ್ಯಾಖ್ಯಾನ ಮಾಡುವುದು ಸರಿಯಲ್ಲ ಎಂದರು.
ಅಧಿಕಾರಕ್ಕೆ ಬಂದಾಗ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಕಡಿಮೆ ಮಾಡುತ್ತೇವೆ ಎಂದು ಸಿಎಂ ಭರವಸೆ ಕೊಟ್ಟಿರುವ ವೀಡಿಯೋ ಬಿಡುಗಡೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಇವತ್ತು ಒಂದು ಮಾತನ್ನು ಹೇಳುತ್ತೇನೆ. ಆ ಮಾತು ಶಾಶ್ವತವಾಗಿ ಉಳಿದು ಹೋಗುತ್ತದೆಯೇ? ಸಂದರ್ಭಕ್ಕೆ ಅನುಸಾರವಾಗಿ ಆಡಳಿತ ಮಾಡಬೇಕಲ್ಲವೇ? ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆಯ ಕುರಿತು ಪ್ರತಿಕ್ರಿಯಿಸಿ, ತನಿಖೆ ಆಗುವವರೆಗೂ ಬಹಿರಂಗವಾಗಿ ಜನರ ಮುಂದೆ ಹೇಳಿಕೆ ನೀಡಲು ಆಗುವುದಿಲ್ಲ. ತನಿಖೆ ಆದ ನಂತರ ವರದಿ ಬರುತ್ತದೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಯಾವುದೇ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ನಾನು ಹೇಳಿದ್ದೀನಿ, ಮುಖ್ಯಮಂತ್ರಿಯವರು ಹೇಳಿದ್ದಾರೆ. ಯಾರನ್ನೇ ರಕ್ಷಣೆ ಮಾಡುವುದಾಗಲಿ, ಯಾರ ಬಗ್ಗೆಯೂ ಮೃದು ಧೋರಣೆ ತೋರುವುದಾಗಲಿ ಇಲ್ಲ. ಯಾವ ಒತ್ತಡಕ್ಕೂ ನಾವು ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್‌ಸ್ಪೆಕ್ಟರ್ ಗಿರೀಶ್ ನಾಯ್ಕ್ ಮರುನೇಮಕದ ಕುರಿತು ಮಾತನಾಡಿ, ಆಡಳಿತಾತ್ಮಕವಾಗಿ ಏನು ಅಗತ್ಯ ಇದೆಯೋ ಅದನ್ನು ಮಾಡುತ್ತೇವೆ. ಕೆಲ ಸಂದರ್ಭಗಳಲ್ಲಿ ತನಿಖಾಧಿಕಾರಿಗಳನ್ನು ಬದಲಾಯಿಸಿದ್ದೇವೆ. ಸಮರ್ಥವಾದ ಅಧಿಕಾರಿ ಯಾರು ಇದ್ದಾರೆ ಎಂಬುದನ್ನು ಪರಿಗಣಿಸಿ, ಇಲಾಖೆಯ ಹಿರಿಯ ಅಧಿಕಾರಿಗಳೇ ಮರುನೇಮಕ ಮಾಡಿಕೊಳ್ಳುತ್ತಾರೆ. ನಾವ್ಯಾರು ಸೂಚನೆ ಕೊಡುವುದಿಲ್ಲ. ಇನ್ನು ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಬಿಬಿಎಂಪಿ ಚುನಾವಣೆಗೆ ತಯಾರಿ ಮಾಡಿಕೊಳ್ಳುವಂತೆ ಪಕ್ಷದ ಅಧ್ಯಕ್ಷರು ಹೇಳಿದ್ದಾರೆ. ಮೀಸಲಾತಿ ಸಂಪೂರ್ಣ ಮಾಡಬೇಕು. ಮೀಸಲಾತಿ ಸರಿಯಿಲ್ಲ ಎಂದು ಯಾರಾದರು ಕೋರ್ಟ್‌ಗೆ ಹೋಗಬಹುದು. ಇದಾಗದಂತೆ ನೋಡಿಕೊಳ್ಳಬೇಕಿದೆ ಎಂದರು.
ನಟ ದರ್ಶನ್ ನಾಯಿ ರೇಂಜಿಗಿಳಿದು ಕೊಲೆ ಮಾಡಬಾರದಿತ್ತು: ರಾಮ್ ಗೋಪಾಲ್ ವರ್ಮಾ
ಮಧುಗಿರಿಯ ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಸೇವನೆ ಘಟನೆಯ ತಪ್ಪಿತಸ್ಥ ಅಧಿಕಾರಿಗಳ ವಜಾ ಮಾಡಬೇಕು ಎಂದು ಅಶೋಕ್ ಆಗ್ರಹಿಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾರು ಅದರಲ್ಲಿ ನೇರವಾಗಿ ಭಾಗಿಯಾಗಿರುತ್ತಾರೆ ಅವರನ್ನು ಅಮಾನತು ಮಾಡಬೇಕಾಗುತ್ತದೆ. ಈಗಾಗಲೇ ಗ್ರಾಮ ಪಂಚಾಯಿತಿ ಪಿಡಿಓ, ಕಾರ್ಯದರ್ಶಿ, ವಾಟರ್‌ಮೆನ್‌ನನ್ನು ಅಮಾನತು ಮಾಡಲಾಗಿದೆ. ತನಿಖೆಯಲ್ಲಿ ಹಿರಿಯ ಅಧಿಕಾರಿಗಳ ಲೋಪ ಕಂಡು ಬಂದರೆ ಅವರನ್ನು ಅಮಾನತು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.