
ಚಿಕ್ಕಬಳ್ಳಾಪುರ (ನ.23): ಸತ್ಯ ಸಾಯಿ ಬಾಬಾ ಅವರ ಜನ್ಮಶತಮಾನೋತ್ಸವ ಪ್ರಯುಕ್ತ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆದ ನೂರು ದಿನಗಳ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ವು 400 ಕ್ಕೂ ಹೆಚ್ಚು ಕಲಾವಿದರು ಪ್ರಸ್ತುತಪಡಿಸಿದ 'ಸಾಯಿ ಸಿಂಫನಿ ಆರ್ಕೆಸ್ಟ್ರಾ'ದ ಅದ್ಭುತ ಸಂಗೀತ ಪ್ರಸ್ತುತಿಯೊಂದಿಗೆ ಸಂಪನ್ನವಾಯಿತು. ಭಾರತದ ಅತಿದೊಡ್ಡ ಸಿಂಫನಿ ಆರ್ಕೆಸ್ಟ್ರಾ ಎನ್ನುವ ಶ್ರೇಯಕ್ಕೆ ಪಾತ್ರವಾಗಿರುವ 'ಸಾಯಿ ಸಿಂಫನಿ ಆರ್ಕೆಸ್ಟ್ರಾ'ದಲ್ಲಿ ವಿಶ್ವದ 60 ದೇಶಗಳ 450 ಕಲಾವಿದರು, 70 ಗಾಯಕರು ಮತ್ತು 200 ವಿದ್ಯಾರ್ಥಿಗಳು ಇದ್ದರು. ಈ ಅದ್ಘುತ ನಾದ ಗೌರವವನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರು ಭಕ್ತಿಯಿಂದ ಆನಂದಿಸಿದರು. ಆಕರ್ಷಕ ಲೇಸರ್ ಲೈಟ್ ಶೋ ಎಲ್ಲರ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಕಲಾವಿದರು 'ಒಂದು ಜಗತ್ತು ಒಂದು ಕುಟುಂಬ' ವಿಶೇಷ ಹಾಡನ್ನು ಪ್ರಸ್ತುತಪಡಿಸಿದರು.
ಸತ್ಯ ಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ನಿಮಿತ್ತ ನಡೆದ ನೂರು ದಿನಗಳ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ವು ವಿಶ್ವದ ಅತಿದೀರ್ಘ ಸಾಂಸ್ಕೃತಿಕ ಉತ್ಸವ ಎಂದು ಗಿನ್ನೆಸ್ ದಾಖಲೆಯನ್ನೂ ನಿರ್ಮಿಸಿತು. ಫಿಜಿ ಅಧ್ಯಕ್ಷರಾದ ರತು ನೈಕಮಾ ಲಾಲಬಲವು ಅವರ ಸಮಕ್ಷಮದಲ್ಲಿ ಸತ್ಯ ಸಾಯಿ ಬಾಬಾ ಅವರ 21 ಅಡಿ ಎತ್ತರ ಮಾರ್ಬಲ್ ವಿಗ್ರಹವನ್ನು ಅನಾವರಣಗೊಳಿಸಲಾಯಿತು. ಇದು ರೋಬೋಟ್ ಮೂಲಕ ಕೆತ್ತಲಾಗಿರುವ ವಿಶ್ವದ ಅತಿ ಎತ್ತರದ ಮಾರ್ಬಲ್ ವಿಗ್ರಹವಾಗಿದೆ. ಮುದ್ದೇನಹಳ್ಳಿಯಲ್ಲಿರುವ 600 ಹಾಸಿಗೆ ಸಾಮರ್ಥ್ಯದ ಅತ್ಯಾಧುನಿಕ ಆಸ್ಪತ್ರೆಯ ಕೇಂದ್ರ ಭಾಗದಲ್ಲಿ ಈ ವಿಗ್ರಹವನ್ನು ಸ್ಥಾಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಅಶೀರ್ವಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, ಗುರುಗಳ ಮಾತಿನಂತೆ ನಡೆಯುವುದೇ ನಾವು ಅವರಿಗೆ ಕೊಡಬಹುದಾದ ಅತ್ಯುತ್ತಮ ಗುರುದಕ್ಷಿಣೆ. ಸತ್ಯ ಸಾಯಿ ಬಾಬಾ ಅವರ ಮಾತು ಮತ್ತು ಅವರ ಚೈತನ್ಯ ಬೇರೆಬೇರೆ ಅಲ್ಲ. ಅವರ ಮಾರ್ಗದರ್ಶನವನ್ನು ಅನುಸರಿಸುವ ಮೂಲಕ ಅವರನ್ನು ಪಡೆಯಬಹುದು. ಭಗವಾನ್ ಸತ್ಯ ಸಾಯಿ ಬಾಬಾ ಅವರು ಸದಾ ನಮ್ಮೊಡನೆ ಇರುವ ಜೀವಂತ ವಾಸ್ತವ. ಹುಟ್ಟು-ಸಾವುಗಳ ಬಂಧನ ಅವರಿಗೆ ಇಲ್ಲ. ಅವರು ನಮ್ಮಿಂದ ಒಂದು ಆಲೋಚನೆ ಅಥವಾ ಪ್ರಾರ್ಥನೆಯಷ್ಟು ದೂರವಿದ್ದಾರೆ ಅಷ್ಟೇ. ಅವರು ನಿಮ್ಮಲ್ಲಿ, ನನ್ನಲ್ಲಿ, ನಾವು ಮಾಡುವ ಎಲ್ಲ ಒಳ್ಳೆಯ ಕೆಲಸಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದರು.
ಫಿಜಿ ಅಧ್ಯಕ್ಷ ರತು ನೈಕಮಾ ಲಾಲಬಲವು ಮಾತನಾಡಿ, 'ಅಧ್ಯಾತ್ಮ ಪುರುಷ ಶ್ರೀ ಸತ್ಯ ಸಾಯಿ ಬಾಬಾ ಅವರ ಜನ್ಮಶತಮಾನೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿರುವುದು ನಮ್ಮ ಪಾಲಿಗೆ ದೊಡ್ಡ ಗೌರವ ಎನಿಸಿದೆ. ನಮ್ಮ ಸಂಸ್ಕೃತಿಗಳು ಬೇರೆಯಾಗಿದ್ದರೂ ಸದ್ಗುರು ಶ್ರೀ ಮಧುಸೂದನ ಸಾಯಿ ನೇತೃತ್ವದಲ್ಲಿ ನಡೆಯುತ್ತಿರುವ ಒಂದು ಜಗತ್ತು ಒಂದು ಕುಟುಂಬ ಸೇವಾ ಅಭಿಯಾನವು ನಮ್ಮೆಲ್ಲರನ್ನೂ ಆಧ್ಯಾತ್ಮಿಕವಾಗಿ ಬೆಸೆಯುತ್ತದೆ' ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ಕ್ರಿಕೆಟ್ ಆಟಗಾರ ಹಾಗೂ ಹಾರ್ಟ್ ಟು ಹಾರ್ಟ್ ಫೌಂಡೇಶನ್‌ನ ಟ್ರಸ್ಟಿ ಸುನಿಲ್ ಗವಾಸ್ಕರ್, '100 ದೇಶಗಳಿಂದ ಬಂದ ಜನರು ಸತ್ಯ ಸಾಯಿ ಗ್ರಾಮದಲ್ಲಿ ಸೇವೆಗಾಗಿ ಒಗ್ಗೂಡಿರುವುದನ್ನು ನೋಡಿದಾಗ, ಪ್ರೀತಿಗೆ ದೇಶ, ಭಾಷೆ ಮತ್ತು ಹಿನ್ನೆಲೆಗಳ ಗಡಿ ಇಲ್ಲ ಎನ್ನುವುದು ಮನವರಿಕೆಯಾಗುತ್ತದೆ. ನಾವು ಜನಿಸಿದ ಕಾಲಕ್ಕಿಂತಲೂ ಹೆಚ್ಚಿನ ಮಟ್ಟದ ಪ್ರೀತಿ, ಸಹಾನುಭೂತಿ, ಮನವೀಯತೆಯು ಜಗತ್ತಿನಲ್ಲಿ ನೆಲೆಸುವಂತೆ ಮಾಡಿಯೇ ನಾವು ತೆರಳಬೇಕು. ನಾವು ಇಲ್ಲಿ ಬಿಟ್ಟು ಹೋಗಬೇಕಿರುವ ನಿಜವಾದ ಪರಂಪರೆ ಇದು' ಎಂದು ಆಶಯ ವ್ಯಕ್ತಪಡಿಸಿದರು.
ಸತ್ಯ ಸಾಯಿ ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಡಾ ಶ್ರೀನಿವಾಸ್, ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ, ಬೆಂಗಳೂರಿನ ಅಕ್ಷಯ ಪಾತ್ರ ಫೌಂಡೇಶನ್ ಮತ್ತು ಇಸ್ಕಾನ್ ಅಧ್ಯಕ್ಷ ಪದ್ಮಶ್ರೀ ಪುರಸ್ಕೃತ ಮಧು ಪಂಡಿತ ದಾಸ, ಶ್ರೀಲಂಕಾದ ಬೌದ್ಧ ಸಂಸ್ಥೆ ಜೇತವನರಾಮ ಗುರು ಥಿರೋ - ವೆನ್ ನಿವರ್ಥಪ ಥಿರೋ, ಶ್ರೀಲಂಕಾದ ಮಾಜಿ ಕ್ರಿಕೆಟರ್ ಮತ್ತು ಉದ್ಯಮಿ ಅರವಿಂದ್ ಡಿಸಿಲ್ವಾ, ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ, ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷರಾದ ಡಾ ಬಿ.ಎನ್.ನರಸಿಂಹ ಮೂರ್ತಿ ಉಪಸ್ಥಿತರಿದ್ದರು.
ಸದ್ಗುರು ಶ್ರೀ ಮಧುಸೂದನ ಸಾಯಿ ನೇತೃತ್ವದ ಸೇವಾ ಅಭಿಯಾನವು ಸಾಯಿ ಬಾಬಾ ಅವರ ಸ್ಮರಣೆಯಲ್ಲಿ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ 2025’ ಆಯೋಜಿಸಿತ್ತು. ಆಗಸ್ಟ್ 16 ರಿಂದ ನವೆಂಬರ್ 23 ರವರೆಗೆ ನಡೆದ ಈ ಉತ್ಸವವು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ, ಕಲೆ, ನೃತ್ಯ ಮತ್ತು ಸೇವಾ ಉಪಕ್ರಮಗಳೊಂದಿಗೆ 100 ದೇಶಗಳನ್ನು ಒಂದು ವೇದಿಕೆಯಲ್ಲಿ ಬೆಸೆಯಿತು. 100 ಮಾನವತಾವಾದಿಗಳು, 140 ಕ್ಕೂ ಹೆಚ್ಚು ಕಾರ್ಪೊರೇಟ್ ಸಂಸ್ಥೆಗಳ ನಾಯಕರನ್ನು ಸಮಾಜಕ್ಕೆ ನೀಡಿದ ಕೊಡುಗೆಗಾಗಿ ಗೌರವಿಸಿತು. 45 ಕ್ಕೂ ಹೆಚ್ಚು ಜಾಗತಿಕ ಚಿಂತಕರು, ಮಾಧ್ಯಮ, ಪತ್ರಿಕೋದ್ಯಮ ಮತ್ತು ನ್ಯಾಯದಾನ ಕ್ಷೇತ್ರದ ಹಲವು ಸಾಧಕರನ್ನು ಈ ವೇಳೆ ಗುರುತಿಸಿ, ಗೌರವಿಸಲಾಯಿತು.
ಸಾಂಸ್ಕೃತಿಕ ಮಹೋತ್ಸವದ ಸಂದರ್ಭದಲ್ಲಿ 126 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ರಾಷ್ಟ್ರ ಸಮರ್ಪಿಸಲಾಯಿತು. 600 ಹಾಸಿಗೆ ಸಾಮರ್ಥ್ಯದ ವಿಶ್ವದ ಅತಿದೊಡ್ಡ ಉಚಿತ, ಖಾಸಗಿ ಆಸ್ಪತ್ರೆಯು ಇದೀಗ ಉದ್ಘಾಟನೆಗೆ ಸಜ್ಜಾಗಿದೆ. ಇದು ಎಲ್ಲರಿಗೂ ಆರೋಗ್ಯ ಸೇವೆಯು ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಮಹತ್ವದ ಪ್ರಯತ್ನವೆನಿಸಿದೆ. 140 ಕ್ಕೂ ಹೆಚ್ಚು ಕಾರ್ಪೊರೇಟ್ ಮತ್ತು ಸಾಮಾಜಿಕ ಉದ್ಯಮಗಳಿಗೆ ‘ಸಿಎಸ್ಆರ್ ಸರ್ಕಲ್ ಹಾನರ್ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಆರೋಗ್ಯ ರಕ್ಷಣೆ, ಶಿಕ್ಷಣ, ಪರಿಸರ, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ, ಧರ್ಮದ ಏಕತೆ, ಕ್ರೀಡೆ ಮತ್ತು ಯೋಗ, ಸಂಗೀತ ಮತ್ತು ಲಲಿತಕಲೆಗಳ ವಿಭಾಗಗಳಲ್ಲಿ ಸಾಧನೆ ಮಾಡಿದ 100 ದೇಶಗಳ 100 ಮಾನವತಾವಾದಿಗಳನ್ನು ಉತ್ಸವದಲ್ಲಿ ಗೌರವಿಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ