ಇಸ್ರೇಲ್ ಹಾಗೂ ಪ್ಯಾಲೆಸ್ತೇನ್‌ಗೆ ಜೆರುಸಲೇಂ ರಾಜಧಾನಿ. ಈಗ ಜೆರುಸಲೇಂ ಹೆಸರು ಬದಲಾಯಿಸಿದ್ದಕ್ಕೂ ಆಕ್ಷೇಪಿಸುತ್ತಿದ್ದಾರೆ. ಯಾರ ಮನಸ್ಸಿಗೂ ನೋವಾಗಬಾರದು ಎಂಬ ಕಾರಣಕ್ಕೆ ಹೆಸರು ಬದಲಾಯಿಸಿದ್ದೇನೆ ಎಂದಿದ್ದಾರೆ.
ಮಂಗಳೂರು (ಅ.6): ಮಧ್ಯಪ್ರಾಚ್ಯದಲ್ಲಿ ಇಸ್ರೇಲ್- ಇರಾನ್ ನಡುವೆ ಸಂಘರ್ಷ ಏರ್ಪಟ್ಟಿದ್ದು, ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ಈದ್ ಮೆರವಣಿಗೆ ಸಂದರ್ಭದಲ್ಲಿ ಕೆಲವರು ಪ್ಯಾಲೆಸ್ತೀನ್ ಪರವಾಗಿ ಬಾವುಟ ಹಾರಿಸಿ ತಮ್ಮ ಮಮಕಾರ ತೋರ್ಪಡಿಸಿದ್ದರು. ಇಂಥದ್ದೇ ವಿದ್ಯಮಾನ ಮಂಗಳೂರಿನಲ್ಲಿ ಸಂಭವಿಸಿದೆ. ಇಲ್ಲಿ ಇಸ್ರೇಲ್ ಟ್ರಾವೆಲ್ಸ್ ಹೆಸರಿನ ಬಸ್‌ನ ಹೆಸರು ಜಾಲತಾಣದಲ್ಲಿ ವೈರಲ್ ಆಗಿದ್ದು, ಮುಸ್ಲಿಮರ ದ್ವೇಷಕ್ಕೆ ಗುರಿಯಾಗಿದೆ.
ಮೂಡುಬಿದಿರೆ- ಕಿನ್ನಿಗೋಳಿ- ಕಟೀಲು- ಮೂಲ್ಕಿ ನಡುವೆ ಸಂಚರಿಸುವ ಖಾಸಗಿ ಬಸ್ಸಿಗೆ ಇತ್ತೀಚೆಗಷ್ಟೇ ‘ಇಸ್ರೇಲ್ ಟ್ರಾವೆಲ್ಸ್’ ಎಂದು ಹೆಸರು ಇಡಲಾಗಿತ್ತು. ಕಟೀಲ್ ಮೂಲದ ಲೆಸ್ಟರ್ ಕಟೀಲು ಎಂಬವರು ಇದರ ಮಾಲೀಕ. ಇವರು ಕಳೆದ 12 ವರ್ಷಗಳಿಂದ ಇಸ್ರೇಲ್‌ನಲ್ಲಿ ಉದ್ಯೋಗ ನಿಮಿತ್ತ ಕುಟುಂಬದೊಂದಿಗೆ ನೆಲೆಸಿದ್ದಾರೆ. ಇತ್ತೀಚೆಗೆ ಇವರು ಮಂಗಳೂರಿನಲ್ಲಿ ಹಳೆ ಬಸ್ ಖರೀದಿಸಿ ಮೂಲ್ಕಿ ಮೂಡುಬಿದಿರೆ ರೂಟಿನಲ್ಲಿ ಇಳಿಸಿದ್ದರು. ತನ್ನ ಇಸ್ರೇಲ್ ಪ್ರೇಮ ತೋರಿಸುವುದಕ್ಕಾಗಿ ಇಸ್ರೇಲ್ ಟ್ರಾವೆಲ್ಸ್ ಹೆಸರಿನಲ್ಲಿಯೇ ಬಸ್ ಆರಂಭಿಸಿದ್ದರು. ಕಟೀಲಿನಲ್ಲಿರುವ ಲೆಸ್ಟರ್ ಕುಟುಂಬದವರು ಬಸ್ಸನ್ನು ನೋಡಿಕೊಳ್ಳುತ್ತಿದ್ದಾರೆ.ಇಸ್ರೇಲ್ ಹೆಸರಿನ ಬಸ್‌ನ್ನು ನೋಡಿದ ಪ್ಯಾಲೆಸ್ತೀನ್ ಪ್ರಿಯರು ಸಿಟ್ಟಿಗೆದ್ದಿದ್ದು, ದ್ವೇಷ ಕಾರಿದ್ದಾರೆ.
ಕರ್ನಾಟಕದ ಮೊದಲ ಸಮುದ್ರ ಆಂಬ್ಯುಲೆನ್ಸ್ ಸೇವೆ - ಮಂಗಳೂರು, ಮಲ್ಪೆ, ತದಡಿ ಬಂದರಿನಿಂದ ಆರಂಭ
ಪ್ಯಾಲೆಸ್ತೀನ್ ವಿರುದ್ಧ ಯುದ್ಧ ಸಾರಿರುವ ಇಸ್ರೇಲ್ ಒಂದು ಭಯೋತ್ಪಾದಕ ರಾಷ್ಟ್ರವಾಗಿದ್ದು, ಅದರ ಹೆಸರನ್ನು ಮಂಗಳೂರಿನಲ್ಲಿ ಬಸ್ಸಿಗೆ ಇರಿಸಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಜಾಲತಾಣದಲ್ಲಿ ಬಸ್ಸಿನ ಫೋಟೋ ಹಾಕಿ, ಟ್ರೋಲ್ ಮಾಡಿದ್ದಲ್ಲದೆ, ಈ ಬಗ್ಗೆ ಪೊಲೀಸರು ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಸಂಚಾರಿ ಪೊಲೀಸರೂ ಇದರಿಂದ ಇಕ್ಕಟ್ಟಿಗೆ ಸಿಲುಕಿದ್ದು, ಬಸ್ಸಿನ ಹೆಸರು ಬದಲಿಸುವಂತೆ ಪರೋಕ್ಷವಾಗಿ ಸೂಚಿಸಿದ್ದರು. ಈ ಎಲ್ಲ ನಡವಳಿಕೆಗಳಿಂದ ಬೇಸತ್ತ ಬಸ್ಸಿನ ಮಾಲೀಕರು ಅನಿವಾರ್ಯವಾಗಿ ಈಗ ಬಸ್ಸಿನ ಹೆಸರನ್ನೇ ಬದಲಾಯಿಸಿದ್ದಾರೆ.
ಮಂಗಳೂರು: ಧರ್ಮ ದ್ವೇಷದ ಭಾಷಣ, ಸಹಾಯಕ ಪ್ರಾಧ್ಯಾಪಕನ ವಿರುದ್ಧ ಎಫ್ಐಆರ್
ಇದೀಗ ಬಸ್ಸಿನ ಹೆಸರನ್ನು ‘ಇಸ್ರೇಲ್ ಟ್ರಾವೆಲ್ಸ್’ ಬದಲು ‘ಜೆರುಸಲೇಂ ಟ್ರಾವೆಲ್ಸ್’ ಎಂದು ಬದಲಿಸಿದ್ದಾರೆ. ಈ ಬಗ್ಗೆ ಇಸ್ರೇಲಿನಲ್ಲಿರುವ ಲೆಸ್ಟರ್ ಕಟೀಲ್ ಪ್ರತಿಕ್ರಿಯಿಸಿ, ಇಸ್ರೇಲ್ ಟ್ರಾವೆಲ್ಸ್ ಹೆಸರು ಹಾಕಿದ್ದರಲ್ಲಿ ತೊಂದರೆ ಏನು ಎನ್ನುವುದು ಅರ್ಥವಾಗಿಲ್ಲ. ನಾನು 12 ವರ್ಷಗಳಿಂದ ಇಸ್ರೇಲಿನಲ್ಲಿದ್ದು ಅಲ್ಲಿನ ವ್ಯವಸ್ಥೆ ಕಂಡು ಅಭಿಮಾನ ಹೊಂದಿದ್ದೇನೆ. ಅಲ್ಲದೆ, ನಮ್ಮ ಪವಿತ್ರ ಭೂಮಿ ಜೆರುಸಲೇಂ ಇರುವ ದೇಶ ಇಸ್ರೇಲ್. ಹೀಗಾಗಿ ಇಸ್ರೇಲ್ ಹೆಸರನ್ನು ನನ್ನ ಬಸ್ಸಿಗೆ ಇರಿಸಿದ್ದೆ. ಇಸ್ರೇಲ್ ಹಾಗೂ ಪ್ಯಾಲೆಸ್ತೇನ್‌ಗೆ ಜೆರುಸಲೇಂ ರಾಜಧಾನಿ. ಈಗ ಜೆರುಸಲೇಂ ಹೆಸರು ಬದಲಾಯಿಸಿದ್ದಕ್ಕೂ ಆಕ್ಷೇಪಿಸುತ್ತಿದ್ದಾರೆ. ಯಾರ ಮನಸ್ಸಿಗೂ ನೋವಾಗಬಾರದು ಎಂಬ ಕಾರಣಕ್ಕೆ ಹೆಸರು ಬದಲಾಯಿಸಿದ್ದೇನೆ ಎಂದಿದ್ದಾರೆ.