ರಾಜ್ಯದಲ್ಲಿ ಭಾರೀ ಏರಿಕೆಯಾಗಿದ್ದ ಈರುಳ್ಳಿ ದರ ಇದೀಗ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ
ಬೆಂಗಳೂರು (ಅ.25): ಕಳೆದ ಹಲವು ದಿನಗಳಿಂದ ನೂರರ ಗಡಿ ದಾಟಿ ಗ್ರಾಹಕರನ್ನು ಚಿಂತೆಗೀಡು ಮಾಡಿದ್ದ ಈರುಳ್ಳಿ ಬೆಲೆ ಇಳಿಕೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ಕೆ.ಜಿ. 90 ರು. ಇದ್ದದ್ದು, ಇದೀಗ 60 ರಿಂದ 70 ರು.ಗೆ ಕುಸಿದಿದೆ. ಹೀಗಾಗಿ 100 ರು. ದಾಟಿರುವ ಚಿಲ್ಲರೆ ಈರುಳ್ಳಿ ಬೆಲೆ ಕೂಡ ಇಳಿವ ಸಾಧ್ಯತೆ ಇದೆ.
ಈರುಳ್ಳಿ ದರವನ್ನು ನಿಯಂತ್ರಣದಲ್ಲಿಡಲು ಕೇಂದ್ರ ಸರ್ಕಾರ ಚಿಲ್ಲರೆ ಮತ್ತು ಸಗಟು ಮಾರಾಟಗಾರರಿಗೆ ಡಿ.31ರವರೆಗೆ ದಾಸ್ತಾನು ಮಿತಿ ಹೇರಿರುವುದು ಬೆಲೆ ಇಳಿಕೆಗೆ ಕಾರಣವಾಗಿದೆ. ಲಾಭದ ದೃಷ್ಟಿಯಿಂದ ಹೆಚ್ಚಿನ ಸಂಗ್ರಹ ಮಾಡಿಕೊಟ್ಟುಕೊಂಡವರು ಮಾರುಕಟ್ಟೆಗೆ ಈರುಳ್ಳಿ ಸಾಗಿಸುತ್ತಿರುವುದರಿಂದ ದರದಲ್ಲಿ ಇಳಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ಚಿಲ್ಲರೆ ವ್ಯಾಪಾರಿಗಳು 2 ಟನ್‌ಗಿಂತ ಅಧಿಕ ಈರುಳ್ಳಿ ಇಡುವಂತಿಲ್ಲ! ..
ವಿವಿಧ ಪ್ರದೇಶವಾರು ಚಿಲ್ಲರೆ ಮಾರುಕಟ್ಟೆಗಳಲ್ಲಿ ಬೆಲೆ ವ್ಯತ್ಯಾಸವಿದೆ. ಕೆಲ ವರ್ತಕರು ಹೆಚ್ಚಿನ ಬೆಲೆಗೆ ಖರೀದಿಸಿರುವುದರಿಂದ 100ರ ಬೆಲೆಯಲ್ಲಿಯೇ ಮಾರಾಟ ಮಾಡುತ್ತಿದ್ದಾರೆ. ಆದರೆ, ಎಪಿಎಂಸಿಯಲ್ಲಿ ಕ್ವಿಂಟಾಲ್ 6000ದಿಂದ 7000 ರು. ನಿಗದಿಯಾಗಿದೆ. ಬೆಂಗಳೂರಿನ ಯಶವಂತಪುರ ಹಾಗೂ ದಾಸನಪುರ ಎಪಿಎಂಸಿ ಮಾರುಕಟ್ಟೆಗೆ ಶನಿವಾರ ಒಟ್ಟು 47,204 ಬ್ಯಾಗ್‌ಗಳು (230 ಟ್ರಕ್ಸ್) ಈರುಳ್ಳಿ ಸರಬರಾಜಾಗಿದೆ.
ಮಹಾರಾಷ್ಟ್ರ ಮತ್ತಿತರ ಭಾಗಗಳಲ್ಲಿ ಸದ್ಯದಲ್ಲೇ ಹೊಸ ಬೆಳೆ ಬರಲಿದೆ. ಹೀಗಾಗಿ ಗೋದಾಮುಗಳಲ್ಲಿ ಸಂಗ್ರಹಿಸಿದ್ದ ಈರುಳ್ಳಿಯನ್ನು ಹೊರಬಿಡಲಾಗಿದೆ. ವಿಜಯದಶಮಿ ನಂತರ ಈರುಳ್ಳಿ ಬೆಲೆಯ ಸ್ಥಿರತೆ ತಿಳಿಯುತ್ತದೆ ಎಂದು ಯಶವಂತಪುರ ಎಪಿಎಂಸಿಯ ಈರುಳ್ಳಿ, ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಸಿ. ಉದಯ್ ಶಂಕರ್ ತಿಳಿಸಿದರು.
ಮಳೆಗಾಲದ ವೇಳೆ ಈರುಳ್ಳಿ ಹೆಚ್ಚು ದಿನ ಸಂಗ್ರಹಿಸಿಟ್ಟರೆ ಹಾಳಾಗುತ್ತದೆ. ಹೀಗಾಗಿ ಬೆಲೆ ತಗ್ಗಿಸುವುದು ಅನಿವಾರ್ಯ.
ಆದರೆ ಹಾಪ್ ಕಾಮ್ಸ್‌ನಲ್ಲಿ ಕೆ.ಜಿ. 109 ರು. ನಂತೆ ಮಾರಾಟ ಮಾಡಲಾಗುತ್ತಿದೆ. ಇದನ್ನು ತಗ್ಗಿಸಬೇಕು. ಸಗಟು ಮಾರುಕಟ್ಟೆಯಲ್ಲಿಯೇ ದರ ಇಳಿಕೆಯಾಗಿರುವುದರಿಂದ ಚಿಲ್ಲರೆ ಮಾರಾಟಗಾರು ಕೂಡ ಬೆಲೆ ಇಳಿಸಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.
ಯಶವಂತಪುರ ಎಪಿಎಂಸಿ ದರ (ಕೆ.ಜಿ.ಗಳಲ್ಲಿ)
ಅತ್ಯುತ್ತಮ ಈರುಳ್ಳಿ 60-70 ರು.
ಉತ್ತಮ 55-60 ರು.
ಮಧ್ಯಮ 50-60 ರು.
ಸಾಧಾರಣ 15-40 ರು.