
ಮಂಡ್ಯ (ಸೆ.23): ರಾಜಕಾರಣವನ್ನು ಬದಿಗಿಟ್ಟು ತಮಿಳುನಾಡು ಮತ್ತು ಕರ್ನಾಟಕ ಪರಸ್ಪರ ಮಾತುಕತೆ ನಡೆಸಿ ಸರ್ವಸಮ್ಮತವಾದ ನಿರ್ಧಾರ ಕೈಗೊಂಡರೆ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ನಟ ಅಭಿಷೇಕ್ ಅಂಬರೀಶ್ ಅಭಿಪ್ರಾಯಪಟ್ಟರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟದಲ್ಲಿ ರೈತರ ಜೊತೆ ಕುಳಿತು ಸಾಥ್ ನೀಡಿದರು. ಸ್ಥಳದಲ್ಲಿದ್ದ ನಿರ್ಮಲಾನಂದ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದು ಮಾತನಾಡಿದರು.
ನಮ್ಮ ಬಳಿ ನೀರು ಇದ್ದರೆ ತಮಿಳುನಾಡಿನವರು ಕೇಳಲಿ. ನಮ್ಮ ಬಳಿಯೇ ನೀರಿಲ್ಲದಿದ್ದಾಗ ಅವರಿಗೆ ಕೊಡಲು ಹೇಗೆ ಸಾಧ್ಯ. ಇದು ನ್ಯಾಯಾಲಯ, ಪ್ರಾಧಿಕಾರದಲ್ಲಿ ಬಗೆಹರಿಯುವ ವಿಚಾರವಲ್ಲ. ಎರಡೂ ರಾಜ್ಯ ಸರ್ಕಾರಗಳು ಕುಳಿತು ಸೌಹಾರ್ದಯುತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಕಾವೇರಿ ವಿವಾದವನ್ನು ವಿಸ್ತರಿಸಿಕೊಂಡು ಹೋಗುವ ಬದಲು ಅದಕ್ಕೊಂದು ಶಾಶ್ವತ ಪರಿಹಾರ ದೊರಕಿಸಬೇಕು ಎಂದರು. ನಾನು ಯಾವುದೇ ರಾಜಕೀಯ ದೃಷ್ಟಿಯಿಂದ ಇಲ್ಲಿಗೆ ಬಂದಿಲ್ಲ.
ಭುಗಿಲೆದ್ದ ಕಾವೇರಿ ಕಿಚ್ಚು: ತಮಿಳುನಾಡಿಗೆ ನೀರು ಬಿಡದಂತೆ ರಾಜ್ಯಾದ್ಯಂತ ಹೋರಾಟ ತೀವ್ರ
ಚಿಕ್ಕಂದಿನಿಂದಗಲೂ ಕಾವೇರಿ ಹೋರಾಟ ನೋಡಿಕೊಂಡು ಬೆಳೆದಿದ್ದೇನೆ. ಅಪ್ಪಾಜಿ, ಅಮ್ಮ ಎಲ್ಲರೂ ಕಾವೇರಿ ನೀರಿನ ಪರವಾಗಿ ಹೋರಾಟ ಮಾಡಿದ್ದಾರೆ. ಸಂಸತ್‌ನಲ್ಲಿ ಈ ಬಗ್ಗೆ ಚರ್ಚೆ ಮಾಡುವ ಕೆಲಸವನ್ನು ಅಮ್ಮ ಮಾಡುತ್ತಾರೆ. ಜಲಾಶಯಗಳಲ್ಲಿರುವ ನೀರನ್ನು ಬಿಟ್ಟರೆ ಮುಂದೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಲಿದೆ. ನಮ್ಮ ನೀರು ನಮ್ಮಲ್ಲೇ ಉಳಿಯಬೇಕು. ನಮ್ಮ ಜನರಿಗೆ ನ್ಯಾಯ ಸಿಗಬೇಕು ಎಂದರು. ಕಾವೇರಿ ನದಿ ನೀರಿನ ವಿಚಾರವಾಗಿ ಕನ್ನಡ ಚಿತ್ರರಂಗ ಯಾವಾಗಲೂ ಜನರು ಮತ್ತು ರೈತರ ಜೊತೆ ಇದ್ದೇ ಇರುತ್ತದೆ. ಶೀಘ್ರದಲ್ಲೇ ಅದಕ್ಕೆ ಒಂದು ವೇದಿಕೆ ಸಿದ್ದವಾಗಲಿದೆ ಎಂದು ನುಡಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಡದಿರಿ: ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾಯಕರ್ತರು ನಗರದ ರಾಯಲ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಮಳೆಯಿಲ್ಲದೆ ರಾಜ್ಯದಲ್ಲಿ ಬರಗಾಲ ಎದುರಾಗಿದೆ. ಜನ- ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಪರದಾಡುವ ಸ್ಥಿತಿ ಇದೆ. ರಾಜ್ಯದ 236 ತಾಲೂಕುಗಳಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿರುವ ಬಗ್ಗೆ ವರದಿಯಿದೆ. ಈ ಹಿನ್ನೆಲೆಯಲ್ಲಿಯೇ ರಾಜ್ಯ ಸರ್ಕಾರ 192 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ ಈಗ ಅಧಿಕೃತ: ದಸರಾ ಬಳಿಕ ಲೋಕಸಭೆ ಸೀಟು ಹಂಚಿಕೆ ನಿರ್ಧಾರ
ಆದರೆ, ತಮಿಳುನಾಡು ಸರ್ಕಾರ ಕಾವೇರಿ ನೀರಿಗಾಗಿ ಬೇಡಿಕೆ ಇಟ್ಟಿರುವುದು ಎಷ್ಟು ಸರಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ವಿಚಾರದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ತೀರ್ಪು ಆಘಾತ ತಂದಿದೆ ಎಂದು ತಿಳಿಸಿದರು. ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಪಾಲಿಸಬಾರದು. ನಾಡಿನ ಜನರ ಜೀವಗಳಿಗಿಂತ ಪ್ರಾಧಿಕಾರದ ಆದೇಶ ದೊಡ್ಡದಲ್ಲ. ಪ್ರಾಧಿಕಾರದ ಆದೇಶ ಪಾಲಿಸಲು ಹೋಗಿ ಅವರು ಕೇಳಿದಷ್ಟು ನೀರನ್ನು ಈವರೆಗೆ ಬಿಟ್ಟಿದ್ದೇ ರಾಜ್ಯ ಸರ್ಕಾರದ ದೊಡ್ಡ ತಪ್ಪು. ಈ ಹಿಂದೆ ಮಾಡಿರುವ ತಪ್ಪನ್ನು ಮತ್ತೆ ಮುಂದುವರಿಸಬಾರದು ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ