Belagavi: ಬಾಯ್ಬಿಡದ ಸಾಹಿತಿ, ನಟರ ವಿರುದ್ಧ ಆಕ್ರೋಶ

Kannadaprabha News   | Asianet News
Published : Dec 19, 2021, 04:18 AM ISTUpdated : Dec 19, 2021, 04:22 AM IST
Belagavi: ಬಾಯ್ಬಿಡದ ಸಾಹಿತಿ, ನಟರ ವಿರುದ್ಧ ಆಕ್ರೋಶ

ಸಾರಾಂಶ

*   ‘ಬೆಳಗಾವಿ ಚಲೋ’ಗೆ ಯಾರೂ ಬೆಂಬಲ ನೀಡಿಲ್ಲ *   ಎಂಇಎಸ್‌, ಶಿವಸೇನೆಯ ಪುಂಡಾಟ ಖಂಡಿಸಿಯೂ ಇಲ್ಲ *    ಪ್ರತಿಕ್ರಿಯೆ ನೀಡದ ನಟರು, ಸಾಹಿತಿಗಳು  

ಬೆಂಗಳೂರು(ಡಿ.19):  ಬೆಳಗಾವಿಯಲ್ಲಿ(Belagavi) ಎಂಇಎಸ್‌(MES) ಪುಂಡರ ಪುಂಡಾಟಿಕೆ ಬಗ್ಗೆ ರಾಜ್ಯದ ಸಾಹಿತಿಗಳು)Literati), ಸಿನಿಮಾ ನಟರು(Actors) ಚಕಾರ ಎತ್ತದಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಶುಕ್ರವಾರ ತಡರಾತ್ರಿ ನಡೆದ ಘಟನೆಗಳ ಕುರಿತು ಶನಿವಾರ ಬೆಳಿಗ್ಗೆಯಿಂದಲೇ ರಾಜ್ಯಾದ್ಯಂತ(Karnataka) ಹೋರಾಟಗಳು ನಡೆಯುತ್ತಿವೆ. ಕನ್ನಡಪರ ಹೋರಾಟಗಾರರು, ರೈತರು ಬೀದಿಗಿಳಿದು ಕೃತ್ಯವನ್ನು ಖಂಡಿಸುತ್ತಿದ್ದಾರೆ. ಆದರೆ, ಕನ್ನಡ ಭಾಷೆಯನ್ನೇ ಅನ್ನವಾಗಿಸಿಕೊಂಡಿರುವ ಸಾಹಿತಿಗಳು ಘಟನೆ ಕುರಿತು ಒಂದಕ್ಷರವೂ ಮಾತನಾಡಿಲ್ಲ.

ಇನ್ನು ಸಿನಿಮಾ ನಟ, ನಟಿಯರು ಹಾಗೂ ನಿರ್ದೇಶಕರು ಕೂಡ ಘಟನೆಯನ್ನು ಖಂಡಿಸುವಲ್ಲಿ ಹಿಂದೆ ಬಿದ್ದಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದಲೂ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲ ನಟರು ಕೇವಲ ಟ್ವೀಟ್‌ಗೆ ಸೀಮಿತರಾಗಿದ್ದಾರೆ. ನಟ ಶಿವರಾಜ್‌ ಕುಮಾರ್‌, ಧ್ರುವ ಸರ್ಜಾ, ಸೃಜನ್‌ ಲೋಕೇಶ್‌ ಸೇರಿದಂತೆ ಕೆಲ ನಟರು ಟ್ವೀಟ್‌ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

Belagavi Violence ಮಹಾರಾಷ್ಟ್ರದ ಕನ್ನಡಿಗರಿಗೆ ರಕ್ಷಣೆ, ಪುಂಡರಿಗೆ ತಕ್ಕ ಪಾಠ, ಬೆಳಗಾವಿ ಘಟನೆಗೆ ಬೊಮ್ಮಾಯಿ ಕಿಡಿ

ಹೋರಾಟಕ್ಕೆ ಬೆಂಬಲ ಸೂಚಿಸಿಲ್ಲ:

ನಾಡಿನ ಕನ್ನಡಪರ, ರೈತ, ದಲಿತ, ಪ್ರಗತಿಪರ ಸಂಘಟನೆಗಳೆಲ್ಲಾ ಒಟ್ಟಾಗಿ ಸೋಮವಾರ ಬೆಳಗಾವಿ ಚಲೋ ಹಮ್ಮಿಕೊಂಡು ನಾಡಿನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈ ಹೋರಾಟಕ್ಕೆ ನಾಡಿನ ಸಾಹಿತಿಗಳು, ಸಿನಿಮಾ ರಂಗ, ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ಸೂಚಿಸಿಲ್ಲ.

ಆನ್‌ಲೈನ್‌ನಲ್ಲಿ ತೀವ್ರ ಆಕ್ರೋಶ:

ಪುಂಡಾಟಿಕೆ ನಡೆಸಿ ಕನ್ನಡ(Kannada) ಮತ್ತ ಕನ್ನಡಿಗರ(Kannadigas) ಅಸ್ಮಿತೆಗೆ ಧಕ್ಕೆ ತಂದ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಸಾಂಗ್ಲಿಯಲ್ಲಿ ಕರ್ನಾಟಕ ನೋಂದಣಿ ಇರುವ ವಾಹನಗಳ ಮೇಲೆ ದಾಳಿ ನಡೆಸಿ ಕನ್ನಡಿಗರ ಮೇಲೆ ಹಲ್ಲೆ ಮಾಡಿದ ಶಿವಸೇನೆ ವಿರುದ್ಧ ರಾಷ್ಟಾ್ರದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡಿಗರ ಮೇಲೆ ದಾಳಿ ನಡೆಸಿದ್ದ ವಿಡಿಯೋ ತುಣುಗಳು ವೈರಲ್‌ ಆಗಿದ್ದು, ನೆಟ್ಟಿಗರು ಶಿವಸೇನೆ ಮತ್ತು ಎಂಇಎಸ್‌ ಕಾರ್ಯಕರ್ತರ ಪುಂಡಾಟಿಕೆಯನ್ನು ಖಂಡಿಸಿದರು. ಶನಿವಾರ ಟ್ವೀಟರ್‌ನಲ್ಲಿ ಈ ಎರಡೂ ಸಂಘಟನೆಗಳನ್ನು ಬ್ಯಾನ್‌ ಮಾಡುವಂತೆ ನಡೆದ ಅಭಿಯಾನವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು, ಎಂಇಎಸ್‌ ಬ್ಯಾನ್‌ ಹ್ಯಾಶ್‌ಟ್ಯಾಗ್‌ ನಂ.1 ಸ್ಥಾನದಲ್ಲಿದೆ. ಬ್ಯಾನ್‌ ಶಿವಸೇನೆ ನಂ.2 ಸ್ಥಾನದಲ್ಲಿ ಟ್ರೆಂಡ್‌ ಆಗಿತ್ತು. ಕನ್ನಡ ವಿರೋಧಿ ಕೃತ್ಯಕ್ಕೆ ದಿನವಿಡೀ ನಡೆದ ಪ್ರತಿಭಟನೆಯಲ್ಲಿ ಸಿನಿಮಾ ನಟರು, ಸಾಹಿತಿಗಳು, ಬುದ್ಧಿಜೀವಿಗಳು ಭಾಗಿಯಾಗದಿರುವುದನ್ನು ನೆಟ್ಟಿಗರು ತೀವ್ರವಾಗಿ ಖಂಡಿಸಿದ್ದಾರೆ.

ರಾಯಣ್ಣ ಪ್ರತಿಮೆ ಭಗ್ನ ದೇಶದ್ರೋಹ: ಎಚ್‌ಡಿಕೆ

ನವದೆಹಲಿ:  ಕಿತ್ತೂರು ರಾಣಿ ಚನ್ನಮ್ಮ ಅವರ ಜತೆಗೂಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಕನ್ನಡನಾಡಿನ ಹೆಮ್ಮೆಯ ಪುತ್ರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ವಿರೂಪಗೊಳಿಸಿರುವುದು ಅತ್ಯಂತ ಖಂಡನೀಯ. ಇದು ಕನ್ನಡಿಗರಿಷ್ಟೇ ಮಾಡಿದ ದ್ರೋಹವಲ್ಲ, ಇಡೀ ದೇಶಕ್ಕೆ ಎಸಗಿದ ದ್ರೋಹ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಕಿಡಿಕಾರಿದ್ದಾರೆ.

ನವದೆಹಲಿಯಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಪ್ರತಿಮೆಯನ್ನು ಹಾಳು ಮಾಡಿರುವುದು ಹಾಗೂ ಬೆಳಗಾವಿಯಲ್ಲಿ ವಾಹನಗಳನ್ನು ಸುಟ್ಟು ಹೋಟೆಲ…ಗಳಿಗೆ ಕಲ್ಲು ಹೊಡೆದಿರುವ ಘಟನೆ ಅತ್ಯಂತ ಹೇಯ ಹಾಗೂ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂಥದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಿನ ಜಾವ ಬೆಳಗಾವಿಯಲ್ಲಿ ನಡೆದಿರುವ ಘಟನೆ ಖಂಡನೀಯ. ಬ್ರಿಟಿಷರ(British) ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ಅವರ ಜೊತೆಗೂಡಿ ಹೋರಾಟ ನಡೆಸಿದ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಧಕ್ಕೆ ಉಂಟು ಮಾಡಿರುವುದು ದೇಶ ದ್ರೋಹದ ಕೆಲಸ. ನಮ್ಮವರೇ ನಮ್ಮ ಸ್ವಾತಂತ್ರ್ಯ ಹೋರಾಟಗಾರ ಪ್ರತಿಮೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಮಹಾರಾಷ್ಟ್ರದ ಮರಾಠಿಗರ ಅಭಿಮಾನವನ್ನು ದುರುಪಯೋಗ ಮಾಡಿಕೊಂಡು ಇಂಥ ಕೆಲಸ ಮಾಡಿರುವುದು ಖಂಡನೀಯ. ಇದು ಕೇವಲ ಕನ್ನಡಿಗರಿಗೆ ಮಾತ್ರವಲ್ಲ, ದೇಶಕ್ಕೆ ಮಾಡಿರುವ ದ್ರೋಹ ಎಂದು ಬೇಸರ ವ್ಯಕ್ತಪಡಿಸಿದರು.

Belagavi Violence ಪುಂಡರ ವಿರುದ್ಧ ಕೆಂಡ: ಬೆಳಗಾವಿ ಚಲೋ, ಸುವರ್ಣಸೌಧಕ್ಕೆ ಮುತ್ತಿಗೆ, ಡಿ.20ಕ್ಕೆ ಕನ್ನಡಿಗರ ಶಕ್ತಿಪ್ರದರ್ಶನ!

ವಾಹನಗಳ ಮೇಲೆ ಕಲ್ಲು ತೂರುವುದು, ಬಂದ್‌ ಮಾಡುವುದು, ಅಂಗಡಿ ಮುಚ್ಚಿಸುವುದು ನೋಡಿದರೆ ಸರ್ಕಾರ ನಿಷ್ಕ್ರೀಯವಾಗಿದೆಯೇ? ಅಥವಾ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಅಧಿವೇಶನ ನಡೆಯುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಮೂರ್ನಾಲ್ಕೂ ಸಾವಿರ ಪೊಲೀಸರು ಇದ್ದರೂ ಇಂಥ ಘಟನೆ ನಡೆದಿರುವುದು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಚಾಟಿ ಬೀಸಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಸಹೋದರರಂತೆ ಇರಬೇಕು. ಇಂತಹ ಘಟನೆಗಳು ಅಕ್ಕಪಕ್ಕದ ರಾಜ್ಯಗಳ ನಡುವಿನ ಸೌಹಾರ್ದತೆಯನ್ನು ಹಾಳು ಮಾಡುತ್ತವೆ. ಇಂತಹ ಘಟನೆಗಳಿಂದ ಎಂಇಎಸ್‌ನವರು ಏನೂ ಸಾಧಿಸಲು ಸಾಧ್ಯವಿಲ್ಲ. ಈಗಾಗಲೇ ಬೆಳಗಾವಿ ಕರ್ನಾಟಕದ ಭಾಗವಾಗಿದೆ. ನೀವು ಕನ್ನಡದ ಮಣ್ಣಿನಲ್ಲಿ ಜೀವನ ಕಟ್ಟಿಕೊಂಡಿದ್ದೀರಿ. ನಾಡಿನ ಅನ್ನ ತಿಂದು, ಈ ಮಣ್ಣಿನಲ್ಲಿ ಬದುಕಿ ಇಂಥ ಹೇಯ ಕೃತ್ಯ ಮಾಡುವುದು ದೇಶ ದ್ರೋಹದ ಕೆಲಸ ಎಂದು ಕುಮಾರಸ್ವಾಮಿ ಕಿಡಿಕಾರಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!