ಬಿಹಾರದಿಂದ ಬಂದಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಹಾಲು ಕುಡಿದು ಹಸುವಿನ ಕೆಚ್ಚಲು ಕತ್ತರಿಸಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ. ಈ ಕೃತ್ಯದಲ್ಲಿ ಬೇರೆಯವರ ಕೈವಾಡವಿದೆಯೇ ಎಂಬುದನ್ನು ಆರೋಪಿಯಿಂದಲೇ ಬಾಯಿ ಬಿಡಿಸಲಾಗುವುದು: ಗೃಹ ಸಚಿವ ಡಾ.ಜಿ.ಪರಮೇಶ್ವರ್
ಬೆಂಗಳೂರು(ಜ.15): ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಪ್ರಕರಣ ಕುರಿತು ಸಮಗ್ರ ತನಿಖೆ ನಡೆಯುತ್ತಿದ್ದು, ಯಾರದ್ದೇ ಕೈವಾಡವಿದ್ದರೂ ಮುಲಾಜಿಲ್ಲದೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಿಂದ ಬಂದಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಹಾಲು ಕುಡಿದು ಹಸುವಿನ ಕೆಚ್ಚಲು ಕತ್ತರಿಸಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ. ಈ ಕೃತ್ಯದಲ್ಲಿ ಬೇರೆಯವರ ಕೈವಾಡವಿದೆಯೇ ಎಂಬುದನ್ನು ಆರೋಪಿಯಿಂದಲೇ ಬಾಯಿ ಬಿಡಿಸಲಾಗುವುದು. ಪ್ರಕರಣದಲ್ಲಿ ಅಮಾಯಕನನ್ನು ಬಂಧಿಸಲಾಗಿದೆ ಎಂದು ಬಿಜೆಪಿಯವರು ಆರೋಪಿಸುತ್ತಿರುವುದು ಅಸಮರ್ಥನೀಯ ಎಂದರು.
3 ಹಸುಗಳ ಕೆಚ್ಚಲು ಕತ್ತರಿಸಿದವನ ಹೆಡೆಮುರಿ ಕಟ್ಟಿದ ಪೊಲೀಸ್
ಬೆಳಗಾವಿ ಕಾಂಗ್ರೆಸ್ ಕಚೇರಿ ವಿಷಯ ಚರ್ಚೆ ನಿಜ:
ಸೋಮವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಬೆಳಗಾವಿಯ ಪಕ್ಷದ ಕಚೇರಿ ವಿಚಾರ ಚರ್ಚೆ ಆಗಿರುವುದು ನಿಜ. ಈ ಹಿಂದೆ ತಾವು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ನಿವೇಶನ ಪಡೆಯಲು 45 ಲಕ್ಷ ರು.ಗಳನ್ನು ಪಾವತಿಸಲಾಗಿತ್ತು. ದೊಡ್ಡ ನಾಯಕರಿದ್ದರೂ ಉತ್ತಮ ಕಚೇರಿ ಇಲ್ಲ ಎಂದು ಆಕ್ಷೇಪಿಸಿದ್ದೆ. ಸರ್ಕಾರ ನಿವೇಶನ ಕೊಟ್ಟರೆ ಕಟ್ಟಡ ಕಟ್ಟುವುದಾಗಿ ಅಲ್ಲಿನ ನಾಯಕರು ಹೇಳಿದ್ದರು. ತಾವು ಅಧ್ಯಕ್ಷ ಸ್ಥಾನ ಬಿಟ್ಟ ನಂತರ ಕಚೇರಿ ಉದ್ಘಾಟನೆಯಾಗಿತ್ತು ಎಂದರು.
ಕೆಚ್ಚಲು ಕೊಯ್ದ ಸ್ಥಳದಲ್ಲಿ ಬಿಜೆಪಿಗರಿಂದ ಗೋಪೂಜೆ
ಬೆಂಗಳೂರು: ಇತ್ತೀಚೆಗೆ ಚಾಮರಾಜಪೇಟೆಯ ವಿನಾಯಕನ ಗರದಲ್ಲಿ ಮೂರು ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದಿದ್ದ ಘಟನೆ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಪಕ್ಷದ ನಾಯಕರು ಮಂಗಳವಾರ ಹಸುಗಳ ಮಾಲೀಕ ಕರ್ಣ ಅವರ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದರು.
ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಕರ್ಣ ಅವರ ಮನೆ ಬಳಿ ಗೋವುಗಳ ಪೂಜೆ ನೆರವೇರಿಸಿದರು. ಇದೇ ವೇಳೆ ಬಿಜೆಪಿ ವತಿಯಿಂದ ಹಸುಗಳ ಮಾಲೀಕ ಕರ್ಣನಿಗೆ ಒಂದು ಲಕ್ಷ ರು. ಹಣ ನೀಡಿದರು. ಸರ್ಕಾರದ ನಿಷ್ಕ್ರಿಯತೆ, ಕಾನೂನು ಮತ್ತು ಸುವ್ಯ ವಸ್ಥೆ ಹದಗೆಟ್ಟಿರುವ ಕುರಿತು ಕಿಡಿಕಾರಿದರು.
ಈ ವೇಳೆ ಮಾತನಾಡಿದ ವಿಜಯೇಂದ್ರ, ದನದ ಕೆಚ್ಚಲು ಕೊಯ್ದ ಪ್ರಕರಣಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಧೋರಣೆಯೇ ಕಾರಣ. ಗೋವು ಪೂಜೆ ಮಾಡುವ ಈ ದೇಶದಲ್ಲಿ ಈ ದುರ್ಘಟನೆ ನಡೆದಿರುವುದು ಅಕ್ಷಮ್ಯ ಅಪರಾಧ. ಈ ದುರ್ಘಟನೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಒಳಿತು ಮಾಡುವುದಿಲ್ಲ. ಇವರ ಪಾಪದ ಕೊಡ ತುಂಬಿದೆ. ಹೀಗಾಗಿ ಇಂತಹ ದುರ್ಘಟನೆ ಆಗುತ್ತಿವೆ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣದಲ್ಲಿ ಯಾರೋ ಬಡಪಾಯಿ ಯನ್ನು ತಂದು ಅವನೇ ಮಾಡಿದ್ದಾಗಿ ಬಿಂಬಿಸುವ ಪ್ರಯತ್ನವಾಗುತ್ತಿದೆ ಎಂಬ ಚರ್ಚೆ ನಡೆದಿದೆ. ಬಡ ಕುಟುಂಬದ ಹಸುವಿನ ಮಾಲೀಕ ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತಿದ್ದಾರೆ. ಹೀಗಾಗಿ ಅವರನ್ನು ಭೇಟಿಯಾಗಿ ಗೋವು ಪೂಜೆ ಮಾಡಿದ್ದೇವೆ ಎಂದರು.
ಹಿಂದೂಗಳ ವಿಚಾರದಲ್ಲಿ ತಾರತಮ್ಯ -ಅಶೋಕ್: ಅಶೋಕ್ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಹಿಂದೂಗಳ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಹಿಂದೂ- ಮುಸ್ಲಿಂ ಸಮುದಾಯಕ್ಕೆ ಬೇರೆ ಬೇರೆ ನೀತಿ ಅನುಸರಿಸಿ ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಗೂಂಡಾಗಿರಿ, ತಾಲಿಬಾನ್ ಸರ್ಕಾರ ಇಲ್ಲಿದೆ. ಮುಸಲ್ಮಾನರಿಗೆ ಏನಾದರೂ ಆಗಿದ್ದರೆ ಸಿದ್ದರಾಮಯ್ಯ ಪಂಚೆ ಎತ್ತಿಕೊಂಡು ಬರುತ್ತಿದ್ದರು ಎಂದು ಕಿಡಿಕಾರಿದರು.
ಈ ಪ್ರಕರಣದಲ್ಲಿ ಆರೋಪಿ ಮತಿಭ್ರಮಣೆಗೆ ಒಳಗಾದವ ಎಂದು ಕಾಂಗ್ರೆಸ್ಸಿಗರು ಕಥೆ ಹೆಣೆದಿದ್ದಾರೆ. ಆತ 10 ವರ್ಷಗಳಿಂದ ಅವರ ಅಣ್ಣನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಇದೆ. ಆತ ಮದ್ಯಪಾನ ಮಾಡಿದ್ದರೆ ಆ ಹೊತ್ತಿನಲ್ಲಿ ಬಾರ್ ತೆರೆದಿರಲು ಹೇಗೆ ಸಾಧ್ಯ? ಮುಂಜಾನೆ 3 ಅಥವಾ 4 ಗಂಟೆಗೆ ಇಂತಹ ದುಷ್ಕೃತ್ಯ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಕೆಚ್ಚಲು ಕೊಯ್ದು ಹಸುಗಳ ಮೇಲೆ ಕ್ರೌರ್ಯ, ಬಿಗ್‌ಬಾಸ್ ಚೈತ್ರಾ ಕುಂದಾಪುರ ತೀವ್ರ ಖಂಡನೆ
ಸುಮಾರು 500 ಕೋಟಿ ರು.ಗೂ ಅಧಿಕ ಮೌಲ್ಯದ ಜಾಗದಲ್ಲಿ ದನದ ಆಸ್ಪತ್ರೆ ಇದೆ. ಈ ಜಾಗವನ್ನು ಸರ್ಕಾರವು ವಲ್ಕ್ ಬೋರ್ಡಿಗೆ ನೀಡಿದೆ. ಇದರ ವಿರುದ್ಧ ಹೋರಾಟ ಮಾಡಿದವರಲ್ಲಿ ಕರ್ಣ ಮುಂಚೂಣಿಯಲ್ಲಿ ದರು. ಈಗ ಕರ್ಣನ ಹಸುಗಳ ಕೆಚ್ಚಲು ಕತ್ತರಿಸುವ ಮೂಲಕ ಆತನಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂಸದ ಪಿ.ಸಿ. ಮೋಹನ್, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿಜೆಪಿ ಮುಖಂಡ ಭಾಸ್ಕರ್‌ರಾವ್, ಪಕ್ಷದ ಪ್ರಮುಖರು, ಸ್ಥಳೀಯ ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ತನಿಖೆಗೆ ಆಗ್ರಹಿಸಿ ಹೋರಾಟ: ಹಸುಗಳ ಕೆಚ್ಚಲು ಕತ್ತರಿಸಿದ ಪ್ರಕರಣದ ಸೂಕ್ತ ತನಿಖೆಗಾಗಿ ಆಗ್ರಹಿಸಿ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ಮಾಡಲಿದೆ ಎಂದು ಅಶೋಕ್ ಹೇಳಿದರು.