ಸಾರಿಗೆ ನಿಗಮಗಳಿಗೆ ಉಚಿತ ಪ್ರಯಾಣದ ‘ಶಕ್ತಿ’..!

Published : Jun 26, 2023, 01:00 AM IST
ಸಾರಿಗೆ ನಿಗಮಗಳಿಗೆ ಉಚಿತ ಪ್ರಯಾಣದ ‘ಶಕ್ತಿ’..!

ಸಾರಾಂಶ

ಶಕ್ತಿ ಯೋಜನೆ ಜಾರಿ ನಂತರ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದರ ಜತೆಗೆ ಆದಾಯದ ಪ್ರಮಾಣ ಶೇ.25 ಹೆಚ್ಚಳವಾಗಿ ಆ ಮೂಲಕ ನಿಗಮಗಳ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಹಂತಕ್ಕೆ ತಲುಪುತ್ತಿದೆ.  

ಗಿರೀಶ್‌ ಗರಗ

ಬೆಂಗಳೂರು(ಜೂ26):  ಆರ್ಥಿಕ ನಷ್ಟದಲ್ಲಿ ಮುಳುಗುತ್ತಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಿಗೆ ಶಕ್ತಿ ಯೋಜನೆಯಿಂದ ಕೊಂಚ ಚೇತರಿಕೆ ಕಾಣುವ ಲಕ್ಷಣಗಳು ಗೋಚರಿಸುತ್ತಿದೆ. ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರ ಜತೆಗೆ ಆದಾಯದಲ್ಲೂ ಭಾರಿ ಏರಿಕೆ ಕಂಡುಬಂದಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ ಹೇಳುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳು 4 ಸಾವಿರ ಕೋಟಿ ರು. ಆರ್ಥಿಕ ನಷ್ಟದಲ್ಲಿವೆ. ಕಳೆದ ನಾಲ್ಕು ವರ್ಷಗಳಿಂದ ನಷ್ಟ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಅಲ್ಲದೆ, ದಿನಗಳೆದಂತೆ ನಿಗಮಗಳಲ್ಲಿ ವೆಚ್ಚ ಹೆಚ್ಚುತ್ತಿದ್ದು, ಆದಾಯ ಕುಸಿಯುತ್ತಿತ್ತು. ಆದರೀಗ, ಶಕ್ತಿ ಯೋಜನೆ ಜಾರಿ ನಂತರ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದರ ಜತೆಗೆ ಆದಾಯದ ಪ್ರಮಾಣ ಶೇ.25 ಹೆಚ್ಚಳವಾಗಿ ಆ ಮೂಲಕ ನಿಗಮಗಳ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಹಂತಕ್ಕೆ ತಲುಪುತ್ತಿದೆ.

ಶಕ್ತಿ ಯೋಜನೆ ಎಫೆಕ್ಟ್: ಎರಡನೇ ವಿಕೇಂಡ್‌ನಲ್ಲೂ ಮಹಿಳೆಯರ ಪ್ರಯಾಣ ಜೋರು!

ಮಾಸಿಕ 300 ಕೋಟಿ ರು. ಹೆಚ್ಚಳ?:

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಆದಾಯ ದಿನವೊಂದಕ್ಕೆ 23 ಕೋಟಿ ರು. ಇತ್ತು. ಅಂದರೆ ಮಾಸಿಕ ಸರಾಸರಿ 700 ಕೋಟಿ ರು. ಆದಾಯ ಬರುತ್ತಿತ್ತು. ಶಕ್ತಿ ಯೋಜನೆ ಜಾರಿಯಾದ ನಂತರದಿಂದ ಪ್ರತಿದಿನ ಮಹಿಳೆಯರಿಗೆ ನೀಡಲಾದ ಟಿಕೆಟ್‌ ಮೌಲ್ಯವೂ ಸೇರಿದಂತೆ 30ರಿಂದ 32 ಕೋಟಿ ರು.ಗೆ ಹೆಚ್ಚಳವಾಗಿದೆ. ಅದನ್ನು ಗಮನಿಸಿದರೆ ಮಾಸಿಕ 300 ರಿಂದ 325 ಕೋಟಿ ರು. ಹೆಚ್ಚುವರಿ ಆದಾಯ ಬರುವ ಸಾಧ್ಯತೆ ಇದೆ.

ಸರ್ಕಾರದಿಂದ ನಿಗಮಗಳಿಗೆ ಹಣ

ಶಕ್ತಿ ಯೋಜನೆ ಜಾರಿಗೂ ಮುನ್ನ ಮಹಿಳೆಯರ ಉಚಿತ ಪ್ರಯಾಣಕ್ಕೆ ತಗಲುವ ವೆಚ್ಚವನ್ನು ರಾಜ್ಯ ಸರ್ಕಾರವು ನಿಗಮಗಳಿಗೆ ನೀಡುವ ಕುರಿತು ನಿರ್ಧರಿಸಲಾಗಿತ್ತು. ಜೂ.11ರಂದು ಯೋಜನೆಗೆ ಚಾಲನೆ ನೀಡಲಾಗಿದ್ದು, ಜೂನ್‌ 23ರವರೆಗೆ 6.57 ಕೋಟಿ ಮಹಿಳೆಯರು ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಸಂಚರಿಸಿದ್ದಾರೆ. ಅವರಿಗೆ 152.68 ಕೋಟಿ ರು. ಮೌಲ್ಯದ ಟಿಕೆಟ್‌ ನೀಡಲಾಗಿದೆ. ಅದನ್ನು ನೋಡಿದರೆ, ಪ್ರತಿದಿನ ಸರಾಸರಿ 10.88 ಕೋಟಿ ರು. ಮೌಲ್ಯದ ಟಿಕೆಟ್‌ ನೀಡಲಾಗುತ್ತಿದೆ. ಜೂನ್‌ 24ರಿಂದ 30ರವರೆಗೆ ಅಂದಾಜು 60 ರಿಂದ 70 ಕೋಟಿ ರು. ಮೌಲ್ಯದ ಉಚಿತ ಟಿಕೆಟ್‌ ವಿತರಿಸುವ ಸಾಧ್ಯತೆಗಳಿವೆ. ಜೂನ್‌ ತಿಂಗಳ 21 ದಿನಗಳಲ್ಲಿಯೇ ಮಹಿಳೆಯರ ಉಚಿತ ಪ್ರಯಾಣದ ಮೌಲ್ಯ 210 ರಿಂದ 220 ಕೋಟಿ ರು.ಗಳಾಗಲಿದ್ದು, ಅಷ್ಟುಮೊತ್ತವನ್ನು ರಾಜ್ಯ ಸರ್ಕಾರ ನಿಗಮಗಳಿಗೆ ನೀಡಲಿದೆ. ಹೀಗಾಗಿ ನಷ್ಟದಲ್ಲಿರುವ ನಿಗಮಗಳು ಆರ್ಥಿಕ ಶಕ್ತಿ ಪಡೆಯುತ್ತಿವೆಯಾದರೂ, ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆಬೀಳುವಂತಾಗುತ್ತಿದೆ.

ಹುಬ್ಬಳ್ಳಿ: ಮಹಿಳೆಯರಿಗೆ ಬಸ್‌ ಉಚಿತ, ಮೂತ್ರ ವಿಸರ್ಜನೆಗೆ ಹಣ ಖಚಿತ!

ಈವರೆಗೆ ಹಣ ಉಳಿಯುತ್ತಿರಲಿಲ್ಲ

ಶಕ್ತಿ ಯೋಜನೆ ಜಾರಿಗೂ ಮುನ್ನ ನಾಲ್ಕೂ ನಿಗಮಗಳಲ್ಲಿ ಸಂಗ್ರಹವಾಗುವ ಆದಾಯದಲ್ಲಿ ಶೇ.40ರಷ್ಟುಮೊತ್ತ ಡೀಸೆಲ್‌ ಖರೀದಿ, ಶೇ.45ರಷ್ಟನ್ನು ನೌಕರರ ವೇತನಕ್ಕೆ ವ್ಯಯಿಸಲಾಗುತ್ತಿತ್ತು. ಉಳಿದ ಶೇ.15ರಷ್ಟುಮೊತ್ತವನ್ನು ಬಿಡಿ ಭಾಗ ಖರೀದಿ ಸೇರಿ ಇನ್ನಿತರ ವೆಚ್ಚಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಹೀಗಾಗಿ ನಿಗಮಗಳಿಗೆ ಬರುವ ಆದಾಯ ಉಳಿಸಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಶಕ್ತಿ ಯೋಜನೆಯಿಂದ ಬರುತ್ತಿರುವ ಹೆಚ್ಚುವರಿ ಆದಾಯ ನಿಗಮಗಳಿಗೆ ಉಳಿತಾಯವಾಗಲಿದ್ದು, ಅದರಿಂದ ನಿಗಮಗಳ ನಷ್ಟವನ್ನು ತಗ್ಗಿಸಲು ಅಥವಾ ಇನ್ನಿತರ ಕಾರ್ಯಕ್ಕೆ ಬಳಸುವ ಬಗ್ಗೆ ಚರ್ಚಿಸಲಾಗುತ್ತಿದೆ.

ಶಕ್ತಿ ಯೋಜನೆ ಅಡಿಯಲ್ಲಿ ಪ್ರಯಾಣಿಸುತ್ತಿರುವ ಮಹಿಳೆಯರಿಗೆ ನೀಡಲಾಗಿರುವ ಟಿಕೆಟ್‌ನ ಮೊತ್ತವನ್ನು ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ನೀಡಲಿದೆ. ಯೋಜನೆ ಜಾರಿಗೂ ಮುನ್ನವೇ ಈ ಕುರಿತು ನಿರ್ಧರಿಸಲಾಗಿತ್ತು. ಪ್ರತಿ ತಿಂಗಳ ಮೊದಲ ವಾರದಲ್ಲಿಯೇ ಸರ್ಕಾರದಿಂದ ಹಣ ಪಾವತಿಸುವಂತೆ ಕೋರಲಾಗುವುದು ಅಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದುರಂತ - ದೇವರ ದರ್ಶನಕ್ಕೂ ಮುನ್ನವೇ ಕಂದಕ ಸೇರಿದ ಭಕ್ತ!