ಅಮುಲ್‌ ಸಂಸ್ಥೆಯಲ್ಲಿ ಕೆಎಂಎಫ್‌ ವಿಲೀನ ಇಲ್ಲ: ಸಿಎಂ, ಜೋಶಿ

By Govindaraj S  |  First Published Jan 2, 2023, 3:20 AM IST

ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ. ಗುಜರಾತಿನ ಅಮುಲ್‌ ಸಂಸ್ಥೆಯೊಂದಿಗೆ ವಿಲೀನದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹಾಗೂ ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್‌ ಜೋಶಿ ಸ್ಪಷ್ಟಪಡಿಸಿದ್ದಾರೆ.


ಬೆಂಗಳೂರು/ಹುಬ್ಬಳ್ಳಿ (ಜ.02): ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ. ಗುಜರಾತಿನ ಅಮುಲ್‌ ಸಂಸ್ಥೆಯೊಂದಿಗೆ ವಿಲೀನದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹಾಗೂ ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್‌ ಜೋಶಿ ಸ್ಪಷ್ಟಪಡಿಸಿದ್ದಾರೆ. ಭಾನುವಾರ ವಿವಿಧೆಡೆ ಪ್ರತ್ಯೇಕವಾಗಿ ಮಾತನಾಡಿದ ಮೂವರೂ ನಾಯಕರು, ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಇತ್ತೀಚೆಗೆ ಮಂಡ್ಯದಲ್ಲಿ ನೀಡಿದ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ನಂದಿನಿಯನ್ನು ಅಮುಲ…ನೊಂದಿಗೆ ವಿಲೀನ ಮಾಡುತ್ತಾರೆ ಎನ್ನುವುದು ತಪ್ಪು ಕಲ್ಪನೆ. ಯಾರೂ ಊಹೆ ಮಾಡಿ ಟೀಕೆ ಮಾಡಬಾರದು. ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಮಾತನಾಡಿರುವುದು ಸ್ಪಷ್ಟವಾಗಿದೆ. ಒಬ್ಬರಿಗೊಬ್ಬರು ಸಹಕಾರದ ಮೂಲಕ ನಂದಿನಿ ಮತ್ತು ಅಮುಲ… ತಾಂತ್ರಿಕವಾಗಿ ಬೆಳೆಯಲು ಅವಕಾಶ ಮಾಡಿಕೊಡಬೇಕು. ಪೂರಕವಾಗಿ ಕೆಲಸ ಮಾಡಬೇಕು ಎಂದು ಶಾ ಹೇಳಿದ್ದಾರೆ. ಅದರರ್ಥ ವಿಲೀನಗೊಳಿಸುವುದು ಎಂದಲ್ಲ. ನಂದಿನಿ ಅಸ್ತಿತ್ವ ನೂರಾರು ವರ್ಷ ಶಾಶ್ವತವಾಗಿ ಇರಲಿದೆ ಎಂದರು.

Tap to resize

Latest Videos

ರಾಜ್ಯಕ್ಕೆ ಅಮಿತ್ ಶಾ ಬಂದು ಹೋದ ಬೆನ್ನಲ್ಲೇ ಬೂತ್ ವಿಜಯ ಅಭಿಯಾನ ಘೋಷಿಸಿದ ಪ್ರಹ್ಲಾದ್ ಜೋಶಿ

ಕೆಲವು ವಲಯಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರೆ ಲಾಭವಿದೆ. ಯಾವುದೇ ಸಮಸ್ಯೆಯಿಲ್ಲ. ನಂದಿನಿ ಅಥವಾ ಅಮುಲ್ ತಾಂತ್ರಿಕವಾಗಿ ಮುಂದಿದ್ದರೆ ಪರಸ್ಪರ ವಿನಿಯಮ ಮಾಡಿಕೊಳ್ಳಬಹುದು. ಆಡಳಿತಾತ್ಮಕ ಕ್ರಮಗಳನ್ನು ವಿನಿಮಯ ಮಾಡಿಕೊಳ್ಳಿ ಎಂದು ಅವರು ಹೇಳಿರುವುದು. ಆ ಬಗ್ಗೆ ತಪ್ಪು ಅರ್ಥ ಕಲ್ಪಿಸುವ ಅಥವಾ ರಾಜಕಾರಣದ ಅವಶ್ಯಕತೆ ಇಲ್ಲ. ನಾನು ಮುಖ್ಯಮಂತ್ರಿಯಾಗಿ ಹೇಳುವುದು, ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ ಎಂದು ತಿಳಿಸಿದರು.

ವಿಲೀನ ಬಗ್ಗೆ ಮಾತಾಡಿಲ್ಲ- ಸೋಮಶೇಖರ್‌: ಇನ್ನು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಸೋಮಶೇಖರ್‌ ‘ಕೆಎಂಎಫ್‌ ಮತ್ತು ಗುಜರಾತ್‌ನ ಅಮುಲ್‌ ವಿಲೀನದ ಪ್ರಶ್ನೆ ಇಲ್ಲ. ಗುಜರಾತ್‌ನಷ್ಟೇ ಪ್ರಬಲವಾಗಿ ಕೆಎಂಎಫ್‌ ಬೆಳೆಯುತ್ತಿದೆ; ಎರಡೂ ಒಟ್ಟಾಗಿ ಹೋದರೆ ಅಭಿವೃದ್ಧಿ ಸಾಧ್ಯ ಎಂದು ಅಮಿತ್‌ ಶಾ ಅವರು ಹೇಳಿದ್ದರು. ವಿಲೀನದ ಚರ್ಚೆಯೂ ಆಗಿಲ್ಲ; ಅಂಥ ಮಾತನ್ನೂ ಅವರು ಆಡಿಲ್ಲ ಎಂದು ಸ್ಪಷ್ಟಪಡಿಸಿದರು.

ಜೊತೆಗೆ, ಕೆಎಂಎಫ್‌ ಬಲಿಷ್ಠ ಸಂಸ್ಥೆ. 15 ಹಾಲು ಒಕ್ಕೂಟಗಳಿವೆ. 9 ಲಕ್ಷ ಮಹಿಳೆಯರು ಸೇರಿ 26 ಲಕ್ಷ ಜನ ಸಂಸ್ಥೆಯಡಿ ಬರುತ್ತಾರೆ. ಸಾವಿರಾರು ಕೋಟಿ ವ್ಯವಹಾರ ನಡೆಯುತ್ತಿದೆ. ಕರ್ನಾಟಕದ ಹಾಲು ಒಕ್ಕೂಟಗಳು ಮತ್ತು ಸಂಘಗಳು ಗುಜರಾತ್‌ನಷ್ಟೇ ಪ್ರಬಲವಾಗಿ ಬೆಳೆದಿದೆ. ಕರ್ನಾಟಕದ ಪ್ರತಿ ಗ್ರಾಮಗಳಲ್ಲೂ ಹಾಲಿನ ಡೈರಿ ಸ್ಥಾಪಿಸಬೇಕು. ಪತ್ತಿನ ಸಹಕಾರ ಸಂಘಕ್ಕೆ ಹೊಸ ನಿಯಮಾವಳಿ ಮಾಡಬೇಕು. ಮೂರು ವರ್ಷಗಳೊಳಗೆ ಒಂದೇ ಸಾಫ್‌್ಟವೇರ್‌ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿರುವುದಾಗಿ ವಿವರಿಸಿದರು.

ಜತೆಯಾಗಿ ಮಾರ್ಕೆಟಿಂಗ್‌ಗೆ ಸಲಹೆ- ಜೋಶಿ: ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಕೆಎಂಎಫ್‌ ಮತ್ತು ಅಮುಲ್‌ ವಿಲೀನ ಮಾಡುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹೇಳಿಕೆ ನೀಡಿಲ್ಲ. ಎರಡೂ ಸಂಸ್ಥೆಗಳು ಜತೆಗೂಡಿ ತಮ್ಮ ಉತ್ಪನ್ನಗಳಿಗೆ ಮಾರ್ಕೆಟಿಂಗ್‌ ಮಾಡುವ ಕುರಿತಷ್ಟೇ ಹೇಳಿಕೆ ನೀಡಿದ್ದರು. ಅಮಿತ್‌ ಶಾ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಮಾರ್ಕೆಂಟಿಂಗ್‌ ಮಾಡಿದರೆ ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯುತ್ತದೆ ಎಂದು ಹೇಳಿದ್ದಾರಷ್ಟೆ. ಕೆಎಂಎಫ್‌ ತನ್ನ ಅಸ್ತಿತ್ವ ಉಳಿಸಿಕೊಂಡು ಸರ್ಕಾರದ ಮಾರ್ಗದರ್ಶನದಲ್ಲಿ ಗಟ್ಟಿಯಾಗಿ ಉಳಿದುಕೊಳ್ಳಲಿದೆ ಎಂದರು.

ಬಿಜೆಪಿ ನೆಲೆ ವಿಸ್ತರಣೆಗೆ ರಣತಂತ್ರ: ಗೃಹ ಸಚಿವ ಅಮಿತ್‌ ಶಾ

ವಿಲೀನಕ್ಕೆ ಕೈ ಹಾಕಲಿ ನೋಡೋಣ: ‘ಅಮಿತ್‌ ಶಾ ಕೆಎಂಎಫ್‌-ಅಮುಲ್‌ ಜತೆಗೂಡಬೇಕು ಎಂದಿದ್ದಾರೆ. ನಮ್ಮ ಸಂಸ್ಥೆಯನ್ನು ಯಾವ ರಾಜ್ಯದ ಹಾಲಿನ ಒಕ್ಕೂಟದ ಜತೆಯೂ ವಿಲೀನ ಮಾಡುವ ಅಗತ್ಯವಿಲ್ಲ. ಹಾಲು, ನೀರು, ಜನ ಇದು ನಮ್ಮ ಹಕ್ಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಲೀನದ ಬಗ್ಗೆ ನಿರ್ಣಯ ಮಾಡಲಿ ನೋಡೋಣ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸವಾಲು ಹಾಕಿದ್ದಾರೆ. ‘ಇದು ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಅಮುಲ್‌ ಉತ್ತಮ ಸಂಸ್ಥೆಯಾಗಿರಬಹುದು. ಆದರೆ, ಅದಕ್ಕೆ ಪ್ರಬಲ ಸ್ಪರ್ಧೆಯೊಡ್ಡಬಲ್ಲ ಎಲ್ಲಾ ಸಾಮರ್ಥ್ಯ ಕೆಎಂಎಫ್‌ಗೆ ಇದೆ’ ಎಂದೂ ಅವರು ಹೇಳಿದ್ದಾರೆ.

click me!