ಬೆಂಗಳೂರು: 150 ದಿನದಲ್ಲಿ 45 ಸಾವಿರಕ್ಕೂ ಅಧಿಕ ಮಂದಿಗೆ ಕೊರೋನಾ

By Kannadaprabha NewsFirst Published Jul 27, 2020, 7:47 AM IST
Highlights

ಬೆಂಗಳೂರಲ್ಲಿ ಮಾ.9ರಂದು ಮೊದಲ ಪ್ರಕರಣ|ಇಲ್ಲಿಯ ವರೆಗೂ ಬೆಂಗಳೂರಲ್ಲಿ ಒಟ್ಟು 45,453 ಮಂದಿಗೆ ಕೋವಿಡ್‌|891 ಮಂದಿ ಸೋಂಕಿಗೆ ಬಲಿ| 11,405 ಮಂದಿ ಸೋಂಕಿನ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ| ಇನ್ನು 33,156 ಸಕ್ರಿಯ ಪ್ರಕರಣಗಳು| 

ಬೆಂಗಳೂರು(ಜು.27): ಮಹಾಮಾರಿ ಕೊರೋನಾ ಸೋಂಕು ಬೆಂಗಳೂರಿಗೆ ಕಾಲಿಟ್ಟು 150 ದಿನ ಪೂರೈಸಿದ್ದು, ಸೋಂಕಿತರ ಸಂಖ್ಯೆ 45 ಸಾವಿರದ ಗಡಿ ದಾಟಿದೆ. ಭಾನುವಾರ ಹೊಸದಾಗಿ 1950 ಪ್ರಕರಣ ಪತ್ತೆಯಾಗಿದೆ. 29 ಮಂದಿ ಮೃತರಾಗಿದ್ದಾರೆ.

ಮಾ.9ರಂದು ಮೊದಲ ಪ್ರಕರಣ ಕಾಣಿಸಿಕೊಂಡ ದಿನದಿಂದ ಇಲ್ಲಿಯ ವರೆಗೂ ನಗರದಲ್ಲಿ ಒಟ್ಟು 45,453 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 891 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 11,405 ಮಂದಿ ಸೋಂಕಿನ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ. ಇನ್ನು 33,156 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಬೆಂಗಳೂರಲ್ಲಿ 3388 ಕೊರೋನಾ ಸೋಂಕಿತರು ನಾಪತ್ತೆ..!

ಇನ್ನು 353 ಮಂದಿ ನಗರದ ವಿವಿಧ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ನಗರದ 33,156 ಸಕ್ರಿಯ ಪ್ರಕರಣಗಳ ಪೈಕಿ 152 ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ, 170 ಮಂದಿ ಸರ್ಕಾರಿ ಮೆಡಿಕಲ್‌ ಕಾಲೇಜಿನಲ್ಲಿ, 828 ಮಂದಿ ಖಾಸಗಿ ಆಸ್ಪತ್ರೆಯಲ್ಲಿ, 1412 ಮಂದಿ ಖಾಸಗಿ ಮೆಡಿಕಲ್‌ ಕಾಲೇಜಿನಲ್ಲಿ, 2529 ಮಂದಿ ಬಿಬಿಎಂಪಿ ಕೊರೋನಾ ಆರೈಕೆ ಕೇಂದ್ರದಲ್ಲಿ, 492 ಖಾಸಗಿ ಕೊರೋನಾ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಸೋಂಕಿತರನ್ನು ಹೋಂ ಐಸೋಲೇಷನ್‌ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!