ಕರ್ನಾಟಕದಲ್ಲಿ ಈ ಬಾರಿ ದೀಪಾವಳಿಗೆ ಹಸಿರು ಪಟಾಕಿ ಮಾತ್ರ ಮಾರಾಟಕ್ಕೆ ಅವಕಾಶ

By Kannadaprabha News  |  First Published Oct 19, 2022, 12:30 AM IST

ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಹಸಿರು ಪಟಾಕಿಯ ವ್ಯಾಪಾರ ವಹಿವಾಟು ಮಾತ್ರ ನಡೆಸಲು ಅವಕಾಶ ನೀಡಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 


ಬೆಂಗಳೂರು(ಅ.19):  ಮುಂದಿನ ವಾರ ನಡೆಯಲಿರುವ ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಹಸಿರು ಪಟಾಕಿಯ ವ್ಯಾಪಾರ ವಹಿವಾಟು ಮಾತ್ರ ನಡೆಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅವಕಾಶ ನೀಡಿದೆ. ಒಂದು ವೇಳೆ ಹಸಿರು ಪಟಾಕಿ ಹೊರತು ಪಡಿಸಿ ಅನ್ಯ ಪಟಾಕಿಗಳ ವ್ಯಾಪಾರ ವಹಿವಾಟು ನಡೆಸುವುದು ಕಂಡು ಬಂದರೆ ಅವುಗಳನ್ನು ವಶಕ್ಕೆ ತೆಗೆದುಕೊಳ್ಳುವುದು ಎಂಬುದೂ ಸೇರಿದಂತೆ ಹಲವು ಸೂಚನೆಗಳನ್ನು ಜಿಲ್ಲಾಧಿಕಾರಿಗಳು, ಪೊಲೀಸ್‌ ಇಲಾಖೆ, ಅಗ್ನಿಶಾಮಕ ದಳ, ಶಿಕ್ಷಣ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನೀಡಿದೆ.

ದೀಪಾವಳಿ ಹಬ್ಬದ (ಅ.24ರಿಂದ ಅ.26) ಸಂದರ್ಭದಲ್ಲಿ ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಹೊಡೆಯುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ದೀಪಾವಳಿ ಹಬ್ಬಕ್ಕೂ ಮುಂಚೆ ಹಾಗೂ ನಂತರ ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಎಷ್ಟೆಷ್ಟುವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯ ಆಗಿದೆ ಎನ್ನುವುದನ್ನು ಪತ್ತೆ ಮಾಡಲು ಮಾಪಕ ಅಳವಡಿಸುವಂತೆ ಸೂಚಿಸಲಾಗಿದೆ.

Tap to resize

Latest Videos

ಬೆಲೆ ಏರಿಕೆಯಿಂದ ಕುಗ್ಗಿದ ಹಬ್ಬದ ಸಡಗರ : ಹಸಿರು ಪಟಾಕಿಗಳನ್ನೇ ಬಳಸಲು ತಾಕೀತು

ಮಕ್ಕಳಿಗೆ ಪಟಾಕಿ ಕುರಿತು ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆಯಿಂದ ವಿಶೇಷ ಕಾರ್ಯಕ್ರಮ ಏರ್ಪಡಿಸಬೇಕು. ಪೊಲೀಸ್‌ ಇಲಾಖೆ ಪಟಾಕಿ ಸ್ಟಾಲ್‌ಗಳ ಮೇಲೆ ನಿಗಾ ಇಡಬೇಕು. ಪಟಾಕಿ ತ್ಯಾಜ್ಯವನ್ನ ಹೊರಹಾಕಲು ಘನತ್ಯಾಜ್ಯ ವಾಹನಗಳನ್ನು ಸ್ಥಳೀಯ ಸಂಸ್ಥೆಗಳು ನಿಯೋಜಿಸಬೇಕು. ಪಟಾಕಿಗಳಿಂದಾಗುವ ಸಂಭಾವ್ಯ ಹಾನಿಯನ್ನ ತಪ್ಪಿಸಲು ಅಗ್ನಿಶಾಮಕ ಇಲಾಖೆ ಸಿದ್ಧವಾಗಿರಬೇಕು. ವಾಯುಮಾಲಿನ್ಯ ಹೆಚ್ಚಾಗದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
 

click me!