
ಬೆಂಗಳೂರು (ಜು.16) ಖ್ಯಾತ ನಿರೂಪಕ ಮಾಸ್ಟರ್ ಆನಂದ್ ಪುತ್ರಿ ಹಾಗೂ ಬಾಲನಟಿ ವಂಶಿಕಾ ಮಾತ್ರವಲ್ಲದೆ ಇನ್ನು ಕೆಲವು ಚಲನಚಿತ್ರ ನಟರ ಹೆಸರಿನಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಒಡತಿ ನಿಶಾ ನಾಚಪ್ಪ ಸಾರ್ವಜನಿಕರಿಗೆ ವಂಚಿಸಿರುವ ಆರೋಪ ಬಂದಿದೆ. ಈ ಸಂಬಂಧ ಸದಾಶಿವನಗರ ಠಾಣೆ ಪೊಲೀಸರಿಗೆ ಮತ್ತೆ 10ಕ್ಕೂ ಹೆಚ್ಚಿನ ದೂರುಗಳು ಸಲ್ಲಿಕೆಯಾಗಿವೆ.
ಈವರೆಗೆ ವಂಶಿಕಾ ಹೆಸರು ದುರ್ಬಳಕೆ ಸಂಬಂಧ 20 ದೂರುಗಳು ಸಲ್ಲಿಕೆಯಾಗಿದ್ದವು. ಈಗ ಮತ್ತೆ ವಿವಿಧ ಆರೋಪಗಳಡಿ ಪೊಲೀಸರಿಗೆ 10 ದೂರುಗಳು ದಾಖಲಾಗಿವೆ.
Bengaluru: ಮಿಸ್ ಇಂಡಿಯಾ ನಿಶಾ ನರಸಪ್ಪ, ಈಗ ವಂಚನೆ ಆರೋಪಿ
ಹಲವು ನಟ,ನಟಿಯರ ಹೆಸರು ಬಳಕೆ:
ವಂಶಿಕಾ ಹೆಸರು ಬಳಸಿಕೊಂಡು ರಿಯಾಲಿಟಿ ಶೋಗಳಲ್ಲಿ ಮಕ್ಕಳಿಗೆ ಅವಕಾಶ ಕೊಡಿಸುವುದಾಗಿ ಹೇಳಿ ಕೆಲ ಪೋಷಕರಿಂದ ಹಣ ಪಡೆದು ವಂಚಿಸಿದ್ದ ಆರೋಪದ ಮೇರೆಗೆ ನಿಶಾ ನಾಚಪ್ಪಳನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ ಬೆನ್ನಲ್ಲೇ ಆಕೆಯ ವಂಚನೆ ಜಾಲ ಮತ್ತಷ್ಟುಬಯಲಾಗಿದೆ.
ಕನ್ನಡದ ಖ್ಯಾತ ನಟರಾದ ವಿಜಯ್ ರಾಘವೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, ನಟಿಯರಾದ ಮೇಘನಾ ರಾಜ್, ಶ್ವೇತಾ ಶ್ರೀವಾತ್ಸವ್, ಸಂಗೀತ ನಿರ್ದೇಶಕ ರಘು ದೀಕ್ಷಿತ್, ನಿರೂಪಕ ನಿರಂಜನ್ ದೇಶಪಾಂಡೆ ದಂಪತಿ ಹಾಗೂ ಕಿರುತೆರೆ ನಟ ಶಮಂತ್‌ಗೌಡ ಅವರ ಹೆಸರಿನಲ್ಲಿ ನಿಶಾ ಕೆಲವರಿಂದ ಹಣ ಪಡೆದು ವಂಚಿಸಿರುವ ಆರೋಪ ಕೇಳಿ ಬಂದಿದೆ.
ವಂಚನೆ ಹೇಗೆ?
ತಾನು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಈ ಕಲಾವಿದರು ಪಾಲ್ಗೊಳ್ಳುತ್ತಾರೆ ಎಂದು ಜನರಿಂದ ಆಕೆ ಚಂದಾ ವಸೂಲಿ ಮಾಡಿದ್ದರೆ, ಕೆಲವರಿಗೆ ನಟನೆಗೆ ಅವಕಾಶ ಕೊಡಿಸುವ ನೆಪದಲ್ಲಿ ನಾಮ ಹಾಕಿದ್ದಾಳೆ. ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರ ಕಾರ್ಯಕ್ರಮಕ್ಕೆ .10 ಲಕ್ಷ ವ್ಯಯಿಸಲಾಗಿದ್ದು, ರಾರಯಂಪ್ ಶೋ ಸಹ ನಡೆಸಲಾಗುತ್ತದೆ ಎಂದು ಹೇಳಿ ಪೋಷಕರಿಗೆ ಆಕೆ ವಂಚಿಸಿದ್ದಳು. ವಿಜಯ್ ರಾಘವೇಂದ್ರ ಅವರ ನಟನೆಯ ಚಲನಚಿತ್ರ ಹಾಗೂ ಭಾಗ್ಯ ಲಕ್ಷ್ಮೇ ಧಾರವಾಹಿಯಲ್ಲಿ ಮಗು ಪಾತ್ರಕ್ಕೆ ನಿಮ್ಮ ಮಕ್ಕಳನ್ನು ಶಿಫಾರಸು ಮಾಡುತ್ತೇನೆ ಎಂದು ಹೇಳಿ ಐದಾರು ಮಂದಿ ಪೋಷಕರಿಂದ ತಲಾ .25 ಸಾವಿರವನ್ನು ಆಕೆ ವಸೂಲಿ ಮಾಡಿದ್ದಳು ಎನ್ನಲಾಗಿದೆ.
ಫ್ಯಾಷನ್ ಶೋನಲ್ಲೂ ಪಂಗನಾಮ
ನಟನೆ ಮಾತ್ರವಲ್ಲ ಮಾಡಲಿಂಗ್‌ನಲ್ಲಿ ಅವಕಾಶ ಕೊಡಿಸುವುದಾಗಿ ಸಹ ಕೆಲ ಮಕ್ಕಳ ಪೋಷಕರಿಂದ ಹಣ ಪಡೆದು ನಿಶಾ ವಂಚಿಸಿದ್ದಾಳೆ. ರಾಜಾಜಿನಗರ ಪ್ರವೇಶ ದ್ವಾರ ಸಮೀಪದ ಲೂಲು ಫ್ಯಾಷನ್ ವೀಕ್‌ನಲ್ಲಿ ಕಿಡ್‌್ಸ ಮಾಡೆಲ್‌ಗಳಿಗೆ ಅವಕಾಶವಿದೆ. ಅಲ್ಲದೆ ಬೇಬಿ ಕಂಟೆಸ್ಟ್ ಸೀಸನ್-4 ಸೇರಿದಂತೆ ವಿವಿಧ ಇವೆಂಟ್‌ಗಳ ಹೆಸರಿನಲ್ಲಿ ಆಕೆ ವಂಚಿಸಿದ್ದಾಳೆ ಎಂದು ತಿಳಿದು ಬಂದಿದೆ.
ಹಣ ಕೇಳಿದವರಿಗೆ ನಿಂದನೆ
ತಾವು ನೀಡಿದ್ದ ಹಣ ಮರಳಿಸುವಂತೆ ಕೇಳಿದ ಕೆಲ ಪೋಷಕರ ಜತೆ ಆರೋಪಿ ನಿಶಾ ಅನುಚಿತವಾಗಿ ವರ್ತಿಸಿದ್ದಾಳೆ. ‘ನಿಮ್ಮಿಂದ ನನಗೆ ನಷ್ಟವಾಗಿದೆ. ಹಣ ಬೇಕಾದರೆ ಕೋರ್ಚ್‌ಗೆ ಹೋಗಿ. ನಾನೇ ಅಲ್ಲೇ ನೋಡಿಕೊಳ್ಳುತ್ತೇನೆ’ ಎಂದು ಕೆಲವರಿಗೆ ಅವಾಚ್ಯ ಶಬ್ಧಗಳಿಂದ ಆಕೆ ನಿಂದಿಸಿದ್ದಾಳೆ ಎಂದು ಆರೋಪಿಸಲಾಗಿದೆ.
ಮಾಸ್ಟರ್ ಆನಂದ್ ಪುತ್ರಿ ವನ್ಷಿಕಾ ಹೆಸ್ರಲ್ಲಿ ದೋಖಾ: ಈಕೆಯನ್ನು ನಂಬಿ ಲಕ್ಷ ಲಕ್ಷ ಕಳೆದುಕೊಂಡವರೆಷ್ಟು..?
ಮಿಸ್ಟರ್ ಇಂಡಿಯಾ ಸ್ಪರ್ಧೆ ಸಂಬಂಧ .40 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಈ ಸ್ಪರ್ಧೆಗೆ 40 ಜನರಲ್ಲಿ 10 ಜನರು ಆಯ್ಕೆಯಾಗಿದ್ದಾರೆ. ಅದರಲ್ಲಿ ನೀವು ಸಹ ಒಬ್ಬರು. ಆ ಸ್ಪರ್ಧೆಗೆ ದೆಹಲಿಗೆ ಕರೆದುಕೊಂಡು ಹೋಗಲು .40 ಸಾವಿರ ಕೊಡಬೇಕು. ಆ ಸ್ಪರ್ಧೆಯಲ್ಲಿ ನೀವು ಗೆಲ್ಲುತ್ತೀರಾ. ಅಲ್ಲಿ .7 ಲಕ್ಷ ಬಹುಮಾನ ಸಿಗಲಿದ್ದು, ಅದರಲ್ಲಿ .3 ಲಕ್ಷ ತನಗೆ ಕೊಡಬೇಕು ಎಂದು ನಿಶಾ ಬೇಡಿಕೆ ಇಟ್ಟಿದ್ದರು.
-ರಂಜಿತ್ ಕುಮಾರ್, ಸಂತ್ರಸ್ತ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ