Deepavali 2022; ದಿನಕ್ಕೆ ಎರಡು ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶ

By Gowthami K  |  First Published Oct 22, 2022, 12:55 PM IST

ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಸಮಯ ಫಿಕ್ಸ್ ಮಾಡಿದೆ.  ದಿನಕ್ಕೆ ಎರಡು ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ.


ಬೆಂಗಳೂರು (ಅ.22): ದೀಪಾವಳಿ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಅ. 24 ರಿಂದ ಅ. 26ರವರೆಗೆ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಬ್ಬಕ್ಕೆ ಪಟಾಕಿ ಸಿಡಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ( Pollution Control Board) ಸಮಯ ಫಿಕ್ಸ್ ಮಾಡಿದೆ.  ದಿನಕ್ಕೆ ಎರಡು ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಬೇಕು. ಸುಪ್ರೀಂ ಕೋರ್ಟ್ ನಿಯಮಾವಳಿ ಪಾಲಿಸಬೇಕು. ಪಟಾಕಿ ಮಾರುವವರು ತ್ಯಾಜ್ಯ ವಿಲೇವಾರಿ ಜವಾಬ್ದಾರಿಯನ್ನೂ ಹೊರಬೇಕು. 25 ಡೆಸಿಬಿಲ್‌ಗಿಂತ ಕಡಿಮೆ ಇರುವ ಪಟಾಕಿಗಳನ್ನು ಬಳಸಬೇಕು ಎಂದು ಸೂಚನೆ ನೀಡಲಾಗಿದೆ.

ಕಾಯಂ ಅಂಗಡಿ, ಕಾಂಪ್ಲೆಕ್ಸಲ್ಲಿ ಪಟಾಕಿ ಮಾರಾಟಕ್ಕೆ ನಿಷೇಧ
ಬೆಂಗಳೂರು: ಪೊಲೀಸರು ಮತ್ತು ಅಗ್ನಿಶಾಮಕ ದಳದವರು ತಮ್ಮ ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಿರಿದಾದ, ಜನನಿಬಿಡ ಮತ್ತು ವಾಣಿಜ್ಯ ಸಂಕೀರ್ಣಗಳ ಸ್ಥಳಗಳಲ್ಲಿ ಯಾವುದೇ ಕಾಯಂ ಅಂಗಡಿ ಅಥವಾ ಕಟ್ಟಡಗಳಲ್ಲಿ ಚಿಲ್ಲರೆ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲು, ಪಟಾಕಿಗಳ ದಾಸ್ತಾನು ಹಾಗೂ ಮಾರಾಟಕ್ಕೆ ಅನುಮತಿ ನೀಡಬಾರದು ಎಂದು ಪೊಲೀಸ್‌ ಮಹಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

Tap to resize

Latest Videos

ಪಟಾಕಿಗಳನ್ನು ಸರ್ಕಾರದ ಅಧಿಕಾರಿಗಳು ನಿಗದಿಪಡಿಸಿದ ತೆರೆದ ಪ್ರದೇಶಗಳಲ್ಲಿ, ಸ್ಥಳೀಯ ಆಡಳಿತ ಅನುಮತಿ ನೀಡಿರುವ ತಾತ್ಕಾಲಿಕ ಮಳಿಗೆಗಳಲ್ಲಿ ಮಾತ್ರ ದಾಸ್ತಾನು ಮಾಡಲು ಹಾಗೂ ಮಾರಾಟ ಮಾಡಲು ಅನುಮತಿ ನೀಡಲಾಗಿದೆ.

ತಾತ್ಕಾಲಿಕ ಪಟಾಕಿ ಸಂಗ್ರಹಣೆ ಮಳಿಗೆಯಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು. ಮಳಿಗೆ ನಿರ್ಮಾಣಕ್ಕೆ ಉಪಯೋಗಿಸುವ ಸಾಮಗ್ರಿಗಳು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ರೀತಿಯದ್ದಾಗಿರಬಾರದು. ಸಾಧ್ಯವಾದಷ್ಟೂಬೆಂಕಿಯನ್ನು ತಡೆಗಟ್ಟುವ ಸಾಮಗ್ರಿಗಳನ್ನು ನಿರ್ಮಾಣಕ್ಕೆ ಉಪಯೋಗಿಸಬೇಕು. ಪ್ರತಿಯೊಂದು ಮಳಿಗೆಗೆ ಮುಂದಿನಿಂದ ಹಾಗೂ ಹಿಂದಿನಿಂದ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ ಇರಬೇಕು. ಪ್ರತಿ ಮಳಿಗೆ 10/10 ಚದರ ಅಡಿಗೆ ಸೀಮಿತ ಆಗಿರಬೇಕು. ಪ್ರತಿ ಮಳಿಗೆಯಲ್ಲಿ 9 ಲೀಟರ್‌ ಸಾಮರ್ಥ್ಯದ ವಾಟರ್‌ ಪ್ರೆಷರ್‌ ಮಾದರಿ ಅಗ್ನಿನಂದಕ ಹಾಗೂ ಎರಡು ಬಕೆಟ್‌ಗಳಲ್ಲಿ ನೀರನ್ನು ಇಟ್ಟಿರಬೇಕು. ಹಗಲು ಮಾತ್ರ ಪಟಾಕಿ ಮಾರಾಟ ವಹಿವಾಟು ನಡೆಸಬೇಕು. ರಾತ್ರಿ ಮಳಿಗೆಯಲ್ಲಿ ಯಾರೂ ಮಲಗಬಾರದು ಮುಂತಾದ ಷರತ್ತುಗಳನ್ನು ಹಾಕಲಾಗಿದೆ. ಅಗ್ನಿಶಾಮಕ ದಳದ ಎಲ್ಲ ವ್ಯವಸ್ಥೆ ಮತ್ತು ಸಿಬ್ಬಂದಿ ತುರ್ತು ಸೇವೆಗೆ ಸದಾ ಸಿದ್ಧರಾಗಿರಬೇಕು ಎಂದು ಸೂಚಿಸಲಾಗಿದೆ.

ಹಸಿರು ಪಟಾಕಿ ಮಾತ್ರ ಬಳಸಿ
ಬಾಗಲಕೋಟೆ: ಜಿಲ್ಲೆಯಾದ್ಯಂತ ಅಕ್ಟೋಬರ 24ರಿಂದ 26ವರೆಗೆ ಆಚರಿಸಲ್ಪಡುವ ಬೆಳಕಿನ ಹಬ್ಬ ದೀಪಾವಳಿಯಲ್ಲಿ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ಬಗೆಯ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ಸರ್ವೋಚ್ಛ ನ್ಯಾಯಾಲಯ ನಿಷೇಧಿಸಿದೆ ಎಂದು ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.

 

 Diwali 2022: ದೀಪಾವಳಿ ಲಕ್ಷ್ಮಿ ಪೂಜೆಯಲ್ಲಿ ಅವಶ್ಯ ಬಳಸಿ ಈ ವಸ್ತು

ಹಸಿರು ಪಟಾಕಿ ಕುರಿತ ಮಾಹಿತಿ ಪರಿಸರ ಮಾಲಿನ್ಯ ಮಂಡಳಿಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ನ್ಯಾಯಾಲಯದ ಆದೇಶದನ್ವಯ ರಾತ್ರಿ 8ರಿಂದ 10ವರೆಗೆ ಪಟಾಕಿ ಸಿಡಿಸಲು ಅವಕಾಶ ನೀಡಿದೆ. ಇದಲ್ಲದೇ ಹಸಿರು ಪಟಾಕಿಗಳನ್ನು ಬಿಟ್ಟು ಯಾವುದೇ ಇತರೆ ಪಟಾಕಿ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿದೆ. 125 ಡೆಸಿಬಲ್‌ಗೂ ಮೇಲ್ಪಟ್ಟಪಟಾಕಿಗಳ ಸಿಡಿತವನ್ನು ನಿಷೇಧಿಸಿದೆ. ಪಟಾಕಿ ಮಳಿಗೆಗಳನ್ನು ವಾಸಸ್ಥಳದಲ್ಲಾಗಲಿ, ವಾಣಿಜ್ಯ ಪ್ರದೇಶದಲ್ಲಾಗಲೀ ಕಿರಿದಾದ ಸ್ಥಳಗಳಲ್ಲಿ ತೆರೆಯ ಕೂಡದು.

ದೀಪಾವಳಿ 2022: ಮನೆಯಲ್ಲಿ ಕನಿಷ್ಠ ಇಷ್ಟು ದೀಪ ಹಚ್ಚಬೇಕು.. ಎಷ್ಟು?

ಹಬ್ಬದ ಆಚರಣೆಯಲ್ಲಿ ಬೆಳಕೆ ಪ್ರಧಾನವಾಗಿರಲಿ. ಆಸ್ಪತ್ರೆಗಳು-ವೃದ್ಧಾಶ್ರಮಗಳ ಹತ್ತಿರ ಪಟಾಕಿ ಹಚ್ಚಬಾರದು. ಗಿಡ-ಮರಗಳು ಮತ್ತು ಪ್ರಾಣಿ ಪಕ್ಷಿಗಳಿಗೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ಪಟಾಕಿಗಳು ಹೊರಸೂಸುವ ವಿಷಯುಕ್ತ ಅನಿಲವು ಆರೋಗ್ಯ ಸಂಬಂಧಿತ ಕಾಯಿಲೆಗಳು ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣ ಆಗುವುದರಿಂದ ಪಟಾಕಿ ಸಿಡಿತವನ್ನು ಕಡಿಮೆಗೊಳಿಸಬೇಕು. ಪಟಾಕಿಗಳ ಸಿಡಿತದ ನಂತರ ಉತ್ಪತ್ತಿಯಾಗುವ ಘನ ತ್ಯಾಜ್ಯಗಳ ಹೆಚ್ಚಳದಿಂದ ನಗರದ ಶುಚಿತ್ವದ ಸಮಸ್ಯೆ ಉಲ್ಬಣವಾಗುವುದರಿಂದ ಪಟಾಕಿಗಳ ಸಿಡಿತವನ್ನು ಕಡಿಮೆಗೊಳಿಸಲು ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.

click me!