ಪರಪ್ಪನ ಅಗ್ರಹಾರ ಕೈದಿಗಳ ಕೈಗೆ ವಿಡಿಯೋ ಹಿಂದೆ ಷಡ್ಯಂತ್ರ? ಕಾರಾಗೃಹ ಇಲಾಖೆಯ ವರದಿ ಬಹಿರಂಗ

Published : Nov 12, 2025, 07:19 AM IST
parappana agrahara prison

ಸಾರಾಂಶ

ಕೈದಿಗಳಿಗೆ ವಿಶೇಷ ಸವಲತ್ತು ನೀಡಿದ ವಿವಾದದ ವಿಡಿಯೋ ಬಹಿರಂಗದ ಹಿಂದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸುವ ಸಂಚು ಅಡಗಿದೆ ಎಂದು ವರದಿಯಲ್ಲಿ ಪರೋಕ್ಷವಾಗಿ ಉಲ್ಲೇಖವಾಗಿದೆ.

ಗಿರೀಶ್ ಮಾದೇನಹಳ್ಳಿ

ಬೆಂಗಳೂರು (ನ.12): ಕೈದಿಗಳಿಗೆ ವಿಶೇಷ ಸವಲತ್ತು ನೀಡಿದ ವಿವಾದದ ವಿಡಿಯೋ ಬಹಿರಂಗದ ಹಿಂದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸುವ ಸಂಚು ಅಡಗಿದೆ ಎಂದು ರಾಜ್ಯ ಸರ್ಕಾರಕ್ಕೆ ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಸಲ್ಲಿಸಿದ ವರದಿಯಲ್ಲಿ ಪರೋಕ್ಷವಾಗಿ ಉಲ್ಲೇಖವಾಗಿದೆ. ವರದಿಯಲ್ಲಿ ಪೋಟೋ ಸಮೇತ ಅಕ್ರಮ ಚಟುವಟಿಕೆಗಳು ನಡೆದ ದಿನದ ಕುರಿತು ಅಧಿಕಾರಿಗಳು ವಿವರಣೆ ನೀಡಿದ್ದು, ಈ ವಿಡಿಯೋ ಬಹಿರಂಗದ ಹಿಂದೆ ಕೆಲ ಕೈದಿಗಳ ಸಂಚು ಬಗ್ಗೆ ಹೆಸರು ಪ್ರಸ್ತಾಪಿಸದೆ ಹೇಳಿದ್ದಾರೆ. ಈ ವರದಿ ಪ್ರತಿ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಜಾ ಬಂಧಿ ವಿಕೃತ ಕಾಮಿ ಉಮೇಶ್ ರೆಡ್ಡಿ, ಐಸಿಎಸ್‌ ಶಂಕಿತ ಉಗ್ರ ಶಕೀಲ್, ವಿದೇಶದಿಂದ ಚಿನ್ನ ಕಳ್ಳ ಸಾಗಣೆ ಪ್ರಕರಣದ ಆರೋಪಿ ನಟ ತರುಣ್ ರಾಜ್‌ಗೆ ವಿಶೇಷ ಸೌಲಭ್ಯ ನೀಡಿರುವ ಆರೋಪ ಕೇಳಿ ಬಂದಿತ್ತು. ಹಾಗೆಯೇ ಕೆಲ ಕೈದಿಗಳ ನೃತ್ಯದ ವಿಡಿಯೋ ಸಹ ಬಹಿರಂಗವಾಗಿ ವೈರಲ್ ಆಗಿತ್ತು. ಈ ವಿವಾದದ ಬೆನ್ನಲ್ಲೇ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದ ಉಮೇಶ್ ರೆಡ್ಡಿ, ತರುಣ್, ಶಾಹಿದ್ ಹಾಗೂ ಶಕೀಲ್‌ನನ್ನು ಕಾರಾಗೃಹ ಅಧಿಕಾರಿಗಳು ವಿಚಾರಣೆಗೊಳಡಿಸಿ ಹೇಳಿಕೆ ಪಡೆದರು.

ಅಲ್ಲದೆ, ಆ ವಿಡಿಯೋ ದೃಶ್ಯಾವಳಿ ಆಧರಿಸಿ ಕೃತ್ಯ ನಡೆದ ಸ್ಥಳ ಪರಿಶೀಲಿಸಿದರು. ಪರಾಮರ್ಶೆ ಬಳಿಕ ವಿಡಿಯೋಗಳ ಸತ್ಯಾಸತ್ಯತೆ ಬಗ್ಗೆ ಸರ್ಕಾರಕ್ಕೆ ಸಮಗ್ರ ವರದಿಯನ್ನು ಅಧಿಕಾರಿಗಳು ಸಲ್ಲಿಸಿದ್ದಾರೆ. ಇದರಲ್ಲಿ ಉಮೇಶ್ ರೆಡ್ಡಿ, ತರುಣ್ ರಾಜ್ ಹಾಗೂ ಶಂಕಿತ ಉಗ್ರ ಶಕೀಲ್‌ಗೆ ಬಲವಂತವಾಗಿ ಮೊಬೈಲ್ ಕೊಟ್ಟು ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ಅಲ್ಲದೆ, ತರುಣ್‌ ರಾಜ್‌ಗೆ ಹಣಕ್ಕಾಗಿ ಬ್ಲ್ಯಾಕ್‌ ಮೇಲ್ ಮಾಡಿದ್ದಾರೆ. ಆರೋಪಿಗಳ ಹೇಳಿಕೆ ಹಾಗೂ ಸಾದಂರ್ಭಿಕ ಪುರಾವೆಗಳನ್ನು ಅವಲೋಕಿಸಿದಾಗ ಜೈಲಿನಲ್ಲಿ ದುರುದ್ದೇಶದಿಂದಲೇ ಕೃತ್ಯ ನಡೆದಿರುವ ಬಗ್ಗೆ ಸಂಶಯವಿದೆ ಎಂದು ವರದಿಯಲ್ಲಿ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.

ಉಮೇಶ್ ರೆಡ್ಡಿಗೆ ಮೊಬೈಲ್ ಕೊಟ್ಟಿದ್ದು ವಡ್ಡ ನಾಗ: 2023ರ ಜೂನ್ 4 ರಂದು ಬೆಳಗಾವಿ ಜೈಲಿನಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸಜಾ ಬಂಧಿ ಉಮೇಶ್ ರೆಡ್ಡಿಯನ್ನು ವರ್ಗಾವಣೆ ಮಾಡಲಾಗಿದೆ. ಭದ್ರತಾ ವಿಭಾಗದ ಭಾಗ-2ರ ಕೊಠಡಿ ಸಂಖ್ಯೆ 10ರಲ್ಲಿ ಆತ ಇದ್ದ. ತಾನು 2023ರ ಜೂನ್ ಅಥವಾ ಜುಲೈ ತಿಂಗಳಲ್ಲಿ ಮೊಬೈಲ್‌ನಲ್ಲಿ ಮಾತನಾಡಿರುವುದಾಗಿ ರೆಡ್ಡಿ ಲಿಖಿತ ಹೇಳಿಕೆ ನೀಡಿದ್ದಾನೆ. ಅಲ್ಲದೆ, ತಾನು ಮಾತನಾಡಿದ್ದ ಸ್ಥಳ‍ವನ್ನೂ ಆತ ತೋರಿಸಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2023ರ ನವೆಂಬರ್‌ 4 ರಿಂದ 2024ರ ಜುಲೈ 8 ವರೆಗೆ ಭದ್ರತಾ ವಿಭಾಗದ-1 ಹಿಂಭಾಗದ ಕೊಠಡಿ-2ರಲ್ಲಿ, 2024ರ ಜು.9 ರಿಂದ ಡಿಸೆಂಬರ್‌ 11 ವರೆಗೆ ಭದ್ರತಾ ವಿಭಾಗದ-3 ಕೊಠಡಿ-2ರಲ್ಲಿ ಆತನನ್ನು ಇರಿಸಲಾಗಿದೆ. ನಂತರ ರೆಡ್ಡಿಯನ್ನು ಆಸ್ಪತ್ರೆ ವಿಭಾಗಕ್ಕೆ ಸ್ಥಳಾಂತರಿಸಲಾಗಿದ್ದು, ಪ್ರಸುತ್ತ ಅಲ್ಲೇ ರೆಡ್ಡಿ ಇದ್ದಾನೆ. ಜೈಲಿನಲ್ಲಿ ರೆಡ್ಡಿಗೆ ಮೊಬೈಲ್ ಅನ್ನು ರೌಡಿ ವಡ್ಡ ನಾಗ ನೀಡಿರುವುದು ಗೊತ್ತಾಗಿದೆ. ತನ್ನ ತಾಯಿ ಹಾಗೂ ವಕೀಲರ ಜತೆ ಮಾತನಾಡುವಂತೆ ಒತ್ತಾಯಿಸಿ ನಾಗ ಮೊಬೈಲ್ ಕೊಟ್ಟಿದ್ದ. ಬಳಿಕ ಆತನೇ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದ ಎಂದು ರೆಡ್ಡಿ ಹೇಳಿದ್ದಾನೆ. 2024ರಲ್ಲಿ ವಡ್ಡ ನಾಗ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದಾನೆ ಎಂದು ವರದಿಯಲ್ಲಿ ಹೇಳಿದ್ದಾರೆ.

ನಾನು ಉಗ್ರನಲ್ಲ-ಶಾಹೀದ್: ಜೈಲಿನ ಬ್ಯಾರಕ್‌ ಆವರಣದಲ್ಲಿ ಮೊಬೈಲ್‌ನಲ್ಲಿ ಸಂಭಾಷಣೆ ನಡೆಸುತ್ತಿರುವ ಶಾಹೀದ್ ಖಾನ್ ಅಲಿಯಾಸ್ ಚೋರ್ ಶಾಹೀದ್‌ನ ವಿಡಿಯೋ ಬಹಿರಂಗವಾಗಿತ್ತು. ತಾನು ಹಲವು ಬಾರಿ ಅಪರಾಧ ಪ್ರಕರಣದಲ್ಲಿ ಬಂಧಿತನಾಗಿ ಜೈಲಿಗೆ ಬಂದು ಹೋಗಿದ್ದೇನೆ. ಆದರೆ ನನಗೆ ಯಾವುದೇ ಉಗ್ರ ಸಂಘಟನೆ ಜತೆ ನಂಟಿಲ್ಲ. ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಸಾರವಾಗಿದೆ. 2024ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದೇನೆ. ಪ್ರಸುತ್ತ 8ನೇ ಬ್ಯಾರಕ್‌ನ 4ನೇ ಕೊಠಡಿಯಲ್ಲಿ ದಾಖಲಾಗಿದ್ದೇನೆ. ನಾನು ಯಾವುದೇ ಮೊಬೈಲ್ ಬಳಸಿಲ್ಲ. ನಾನು ಕೂತಿರುವ ದೃಶ್ಯವನ್ನು ಯಾರೋ ಚಿತ್ರೀಕರಿಸಿ ಹರಿಬಿಟ್ಟಿದ್ದಾರೆ ಎಂದು ಶಾಹೀದ್ ಹೇಳಿಕೆ ನೀಡಿರುವುದಾಗಿ ವರದಿಯಲ್ಲಿ ನಮೂದಿಸಿದ್ದಾರೆ. 2023ರಲ್ಲಿ 8ನೇ ಬ್ಯಾರಕ್‌ನ 4 ಕೊಠಡಿಯ ಗೋಡೆಯಲ್ಲಿ ಮೂರು ಸ್ಟಾರ್ ಗುರುತುಗಳಿದ್ದವು. ಆದರೆ ತಾನು 2024ರ ನವೆಂಬರ್‌ನಲ್ಲಿ ಮತ್ತೆ ಜೈಲು ಸೇರಿದಾಗ ಆ ಗುರುತುಗಳಿರಲಿಲ್ಲ. ಈ ವಿಡಿಯೋ ಸಹ ಹಳೆಯದ್ದು ಎಂದು ಶಾಹೀದ್ ಖಚಿತಪಡಿಸಿದ್ದಾನೆ.

ಮೊಬೈಲ್‌ ಬಳಸಿಲ್ಲ-ಶಂಕಿತ ಉಗ್ರ ಶಕೀಲ್: ಎರಡು ವರ್ಷಗಳ ಹಿಂದೆ ತನಗೆ ಬಂಧಿಯೋರ್ವ ಕೊಟ್ಟ ಮೊಬೈಲ್ ಅನ್ನು ಕೈಯಲ್ಲಿ ಹಿಡಿದು ಆತನಿಗೆ ಮರಳಿಸಿದೆ. ಆ ಮೊಬೈಲ್‌ನಿಂದ ನಾನು ಯಾರಿಗೂ ಕರೆ ಮಾಡಿ ಮಾತನಾಡಿಲ್ಲ. ನಾನು ಈವರೆಗೆ ಮೊಬೈಲ್ ಬಳಸಿಲ್ಲ ಎಂದು ಶಂಕಿತ ಐಸಿಸ್ ಉಗ್ರ ಜುಹಾಬ್ ಹಮೀದ್ ಶಕೀಲ್ ಸ್ಪಷ್ಟನೆ ಕೊಟ್ಟಿರುವುದು ವರದಿಯಲ್ಲಿ ಉಲ್ಲೇಖವಾಗಿದೆ. ನನಗೆ ಮೊಬೈಲ್ ಕೊಟ್ಟಿದ್ದ ಕೈದಿ ಹೆಸರು ನೆನಪಿಲ್ಲ. ಇನ್ನು ತಾನು ಈ ಹಿಂದೆ ಉದ್ದ ಕೂದಲು ಬಿಟ್ಟಿದ್ದೆ. ಹಾಗೆ ಬೇರೆ ವಿನ್ಯಾಸದ ಕನ್ನಡಕವನ್ನೂ ಧರಿಸುತ್ತಿದ್ದೆ. ಆದರೆ ಪ್ರಸುತ್ತ ಉದ್ದ ಕೂದಲು ಬಿಟ್ಟಿಲ್ಲ. ಆ ಕನ್ನಡಕ ಸಹ ಬಳಸುತ್ತಿಲ್ಲ. ಅಲ್ಲದೆ, ಈಗ ಬಹಿರಂಗವಾಗಿರುವ ವಿಡಿಯೋದಲ್ಲಿರುವ ನನ್ನ ಮುಖ ಮತ್ತು ದೇಹದಲ್ಲಿ ಬದಲಾವಣೆ ಗಮನಿಸಬಹುದು ಎಂದು ಶಕೀಲ್ ಹೇಳಿರುವುದಾಗಿ ವರದಿಯಲ್ಲಿ ಪ್ರಸ್ತಾಪವಾಗಿದೆ.

ತರುಣ್ ರಾಜು: ಐದು ತಿಂಗಳ ಹಿಂದೆ ನನಗೆ ಮೊಹಮ್ಮದ್ ಷಾಜಿಲ್‌ ಖಾನ್‌ ಎಂಬಾತ ಮೊಬೈಲ್ ಕೊಟ್ಟಿದ್ದ. ತನ್ನ ಮೊಬೈಲ್‌ನಲ್ಲಿ ಸರಿಯಾಗಿ ನೆಟ್‌ವರ್ಕ್ ಸಿಗುತ್ತಿಲ್ಲ. ಅದನ್ನು ಸರಿಪಡಿಸಿಕೊಡುವಂತೆ ಖಾನ್ ಹೇಳಿದ್ದ. ನಾನು ಮೊಬೈಲ್‌ ಪರಿಶೀಲಿಸಿ ಆತನಿಗೆ ಮರಳಿಸಿದೆ. ಆದರೆ ನಾನು ಮೊಬೈಲ್ ಬಳಸಿಲ್ಲ ಎಂದು ಚಿನ್ನ ಕಳ್ಳ ಸಾಗಣೆ ಪ್ರಕರಣದ ವಿಚಾರಣಾಧೀನ ಕೈದಿ ತರುಣ್‌ ರಾಜ್‌ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖವಾಗಿದೆ. ನಾನು ಮೊಬೈಲ್ ಹಿಡಿದಿರುವ ದೃಶ್ಯ ಯಾರು ಚಿತ್ರೀಕರಿಸಿದ್ದರು ಎಂಬುದು ಗೊತ್ತಿಲ್ಲ. ಆದರೆ ತನಗೆ ಆ ದೃಶ್ಯವನ್ನು ತೋರಿಸಿ ಹಣಕ್ಕೆ ಪೀಡಿಸುತ್ತಿದ್ದರು. ಆದರೆ ನಾನು ಹಣ ನೀಡಿಲ್ಲ. ಈ ಸಂಗತಿಯನ್ನು ಕಾರಾಗೃಹದ ಅಧಿಕಾರಿಗಳ ಗಮನಕ್ಕೆ ತಂದಿಲ್ಲ ಎಂದಿದ್ದಾರೆ. ಇನ್ನು ನ.6ರಂದು ಜೈಲಿನಿಂದ ತರುಣ್‌ಗೆ ಮೊಬೈಲ್ ಕೊಟ್ಟಿದ್ದ ಖಾನ್‌ ಬಿಡುಗಡೆಯಾಗಿದ್ದ. ಈತ ಜೈಲಿನಿಂದ ಹೊರಬಂದ ಎರಡು ದಿನಕ್ಕೆ ವಿಡಿಯೋ ಬಹಿರಂಗವಾಗಿತ್ತು ಎಂದು ವರದಿಯಲ್ಲಿ ಹೇಳಿದ್ದಾರೆ.

4 ವರ್ಷಗಳ ಹಳೆಯ ನೃತ್ಯದ ವಿಡಿಯೋ

ಕಾರಾಗೃಹದ 8ನೇ ಬ್ಯಾರಕ್‌ನ 7ನೇ ಕೊಠಡಿಯಲ್ಲಿ ಬಂಧಿಗಳಾಗಿದ್ದ ಮಂಜುನಾಥ ಅಲಿಯಾಸ್‌ ಕೋಳಿ ಮಂಜ, ಚರಣ್ ರಾವ್‌, ಧನಂಜಯ ಅಲಿಯಾಸ್ ರೇಣುಕಾ ಪ್ರಸಾದ್‌ ಹಾಗೂ ಕಾರ್ತಿಕ್‌ ಅಲಿಯಾಸ್ ಚಿಟ್ಟೆ ನೃತ್ಯ ಮಾಡಿದ್ದರು. 2018ರಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಬಂಧಿತರಾಗಿ ನಾಲ್ವರು ಜೈಲು ಸೇರಿದ್ದರು ವರದಿಯಲ್ಲಿ ಖಚಿತಪಡಿಸಿದ್ದಾರೆ. 2018ರಲ್ಲಿ ಕಾರ್ತಿಕ್ ಅಲಿಯಾಸ್ ಚಿಟ್ಟೆ, 2022ರ ಜೂನ್‌ನಲ್ಲಿ ಕೋಳಿ ಮಂಜ, 2024ರಲ್ಲಿ ಚರಣ್ ಜೈಲಿನಿಂದ ಬಂಧ ಮುಕ್ತರಾಗಿದ್ದರು. ಈ ವಿಡಿಯೋ ಬಹಿರಂಗಕ್ಕೂ ಎರಡು ದಿನಗಳ ಮುನ್ನ ಧನಂಜಯ ಹೊರ ಬಂದಿದ್ದ. ಹೀಗಾಗಿ ಈ ನೃತ್ಯದ ದೃಶ್ಯಾವಳಿ ನಾಲ್ಕು ವರ್ಷಗಳ ಹಳೆಯ ವಿಡಿಯೋ ಎಂದು ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ