
ದಾವಣಗೆರೆ (ಏ.28) ಭಾರಿ ವಿವಾದಕ್ಕೆ ಈಡಾಗಿರುವ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಮಠದಲ್ಲಿ ಸೋಮವಾರ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಅವರು ಮಠದ ಲೆಕ್ಕಪತ್ರ ಮಂಡಿಸಿದ್ದಾರೆ. ಆದರೆ ಟ್ರಸ್ಟ್ ವಿರುದ್ಧ ಸಿಡಿದೆದ್ದಿರುವ ಮಠದ ಯತಿಗಳಾದ ವಚನಾನಂದ ಸ್ವಾಮೀಜಿ ಮತ್ತು ಟ್ರಸ್ಟಿಗಳ ಬೆಂಬಲಿಗರ ನಡುವೆ ತಳ್ಳಾಟ-ನೂಕಾಟ ನಡೆದಿದೆ. ಪರ-ವಿರೋಧದ ಘೋಷಣೆಗಳು ಮೊಳಗಿವೆ.
ಕೊನೆಗೆ ಪೊಲೀಸರ ಬಿಗಿ ಭದ್ರತೆ ನಡುವೆಯೇ ಟ್ರಸ್ಟಿಗಳು ನೆರೆದಿದ್ದ ಭಕ್ತರು ಹಾಗೂ ಪಂಚಮಸಾಲಿ ಸಮುದಾಯದ ಮುಖಂಡರಿಗೆ ಮಠದ ಲೆಕ್ಕ ನೀಡಿದ್ದಾರೆ.
‘ಮಠದ ದೇಣಿಗೆ ಹಾಗೂ ಅನುದಾನ ಬಳಕೆಯಲ್ಲಿ ಅವ್ಯವಹಾರ ನಡೆದಿದೆ. ಹೀಗಾಗಿ, ಮಠದ ವ್ಯವಹಾರಗಳ ಕುರಿತು ಲೆಕ್ಕ ನೀಡಬೇಕು’ ಎಂದು ವಚನಾನಂದ ಸ್ವಾಮೀಜಿ ಹಾಗೂ ಭಕ್ತರು, ‘ಲೆಕ್ಕ ಕೊಡಿ ಅಭಿಯಾನ’ ನಡೆಸಿದ್ದರು. ಈ ಹಿನ್ನೆಲೆಯಲ್ಲಿ 2008ರಿಂದ 2026ರವರೆಗೆ ನಡೆದ ಮಠದ ಆರ್ಥಿಕ ವ್ಯವಹಾರಗಳ ಲೆಕ್ಕ ಕೊಡುವ ಕಾರ್ಯಕ್ರಮವನ್ನು ಟ್ರಸ್ಟಿಗಳು ಸೋಮವಾರ ಹಮ್ಮಿಕೊಂಡಿದ್ದರು.
ವಚನಾನಂದ ಶ್ರೀಗಳಿದ್ದ ಮಠಕ್ಕೆ ಟ್ರಸ್ಟಿಗಳು ಎಂಟ್ರಿ ಕೊಡುತ್ತಿದ್ದಂತೆ ಭಾರೀ ಹೈಡ್ರಾಮಾ ನಡೆಯಿತು. ವಚನಾನಂದ ಸ್ವಾಮೀಜಿ ಹಾಗೂ ಬಿ.ಸಿ.ಉಮಾಪತಿ ಮುಖಾಮುಖಿಯಾಗುತ್ತಿದ್ದಂತೆ, ಸ್ವಾಮೀಜಿ ಬೆಂಬಲಿಗರು ‘ಹರಹರ ಮಹಾದೇವ’, ‘ಕಳ್ಳ ಕಳ್ಳ’ ಎಂದು ಕೂಗಿದರು. ಇದಕ್ಕೆ ಪ್ರತಿಯಾಗಿ ಟ್ರಸ್ಟಿಗಳ ಬೆಂಬಲಿಗರು ‘ಕಳ್ಳ ಸ್ವಾಮೀಜಿ’ ಎಂದು ಕೂಗಿದರು. ಈ ವೇಳೆ, ಗೊಂದಲದ ವಾತಾವರಣ ಸೃಷ್ಟಿಯಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಬಳಿಕ, ಲೆಕ್ಕ ಕೊಡಿ ಚಳವಳಿ ಸಮಿತಿ ಹಾಗೂ ವಚನಾನಂದ ಸ್ವಾಮೀಜಿಯವರು ‘ಲೆಕ್ಕ ಕೊಡಿ ಕಾರ್ಯಕ್ರಮ’ವನ್ನು ಬಹಿಷ್ಕರಿಸಿ, ಹೊರ ನಡೆದರು. ಜೊತೆಗೆ, ವಚನಾನಂದ ಸ್ವಾಮೀಜಿ ಬೆಂಬಲಿಗರು ಲೆಕ್ಕಪತ್ರ ಮಂಡನೆಗೆ ವಿರೋಧ ವ್ಯಕ್ತಪಡಿಸಿದರು. ಆದರೆ, ಪೊಲೀಸರ ಬಿಗಿ ಭದ್ರತೆಯಲ್ಲಿ ಪ್ರಧಾನ ಧರ್ಮದರ್ಶಿ ಉಮಾಪತಿಯವರು ಲೆಕ್ಕಪತ್ರ ಮಂಡಿಸಿದರು. 2008ರಿಂದ 2026ರವರೆಗಿನ ವ್ಯವಹಾರಗಳ ಲೆಕ್ಕಾಚಾರವನ್ನು ನೆರೆದಿದ್ದ ಭಕ್ತರ ಮುಂದೆ ತೆರೆದಿಟ್ಟರು. ಪೀಠದ ಟ್ರಸ್ಟ್ ಪ್ರಾರಂಭವಾದಾಗಿನಿಂದ (2008) ಇಲ್ಲಿಯವರೆಗೂ ಭಕ್ತರು ನೀಡಿದ ಕಾಣಿಕೆ, ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ನೀಡಿದರು.
2008ರಿಂದ 2026ರವರೆಗೆ ಸರ್ಕಾರದ ಅನುದಾನವೂ ಸೇರಿದಂತೆ ₹27.61 ಕೋಟಿ ಜಮಾ ಆಗಿದೆ. ಪಂಚಮಸಾಲಿ ಟ್ರಸ್ಟ್, ಚಾರಿಟೆಬಲ್ ಟ್ರಸ್ಟ್ ಆಗಿದ್ದು, ಪ್ರತಿ ವರ್ಷವೂ ನಾವು ಸರ್ಕಾರಕ್ಕೆ ಲೆಕ್ಕ ನೀಡುತ್ತಾ ಬಂದಿದ್ದೇವೆ. ಪೀಠದಿಂದ ವಚನಾನಂದ ಸ್ವಾಮೀಜಿಯನ್ನು ಉಚ್ಛಾಟನೆ ಮಾಡಿದ್ದರಿಂದ, ನಮ್ಮ ಸಮಾಜಕ್ಕೆ ಸ್ವಾಮೀಜಿ ಮಾಡಿದ ಅನ್ಯಾಯ ಮರೆಮಾಚಲು ಲೆಕ್ಕ ಕೊಡಿ ಚಳವಳಿ ಆರಂಭಿಸಿದ್ದಾರೆ ಎಂದು ದೂರಿದರು.
ಈ ವೇಳೆ, ಆಕ್ರೋಶಗೊಂಡ ಸ್ವಾಮೀಜಿ ಬೆಂಬಲಿಗರು ವೇದಿಕೆಯತ್ತ ನುಗ್ಗಲು ಯತ್ನಿಸಿದರು. ಮಾಜಿ ಶಾಸಕ ಅರುಣಕುಮಾರ್ ಪೂಜಾರ್ ಅವರ ಬೆಂಬಲಿಗರು ಶೂ, ಕಲ್ಲುಗಳನ್ನು ತೂರಿದರು. ಪೊಲೀಸರು ಮಧ್ಯ ಪ್ರವೇಶಿಸಿ, ಅವರನ್ನು ತಡೆದರು. ಬಳಿಕ, ಮಠದ ಪ್ರವೇಶದ್ವಾರದ ಎದುರು ಸ್ವಾಮೀಜಿ ಬೆಂಬಲಿಗರು ಕೆಲ ಕಾಲ ಧರಣಿ ನಡೆಸಿದರು.
ಆಗಿದ್ದೇನು?
- ಮಠದ ಟ್ರಸ್ಟ್ ಅಕ್ರಮ ಎಸಗಿದೆ ಎಂದು ವಚನಾನಂದ ಸ್ವಾಮೀಜಿ ಹಾಗೂ ಭಕ್ತರಿಂದ ‘ಲೆಕ್ಕ ಕೊಡಿ ಅಭಿಯಾನ’ - ಹೀಗಾಗಿ ಟ್ರಸ್ಟಿಗಳಿಂದ 2008ರಿಂದ 2026ರವರೆಗೆ ನಡೆದ ಮಠದ ಆರ್ಥಿಕ ವ್ಯವಹಾರಗಳ ಲೆಕ್ಕಪತ್ರ ಮಂಡನೆ
- ಈ ವೇಳೆ ವಚನಾನಂದ ಸ್ವಾಮೀಜಿ ಹಾಗೂ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಿ.ಸಿ.ಉಮಾಪತಿ ಮುಖಾಮುಖಿ
- ಶ್ರೀ ಬೆಂಬಲಿಗರಿಂದ ‘ಹರಹರ ಮಹಾದೇವ’ ಎಂದು ಘೋಷಣೆ. ವಿರೋಧಿಗಳಿಂದ ‘ಕಳ್ಳ ಕಳ್ಳ’ ಎಂದು ಘೋಷಣೆ
- ಈ ವೇಳೆ ಗೊಂದಲದ ವಾತಾವರಣ ಸೃಷ್ಟಿ. ತಕ್ಷಣ ಪೊಲೀಸರಿಂದ ತಿಳಿ. ಇದರ ನಡುವೆಯೇ ಲೆಕ್ಕಪತ್ರ ಮಂಡನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ