ಆಟೋ ಜಪ್ತಿ, ದಂಡ ಹೇರಿಕೆಗೆ 15 ದಿನ ತಡೆ, ಶೇ.10 ಅಧಿಕ ಶುಲ್ಕ + ತೆರಿಗೆಗಷ್ಟೇ ಅವಕಾಶ
ಬೆಂಗಳೂರು(ಅ.15): ಆ್ಯಪ್ ಆಧಾರಿತ ಆಟೋ ರಿಕ್ಷಾ ಸೇವೆ ಸ್ಥಗಿತಗೊಳಿಸಲು ನಿರ್ದೇಶಿಸಿ ರಾಜ್ಯ ಸಾರಿಗೆ ಇಲಾಖೆ ಹೊರಡಿಸಿರುವ ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಓಲಾ ಮತ್ತು ಉಬರ್ ಕಂಪನಿಗಳಿಗೆ ಸದ್ಯ ಹೈಕೋರ್ಟ್ ಸಿಹಿ-ಕಹಿ ತೀರ್ಪು ನೀಡಿದೆ. ಆ್ಯಪ್ ಆಧಾರಿತ ಸೇವೆ ಒದಗಿಸುವ ಆಟೋರಿಕ್ಷಾಗಳನ್ನು ಜಪ್ತಿ ಮಾಡಲಾಗುವುದು ಮತ್ತು ಐದು ಸಾವಿರ ರು. ದಂಡ ವಿಧಿಸುವುದಾಗಿ ಹೇಳಿದ್ದ ಸರ್ಕಾರದ ನಡೆಗೆ ಬ್ರೇಕ್ ಹಾಕುವ ಮೂಲಕ ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ಹೈಕೋರ್ಟ್ ಸಿಹಿ ನೀಡಿದೆ. ಇದೇ ವೇಳೆ ಸರ್ಕಾರ ಹೊಸದಾಗಿ ದರ ನಿಗದಿಪಡಿಸುವವರೆಗೆ, 2021ರ ನವೆಂಬರ್‌ನಲ್ಲಿ ನಿಗದಿಪಡಿಸಿರುವ ದರದ ಜೊತೆಗೆ ಶೇ.10ರಷ್ಟು ಹೆಚ್ಚುವರಿ ಹಣ ಮತ್ತು ಸೇವಾ ತೆರಿಗೆ (ಅಪ್ಲಿಕೇಬಲ್ ಟ್ಯಾಕ್ಸ್) ಮಾತ್ರ ಪಡೆಯಬೇಕು ಎಂದು ನಿರ್ದೇಶಿಸುವ ಮೂಲಕ ಕಹಿ ನೀಡಿದೆ.
ಓಲಾ ಮತ್ತು ಉಬರ್ ಕಂಪನಿಗಳ ಆ್ಯಪ್ ಆಧಾರಿತ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸುವಂತೆ ರಾಜ್ಯ ಸಾರಿಗೆ ಇಲಾಖೆ 2022ರ ಅ.11ರಂದು ಹೊರಡಿಸಿದ ಆದೇಶ ರದ್ದುಪಡಿಸುವಂತೆ ಕೋರಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದವು.
ಬೆಂಗಳೂರು: ಇನ್ನೂ ಇಳಿಯದ ಓಲಾ, ಉಬರ್ ಆಟೋ ದರ
ಶುಕ್ರವಾರ ಅವುಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರ ಪೀಠ, ದರ ನಿಗದಿಪಡಿಸಲು ರಾಜ್ಯ ಸರ್ಕಾರಕ್ಕೆ 15 ದಿನ (ಕಾರ್ಯನಿರ್ವಹಿಸುವ ದಿನ) ಕಾಲಾವಕಾಶ ನೀಡಿತು. ಅಲ್ಲಿಯವರೆಗೆ ಆಟೋ ರಿಕ್ಷಾ ಸೇವೆಗೆ ದರ ನಿಗದಿಪಡಿಸಿ ಸರ್ಕಾರವು 2021ರ ನ.6ರಂದು ಹೊರಡಿಸಿರುವ ಆದೇಶದಲ್ಲಿ ಸೂಚಿಸಿರುವ ದರದ ಜೊತೆಗೆ ಶೇ.10ರಷ್ಟು ಹೆಚ್ಚುವರಿ ಹಣ ಮತ್ತು ಸೇವಾ ತೆರಿಗೆ ಪಡೆಯಬೇಕು ಎಂದು ನಿರ್ದೇಶಿಸಿದೆ. ಅಲ್ಲದೆ, ದರ ನಿಗದಿಪಡಿಸುವವರೆಗೆ ಅಗ್ರಿಗೇಟರ್ ಕಂಪನಿಗಳ ವಿರುದ್ಧ ಸರ್ಕಾರ ಯಾವುದೇ ಬಲವಂತದ ಕ್ರಮ ಜರುಗಿಸಬಾರದು. ಆಟೋರಿಕ್ಷಾ ಸೇವೆ ಒದಗಿಸಲು ಪರವಾನಗಿ ಕೋರಿ ಅರ್ಜಿ ಸಲ್ಲಿಸಿದರೆ, ಅದನ್ನು ಕಾನೂನು ಪ್ರಕಾರ ಪರಿಗಣಿಸಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ನ.7ಕ್ಕೆ ಮುಂದೂಡಿದೆ.
ತಾತ್ಕಾಲಿಕ ಪರಿಹಾರ ಕ್ರಮ:
ಪ್ರಕರಣ ದೊಡ್ಡ ಮಟ್ಟದಲ್ಲಿ ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿದೆ. ಇದರಿಂದ ಮತ್ತೊಮ್ಮೆ ಸಭೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬರುವಂತೆ ಸರ್ಕಾರ ಮತ್ತು ಅರ್ಜಿದಾರ ಕಂಪನಿಗಳಿಗೆ ನ್ಯಾಯಾಲಯ ಸೂಚಿಸಿತ್ತು. ಅದರಂತೆ ಸಭೆ ನಡೆಸಿದ್ದರೂ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ಇದೀಗ ಸರ್ಕಾರವು 15 ದಿನದಲ್ಲಿ ದರ ನಿಗದಿಪಡಿಸಲಾಗುವುದು. ಆ ಸಮಯದವರಗೆ ಅರ್ಜಿದಾರ ಕಂಪನಿಗಳು ಸರ್ಕಾರವು 2021ರ ನ.6ರಂದು ನಿಗದಿಪಡಿಸಿರುವ ದರವನ್ನು ಪಡೆಯಬೇಕೆಂದು ತಿಳಿಸುತ್ತದೆ. ಮತ್ತೊಂದೆಡೆ ಸರ್ಕಾರದ ಆದೇಶ ಪಾಲಿಸಿದರೆ ತಮಗೆ ನಷ್ಟವಾಗಲಿದೆ ಎಂದು ಅರ್ಜಿದಾರ ಕಂಪನಿಗಳು ತಿಳಿಸಿವೆ. ಹಾಗಾಗಿ, ದರ ನಿಗದಿ ಪ್ರಕ್ರಿಯೆಗೆ 10ರಿಂದ 15 ದಿನ ಕಾಲಾವಕಾಶ ಅಗತ್ಯವಿರುವ ಕಾರಣ ಸರ್ಕಾರ ಮತ್ತು ಅರ್ಜಿದಾರರ ಒಮ್ಮತದಿಂದ ನ್ಯಾಯಾಲಯವು ಮಧ್ಯಂತರ ಪರಿಹಾರದ ವ್ಯವಸ್ಥೆ ಮಾಡಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣವೇನು?:
‘ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ಸ್ ನಿಯಮಗಳು-2016’ರ ನಿಯಮಗಳ ಅಡಿಯಲ್ಲಿ ಆಟೋರಿಕ್ಷಾ ಸೇವೆ ಒದಗಿಸಲು ಪರವಾನಗಿ ಪಡೆದುಕೊಂಡಿಲ್ಲ. ನಿಯಮಗಳಡಿ ಟ್ಯಾಕ್ಸಿ ವ್ಯಾಖ್ಯಾನದಡಿ ಆಟೋರಿಕ್ಷಾ ಬರುವುದಿಲ್ಲ. ಸರ್ಕಾರ ನಿಗದಿ ಮಾಡಿರುವುದಕ್ಕಿಂತ ಹೆಚ್ಚಿನ ದರವನ್ನು ಗ್ರಾಹಕರಿಂದ ಪಡೆಯಲಾಗುತ್ತಿದೆ ಎಂದು ತಿಳಿಸಿದ್ದ ರಾಜ್ಯ ಸರ್ಕಾರ, ಆ ಬಗ್ಗೆ ವಿವರಣೆ ಕೇಳಿ 2022ರ ಅ.6ರಂದು ಅರ್ಜಿದಾರ ಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು. ಸಾರಿಗೆ ಆಯುಕ್ತರು (ರಸ್ತೆ ಸುರಕ್ಷತೆ) ಅ.7ರಂದು ಅರ್ಜಿದಾರರೊಂದಿಗೆ ಸಭೆ ನಡೆಸಿ ಚರ್ಚಿಸಿದ್ದರು. ನಂತರ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸುವಂತೆ ಅ.11ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಓಲಾ, ಉಬರ್ ರಿಕ್ಷಾಕ್ಕೆ ದರ ನಿಗದಿ ಮಾಡಿ: ಹೈಕೋರ್ಟ್
ಸರ್ಕಾರದ ಆದೇಶ ಕಾನೂನುಬಾಹಿರ ಹಾಗೂ ಏಕಪಕ್ಷೀಯವಾಗಿದೆ. ತಮ್ಮ ಅಹವಾಲು ಆಲಿಸದೆ ಮತ್ತು ಸಕಾರಣ ನೀಡದೆಯೇ ಸರ್ಕಾರ ಆದೇಶ ಹೊರಡಿಸಿದೆ. ಹೆಚ್ಚಿನ ದರ ಪಡೆಯಲಾಗುತ್ತಿದೆ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ. ಇನ್ನು ದರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮಗಳೂ ಇಲ್ಲ ಎಂದು ಅರ್ಜಿದಾರ ಕಂಪನಿಗಳು ವಾದಿಸಿದ್ದವು.
ಅದನ್ನು ಆಕ್ಷೇಪಿಸಿದ್ದ ಸರ್ಕಾರ ವಕೀಲರು, ಪರವಾನಗಿ ಪಡೆಯದೆ ಆಟೋರಿಕ್ಷಾ ಸೇವೆ ಒದಗಿಸಲು ಅವಕಾಶ ನೀಡಲಾಗದು. ಸಾರ್ವಜನಿಕರ ದೂರು ಆಧರಿಸಿ ಸಾರಿಗೆ ಇಲಾಖೆ ಆದೇಶ ಮಾಡಿದೆ. ಬಹುತೇಕ ಅಗ್ರಿಗೇಟರ್ಸ್ಗಳು ಪರವಾನಗಿ ಪಡೆಯದೆ ಸೇವೆ ಒದಗಿಸುತ್ತಿದ್ದು, ಅದನ್ನು ಮುಂದುವರಿಸಲಾಗದು. ಇನ್ನು ಸರ್ಕಾರ ನಿಗದಿಪಡಿಸಿರುವ ಪ್ರಮಾಣಕ್ಕಿಂತ ಹೆಚ್ಚಿನ ದರವನ್ನು ಅಗ್ರಿಗೇಟರ್‌ಗಳು ಸಂಗ್ರಹಿಸುತ್ತಿದ್ದಾರೆ. ಆದ್ದರಿಂದ ಮುಂದಿನ 12ರಿಂದ 15ದಿನದಲ್ಲಿ ಹೊಸದಾಗಿ ದರ ನಿಗದಿಪಡಿಸಲು ಸರ್ಕಾರ ಸಿದ್ಧವಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.