ಹೈಕೋರ್ಟ್‌ಗೆ ಹೆಚ್ಚುವರಿ ಜಡ್ಜ್ ಆಗಿ ನ್ಯಾ. ಭಟ್ | 2016 ರಿಂದ 3 ಬಾರಿ ಕೊಲಿಜಿಯಂ ಶಿಫಾರಸು ಮಾಡಿತ್ತು | ಸತತ ಶಿಫಾರಸುಗಳ ಬಳಿಕ ಈಗ ನೇಮಕಕ್ಕೆ ಕೇಂದ್ರ ಅಸ್ತು
ಬೆಂಗಳೂರು (ಮೇ. 19): ಕರ್ನಾಟಕ ಹೈಕೋರ್ಟ್ ನೂತನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪಂಜಿಗಡ್ಡೆ ಕೃಷ್ಣ ಭಟ್ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಸೋಮವಾರ ಆದೇಶ ಮಾಡಿದೆ.
ಈ ಕುರಿತು ಕೇಂದ್ರ ನ್ಯಾಯ ಮತ್ತು ಕಾನೂನು ಸಚಿವಾಲಯದ ಜಂಟಿ ಕಾರ್ಯದರ್ಶಿ ರಜಿಂದರ್ ಕಶ್ಯಪ್ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ. ನ್ಯಾ.ಪಿ.ಕೃಷ್ಣ ಭಟ್ ಅವರ ಅಧಿಕಾರಾವಧಿಯು ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಎರಡು ವರ್ಷ ಆಗಿರುತ್ತದೆ.
ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪರಾಧಿಕಾರದ ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ಪ್ರಾಧಿಕಾರದ ನ್ಯಾಯಾಧೀಶ ಮತ್ತು ಬೆಂಗಳೂರು ಗ್ರಾಮಾಂತರ, ತುಮಕೂರು, ಬೆಳಗಾವಿ, ಬೀದರ್ ಮತ್ತು ರಾಯಚೂರಿನ ಜಿಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ಪಿ.ಕೃಷ್ಣ ಭಟ್ ಅವರು ಸೇವೆ ಸಲ್ಲಿಸಿದ್ದಾರೆ. ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಜೈಲಿಂದ ಬಂದ ಬಂಧಮುಕ್ತ ಕೈದಿಗಳಿಗೂ 14 ದಿನ ‘ಗೃಹಬಂಧನ’
ಸುಪ್ರೀಂ ಕೋರ್ಟ್ ಕೊಲಿಜಿಯಂ, ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ನ್ಯಾ.ಪಿ.ಕೃಷ್ಣ ಭಟ್ ಅವರ ಹೆಸರನ್ನು ಈ ಹಿಂದೆ ಮೂರು ಬಾರಿ ಶಿಫಾರಸು ಮಾಡಿತ್ತು. ಪ್ರತಿ ಬಾರಿಯೂ ಕೇಂದ್ರ ಸರ್ಕಾರ, ಪಿ.ಕೃಷ್ಣ ಭಟ್ ಅವರ ಹೆಸರು ಮರು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. 2016ರ ಆಗಸ್ಟ್ ನಲ್ಲಿ ಮೊದಲ ಬಾರಿಗೆ ಮಾಡಿದ್ದ ಶಿಫಾರಸು ತಿರಸ್ಕರಿಸಿದ್ದ ಕೇಂದ್ರ ಸರ್ಕಾರವು 2017ರ ಏ.16ರಂದು ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದು, ಪಿ.ಕೃಷ್ಣ ಭಟ್ ಅವರ ಹೆಸರು ಮರು ಪರಿಶೀಲಿಸುವಂತೆ ತಿಳಿಸಿತ್ತು.
ಇದರಿಂದ ಅಸಮಾಧಾನಗೊಂಡಿದ್ದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಜೆ.ಚಲಮೇಶ್ವರ್ ಅವರು 2018ರಲ್ಲಿ ಕೇಂದ್ರ ಸರ್ಕಾರವು ನ್ಯಾಯಾಂಗದಲ್ಲಿ ಮಧ್ಯ ಪ್ರವೇಶ ಮಾಡುತ್ತಿದೆ ಎಂದು ಬಹಿರಂಗ ಪತ್ರ ಬರೆದ ಕಾರಣ ಪಿ.ಕೃಷ್ಣ ಭಟ್ ಅವರ ನೇಮಕಾತಿ ವಿಚಾರವು ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿತ್ತು. ಆ ನಂತರ 2019ರ ಅ.15ರಂದು ಸುಪ್ರೀಂಕೋರ್ಟ್ ಕೋಲಿಜಿಯಂ ಎರಡನೇ ಬಾರಿಗೆ ನ್ಯಾ.ಪಿ.ಕೃಷ್ಣ ಭಟ್ ಅವರ ಹೆಸರು ಶಿಫಾರಸು ಮಾಡಿತ್ತು.
ಇದೀಗ ಕೇಂದ್ರ ಸರ್ಕಾರ ನ್ಯಾ.ಪಿ.ಕೃಷ್ಣ ಭಟ್ ಅವರನ್ನು ಹೈಕೋರ್ಟ್‌ಗೆ ನೇಮಕ ಮಾಡಿದೆ. ಒಂದೊಮ್ಮೆ ಕೇಂದ್ರ ಸರ್ಕಾರವು ಪಿ.ಕೃಷ್ಣ ಭಟ್ ಅವರ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡದೇ ಹೋಗಿದ್ದರೆ, ಅವರು 2020ರ ಆ.8 ರಂದು ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಾಗಿಯೇ ನಿವೃತ್ತಿಯಾಗಬೇಕಿತ್ತು.