ಜಾರಿಯಾಗದ ಪಶು ಸಂಜೀವಿನಿ ಯೋಜನೆ; ನಿಂತಲ್ಲೇ ನಿಂತಿದೆ ಪಶು ಆ್ಯಂಬುಲೆನ್ಸ್‌!

By Kannadaprabha NewsFirst Published Jul 18, 2023, 1:49 PM IST
Highlights

ಹಿಂದಿನ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ‘ಪಶು ಸಂಜೀವಿನಿ ಯೋಜನೆ’ಗೆ ಚಾಲನೆ ಸಿಕ್ಕು ವರ್ಷ ಸಮೀಪಿಸುತ್ತಾ ಬಂದರೂ ಇದುವರೆಗೂ ಜಿಲ್ಲೆಯಲ್ಲಿ ಅದು ಕಾರ್ಯಾರಂಭಿಸಿಲ್ಲ. ಪಶು ಆ್ಯಂಬುಲೆನ್ಸ್‌ಗಳು ನಿಂತಲ್ಲಿಯೇ ನಿಂತಿವೆ.

ವರದಿ: ಜಿ.ಡಿ ಹೆಗಡೆ, ಕನ್ನಡಪ್ರಭ

ಕಾರವಾರ (ಜು.18)  ಹಿಂದಿನ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ‘ಪಶು ಸಂಜೀವಿನಿ ಯೋಜನೆ’ಗೆ ಚಾಲನೆ ಸಿಕ್ಕು ವರ್ಷ ಸಮೀಪಿಸುತ್ತಾ ಬಂದರೂ ಇದುವರೆಗೂ ಜಿಲ್ಲೆಯಲ್ಲಿ ಅದು ಕಾರ್ಯಾರಂಭಿಸಿಲ್ಲ. ಪಶು ಆ್ಯಂಬುಲೆನ್ಸ್‌ಗಳು ನಿಂತಲ್ಲಿಯೇ ನಿಂತಿವೆ.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ(Department of Veterinary Medical Services)ಯ ಅಡಿಯಲ್ಲಿ ಬರುವ ಪಶು ಸಂಜೀವಿನಿ (ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ) ಯೋಜನೆಗೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕಳೆದ ಆ. 15ರಂದು ಚಾಲನೆ ನೀಡಿದ್ದರು. ಮುಖ್ಯವಾಗಿ ಗ್ರಾಮೀಣ ಭಾಗವನ್ನು ಗುರಿಯಾಗಿರಿಸಿಕೊಂಡು ಈ ಯೋಜನೆ ಅನುಷ್ಠಾನ ಮಾಡಲಾಗಿದೆ. ಗುಡ್ಡಗಾಡು ಪ್ರದೇಶ ಹೆಚ್ಚಿರುವ ಉತ್ತರ ಕನ್ನಡಕ್ಕೆ ಪಶು ಚಿಕಿತ್ಸೆಗಾಗಿ ಸಂಚಾರಿ ವಾಹನ (ಆ್ಯಂಬುಲೆನ್ಸ್‌) ಅತ್ಯಂತ ಸೂಕ್ತವಾಗಿದೆ. ಆದರೆ ಜಿಲ್ಲೆಯಲ್ಲಿ ಈ ಯೋಜನೆಗೆ ಗ್ರಹಣ ಹಿಡಿದಿದೆ.

 ಪಶು ಸಂಗೋಪನಾ ಪಾಲಿಟೆಕ್ನಿಕ್‌ಗೆ ಮತ್ತೆ ಪ್ರವೇಶಾವಕಾಶ: ಶಿಕ್ಷಣಕ್ಕೆ ಕಾಳಜಿ ತೋರಿದ ಶಾಸಕ ಗಣೇಶ್‌ ಪ್ರಸಾದ್‌

ಕೇಂದ್ರ ಸರ್ಕಾರದ ಶೇ. 60 ಮತ್ತು ರಾಜ್ಯ ಸರ್ಕಾರದ ಶೇ. 40ರಷ್ಟುಅನುದಾನದೊಂದಿಗೆ ಗ್ರಾಮೀಣ ಭಾಗದಲ್ಲಿ ಅನಾರೋಗ್ಯಕ್ಕೆ ಒಳಗಾದ ಜಾನುವಾರುಗಳ ಮಾಲೀಕರ ಮನೆಗೆ ತೆರಳಿ ತಪಾಸಣೆ ಮಾಡಿ, ಚಿಕಿತ್ಸೆ ನೀಡಿ ಹೈನುಗಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ದುರದೃಷ್ಟವಶಾತ್‌ ಯೋಜನೆಗೆ ಚಾಲನೆ ನೀಡಿ ವರ್ಷ ಸಮೀಪಿಸುತ್ತಾ ಬಂದರೂ ಪಶು ಸಂಜೀವಿನಿ ಆ್ಯಂಬುಲೆನ್ಸ್‌ಗಳು ನಿಂತಲ್ಲೇ ನಿಂತಿವೆ.

ಉತ್ತರ ಕನ್ನಡ ಜಿಲ್ಲೆಗೆ 13 ಪಶು ಆ್ಯಂಬುಲೆನ್ಸ್‌ ನೀಡಲಾಗಿದ್ದು, ಅದರಲ್ಲಿ ಕಾರ್ಯನಿರ್ವಹಿಸಲು ಒಬ್ಬ ಪಶು ವೈದ್ಯ ಹಾಗೂ ಒಬ್ಬ ಕಾಂಪೌಂಡರ್‌, ಒಬ್ಬ ಚಾಲಕ ನಿಯುಕ್ತಿ ಆಗಬೇಕಿತ್ತು. ಈ ಪ್ರಕ್ರಿಯೆ ರಾಜ್ಯ ಮಟ್ಟದಲ್ಲೇ ಮಾಡಲು ಅಂದಿನ ಸರ್ಕಾರ ತೀರ್ಮಾನಿಸಿತ್ತು. ಆದರೆ ಇದುವರೆಗೂ ವೈದ್ಯರ ಹಾಗೂ ಸಿಬ್ಬಂದಿಯ ನೇಮಕವಾಗದೇ ಆ್ಯಂಬುಲೆನ್ಸ್‌ಗಳು ಅಲುಗಾಡುತ್ತಿಲ್ಲ.

ಪಶು ಇಲಾಖೆಯು ಆದಷ್ಟುಶೀಘ್ರದಲ್ಲಿ ಪಶು ಆ್ಯಂಬುಲೆನ್ಸ್‌ ಕಾರ್ಯನಿರ್ವಹಿಸುವಂತೆ ಅಗತ್ಯ ಕ್ರಮವಹಿಸಿ ಜಿಲ್ಲೆಯ ಹೈನುಗಾರರಿಗೆ ಅನುಕೂಲ ಆಗುವಂತೆ ನೋಡಿಕೊಳ್ಳಬೇಕಿದೆ.

Ramanagara: ಪಶುಪಾಲನಾ ಸೇವಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

ನಮ್ಮ ಜಿಲ್ಲೆಗೆ 13 ಪಶು ಆ್ಯಂಬುಲೆನ್ಸ್‌ ನೀಡಲಾಗಿದೆ. ಎಜುಸ್ಪಾರ್ಕ್ ಕಂಪನಿಗೆ ಟೆಂಡರ್‌ ಆಗಿದೆ. ನಮ್ಮ ಜಿಲ್ಲೆಗೆ ಬಂದ ವಾಹನಗಳನ್ನು ಹಸ್ತಾಂತರ ಮಾಡಲಾಗಿದೆ. ಕಳೆದ ಜೂನ್‌ನಲ್ಲಿ ಇವು ಕಾರ್ಯನಿರ್ವಹಿಸಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಆರಂಭವಾಗಿಲ್ಲ. ಶೀಘ್ರದಲ್ಲೇ ಆರಂಭವಾಗಲಿದೆ. ಈ ಯೋಜನೆ ಅನುಷ್ಠಾನದಿಂದ ಹೈನುಗಾರರಿಗೆ ಸಾಕಷ್ಟುಲಾಭವಾಗಲಿದೆ.

ಡಾ. ರಾಕೇಶ ಬಂಗ್ಲೆ, ಪಶುಪಾಲನಾ ಇಲಾಖೆ ಉಪ ನಿರ್ದೇಶಕ

click me!