
ಬೆಂಗಳೂರು: ಬೆಂಗಳೂರಿನ ಯಲಹಂಕ ವ್ಯಾಪ್ತಿಯ ಕೋಗಿಲು ಬಡಾವಣೆಯಲ್ಲಿ ಅಕ್ರಮ ನಿವಾಸಿಗಳ ಮನೆ ತೆರವು ತಕ್ಷಣ ಪಾಕಿಸ್ತಾನಕ್ಕೆ ತಲುಪಿದ್ದು ಹೇಗೆ? ಇಲ್ಲಿನ ಭಯೋತ್ಪಾದಕರೇ ಆ ಮಾಹಿತಿ ರವಾನಿಸಿದಂತಿದೆ. ಇಲ್ಲಿನ ಬಡಾವಣೆ ಕ್ರಮೇಣ ಸ್ಲೀಪರ್ ಸೆಲ್‌ಗಳ ಕೇಂದ್ರವಾಗುವ ಅಪಾಯವಿದೆ. ಈ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಕೋಗಿಲು ಕ್ರಾಸ್‌ನ ಫಕೀರ್ ಬಡಾವಣೆ ವಿವಾದಿತ ಸ್ಥಳಕ್ಕೆ ಬುಧವಾರ ಬಿಜೆಪಿ ನಾಯಕರ ನಿಯೋಗದ ಜತೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿ, ಕೋಗಿಲು ಕ್ರಾಸ್‌ನ ಫಕೀರ್ ಬಡಾವಣೆ ಕ್ರಮೇಣ ಸ್ಲೀಪರ್ ಸೆಲ್‌ಗಳ ಕೇಂದ್ರವಾಗುವ ಅಪಾಯವಿದೆ. ಬಾಂಗ್ಲಾದವರಿಂದಾಗಿ ಪಶ್ಚಿಮ ಬಂಗಾಳ ಹೊತ್ತಿ ಉರಿಯುತ್ತಿದೆ. ಮುಂದೆ ಕರ್ನಾಟಕವೂ ಹೀಗೆಯೇ ಆಗಲಿದೆ. ಆದ್ದರಿಂದ ಮೊದಲು ಇಲ್ಲಿನವರ ಪೌರತ್ವ ಪರಿಶೀಲಿಸುವ ಕಾರ್ಯ ಆಗಬೇಕು. ಅಧಿಕಾರಿಗಳ ಮೇಲೆ ಯಾವುದೇ ಒತ್ತಡ ಹಾಕದೆ ಈ ಕೆಲಸ ಮಾಡಬೇಕು. ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿದರೆ ತನಿಖೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನೆ ಕಟ್ಟಿಕೊಡುವುದೇ ಮಾನದಂಡವಾದರೆ ಇನ್ನು ಮುಂದೆ ಸರ್ಕಾರ ಯಾವ ಮುಖ ಇಟ್ಟುಕೊಂಡು ಒತ್ತುವರಿ ತೆರವು ಮಾಡಲಿದೆ? ಬೆಂಗಳೂರಿನಲ್ಲಿ 40 ಕಡೆ 150-200 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಇವರೆಲ್ಲರಿಗೂ ಮನೆ ನಿರ್ಮಿಸಿಕೊಡಲು ಸಾಧ್ಯವೇ? ಒತ್ತುವರಿ ತೆರವಾದ ಕಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿಲ್ಲ. ಇಲ್ಲಿ ಅವರ ಕುಕ್ಕರ್ ಬ್ರದರ್ ಇರುವುದರಿಂದ ಹಸುವಿನ ಬಳಿ ಕರು ಓಡಿ ಬರುವಂತೆ ಬಂದಿದ್ದಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಟೋಪಿ ಸರ್ಕಾರ ಕನ್ನಡಿಗರಿಗೆ ಟೋಪಿ ಹಾಕಿ ಕರ್ನಾಟಕದ ವಿವಿಧೆಡೆ ಮಿನಿ ಬಾಂಗ್ಲಾದೇಶಗಳನ್ನು ಸೃಷ್ಟಿಸಿದೆ. ಕರ್ನಾಟಕ ಈಗ ಮಿನಿ ಬಾಂಗ್ಲಾಗಳ ಹಬ್ ಆಗುತ್ತಿದೆ. ನಾವು ಬರುವ ಮುನ್ನವೇ ವಾಸೀಂ ಎಂಬ ಮುಖಂಡ ಇಲ್ಲಿನ ನಿವಾಸಿಗಳನ್ನು ಹೊರಕ್ಕೆ ಕಳುಹಿಸಿದ್ದಾನೆ. ಸುತ್ತ ಇರುವ ಟಿಪ್ಪು ನಗರ ಮೊದಲಾದ ಪ್ರದೇಶಗಳಿಂದ ಕನ್ನಡ ಮಾತನಾಡುವವರನ್ನು ಇಲ್ಲಿಗೆ ಕರೆಸಲಾಗಿದೆ. ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಅಧಿಕಾರಿಗಳಿಗೆ ಬೆದರಿಕೆ ಹಾಕಿ, ಇಲ್ಲಿ ಇರುವವರೆಲ್ಲರೂ ಸ್ಥಳೀಯರು ಎಂದು ದಾಖಲು ಮಾಡಬೇಕು, ಯಾರನ್ನೂ ಪ್ರಶ್ನಿಸಬಾರದು ಎಂದು ಸೂಚಿಸಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರು: ನಗರದ ಯಲಹಂಕದ ಬಳಿಯಿರುವ ಕೋಗಿಲು ಬಡಾವಣೆಯಲ್ಲಿ 200ಕ್ಕೂ ಹೆಚ್ಚು ಮನೆಗಳನ್ನು ನೆಲಸಮ ಮಾಡಿರುವ ಪ್ರಕರಣದ ಸುತ್ತ ಅಡಗಿರಬಹುದಾದ ಸತ್ಯಾಸತ್ಯತೆ ತಿಳಿಯುವ ಸಂಬಂಧ ರಾಜ್ಯ ಬಿಜೆಪಿ ವತಿಯಿಂದ ಸತ್ಯಶೋಧನಾ ತಂಡ ರಚಿಸಲಾಗಿದೆ. ಈ ತಂಡ ಘಟನಾ ಸ್ಥಳಕ್ಕೆ ತರಳಿ ವಿಸ್ತೃತವಾಗಿ ಪರಿಶೀಲಿಸಿದ ಬಳಿಕ ಒಂದು ವಾರದೊಳಗೆ ಸಮಗ್ರ ವರದಿ ನೀಡುವಂತೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ತಂಡದಲ್ಲಿ ಶಾಸಕರಾದ ಎಸ್.ಆರ್.ವಿಶ್ವನಾಥ್, ಎಸ್.ಮುನಿರಾಜು, ಕೆ.ಎಸ್.ನವೀನ್, ಪಕ್ಷದ ಮುಖಂಡರಾದ ಮಾಳವಿಕಾ ಅವಿನಾಶ್, ತಮ್ಮೇಶ್‌ಗೌಡ, ಎಸ್.ಹರೀಶ್ ಮತ್ತು ಭಾಸ್ಕರ್ ರಾವ್ ಅವರು ಇದ್ದಾರೆ.
ಕೋಗಿಲು ಬಡಾವಣೆಯಲ್ಲಿ ಅಕ್ರಮ ಶೆಡ್ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕೂಗಿಗೆ ಸಿದ್ದರಾಮಯ್ಯ ಮನ್ನಣೆ ಕೊಟ್ಟಿದ್ದಾರೆ. ಓಟ್ ಬ್ಯಾಂಕ್‌ಗಾಗಿ ಒಂದೇ ಧರ್ಮದವರನ್ನು ತುಷ್ಟೀಕರಣ ಮಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಆರೋಪಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿ, ಸಿದ್ದರಾಮಯ್ಯನವರು ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ. ಅತಿಕ್ರಮ ತೆರವುಗೊಳಿಸಿದ್ದು ಸರಿ. ಆದರೆ, ಕೇರಳಕ್ಕೆ ಇವರು ಮಂಡಿಯೂರಿದ್ದು ಖಂಡನೀಯ. ಕೋಗಿಲು ಪ್ರಕರಣ ಕುರಿತು ನೆರೆಯ ಪಾಕಿಸ್ತಾನ ಹೇಳಿಕೆ ಕೊಡುತ್ತದೆ ಎಂದರೆ ಇಲ್ಲಿನವರು ಎಷ್ಟು ಪ್ರಭಾವಿಗಳಿದ್ದಾರೆ ಎಂಬುದು ತಿಳಿದು ಬರುತ್ತದೆ ಎಂದು ಟೀಕಿಸಿದ್ದಾರೆ.
ರಾಜ್ಯದ ಹಲವು ಕಡೆ ಸೂರು ಇಲ್ಲದವರಿಗೆ ಈತನಕ ಸೂರು ಕೊಟ್ಟಿಲ್ಲ. ಆದರೆ, ಕೋಗಿಲು ಶೆಡ್ ತೆರವು ಪ್ರಕರಣದಲ್ಲಿ ಕೆ.ಸಿ.ವೇಣುಗೋಪಾಲ್ ಅವರು ಹೇಳಿದ ಕೂಡಲೇ ಮನೆ ಕೊಡುವ ತೀರ್ಮಾನ ಮಾಡಿದ್ದೀರಿ. ಯಾರನ್ನು ಕೇಳಿ ಈ ತೀರ್ಮಾನ ಮಾಡಿದಿರಿ ಎಂದವರು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ