
ಬೆಂಗಳೂರು(ಜೂ.23): ಜನ ಸೇವೆಗೆ ಮುಂದಾಗಿ ಕೊರೋನಾ ಸೋಂಕಿಗೆ ತುತ್ತಾಗಿದ್ದೇವೆ. ಪರಿಣಾಮ ಸಮಯಕ್ಕೆ ಊಟವಿಲ್ಲ, ವೈದ್ಯರಿಂದ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಚಿಕಿತ್ಸೆ ಪಡೆಯಲು ಬಂದಿದ್ದು ನರಕಯಾತನೆ ಅನುಭವಿಸುವಂತಾಗಿದೆ. ಈ ರೀತಿಯ ಶಿಕ್ಷೆ ನೀಡುವ ಬದಲು ಸ್ವಲ್ಪ ವಿಷ ನೀಡಿದರೆ ನೆಮ್ಮದಿಯಿಂದ ಸಾಯುತ್ತೇವೆ. ಇಲ್ಲವಾದಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆಗೆ ಮುಂದಾಗಬೇಕಾಗುತ್ತದೆ...
ಇದು ಸೀಲ್‌ಡೌನ್ ಕೇಂದ್ರಗಳಲ್ಲಿ ಭದ್ರತೆ ಒದಗಿಸಲು ನಿಯೋಜನೆಗೊಂಡು ಕೊರೋನಾ ಸೋಂಕಿಗೆ ತುತ್ತಾಗಿ ನಗರದ ರಾಜೀವ್ ಗಾಂಧಿ ಮತ್ತು ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಕ್ವಾರಂಟೈನ್‌ಗೆ ಒಳಗಾಗಿರುವ ಪೊಲೀಸ್ ಸಿಬ್ಬಂದಿ ಅಳಲು.
ತಂದೆ ಬೆನ್ನಲ್ಲೇ ಸಚಿವ ಸುಧಾಕರ್ ಹೆಂಡತಿ, ಮಗಳಿಗೆ ಕೊರೋನಾ ಸೋಂಕು ದೃಢ!
ಕೊರೋನಾ ಸೋಂಕಿಗೆ ತುತ್ತಾಗುವವವರನ್ನು ನಗರದ ರಾಜೀವ್‌ಗಾಂಧಿ ಮತ್ತು ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ದಿನ ಕಳೆದಂತೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ರೋಗಿಗಳಿಗೆ ಸೂಕ್ತ ಆರೈಕೆ ಲಭ್ಯವಾಗುತ್ತಿಲ್ಲ. ಇದರಿಂದ ಬೇಸತ್ತಿರುವ ರೋಗಿಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದು, ತಕ್ಷಣ ಆಸ್ಪತ್ರೆಯಿಂದ ಬಿಡುಗಡೆ ಮಾಡಿ. ಇಲ್ಲವೇ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಎಂದು ಆಗ್ರಹಿಸಿದ್ದಾರೆ.
ಸಾಮೂಹಿಕ ಆತ್ಮಹತ್ಯೆ ಎಚ್ಚರಿಕೆ:
ಸೂಕ್ತ ಸಮಯಕ್ಕೆ ಊಟ ಲಭ್ಯವಾಗಿಲ್ಲ. ಪರಿಣಾಮ ರೋಗಿಗಳು ಬಳಲುತ್ತಿದ್ದಾರೆ. ಶೌಚಾಲಯದಲ್ಲಿ ನೀರನ್ನು ಬಳಸಲು ಚೆಂಬು ಒದಗಿಸಿಲ್ಲ. ಕಳೆದ ಎರಡು ದಿನಗಳಿಂದ ಆಸ್ಪತ್ರೆಯಲ್ಲಿದ್ದು, ಯಾವುದೇ ವೈದ್ಯರು ಬಂದು ಪರಿಶೀಲಿಸಿಲ್ಲ. ನಾವು ಸಾಯುವ ಹಂತಕ್ಕೆ ತಲುಪಿದ್ದೇವೆ. ಸರ್ಕಾರ ನಮ್ಮ ರಕ್ಷಣೆಗೆ ಮುಂದಾಗಬೇಕು ಎಂದು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್ ಸಿಬ್ಬಂದಿ ಪರಿ ಪರಿಯಾಗಿ ಬೇಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
19,400 ಮಂದಿಗೆ ಸೋಂಕು, 503 ಸೋಂಕಿತರು ಸಾವು!
ಅಷ್ಟೇ ಅಲ್ಲದೆ, ವಾರ್ಡ್‌ಗಳನ್ನು ಸ್ವಚ್ಛಗೊಳಿಸುತ್ತಿಲ್ಲ. ಸ್ಯಾನಿಟೈಜರ್ ವ್ಯವಸ್ಥೆ ಮಾಡಿಲ್ಲ ಮಾಸ್ಕ್ ವಿತರಣೆ ಮಾಡದ ಪರಿಣಾಮ ಕಳೆದ ಎರಡು ದಿನಗಳಿಂದ ಒಂದೇ ಮಾಸ್ಕ್ ಬಳಕೆ ಮಾಡುತ್ತಿದ್ದೇವೆ. ಕುಡಿಯಲು ಶುದ್ಧ ನೀರು ಲಭ್ಯವಿಲ್ಲ. ಕರ್ತವ್ಯ ಮಾಡುವಾಗ ತೊಂದರೆಗೆ ಸಿಲುಕಿದ್ದೇವೆ. ಈಗ ಊಟ ಇಲ್ಲದೆ ಪರದಾಡುತ್ತಿದ್ದೇವೆ. ಇದೇ ರೀತಿ ಮುಂದುವರೆದಲ್ಲಿ ಎಲ್ಲರೂ ಸಾಮೂಹಿಕ ಆತ್ಮಹತ್ಯೆಗೆ ಮುಂದಾಗುತ್ತೇವೆ. ಆರೋಗ್ಯ ಸಚಿವರು ತಕ್ಷಣ ಬಂದು ನಮ್ಮನ್ನು ಕಾಪಾಡಬೇಕು ಎಂದು ಕೈ ಮುಗಿದು ಬೇಡಿಕೊಂಡಿದ್ದಾರೆ.
ವಿಷ ನೀಡಿ ಸಾಯಿಸಿ
ಕೊರೋನಾ ಪಾಸಿಟೀವ್ ಎಂದು ಕರೆತಂದು ಕಳೆದ 19 ದಿನಗಳಿಂದ ಕೂಡಿ ಹಾಕಲಾಗಿದೆ. ಈವರೆಗೂ ಪರೀಕ್ಷೆ ನಡೆಸಿಲ್ಲ. ಸಮಯಕ್ಕೆ ಕುಡಿಯಲು ನೀರು, ಊಟ ಲಭ್ಯವಾಗುತ್ತಿಲ್ಲ. ಯಾವ ಕಾರಣಕ್ಕಾಗಿ ಈ ಶಿಕ್ಷೆ ನೀಡುತ್ತಿದ್ದೀರಿ. ಇದರ ಬದಲಿಗೆ ವಿಷದ ಇಂಜೆಕ್ಷನ್ ನೀಡಿ. ಒಂದೇ ಕ್ಷಣದಲ್ಲಿ ಜೀವ ಬಿಡುತ್ತೇವೆ ಎಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರು ಹೇಳುವ ವಿಡಿಯೋ ವೈರಲ್ ಆಗಿದೆ.
ಬೆಳಗ್ಗೆ ತಿಂಡಿ ಕೊಟ್ಟಿದ್ದಾರೆ. ಸಂಜೆ ನಾಲ್ಕು ಗಂಟೆಯಾದರೂ ಊಟ ನೀಡುತ್ತಿಲ್ಲ. ನೀಡುವ ಅನ್ನ ಬೆಂದಿಲ್ಲ. ಮಧುಮೇಹ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ವಯಸ್ಸಾದ ರೋಗಿಗಳನ್ನು ಇಲ್ಲಿ ಕೂಡಿ ಹಾಕಲಾಗಿದೆ. ಈ ರೋಗಿಗಳನ್ನು ಯಾರೂ ಕೇಳುವವರೇ ಇಲ್ಲ ಎಂದು ರೋಗಿಗಳ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
'ಚೆಲ್ಲಾಟ ನಿಲ್ಲಿಸಿ, ಬೆಂಗಳೂರಿಗರು ಬದುಕುಳಿಯಲು 20 ದಿನ ಲಾಕ್‌ಡೌನ್ ಘೋಷಿಸಿ'
ಬೆಡ್ ಇದ್ದರೂ ಇಲ್ಲ ಎನ್ನುವ ಅಧಿಕಾರಿಗಳು
ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ತುರ್ತು ಚಿಕಿತ್ಸಾ ಘಟಕ 250 ಬೆಡ್ ಮತ್ತು ‘ಎಚ್’ ಬ್ಲಾಕ್‌ನಲ್ಲಿರುವ ಬೆಡ್‌ಗಳನ್ನು ರೋಗಿಗಳಿಗೆ ಒದಗಿಸಲಾಗಿದೆ. ಆದರೆ, ಇನ್ನುಳಿದ ‘ಸಿ’ ಬ್ಲಾಕ್ ಮತ್ತು ಮಿಂಟೋ ಆಸ್ಪತ್ರೆಯಲ್ಲಿ ಎಲ್ಲ ಬೆಡ್‌ಗಳು ಖಾಲಿ ಇವೆ. ಆದರೂ ರೋಗಿಗಳಿಗೆ ನೀಡುತ್ತಿಲ್ಲ. ಬೆಡ್ ಇಲ್ಲ ಎಂದು ಆಸ್ಪತ್ರೆಯಲ್ಲಿರುವ ನೋಡಲ್ ಅಧಿಕಾರಿಗಳು ತಿಳಿಸುತ್ತಿದ್ದಾರೆ ಎಂದು ರೋಗಿಗಳು ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ