ಕೊರೋನಾ ಮಧ್ಯೆ ಗೌರಿ-ಗಣೇಶ ಹಬ್ಬ: ಊರುಗಳತ್ತ ಜನರು, ಹೆದ್ದಾರಿಗಳಲ್ಲಿ ಟ್ರಾಫಿಕ್‌

Kannadaprabha News   | Asianet News
Published : Aug 21, 2020, 09:19 AM IST
ಕೊರೋನಾ ಮಧ್ಯೆ ಗೌರಿ-ಗಣೇಶ ಹಬ್ಬ: ಊರುಗಳತ್ತ ಜನರು, ಹೆದ್ದಾರಿಗಳಲ್ಲಿ ಟ್ರಾಫಿಕ್‌

ಸಾರಾಂಶ

ತುಮಕೂರು ರಸ್ತೆಯಲ್ಲಿ ಭಾರೀ ಸಂಖ್ಯೆಯಲ್ಲಿ ವಾಹನಗಳ ಸಂಚಾರ| ಟೋಲ್‌ಗಳಲ್ಲಿ ಸಂಚಾರ ದಟ್ಟಣೆ| ಇಂದೂ ಕೂಡ ಊರುಗಳತ್ತ ತೆರಳುವ ಸಾಧ್ಯತೆ| ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ|  

ಬೆಂಗಳೂರು(ಆ.21): ಗೌರಿ-ಗಣೇಶ ಹಬ್ಬ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಗುರುವಾರ ರಾಜಧಾನಿಯಿಂದ ಭಾರೀ ಸಂಖ್ಯೆಯಲ್ಲಿ ಜನರು ಊರುಗಳತ್ತ ಪ್ರಯಾಣಿಸಿದ್ದಾರೆ. 

ಕೊರೋನಾ ಸೋಂಕು ನಡುವೆಯೂ ಸರ್ಕಾರ ಹಬ್ಬ ಆಚರಣೆಗೆ ಅವಕಾಶ ಕಲ್ಪಿಸಿದ್ದು, ಶುಕ್ರವಾರ ಗೌರಿ ಹಬ್ಬ ಹಾಗೂ ಶನಿವಾರ ಗಣೇಶ ಚತುರ್ಥಿ ಇದೆ. ಹೀಗಾಗಿ ನಗರದಲ್ಲಿ ನೆಲೆಸಿರುವ ರಾಜ್ಯದ ವಿವಿಧ ಭಾಗಗಳ ಜನರು, ಗುರುವಾರ ಮುಂಜಾನೆಯಿಂದಲೇ ನಗರದಿಂದ ಊರುಗಳತ್ತ ದೊಡ್ಡ ಪ್ರಮಾಣದಲ್ಲಿ ಪ್ರಯಾಣಿಸಿದರು. ಬೈಕ್‌, ಕಾರು, ಟಿಟಿ ವಾಹನ, ಆಟೋಗಳು, ಟೆಂಪೊ ಹೀಗೆ ಸಿಕ್ಕ ವಾಹನಗಳಲ್ಲಿ ಊರಿನತ್ತ ಮುಖ ಮಾಡಿದ್ದರು. ಹೀಗಾಗಿ ನಗರದಿಂದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಲ್ಲಿ ಮುಂಜಾನೆಯಿಂದಲೂ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು.

ಬೆಂಗಳೂರು- ತುಮಕೂರು ಹೆದ್ದಾರಿಯ ನವಯುಗ ಟೋಲ್‌ ಕೇಂದ್ರ, ಏರ್‌ಪೋರ್ಟ್‌ ರಸ್ತೆಯ ಟೋಲ್‌ ಕೇಂದ್ರ, ಬೆಂಗಳೂರು- ಹೊಸೂರು ರಸ್ತೆ, ಬೆಂಗಳೂರು- ಮೈಸೂರು ಹೆದ್ದಾರಿಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ತುಮಕೂರು ರಸ್ತೆಯಲ್ಲಿ ಭಾರೀ ಸಂಖ್ಯೆಯಲ್ಲಿ ವಾಹನಗಳು ಸಂಚರಿದವು. ಟೋಲ್‌ ಕೇಂದ್ರಗಳ ಬಳಿ ಕಿಲೋ ಮೀಟರ್‌ ನಷ್ಟುಉದ್ದಕ್ಕೆ ವಾಹನಗಳು ಸಾಲುಗಟ್ಟಿನಿಂತಿದ್ದವು. ನಿಧಾನಗತಿಯಲ್ಲಿ ವಾಹನಗಳು ಸಂಚರಿಸಿದ ಪರಿಣಾಮ ವಾಹನ ಚಾಲಕರು ಹಾಗೂ ಸವಾರರು ಕಿರಿಕಿರಿ ಅನುಭವಿಸಿದರು.

ಗಣೇಶ ಹಬ್ಬಕ್ಕೆ ಊರಿಗೆ ಹೋಗೋರಿಲ್ಲ, ಮೆಜೆಸ್ಟಿಕ್ ಖಾಲಿ ಖಾಲಿ

ಮೈಸೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ಬೆಳಗಾವಿ ಬೀದರ್‌, ಕಲಬುರಗಿ, ಚಿತ್ರದುರ್ಗ, ವಿಜಯಪುರ, ಬಾಗಲಕೋಟೆ, ಬಳ್ಳಾರಿ ಸೇರಿದಂತೆ ರಾಜ್ಯದ ನಾನಾ ಭಾಗಗಳಿಗೆ ಜನರ ತೆರಳಿದರು.

ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ:

ಇನ್ನು ಕೊರೋನಾ ಭೀತಿಯಲಿ ಬಸ್‌ ಏರಲು ಹಿಂದೇಟು ಹಾಕುತ್ತಿದ್ದ ಜನರು, ಗುರುವಾರ ಊರುಗಳಿಗೆ ತೆರಳಲು ಬಸ್‌ ನಿಲ್ದಾಣಗಳತ್ತ ಮುಖ ಮಾಡಿದ್ದರು. ಹೀಗಾಗಿ ಮೆಜೆಸ್ಟಿಕ್‌ ಕೆಂಪೇಗೌಡ ಬಸ್‌ ನಿಲ್ದಾಣ ಹಾಗೂ ಮೈಸೂರು ರಸ್ತೆಯ ಸ್ಯಾಟ್‌ಲೆಟ್‌ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿತ್ತು. ಯಶವಂತಪುರ, ಮಲ್ಲೇಶ್ವರ, ರಾಜಾಜಿನಗರ, ಗೊರಗುಂಟೆಪಾಳ್ಯ, ಕೆ.ಆರ್‌.ಪುರಂ, ಕೆಂಗೇರಿ ಮೊದಲಾದ ಜಂಕ್ಷನ್‌ ಗಳಲ್ಲಿ ಜನದಟ್ಟಣೆ ಹೆಚ್ಚಿತ್ತು. ಊರುಗಳಿಗೆ ತೆರಳಲು ಸಿದ್ಧರಾಗಿ ಬಂದಿದ್ದ ಜನರು, ಬಸ್‌ ಗಳಿಗಾಗಿ ಕಾಯುತ್ತಾ ನಿಂತಿದ್ದರು.

ಇಂದೂ ಜನ ಊರುಗಳತ್ತ?:

ಇನ್ನ ಗುರುವಾರ ಕೆಲಸ ಕಾರ್ಯಗಳಲ್ಲಿ ತೊಡಗಿದ್ದವರು, ಶುಕ್ರವಾರ ಊರುಗಳತ್ತ ತೆರಳುವ ಸಾಧ್ಯತೆ ಇದ್ದು, ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಅದರಲ್ಲೂ ಸಂಜೆ ವೇಳೆಗೆ ಭಾರೀ ಸಂಖ್ಯೆಯಲ್ಲಿ ಜನರು ನಗರಗಳಿಂದ ಊರುಗಳತ್ತ ತೆರಳುವ ನಿರೀಕ್ಷೆಯಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

‘ನೆಕ್ಸ್ಟ್‌ ಸಿಎಂ’ ಬೆಟ್ಟಿಂಗ್‌ ನಿಯಂತ್ರಿಸಿ: ವಿ.ಸುನೀಲ್‌ ಕುಮಾರ್‌ ಆಗ್ರಹ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ಅಗತ್ಯ: ಛಲವಾದಿ ನಾರಾಯಣಸ್ವಾಮಿ