
ಬೆಂಗಳೂರು (ಮೇ 07): ಭಾರತೀಯ ಸೇನೆಯಿಂದ ಉಗ್ರರ ನೆಲೆಗಳ ಮೇಲೆ ನಡೆಸಿದ 'ಆಪರೇಷನ್ ಸಿಂಧೂರ್' ದಾಳಿ ಯಶಸ್ವಿ ಹಿನ್ನೆಲೆಯಲ್ಲಿ ಕರ್ನಾಟಕದ ಎಲ್ಲ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರ ನಿರ್ದೇಶನದ ಮೇರೆಗೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಏಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಉತ್ತರವಾಗಿ, ಇಂದು ಮುಂಜಾನೆ (ಮೇ 6ರ ಮಧ್ಯರಾತ್ರಿ) ಭಾರತ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ 'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ಸೇನಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ. ನಮ್ಮ ಭಾರತದ ಹೆಮ್ಮೆಯ ಸೇನಾ ಕಾರ್ಯಾಚರಣೆಗೆ ಶುಭಾಶಯಗಳನ್ನು ತಿಳಿಸುತ್ತಾ, ಈ ಸಂದರ್ಭದಲ್ಲಿ ಮುಜರಾಯಿ ಇಲಾಖಾ ವ್ಯಾಪ್ತಿಯ ಎಲ್ಲಾ ದೇವಾಲಯಗಳಲ್ಲಿ ಭಾರತೀಯ ಸೇನೆಯ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿ, ಆ ದೇವರು ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುವಂತೆ ಕ್ರಮ ಕೈಗೊಳ್ಳಲು ಈ ಮೂಲಕ ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ನಮ್ಮ ಭಾರತದ ಹೆಮ್ಮೆಯ ಸೇನಾ ಕಾರ್ಯಾಚರಣೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಮಾನ್ಯ ಸಚಿವರ ಸೂಚನೆಯ ಮೇರೆಗೆ ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಎಲ್ಲಾ ದೇವಾಲಯಗಳಲ್ಲಿ ಭಾರತೀಯ ಸೇನೆಯ ಹೆಸರಿನಲ್ಲಿ ಹಾಗೂ ಭಾರತೀಯ ಯೋಧರಿಗೆ ಒಳಿತಾಗಲಿ ಎಂದು ಹಾರೈಸುತ್ತಾ, ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಯನ್ನು ಭಗವಂತನು ಅನುಗ್ರಹಿಸಿ ಕರುಣಿಸಲಿ ಎಂದು ಪ್ರಾರ್ಥಿಸಿ ವಿಶೇಷ ಸಂಕಲ್ಪದೊಂದಿಗೆ ಪೂಜೆಗಳನ್ನು ನೆರವೇರಿಸಲು ಕ್ರಮ ಕೈಗೊಳ್ಳಲು ಈ ಮೂಲಕ ಆದೇಶಿಸಿದೆ. ಮಾನ್ಯ ಸಚಿವರ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು ಎಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಡಾ.ಎಂ.ವಿ. ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.
ಆಪರೇಷನ್ ಸಿಂಧೂರ್ ಬಗ್ಗೆ ಬೆಂಬಲ, ಕಾಂಗ್ರೆಸ್ ಟ್ವೀಟ್ ಬಗ್ಗೆ ವಿಲವಿಲ:
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನಾ ಕಾರ್ಯಾಚರಣೆ ನಡೆಸಿದ್ದು, ಈ ಕಾರ್ಯಕ್ಕೆ ದೇಶದಾದ್ಯಂತ ಎಲ್ಲರೂ ಪಕ್ಷ ಬೇಧ ಮರೆತು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಕರ್ನಾಟಕ ಕಾಂಗ್ರೆಸ್‌ನಿಂದ ಇಡೀ ದೇಶಕ್ಕೆ ಮಹಾತ್ಮ ಗಾಂಧಿ ಅವರ ಶಾಂತಿ ಸಂದೇಶವನ್ನು ತಿಳಿಸಿ ಪೋಸ್ಟ್ ಮಾಡಿತ್ತು. ಈ ಮೂಲಕ ಪಾಕ್ ಉಗ್ರರ ನೆಲೆಯ ಮೇಲೆ ಭಾರತ ದಾಳಿ ಮಾಡಿದ್ದನ್ನು ಸಂಪೂರ್ಣವಾಗಿ ವಿರೋಧಿಸುವ ರೀತಿಯಲ್ಲಿ ಟ್ವೀಟ್ ಮೂಲಕ ಸಂದೇಶವನ್ನು ಸಾರಿತ್ತು. ಆದರೆ, ಇದರ ಬೆನ್ನಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಭಾರತದ ಸೇನಾ ಕಾರ್ಯಾಚರಣೆ ಆಪರೇಷನ್ ಸಿಂಧೂರ್ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಇಲ್ಲಿ ಟ್ವಿಟರ್ ಹ್ಯಾಂಡಲ್ ಮಾಡುವವರು ಯಾರು ಎಂಬ ಪ್ರಶ್ನೆ ಶುರುವಾಗಿದ್ದು, ಅವರ ಮೇಲೆ ಗಂಭೀರ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ.
ಕಾಂಗ್ರೆಸ್ ಟ್ವೀಟ್ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ ಅವರು, ಕಾಂಗ್ರೆಸ್‌ಟ್ವೀಟ್ ಹ್ಯಾಂಡಲ್‌ನಿಂದ 'ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ - ಮಹಾತ್ಮ ಗಾಂಧಿ' ಎಂದು ಟ್ವೀಟ್ ಮಾಡಲಾಗಿತ್ತು. ಅದು 'ಗಾಂಧಿ ಅವರ ಸಂದೇಶ. ಆದರೆ, ಪೋಸ್ಟ್ ಮಾಡಿರುವ ಟೈಮ್ ಸರಿಯಲ್ಲ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತೀಯ ಸೇನೆ ಆಪರೇಷನ್ ಸಿಂಧೂರ್ ದಾಳಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಪಹಲ್ಗಾಮ್ ದಾಳಿಯ ನಂತರದಲ್ಲಿ ಸರಕಾರದ ಯಾವುದೇ ನಿಲುವಿಗೆ ನಮ್ಮ ಬೆಂಬಲ ಇದೆ ಎಂದಿದ್ದೆವು. ಭಾರತೀಯ ಸೇನೆ ಭಯೋತ್ಪಾದಕರ ನೆಲೆಯನ್ನು ಅಷ್ಟೇ ಟಾರ್ಗೆಟ್ ಮಾಡಿದೆ. ಪಾಕಿಸ್ತಾನ ಈ ದಾಳಿಗೆ ತಿರುಗೇಟು ಕೊಟ್ಟರೆ ನಾವು ಎದುರಿಸಲು ಸಿದ್ದ ಎಂದು ಭಾರತೀಯ ಸೇನೆ ಕೊಟ್ಟಿದೆ. ರಾಷ್ಟ್ರದ ಐಕ್ಯತೆ ಬಂದಾಗ ಯಾವುದೇ ರಾಜಕೀಯ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಭಾರತೀಯ ಸೇನೆಯ ಜೊತೆಗೆ ಇದ್ದೇವೆ. ನಮ್ಮದು ಶಾಂತಿಯುತ ರಾಷ್ಟ್ರ. ಅಗತ್ಯ ಬಿದ್ದಾಗ ಯುದ್ಧ ಮಾಡಿದ್ದೆವು. ಇನ್ನು ಕಾಂಗ್ರೆಸ್ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದು ಸರಿಯಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ