ರಾಜ್ಯದಲ್ಲಿ ನಿನ್ನೆ ಎರಡೇ ಕಡೆ ಕೊರೋನಾ ಲಸಿಕೆ!

By Suvarna NewsFirst Published Jan 18, 2021, 7:18 AM IST
Highlights

ನಿನ್ನೆ ಎರಡೇ ಕಡೆ ಕೊರೋನಾ ಲಸಿಕೆ!| ಭಾನುವಾರವಾದ್ದರಿಂದ ಸರ್ಕಾರಿ ಕೇಂದ್ರ ಬಂದ್‌| ಬೆಂಗಳೂರು, ಉಡುಪಿಯಲ್ಲಷ್ಟೇ ಅಭಿಯಾನ| ಒಂದು ದಿನದಲ್ಲಿ 3699 ಜನರಿಗೆ ಮಾತ್ರ ಲಸಿಕೆ| ಮೊದಲ ಎರಡು ದಿನದಲ್ಲಿ ಶೇ.62 ಜನಕ್ಕೆ ಲಸಿಕೆ

ಬೆಂಗಳೂರು(ಜ.18): ರಾಜ್ಯದಲ್ಲಿ ಭಾನುವಾರ ಬೆಂಗಳೂರಿನಲ್ಲಿ 3,659 ಮಂದಿ ಹಾಗೂ ಉಡುಪಿಯಲ್ಲಿ 40 ಮಂದಿಗೆ ಸೇರಿ ಒಟ್ಟು 3,699 ಮಂದಿ ಕೊರೋನಾ ಲಸಿಕೆ ಪಡೆದಿದ್ದು, ಎರಡು ದಿನಗಳಲ್ಲಿ ಒಟ್ಟು 17,308 (ಶೇ.62.36) ಮಂದಿ ಲಸಿಕೆ ಸ್ವೀಕರಿಸಿದ್ದಾರೆ.

ಭಾನುವಾರ ಬೆಂಗಳೂರು ನಗರದಲ್ಲಿ ನಾಲ್ಕು ಆಸ್ಪತ್ರೆಯ 63 ಕೇಂದ್ರಗಳಿಂದ 6,377 ಮಂದಿ ಹಾಗೂ ಉಡುಪಿಯಲ್ಲಿ ಒಂದು ಕೇಂದ್ರದಿಂದ 100 ಮಂದಿ ಸೇರಿ ಒಟ್ಟು 64 ಕೇಂದ್ರಗಳಿಂದ ಒಟ್ಟು 6,327 ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಬೆಂಗಳೂರಿನಲ್ಲಿ 3,659 ಹಾಗೂ ಉಡುಪಿಯಲ್ಲಿ 40 ಮಂದಿ ಸೇರಿ ಒಟ್ಟು 3,699 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಮೂಲಕ ಭಾನುವಾರ ಲಸಿಕೆ ಹಾಕಲು ಉದ್ದೇಶಿಸಿದ್ದವರ ಪೈಕಿ ಶೇ.58.46ರಷ್ಟುಮಂದಿ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಮಣಿಪಾಲ್‌ ಆಸ್ಪತ್ರೆಯಲ್ಲಿ 2,704 ಮಂದಿಗೆ ಲಸಿಕೆ:

ಭಾನುವಾರ ರಾಜ್ಯಾದ್ಯಂತ ಐದು ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ಪೈಕಿ ಬೆಂಗಳೂರಿನ ಎಚ್‌ಎಎಲ್‌ ರಸ್ತೆಯ ಮಣಿಪಾಲ್‌ ಆಸ್ಪತ್ರೆಯಲ್ಲಿ 4,055 ಮಂದಿಗೆ ಒಂದೇ ದಿನ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಈ ಪೈಕಿ 2,704 ಮಂದಿ ಲಸಿಕೆ ಪಡೆದಿದ್ದಾರೆ. ಉಳಿದಂತೆ ಕಾಕ್ಸ್‌ಟೌನ್‌ ಪಾಲಿಕೆಯ ಹೆರಿಗೆ ಆಸ್ಪತ್ರೆಯಲ್ಲಿ 32, ಶಾಂತಿ ನಗರದ ಸೇಂಟ್‌ ಫಿಲೋಮಿನಾ ಕಾಲೇಜು ಆಸ್ಪತ್ರೆಯಲ್ಲಿ 165, ಹೆಬ್ಬಾಳದ ಬ್ಯಾಪ್ಟಿಸ್ಟ್‌ ಆಸ್ಪತ್ರೆಯಲ್ಲಿ 758 ಮಂದಿಗೆ ಲಸಿಕೆ ಹಾಕಲಾಗಿದೆ. ಈ ಮೂಲಕ ಬೆಂಗಳೂರು ನಗರದಲ್ಲಿ 6,277 ಮಂದಿಯಲ್ಲಿ 3,659 ಮಂದಿ ಲಸಿಕೆ ಪಡೆದಂತಾಗಿದೆ.

ಸರಾಸರಿ ಶೇ.62.36 ಮಂದಿಗೆ ಲಸಿಕೆ:

ಮೊದಲ ದಿನ ರಾಜ್ಯಾದ್ಯಂತ 243 ಕೇಂದ್ರಗಳಲ್ಲಿ 21,426 ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. 12,609 ಮಂದಿ ಲಸಿಕೆ ಪಡೆಯುವ ಮೂಲಕ ಶೇ.63ರಷ್ಟುಯಶಸ್ವಿಯಾಗಿತ್ತು. ಎರಡೂ ದಿನಗಳಲ್ಲಿ 207 ಕೇಂದ್ರಗಳಿಂದ 27,753 ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, 17,308 ಮಂದಿಗೆ ಲಸಿಕೆ ಹಾಕುವ ಮೂಲಕ ಶೇ.62.36 ಪ್ರಗತಿ ಸಾಧಿಸಲಾಗಿದೆ.

click me!