ತಪ್ಪಿತು ಮತ್ತೊಂದು ರೈಲು ದುರಂತ ತಪ್ಪಿಸಿದ ಯುವಕರು!

By Web DeskFirst Published Jan 13, 2019, 11:57 AM IST
Highlights

 ಮಿರಜ್‌-ಹುಬ್ಬಳ್ಳಿ ರೈಲು ದುರಂತ ತಪ್ಪಿಸಿದ ಚಾಲಕ| ಬೆಳಗಾವಿ- ಖಾನಾಪುರ ರೈಲು ಹಳಿ ಮೇಲೆ ಹಳೆ ಮರ ಪಲ್ಟಿ| ದೂರದಿಂದಲೇ ಮರ ಬಿದ್ದಿರುವುದನ್ನು ನೋಡಿ ರೈಲು ನಿಲ್ಲಿಸಿದ ಚಾಲಕ

ಖಾನಾಪುರ[ಜ.13]: ಇತ್ತೀಚೆಗೆ ಕುಮಟಾ ಹಾಗೂ ಧಾರವಾಡದಲ್ಲಿ 2 ರೈಲು ದುರಂತಗಳು ಸಮಯಪ್ರಜ್ಞೆಯಿಂದ ಸ್ವಲ್ಪದರಲ್ಲೇ ತಪ್ಪಿದ್ದವು. ಈಗ ಇಂಥದ್ದೇ ಪ್ರಸಂಗ ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ ನಡೆದಿದೆ.

ರೈಲು ಹಳಿಯ ಮೇಲೆ ಹಳೆ ಮರ ಬಿದ್ದಿರುವುದನ್ನು ದೂರದಿಂದ ಗಮನಿಸಿದ ರೈಲು ಚಾಲಕ ರೈಲಿನ ವೇಗವನ್ನು ಕಡಿಮೆಗೊಳಿಸಿ ರೈಲನ್ನು ನಿಲ್ಲಿಸುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾನೆ. ಮಾತ್ರವಲ್ಲ, ಸಂಭವಿಸಬಹುದಾಗಿದ್ದ ಭೀಕರ ರೈಲು ದುರಂತವನ್ನು ತಪ್ಪಿಸಿದ ಘಟನೆ ಶುಕ್ರವಾರ ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಬಳಿ ಬೆಳಗಾವಿ ರಸ್ತೆಯ ರೈಲ್ವೆ ಸೇತುವೆ ಬಳಿ ಸಂಭವಿಸಿದೆ.

ಬೆಳಗಾವಿಯಿಂದ ಖಾನಾಪುರ ಪಟ್ಟಣದ ರೈಲು ನಿಲ್ದಾಣದತ್ತ ಮಿರಜ್‌- ಹುಬ್ಬಳ್ಳಿ ಪ್ಯಾಸೆಂಜರ್‌ ರೈಲು ಪ್ರಯಾಣಿಸುತ್ತಿತ್ತು. ಈ ಸಂದರ್ಭದಲ್ಲಿ ರೈಲ್ವೆ ಹಳಿಗಳ ಮೇಲೆ ಅಡ್ಡಲಾಗಿ ಹಳೆಯ ಮರವೊಂದು ಬಿದ್ದಿತ್ತು. ರೈಲು ಚಾಲಕ ದೂರದಿಂದಲೇ ಗಮನಿಸಿ ತುರ್ತು ಬ್ರೇಕ್‌ ಹಾಕಿ ರೈಲಿನ ವೇಗ ಕಡಿಮೆಗೊಳಿಸಿ, ರೈಲು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾನೆ. ನಂತರ ವಿಷಯವನ್ನು ಖಾನಾಪುರ ರೈಲು ನಿಲ್ದಾಣಕ್ಕೆ ಮುಟ್ಟಿಸಿದ್ದಾರೆ. ಸುದ್ದಿ ತಿಳಿದ ರೈಲ್ವೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಮರಬಿದ್ದ ಸ್ಥಳಕ್ಕೆ ತೆರಳಿ ಮರವನ್ನು ಹಳಿಗಳಿಂದ ತೆರವುಗೊಳಿಸಿ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ರೈಲಿನಲ್ಲಿ ನೂರಾರು ಜನ ಪ್ರಯಾಣಿಸುತ್ತಿದ್ದರು.

ಈ ಘಟನೆಯಿಂದಾಗಿ ಬೆಳಗಾವಿ- ಖಾನಾಪುರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಎಲ್ಲ ರೈಲುಗಳ ಸಂಚಾರದಲ್ಲಿ ಸುಮಾರು ಅರ್ಧ ಗಂಟೆ ವಿಳಂಬವಾಗಿದ್ದು, ಘಟನೆಯಿಂದ ಯಾವುದೇ ಹಾನಿಯಾಗಿಲ್ಲ ಎಂದು ರೈಲ್ವೆ ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ.

click me!