ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ವಿಕೋಪಕ್ಕೆ ತಿರುಗುತ್ತಿರುವುದರಿಂದ ಯಾವುದೇ ಕಾರಣಕ್ಕೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಬಾರದು ಎಂದು ಪೋಷಕರು ಆಗ್ರಹಿಸಿದ್ದಾರೆ.
ಬೆಂಗಳೂರು (ಜೂ. 23): ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ವಿಕೋಪಕ್ಕೆ ತಿರುಗುತ್ತಿರುವುದರಿಂದ ಯಾವುದೇ ಕಾರಣಕ್ಕೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಬಾರದು ಎಂದು ಪೋಷಕರು ಆಗ್ರಹಿಸಿದ್ದಾರೆ.
ಈ ಮೊದಲು ಮಾಚ್‌ರ್‍ನಲ್ಲಿ ಪರೀಕ್ಷೆ ನಿಗದಿಯಾಗಿದ್ದಕ್ಕಿಂತ ಸಮಯಕ್ಕೂ ಪ್ರಸ್ತುತಕ್ಕೂ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದ ಮಟ್ಟಕ್ಕೆ ಕೊರೋನಾ ಸೋಂಕು ಹರಡಿದೆ. ಮಾ.27ರಂದು ಪರೀಕ್ಷೆ ನಡೆಯಬೇಕಿದ್ದ ದಿನ ರಾಜ್ಯದಲ್ಲಿ ಕೇವಲ 55 ಸೋಂಕಿತರು ಹಾಗೂ ಎರಡು ಸಾವಿನ ಪ್ರಕರಣಗಳು ಮಾತ್ರ ದಾಖಲಾಗಿದ್ದವು. ಆ ವೇಳೆಯೇ ಪರೀಕ್ಷೆ ರದ್ದುಪಡಿಸಲು ಒತ್ತಾಯ ಮಾಡಿದ್ದೆವು. ಆದರೆ, ಈಗ ರಾಜ್ಯದಲ್ಲಿ 9,400 ಪ್ರಕರಣಗಳು ಹಾಗೂ 140 ಸಾವು ಸಂಭವಿಸಿದೆ. ಇಂತಹ ಸಮದಯಲ್ಲಿ ಪರೀಕ್ಷೆ ನಡೆಸುವುದು ಎಷ್ಟರ ಮಟ್ಟಿಗೆ ಸೂಕ್ತ ಎಂಬುದನ್ನು ಎಂಬುದನ್ನು ಇಲಾಖೆ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಾರ್ಗಸೂಚಿ ಪ್ರಕಟಿಸಿದ ಶಿಕ್ಷಣ ಇಲಾಖೆ
ಪಿಯು ಪರೀಕ್ಷೆ ಮಾದರಿಯಲ್ಲ:
ಈ ಕುರಿತು ಮಾತನಾಡಿದ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಪೋಷಕರಾದ ಮಮತಾ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಯೂ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್ ಬಂದಿವೆ ಎಂಬ ಸುದ್ದಿ ಹಬ್ಬಿತ್ತು. ಪಿಯುಸಿ ಕೇವಲ ಇಂಗ್ಲಿಷ್ ಪರೀಕ್ಷೆ ಮಾತ್ರ ನಡೆದಿದ್ದರಿಂದ ಹೆಚ್ಚಿನ ತೊಂದರೆಯಾಗಿಲ್ಲ. ಎಸ್‌ಎಸ್‌ಎಲ್‌ಸಿ ಯಲ್ಲಿ ಆರು ಪರೀಕ್ಷೆಗಳು ನಡೆಯಬೇಕಿದೆ. ಪಿಯುಸಿ ಯಲ್ಲಿ 5.95 ಲಕ್ಷ ವಿದ್ಯಾರ್ಥಿಗಳಿದ್ದರು.
ಎಸ್‌ಎಸ್‌ಎಲ್‌ಸಿಯಲ್ಲಿ 8.48 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಅಂದರೆ ಅಂದಾಜು ಎರಡೂವರೆ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಪಿಯು ಪರೀಕ್ಷೆ ಒಂದು ದಿನದ ಕತೆ ಇದು ಹತ್ತು ದಿನ ಪರೀಕ್ಷೆ ನಡೆಸಬೇಕು. ಈಗಲೂ ಸರ್ಕಾರ ಯೋಜನೆ ಮಾಡಲು ಅವಕಾಶ ಮತ್ತು ಸಮಯವಿದೆ. ಪರೀಕ್ಷೆ ಕೈಬಿಡುವ ಮೂಲಕ ಉತ್ತಮ ನಿರ್ಧಾರ ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ಅಂಕಗಳೇ ಅಂತಿಮವಲ್ಲ:
ನೆರೆ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಪುದುಚೇರಿ ರಾಜ್ಯಗಳಲ್ಲಿ ಈಗಾಗಲೇ ಹತ್ತನೇ ತರಗತಿ ಪರೀಕ್ಷೆ ಕೈಬಿಟ್ಟಿದ್ದಾರೆ. ಅದೇ ರೀತಿಯಲ್ಲಿ ರಾಜ್ಯದಲ್ಲಿಯೇ ಪರೀಕ್ಷೆ ಕೈಬಿಡಬೇಕು. ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆಯಲ್ಲಿನ ಅಂಕಗಳೇ ಅಂತಿಮವಲ್ಲ. ಪರೀಕ್ಷೆಗೂ ಹೊರತಾದ ಜೀವನವಿದೆ. ವಿದ್ಯಾರ್ಥಿಗಳಲ್ಲಿರುವ ಕಲೆ, ಕ್ರೀಡೆ, ವಿವಿಧ ಕೌಶಲ್ಯಗಳಿಂದಲೂ ಜೀವನ ರೂಪಿಸಿಕೊಳ್ಳಲು ಅವಕಾಶಗಳಿವೆ. ಆದ್ದರಿಂದ ಮಾಸಿಕ ಮತ್ತು ಮಧ್ಯವಾರ್ಷಿಕ ಪರೀಕ್ಷೆ ಅಂಕಗಳನ್ನು ಪರಿಗಣಿಸಿ ಅಂಕಗಳನ್ನು ಪರಿಗಣಿಸಿ ಫಲಿತಾಂಶ ಪ್ರಕಟಿಸಲಿ. ಯಾವುದೇ ಕಾರಣಕ್ಕೂ ಈ ವರ್ಷ ಪರೀಕ್ಷೆ ನಡೆಸುವುದು ಮಾತ್ರ ಬೇಡ ಎನ್ನುತ್ತಾರೆ ಐಟಿ ಕಂಪನಿ ಉದ್ಯೋಗಿ, ಪೋಷಕರಾದ ಕವಿತಾ.
ಪರೀಕ್ಷೆ ರದ್ದುಗೊಳಿಸುವ ಬಗ್ಗೆ ಶಿಕ್ಷಣ ತಜ್ಞರನ್ನು ಮಾತನಾಡಿಸಲು ಮುಂದಾದಾಗ, ಈಗಾಗಲೇ ಸರ್ಕಾರದ ಮಟ್ಟದ ಸಭೆಗಳಲ್ಲಿ ಪರೀಕ್ಷೆ ಸಾಧಕ- ಬಾಧಕಗಳನ್ನು ತಿಳಿಸಿದ್ದೇವೆ. ಮತ್ತೆ ಪ್ರತಿಕ್ರಿಯೆ ವ್ಯಕ್ತಪಡಿಸಿ ಗೊಂದಲ ಸೃಷ್ಟಿಸುವುದು ಬೇಡ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.