'ಮಂಗಳೂರು ಗಲಭೆ ಹಿಂದೆ ಪಾಕಿಸ್ತಾನದ ಕೈವಾಡ'

By Suvarna NewsFirst Published Dec 24, 2019, 7:43 PM IST
Highlights

ಕಳೆದ ಗುರುವಾರ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆಸಲಾದ ಪ್ರತಿಭಟನೆಯ ವೇಳೆ ಮಂಗಳೂರಿನಲ್ಲಿ ಗಲಭೆ ಉಂಟಾಗಿತ್ತು. ಈ ವೇಳೆ ಪೊಲೀಸರ ಗೋಲಿಬಾರ್​ಗೆ ಇಬ್ಬರು ಯುವಕರು ಬಲಿಯಾಗಿದ್ದರು. ಈ ಕುರಿತ ವಿಡಿಯೋ ಇಂದು ಬಿಡುಗಡೆಯಾಗಿದ್ದ ದೊಡ್ಡ ಮಟ್ಟದ ಸುದ್ದಿಗೆ ಗ್ರಾಸವಾಗಿದೆ. ಇದರ ಮಧ್ಯೆ ರಾಜಕೀಯ ಕೆಸರೆರಚಾಟ ಸಹ ಜೋರಾಗಿದ್ದು, ಮಂಗಳೂರು ಗಲಭೆ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂದು ಬಿಜೆಪಿ ಶಾಸಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ವಿಜಯಪುರ (ಡಿಸೆಂಬರ್ 24): ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಗಳೂರಿನಲ್ಲಿ ಆದ ಗಲಭೆ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

ವಿಜಯಪುರದಲ್ಲಿ ಇಂದು [ಮಂಗಳವಾರ] ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಗಲಭೆ ಹಾಗೂ ಹಿಂಸಾಚಾರದ ಹಿಂದೆ ಪಾಕಿಸ್ತಾನದ ಕೈವಾಡ ಇದೆ. ಈ ಕುರಿತು NIA ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಪೊಲೀಸ್ ಗೋಲಿಬಾರ್​ನಲ್ಲಿ ಮೃತಪಟ್ಟವರ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಮಂಗಳೂರು ಗೋಲಿಬಾರ್​ನಲ್ಲಿ ಸಾವಿಗೀಡಾದವರು ಅಮಾಯಕರಲ್ಲ. ಹೀಗಾಗಿ ಇವರ ಕುಟುಂಬಕ್ಕೆ ಸಿಎಂ ಯಡಿಯೂರಪ್ಪ ನೀಡಿರುವ ಪರಿಹಾರದ ಹಣವನ್ನು ವಾಪಾಸ್ ಪಡೆಯಬೇಕು. ಗಲಭೆಗೆ ಕಾರಣರಾದವರ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ಹಾನಿ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿರುವ ಅವರು, ದೇಶದ್ರೋಹಿಗಳಿಗೆ ಬೆಂಬಲ ನೀಡಲು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಕಾಂಪಿಟೇಷನ್ ಮೇಲೆ ಮಂಗಳೂರಿಗೆ ತೆರಳಿ ಪರಿಹಾರ ನೀಡಿದ್ದಾರೆ ವ್ಯಂಗ್ಯವಾಡಿದರು.

ಅಲ್ಲದೆ, "ದೇಶದ್ರೋಹ ಚಟುವಟಿಕೆಗಳ ಪರವಾಗಿ ಮಾತನಾಡುವ ಮಾಜಿ ಸಚಿವ ಯು.ಟಿ. ಖಾದರ್ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ನಾಯಕರ ವಿರುದ್ಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

click me!