ರೈತರಿಂದ 6000 ಕ್ವಿಂಟಲ್ ಬಿತ್ತನೆ ಬೀಜ, 10000 ಕ್ವಿಂಟಲ್ ಗೊಬ್ಬರ ಖರೀದಿ, ಬಳಕೆಯಾಗಿದ್ದು ತೀರಾ ಕಮ್ಮಿ, ಈವರೆಗೆ ಶೇ.71ರಷ್ಟು ಮಳೆ ಕೊರತೆ, ರಾಜ್ಯಾದ್ಯಂತ ಶೇ.10ರಷ್ಟು ಮಾತ್ರ ಬಿತ್ತನೆ
ಬಸವರಾಜ ಹಿರೇಮಠ
ಧಾರವಾಡ(ಜೂ26): ಪ್ರಸಕ್ತ ವರ್ಷ ಅಕ್ಷರಶಃ ಮುಂಗಾರು ಮಳೆ ರಾಜ್ಯದ ಕೃಷಿ ಆರ್ಥಿಕತೆಗೆ ಹೊಡೆತ ನೀಡಿದೆ. ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಸಾವಿರಾರು ರುಪಾಯಿ ವೆಚ್ಚ ಮಾಡಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಹೊತ್ತು ತಂದಿದ್ದ ರೈತರು ಮಳೆ ಕೊರತೆಯಿಂದ ಕಂಗಾಲಾಗಿದ್ದಾರೆ. ಸಾವಿರಾರು ಕ್ವಿಂಟಲ್ ಬೀಜ ಹಾಗೂ ರಸಗೊಬ್ಬರ ರೈತರ ಮನೆಗಳಲ್ಲಿ ಮೂಲೆ ಸೇರಿವೆ.
ಶೇ.10ರಷ್ಟು ಬಿತ್ತನೆ:
ಕೃಷಿ ಇಲಾಖೆ ಅಂಕಿ ಅಂಶಗಳ ಪ್ರಕಾರ ಈವರೆಗೆ, ಶೇ.71ರಷ್ಟುಮಳೆ ಕೊರತೆಯಿಂದ ಶೇ.10ರಷ್ಟುಮಾತ್ರ ಬಿತ್ತನೆ ಆಗಿದೆ. ಸುಮಾರು ಆರು ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಹಾಗೂ ಹತ್ತು ಸಾವಿರ ಕ್ವಿಂಟಲ್ ರಸಗೊಬ್ಬರ ಖರೀದಿ ಆಗಿದೆ. ಈ ಪೈಕಿ ಬಳಕೆ ಆಗಿದ್ದು ಮಾತ್ರ ತೀರಾ ಕಡಿಮೆ. ಮಳೆಯಾಗದ ಕಾರಣ ರಸಗೊಬ್ಬರದ ಪ್ಯಾಕೆಟ್‌ಗಳು ಅನಾಥವಾಗಿದ್ದು, ರೈತರಿಗೆ ದಿಕ್ಕು ತೋಚದಾಗಿದೆ.
ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಭಾರಿ ಮಳೆ: ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
36%ರಷ್ಟು ಮಳೆ ಕೊರತೆ:
ರಾಜ್ಯದಲ್ಲಿ ಜನವರಿಯಿಂದ ಜುಲೈ 20ರವರೆಗೆ 185.5 ಮಿ.ಮೀ.ಆಗಬೇಕಿತ್ತು. ಸದ್ಯ ಕೇವಲ 118.2 ಆಗಿದೆ. ಹೀಗಾಗಿ ಶೇ.36ರಷ್ಟುಕೊರತೆ ಉಂಟಾಗಿದೆ. ಹಾಗೆಯೇ 82.5 ಲಕ್ಷ ಹೆಕ್ಟೇರ್ ಪೈಕಿ ಸುಮಾರು 8 ಲಕ್ಷ ಹೆಕ್ಟೇರ್‌ನಲ್ಲಿ, ಶೇ.9.5 ಪ್ರಮಾಣದ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.
ಜೂನ್ ಕೊನೆಯ ವಾರ ಬಂದರೂ ರಾಜ್ಯದ ಎಲ್ಲೆಡೆ ಮಳೆಯಾಗಿಲ್ಲ. ಕೆಲವೆಡೆ ಮಾತ್ರ ಅಲ್ಲಲ್ಲಿ ಮಳೆಯಾಗಿದೆ. ಜೂನ್ ಮೊದಲ ವಾರದಲ್ಲಿ ಬಿತ್ತನೆಯಾಗಿ ಜುಲೈ ತಿಂಗಳಲ್ಲಿ ಹಸಿರು ಸೀರೆ ಉಡುತ್ತಿದ್ದ ಭೂಮಿ ತಾಯಿ ಬರದ ಛಾಯೆಯಲ್ಲಿ ಬಣಗುಡುವ ಭಯದಲ್ಲಿದ್ದಾಳೆ. ಏಪ್ರಿಲ್ ತಿಂಗಳಲ್ಲಿ ಆದ ಮಳೆಗೆ ಜಿಲ್ಲೆಯ ಎರಡೂವರೆ ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶ ಪೈಕಿ ಬರೀ ಶೇ.10ರಷ್ಟಾಗಿದೆ. ಈ ಹತ್ತರಷ್ಟುಬಿತ್ತನೆ ಪ್ರದೇಶಕ್ಕೂ ತೇವಾಂಶ ಕೊರತೆಯಿಂದ ರೈತರು ಬಳಲುತ್ತಿದ್ದಾರೆ. ಈಗಾಗಲೇ ಬಿತ್ತನೆ ಬೀಜ ಹಾಗೂ ಶ್ರಮ ಕಳೆದು ಹೋಗಿದೆ. ಮಳೆ ಇಲ್ಲದೇ ರಸಗೊಬ್ಬರ ಭೂಮಿಗೆ ಹಾಕಿ ಮತ್ತಷ್ಟುನಷ್ಟಕ್ಕೆ ಒಳಗಾಗುವುದು ಬೇಡ ಎಂದು ರೈತರು ತೀರ್ಮಾನಿಸಿದ್ದಾರೆ.
ಮಳೆಯಾದರೂ ಇನ್ಮುಂದೆ ಬಿತ್ತನೆ ಮಾಡಿಯೂ ಪ್ರಯೋಜನವಿಲ್ಲ ಎಂದು ಕೆಲವರು ಯೋಚಿಸುತ್ತಿದ್ದಾರೆ. ಖರೀದಿಸಿರುವ ಗೊಬ್ಬರ ಹಾಗೂ ಕೀಟನಾಶಕಗಳನ್ನು ರಕ್ಷಿಸಿ ಇಟ್ಟರೆ ಆಯಿತು. ಹಿಂಗಾರಿಗಾದರೂ ಬಂದೀತು ಎಂಬ ಲೆಕ್ಕಾಚಾರ ಅವರದು.
ಹೆಸರು, ಸೋಯಾ ಬೀಜ ಮನೆಯಲ್ಲೇ ಬಿದ್ದಿದೆ
ಪ್ರತಿ ಬಾರಿ ಮುಂಗಾರು ಹಂಗಾಮಿನಲ್ಲಿ ಬೀಜ ಹಾಗೂ ಗೊಬ್ಬರ ಕೊರತೆ ಆಗಲಿದೆ ಎಂದು .40 ಸಾವಿರ ಮೊತ್ತದ ಹೆಸರು, ಸೋಯಾ ಬೀಜ ಮತ್ತು ಗೊಬ್ಬರ ಖರೀದಿ ಮಾಡಿದ್ದೆ. ಈಗ ಮಳೆ ಆಗದೇ ಬೀಜ, ರಸಗೊಬ್ಬರ ಮನೆಯಲ್ಲಿಟ್ಟುಕೊಂಡು ಕೂತಿದ್ದೇನೆ. ಬ್ಯಾಂಕ್‌ನಲ್ಲಿ ಸಾಲ ಮತ್ತು ಬಡ್ಡಿ ಏರುತ್ತಿದೆ. ಏನೂ ತೋಚುತ್ತಿಲ್ಲ ಅಂತ ಕರಡಿಗುಡ್ಡ ರೈತ ಫಕ್ಕೀರಪ್ಪ ತಿಳಿಸಿದ್ದಾರೆ.