ಆಪರೇಷನ್ ಸಂಕ್ರಾಂತಿ: ಮುಂದಿನ 48 ಗಂಟೇಲಿ ಮಹತ್ತರ ಬೆಳವಣಿಗೆ?

By Web DeskFirst Published Jan 14, 2019, 7:50 AM IST
Highlights

ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ಥಿ ವದಂತಿ | ಆದರೆ ಸರ್ಕಾರಕ್ಕೆ ಭದ್ರ ಎಂಬ ವಿಶ್ವಾಸ ಸಿಎಂಗೆ ಬಿಜೆಪಿಯಿಂದ ಆಪರೇಷನ್ ಇಲ್ಲವೆಂಬ ಸಷ್ಟನೆ | ಮುಂದಿನ 48 ಗಂಟೇಲಿ ಮಹತ್ತರ ಬೆಳವಣಿಗೆ ಆಗುತ್ತಾ?

ಬೆಂಗಳೂರು[ಜ.14]: ಸಂಕ್ರಾಂತಿ ಹಬ್ಬದ ನಂತರ ರಾಜ್ಯ ರಾಜಕಾರಣದಲ್ಲಿ ‘ಕ್ಷಿಪ್ರ ಕ್ರಾಂತಿ’ ನಡೆಯುವ ಬಗ್ಗೆ ಗುಸುಗುಸು ಹೆಚ್ಚಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳುವ ಸಾಧ್ಯತೆಯಿದೆ ಎಂಬ ವದಂತಿ ದಟ್ಟವಾಗಿ ಕೇಳಿಬರುತ್ತಿದೆ.

ಆಡಳಿತಾರೂಢ ಪಕ್ಷಗಳಲ್ಲಿನ ಅಸಮಾಧಾನ ತೀವ್ರವಾಗಿದ್ದು, ಅದರಿಂದ ಹಲವು ಶಾಸಕರು ಹೊರಬಂದು ಸರ್ಕಾರ ಉರುಳಿಸಲು ಮುಂದಾಗಬಹುದು ಎಂಬ ನಿರೀಕ್ಷೆ ಬಿಜೆಪಿ ಪಾಳೆಯದಲ್ಲಿದೆ. ಆದರೆ, ತಮ್ಮ ಸರ್ಕಾರ ಉರುಳುವ ಮಾತೇ ಇಲ್ಲ ಎಂಬ ವಿಶ್ವಾಸ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳೆಯದಲ್ಲಿ ಬಲವಾಗಿ ಕಂಡುಬರುತ್ತಿದೆ. ಇದೇ ರೀತಿ ಬಿಜೆಪಿ ಕೂಡ ತಾವು ಯಾವುದೇ ಅತೃಪ್ತರನ್ನು ಸಂಪರ್ಕಿಸಿಲ್ಲ. ಆಪರೇಷನ್ ನಡೆಸಿಲ್ಲ ಎಂದು ಹೇಳಿದೆ.

ಒಟ್ಟಿನಲ್ಲಿ ಸಂಕ್ರಾಂತಿ ಹಬ್ಬದ ನಂತರ ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ಪಾಳೆಯದಲ್ಲಿ ಬಿರುಸಿನ ಚಟುವಟಿಕೆಗಳಂತೂ ಆರಂಭವಾಗಿವೆ.ಇದು ಅಂತಿಮವಾಗಿ ಸರ್ಕಾರವನ್ನು ಉರುಳಿಸುತ್ತಾ ಅಥವಾ ಇಲ್ಲವಾ ಎಂಬ ಕುತೂಹಲ ಮೂಡಿದೆ. ಅತೃಪ್ತಗೊಂಡಿರುವ ಕಾಂಗ್ರೆಸ್ ಶಾಸಕರನ್ನು ‘ಆಪರೇಷನ್ ಕಮಲ’ದ ಮೂಲಕ ಸೆಳೆಯುವ ಪ್ರಯತ್ನಗಳು ಗುಪ್ತವಾಗಿ ಮುಂದುವರಿದಿದ್ದು, ಹತ್ತರಿಂದ ಹನ್ನೆರಡು ಮಂದಿ ಕಾಂಗ್ರೆಸ್ ಶಾಸಕರು ತಮ್ಮ ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗದೆ ದೂರ ಉಳಿದಿದ್ದಾರೆ ಎಂಬ ವದಂತಿ ಭಾನುವಾರ ದಟ್ಟವಾಗಿ ಹಬ್ಬಿತ್ತು. ಇದರಿಂದಾಗಿ ಕಾಂಗ್ರೆಸ್ ಪಾಳೆಯದಲ್ಲಿ ಆತಂಕದ ಛಾಯೆ ಕಾಣಿಸಿಕೊಂಡಿದೆ.

ಮೂಲಗಳ ಪ್ರಕಾರ, ಇವರೆಲ್ಲಾ ಮುಂಬೈ ನಲ್ಲಿ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದು, ಬಿಜೆಪಿ ಪ್ರಯತ್ನ ಸಫಲವಾದರೆ ಸದ್ಯದಲ್ಲೇ ಅಸಮಾಧಾನಿತ ಶಾಸಕರ ವಿಪ್ಲವ ಸ್ಫೋಟಿಸಲಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿಯ ಬೆಂಬಲ ಸಿಗುವ ವಿಶ್ವಾಸದೊಂದಿಗೆ ಕಾಂಗ್ರೆಸ್‌ನಲ್ಲಿಯ ಅಸಮಾಧಾನಿತ ಶಾಸಕರ ತಂಡ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನವನ್ನು ಗಂಭೀರವಾಗಿ ಮುಂದುವರೆಸಿದ್ದಂತೂ ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಇದೇ ತಿಂಗಳ ೧೯ರಂದು ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ ಭಾನುವಾರ ಬೆಳಗ್ಗೆ ಹೇಳಿ ನಂತರ ಮಧ್ಯಾಹ್ನದ ಹೊತ್ತಿಗೆ ಉಲ್ಟಾ ಹೊಡೆದರು. ತಾವು ಹೇಳಿದ್ದು ತಮಾಷೆಗೆ ಎಂದು ಸಮಜಾಯಿಷಿಯನ್ನೂ ನೀಡಿದರು. ಇದೇ ವೇಳೆ ಚಿಂಚೋಳಿಯ ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್ ಅವರೂ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಪ್ರಸ್ತುತ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಮುಂಬೈನಲ್ಲಿ ಬೀಡುಬಿಟ್ಟಿರುವ ಅಥಣಿ ಶಾಸಕ ಮಹೇಶ್ ಕುಮಟಹಳ್ಳಿ ಹಾಗೂ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಬಿ. ನಾಗೇಂದ್ರ ಅವರು ಕಾಂಗ್ರೆಸ್ ಶಾಸಕರನ್ನು ಕರೆಸಿಕೊಂಡು ಬಿಜೆಪಿಗೆ ಆಹ್ವಾನ ನೀಡಿ ಮಾತುಕತೆ ನಡೆಸಿದ್ದಾರೆ. ಆದರೆ, ಬಿಜೆಪಿಗೆ ಅಗತ್ಯವಿರುವಷ್ಟು ಸಂಖ್ಯೆಯ ಶಾಸಕರು ಅಂತಿಮವಾಗದ ಹಿನ್ನೆಲೆಯಲ್ಲಿ ಶಾಸಕರಾದ ಪ್ರತಾಪ್‌ಗೌಡ ಪಾಟೀಲ ಹಾಗೂ ಆನಂದ್‌ಸಿಂಗ್ ಮತ್ತೆ ಕಾಂಗ್ರೆಸ್ ಸಂಪರ್ಕಕ್ಕೆ ಸೇರಿಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಅತೃಪ್ತ ಶಾಸಕರನ್ನು ಸಮಾಧಾನಪಡಿಸುವ ಪ್ರಯತ್ನವೂ ಕಾಂಗ್ರೆಸ್‌ನಿಂದ ನಡೆಯುತ್ತಿದೆ.

ಇದಲ್ಲದೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಕೈತಪ್ಪಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಹಾಗೂ ಅವರೊಂದಿಗಿರುವ ಮೂರು ಶಾಸಕರನ್ನು ಸೆಳೆಯಲೂ ಸಹ ಪ್ರಯತ್ನಗಳು ನಡೆದಿವೆ. ನಾಲ್ಕೂ ಮಂದಿ ಶಾಸಕರು ಗೊಂದಲದಲ್ಲಿ ಮುಳುಗಿದ್ದಾರೆ. ಒಟ್ಟಾರೆ ೧೦-೧೨ ಮಂದಿ ಶಾಸಕರು ಕಾಂಗ್ರೆಸ್‌ನ ಸಂಪರ್ಕಕ್ಕೇ ಸಿಗುತ್ತಿಲ್ಲ. ಇಷ್ಟೂ ಮಂದಿ ಮುಂಬೈ ಕಡೆಗೆ ಹೋಗಿದ್ದು, ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ. ಹೀಗಾಗಿ ಸಂಕ್ರಾಂತಿ ವೇಳೆಯಲ್ಲಿ ಸರ್ಕಾರದಲ್ಲಿ ಕ್ರಾಂತಿ ನಡೆಯುವ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಆತಂಕ ಸೃಷ್ಟಿಯಾಗಿದೆ.

ಕಾಂಗ್ರೆಸ್ಸಿನ ಅತೃಪ್ತ ಶಾಸಕರ ಸೆಳೆಯುವ ಪ್ರಯತ್ನವನ್ನು ಸ್ವತಃ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕೂಡ ಖಚಿತಪಡಿಸಿದ್ದು, ಮೂರು ಮಂದಿ ಶಾಸಕರು ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ಅವರು ಯಾರು, ಯಾವ ಹೋಟೆಲ್‌ನಲ್ಲಿ ಇದ್ದಾರೆ ಎಂಬುದು ಗೊತ್ತಿದೆ. ಆಪರೇಷನ್ ಕಮಲದ ಸಂಪೂರ್ಣ ದಾಖಲೆ ಸದ್ಯದಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹೀಗಾಗಿ, ಸೋಮವಾರದ ನಂತರ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಬಿರುಸಿನ ಚಟುವಟಿಕೆಗಳು ನಡೆಯುವ ನಿರೀಕ್ಷೆಯಿದೆ. ಅಂತಿಮವಾಗಿ ಯಾರ ಕೈಮೇಲಾಗುತ್ತದೆ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

click me!