
ಬೆಂಗಳೂರು : ಕಳೆದೊಂದು ವಾರದಿಂದ ದಿನೇ ದಿನೇ ರಂಗೇರಿ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದ ಆಪರೇಷನ್ ಸಂ‘ಕ್ರಾಂತಿ’ಯ ಭಾಗವಾಗಿ ಶನಿವಾರ ಮಹತ್ವದ ವಿದ್ಯಮಾನಗಳು ಘಟಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಕಾಂಗ್ರೆಸ್‌ನಿಂದ ಬೇರ್ಪಟ್ಟು ಬಿಜೆಪಿಯತ್ತ ವಾಲಿದ್ದಾರೆ ಎನ್ನಲಾಗಿರುವ ನಾಲ್ವರು ಅತೃಪ್ತ ಶಾಸಕರ ರಾಜೀನಾಮೆ ಸಾಧ್ಯತೆಯೂ ಸೇರಿ ಅನೂಹ್ಯ ಬೆಳವಣಿಗೆಗಳಾಗುವ ಸಾಧ್ಯತೆ ಶನಿವಾರದ ಮಟ್ಟಿಗೆ ತಣ್ಣಗಾಗಿದೆ.
ಈ ಮಧ್ಯೆ, ದೆಹಲಿ ಸಮೀಪದ ತಾರಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿ ಶಾಸಕರು ನಿರೀಕ್ಷೆಯಂತೆ ರಾಜ್ಯಕ್ಕೆ ವಾಪಸಾಗಿದ್ದು, ಸೋಮವಾರದಿಂದ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿರ್ದೇಶನದಂತೆ ರಾಜ್ಯದಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಮೂಲಕ ರೆಸಾರ್ಟ್‌ನಲ್ಲಿ ವಾಸವಿದ್ದುದಕ್ಕೆ ತಮ್ಮನ್ನು ಟೀಕಿಸಿದ್ದ ಕಾಂಗ್ರೆಸ್-ಜೆಡಿಎಸ್‌ಗೆ ಟಾಂಗ್ ನೀಡಲು ಮುಂದಾಗಿದ್ದಾರೆ.
ಇದೇ ವೇಳೆ, ಶನಿವಾರ ಫ್ಯಾಕ್ಸ್ ಮೂಲಕ ಸ್ಪೀಕರ್‌ಗೆ ರಾಜೀನಾಮೆ ಪತ್ರ ರವಾನಿಸಬಹುದು ಎನ್ನಲಾಗಿದ್ದ ರಮೇಶ್ ಜಾರಕಿಹೊಳಿ ಸೇರಿದಂತೆ ನಾಲ್ವರು ಅತೃಪ್ತ ಶಾಸಕರ ನಡೆ ನಿಗೂಢವಾಗಿದ್ದು, ಸೋಮವಾರದ ನಂತರ ಯಾವಾಗ ಬೇಕಾದರೂ ರಾಜೀನಾಮೆ ಪರ್ವ ಶುರುವಾಗಬಹುದು ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಇದೆ.
ಬಿಜೆಪಿ ಶಾಸಕರು ದೆಹಲಿಯಿಂದ ಮರಳುತ್ತಿದ್ದಂತೆ, ಅತ್ತ ಕಾಂಗ್ರೆಸ್ ಕೂಡ ತನ್ನ ಶಾಸಕರನ್ನು ರೆಸಾರ್ಟ್ ವಾಸದಿಂದ ‘ಬಿಡುಗಡೆ’ ಮಾಡಲು ನಿರ್ಧರಿಸಿದೆ. ಅತೃಪ್ತ ಶಾಸಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಬಹಿರಂಗ ನಿರ್ಧಾರದ ಜೊತೆಗೆ ಬಿಜೆಪಿಯಿಂದ ರಿವರ್ಸ್ ಆಪರೇಷನ್ ಮಾಡಲು ರಹಸ್ಯ ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ. ಒಟ್ಟಾರೆ ಯಾಗಿ ಆಪರೇಷನ್ ಸಂ‘ಕ್ರಾಂತಿ’ ಧಾರಾವಾಹಿ ಗುಪ್ತ್ ಗುಪ್ತ್ ಆಗಿ ಮುಂದುವರಿದಿದೆ.
ನಡೆಯದ 19 ರ ಸಂ‘ಕ್ರಾಂತಿ’: ಜ.19ರಂದು ಕಾಂಗ್ರೆಸ್ಸಿನ 19 ಅತೃಪ್ತ ಶಾಸಕರು ರಾಜೀನಾಮೆ ನೀಡುವ ಮೂಲಕ ಸಂ‘ಕ್ರಾಂತಿ’ ನಡೆಯಬಹುದು ಎಂದು ಈ ಹಿಂದೆ ನಿರೀಕ್ಷಿಸಲಾಗಿತ್ತು. ಆದರೆ, ಅತೃಪ್ತರ ಸಂಖ್ಯೆ ನಿರೀಕ್ಷಿಸಿದ ಮಟ್ಟದಲ್ಲಿ ಏರಿಕೆ ಕಂಡಿರಲಿಲ್ಲ. ಬದಲಾದ ಸನ್ನಿವೇಶದಲ್ಲಿ ಶುಕ್ರವಾರದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದ ರಮೇಶ್ ಜಾರಕಿಹೊಳಿ ಸೇರಿ ನಾಲ್ವರು ಅತೃಪ್ತ ಶಾಸಕರ ರಾಜೀನಾಮೆ ಪರ್ವ ಶನಿವಾರ ಆರಂಭವಾಗಬಹುದು ಎಂಬ ಗುಮಾನಿಯೂ ಇತ್ತು.
ತಮ್ಮ ಭೇಟಿಗೆ ವಿಧಾನಸಭಾ ಸ್ಪೀಕರ್ ಅವಕಾಶ ನೀಡದಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಫ್ಯಾಕ್ಸ್ ಅಥವಾ ಇ-ಮೇಲ್ ಮೂಲಕ ರಾಜೀನಾಮೆ ಪತ್ರ ರವಾನಿಸಬಹುದು. ರಾಜೀನಾಮೆ ಪರ್ವ ಆರಂಭವಾದರೆ ಸರ್ಕಾರ ಅಸ್ಥಿರಗೊಂಡಿದೆ ಎಂದು ರಾಜ್ಯಪಾಲರನ್ನು ಭೇಟಿಯಾಗಿ ಬಿಂಬಿಸಲು ಬಿಜೆಪಿ ಸಿದ್ಧತೆ ನಡೆಸಿತ್ತು. ಈ ಮೂಲಕ ರಾಜ್ಯಪಾಲರ ಮಧ್ಯಪ್ರವೇಶಕ್ಕೆ ವೇದಿಕೆ ಸಜ್ಜುಗೊಳಿಸುವ ಪ್ಲಾನ್ ‘ಬಿ’ ಯೋಜನೆ ಹೊಂದಿತ್ತೆಂದು ಹೇಳಲಾಗಿತ್ತು. ಆದರೆ, ಪ್ಲಾನ್ ‘ಬಿ’ ಯೋಜನೆಯೂ ಕಾರ್ಯಗತ ವಾಗದಿರುವುದರಿಂದ ಮುಂದಿನ ಬೆಳವಣಿಗೆ ಏನೆಂಬುದು ಕುತೂಹಲಕ್ಕೆ ಕಾರಣವಾಗಿದೆ.
ಬಿಎಸ್‌ವೈ ‘ಪರಾಮರ್ಶೆ’ ಸಭೆ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಶನಿವಾರ ಪಕ್ಷದ ಕೆಲ ಹಿರಿಯ ಶಾಸಕರು, ಮುಖಂಡ ರೊಂದಿಗೆ ಸಭೆ ನಡೆಸಿದರು. ಬಿಜೆಪಿ ಶಾಸಕರು ವಾಪಸಾದ ನಂತರ ತಮ್ಮ ನಿವಾಸದಲ್ಲಿ ಸಭೆ ನಡೆಸಿದ ಬಿಎಸ್‌ವೈ ಕಾಂಗ್ರೆಸ್‌ನ ಅತೃಪ್ತ ಶಾಸಕರು ರಾಜೀನಾಮೆ ನೀಡುವುದಕ್ಕೆ ಏನು ಅಡಚಣೆ ಆಗಿರಬಹುದೆಂಬ ಬಗ್ಗೆ ಚರ್ಚೆ ನಡೆಸಿದರು. ಬಿಜೆಪಿ ತಂತ್ರಗಾರಿಕೆ, ಕಾಂಗ್ರೆಸ್ ನ ಸಂಭಾವ್ಯ ಪ್ರತಿತಂತ್ರಗಳ ಕುರಿತು ಪಕ್ಷದ ಶಾಸಕರು ಹಾಗೂ ಮುಖಂಡರಿಂದ ಮಾಹಿತಿ ಸಂಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ