ವೀಕೆಂಡ್‌ನಲ್ಲಿ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ, ಟ್ರಾಫಿಕ್‌ ಜಾಂ

By Kannadaprabha NewsFirst Published Sep 13, 2021, 7:44 AM IST
Highlights
  • ಸರಣಿ ರಜೆಗಳಿಂದಾಗಿ ವಾರಾಂತ್ಯದಲ್ಲಿ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕಿದ್ದವು
  •  ಚಿಕ್ಕಮಗಳೂರು, ಕೊಡಗು ಸೇರಿ ಪ್ರಸಿದ್ಧ ಗಿರಿಧಾಮ, ಬೀಚ್‌ಗಳು, ಪ್ರೇಕ್ಷಣೀಯ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ 

 ಬೆಂಗಳೂರು (ಸೆ.13):  ಗೌರಿ-ಗಣೇಶ ಹಬ್ಬ ಹಾಗೂ ಸರಣಿ ರಜೆಗಳಿಂದಾಗಿ ವಾರಾಂತ್ಯದಲ್ಲಿ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕಿದ್ದವು. ಸಾಲುಸಾಲು ರಜೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು, ಕೊಡಗು ಸೇರಿ ಪ್ರಸಿದ್ಧ ಗಿರಿಧಾಮ, ಬೀಚ್‌ಗಳು, ಪ್ರೇಕ್ಷಣೀಯ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಕೊರೋನಾ ಮೂರನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಬಹುತೇಕ ಕಡೆ ಮೋಜು-ಮಸ್ತಿಯ ನಡುವೆ ಕೋವಿಡ್‌ ನಿಯಮಾವಳಿಯನ್ನು ಪ್ರವಾಸಿಗರು ಉಲ್ಲಂಘಿಸಿದ್ದು ಎದ್ದು ಕಂಡುಬಂತು.

ವಿಶ್ವ ವಿಖ್ಯಾತ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಭಾನುವಾರ ಒಂದೇ ದಿನ 8 ಸಾವಿರ ಮಂದಿ ಭೇಟಿಕೊಟ್ಟಿದ್ದರು. ಒಟ್ಟಾರೆ ಮೂರು ದಿನಗಳಲ್ಲಿ 12 ಸಾವಿರ ಮಂದಿ ಭೇಟಿ ನೀಡಿ, ಐತಿಹಾಸಿಕ ಸ್ಮಾರಕಗಳ ಸೌಂದರ‍್ಯವನ್ನು ಕಣ್ತುಂಬಿಕೊಂಡರು. ಇನ್ನು ಉತ್ತರ ಕನ್ನಡ ಜಿಲ್ಲೆಯ ಕುಡ್ಲೆ, ಓಂ ಕಡಲತೀರ, ಮುರ್ಡೇಶ್ವರ, ಉಡುಪಿಯ ಮಲ್ಪೆ ಸೇರಿದಂತೆ ಕರಾವಳಿಯ ಪ್ರಮುಖ ಬೀಚ್‌ಗಳಲ್ಲೂ ಜನಜಂಗುಳಿ ಇತ್ತು.

ಸರ್ಕಾರಕ್ಕೆ ಸಡ್ಡು: ಹಲವೆಡೆ ಅದ್ಧೂರಿ ಚೌತಿ

ವಾಹನಗಳ ಸಾಲು-ಚಿಕ್ಕಮಗಳೂರಿನ ಗಿರಿಪ್ರದೇಶಗಳಲ್ಲಿ ಪ್ರವಾಸಿಗರ ಒತ್ತಡಕ್ಕೆ ಬ್ರೇಕ್‌ ಹಾಕಲು ಜಿಲ್ಲಾಡಳಿತ ಟೈಂ ಫಿಕ್ಸ್‌ ಮಾಡಿದ್ದರಿಂದ ಇಲ್ಲಿನ ಕೈಮರದಲ್ಲಿ ಬೆಳಗ್ಗೆಯಿಂದ ನೂರಾರು ವಾಹನಗಳು ತರೀಕೆರೆ-ಚಿಕ್ಕಮಗಳೂರು ಮಾರ್ಗದಲ್ಲಿ ಕಿಲೋ ಮೀಟರ್‌ಗಟ್ಟಲೆ ಸಾಲುಗಟ್ಟಿನಿಂತಿದ್ದವು. ಬೆಳಗ್ಗೆ 6ರಿಂದ 9 ಗಂಟೆಯವರೆಗೆ 150 ವಾಹನಗಳಿಗಷ್ಟೇ ಗಿರಿಪ್ರದೇಶಗಳಿಗೆ ತೆರಳಲು ಜಿಲ್ಲಾಡಳಿತ ಅನುವು ಮಾಡಿಕೊಟ್ಟಿತ್ತು. ಆ ವಾಹನಗಳು ವಾಪಸ್‌ ಬಂದ ನಂತರ ಮಧ್ಯಾಹ್ನ 2 ಗಂಟೆಯ ವೇಳೆಗೆ 150 ವಾಹನಗಳನ್ನು ಬಿಡಲು ಆದೇಶ ಹೊರಡಿಸಿತ್ತು. ಇದು ಚೆಕ್‌ ಪೋಸ್ಟ್‌ ಸಿಬ್ಬಂದಿ, ಪೊಲೀಸರು ಹಾಗೂ ಪ್ರವಾಸಿಗರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

click me!