ಆರ್‌ಎಸ್‌ಎಸ್‌ ಮಾತ್ರವೇ ಅಲ್ಲ, ಹಿಂದು ಧರ್ಮವೂ ನೋಂದಣಿ ಆಗಿಲ್ಲ: ಭಾಗ್ವತ್‌

Kannadaprabha News   | Kannada Prabha
Published : Nov 10, 2025, 06:05 AM IST
Mohan Bhagwat

ಸಾರಾಂಶ

‘1925ರಲ್ಲಿ ಆರ್‌ಎಸ್‌ಎಸ್‌ ಆರಂಭಿಸಿದ ಡಾ.ಹೆಡ್ಗೆವಾರ್‌ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಹಾಗಾದರೆ ನಾವು ಸಂಘವನ್ನು ಬ್ರಿಟಿಷ್‌ ಸರ್ಕಾರದಲ್ಲಿ ನೋಂದಣಿ ಮಾಡಬೇಕಿತ್ತೆ? ಸ್ವಾತಂತ್ರ್ಯಾನಂತರ ಸರ್ಕಾರವು ಸಂಘವನ್ನು ವ್ಯಕ್ತಿಗಳ ಸಂಘಟನೆ ಎಂದು ಗುರುತಿಸಿದೆ.

ಬೆಂಗಳೂರು : ‘1925ರಲ್ಲಿ ಆರ್‌ಎಸ್‌ಎಸ್‌ ಆರಂಭಿಸಿದ ಡಾ.ಹೆಡ್ಗೆವಾರ್‌ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಹಾಗಾದರೆ ನಾವು ಸಂಘವನ್ನು ಬ್ರಿಟಿಷ್‌ ಸರ್ಕಾರದಲ್ಲಿ ನೋಂದಣಿ ಮಾಡಬೇಕಿತ್ತೆ? ಸ್ವಾತಂತ್ರ್ಯಾನಂತರ ಸರ್ಕಾರವು ಸಂಘವನ್ನು ವ್ಯಕ್ತಿಗಳ ಸಂಘಟನೆ ಎಂದು ಗುರುತಿಸಿದೆ. ಆದಾಯ ತೆರಿಗೆ ಇಲಾಖೆಯು ಗುರುದಕ್ಷಿಣೆ ಗೆ ಆದಾಯ ತೆರಿಗೆ ವಿನಾಯಿತಿ ನೀಡಿದೆ’ ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಡಾ.ಮೋಹನ್‌ ಭಾಗವತ್‌ ಪ್ರತಿಪಾದಿಸಿದ್ದಾರೆ. ತನ್ಮೂಲಕ ಆರ್‌ಎಸ್‌ಎಸ್‌ ಏಕೆ ನೋಂದಣಿಯಾಗಿಲ್ಲ? ಎಂದು ಪ್ರಶ್ನಿಸುತ್ತಿದ್ದ ಕಾಂಗ್ರೆಸ್ಸಿಗರಿಗೆ ಪರೋಕ್ಷ ತಿರುಗೇಟು ನೀಡಿದ್ದಾರೆ.

ಆರ್‌ಎಸ್‌ಎಸ್‌ ನೂರನೇ ವರ್ಷದ ಆಚರಣೆ ಪ್ರಯುಕ್ತ ನಗರದ ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ‘ಸಂಘದ 100 ವರ್ಷ ಪಯಣ; ನವ ಕ್ಷಿತಿಜಗಳು’ ಶೀರ್ಷಿಕೆಯಡಿ ಆಯೋಜಿಸಿರುವ ಎರಡು ದಿನಗಳ ಉಪನ್ಯಾಸ ಮಾಲಿಕೆಯಲ್ಲಿ 2ನೇ ದಿನವಾದ ಭಾನುವಾರ ಪ್ರಶ್ನೋತ್ತರದ ವೇಳೆ ಅವರು ಮಾತನಾಡಿದರು.

ಈ ಹಿಂದೆ ಮೂರು ಬಾರಿ ಸರ್ಕಾರವು ಸಂಘವನ್ನು ನಿಷೇಧಿಸಿದೆ ಎಂದರೆ ಅದು ಸಂಘವನ್ನು ಗುರುತಿಸಿದೆ ಎಂದಲ್ಲವೇ? ಸಂಘವು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ. ಸಂವಿಧಾನದ ಚೌಕಟ್ಟಿನಲ್ಲೇ ಕೆಲಸ ಮಾಡುತ್ತಿದೆ. ಹಾಗೆ ನೋಡಿದರೆ ಹಿಂದೂ ಧರ್ಮವೂ ನೋಂದಣಿ ಆಗಿಲ್ಲ ಅಲ್ಲವೇ ಎನ್ನುವ ಮುಖಾಂತರ ಆರ್‌ಎಸ್‌ಎಸ್‌ ಸಂಘಟನೆ ನೋಂದಣೆಯಾಗದಿರುವುದನ್ನು ಸಮರ್ಥಿಸಿಕೊಂಡರು.

ಸಂಘದಲ್ಲಿ ಬ್ರಾಹ್ಮಣ, ಶೈವ, ಶಾಕ್ಯ ಸೇರಿದಂತೆ ಯಾವುದೇ ಜಾತಿ, ಮುಸ್ಲಿಂ, ಕ್ರೈಸ್ತರಿಗೆ ಪ್ರವೇಶವಿಲ್ಲ. ತಮ್ಮ ಪ್ರತ್ಯೇಕತೆಯನ್ನು ಹೊರಗಿಟ್ಟು ಮುಸ್ಲಿಂ, ಕ್ರೈಸ್ತರೂ ಸಂಘಕ್ಕೆ ಆಗಮಿಸಬಹುದು. ಸಂಘದ ಶಾಖೆಗೆ ಆಗಮಿಸುವಾಗ ನಿಮ್ಮ ವಿಶೇಷತೆಯನ್ನು ತರಬಹುದು, ಆದರೆ ಪ್ರತ್ಯೇಕತೆಯನ್ನಲ್ಲ. ಭಾರತ ಮಾತೆಯ ಪುತ್ರರಾಗಿ, ಭಾರತೀಯ ಸಮಾಜದ ಸದಸ್ಯನಾಗಿ ಶಾಖೆಗೆ ಆಗಮಿಸಬಹುದು. ಈ ರೀತಿಯಲ್ಲಿ ಅನೇಕರು ಈಗಾಗಲೇ ಆಗಮಿಸುತ್ತಿದ್ದಾರೆ. ಆದರೆ ಪ್ರತ್ಯೇಕವಾಗಿ ಅಂಥವರ ಲೆಕ್ಕವನ್ನು ಇಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತ್ರಿವರ್ಣ ಧ್ವಜದ ಬಗ್ಗೆ ಗೌರವವಿದೆ

:ಸಂಘವು ಭಗವಾ ಧ್ವಜವನ್ನೇಕೆ ಆರಿಸಿಕೊಂಡಿದೆ? ತ್ರಿವರ್ಣ ಧ್ವಜವೇಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲೇ ಹೇಳಿದಂತೆ ಸಂಘವು 1925ರಲ್ಲಿ ಆರಂಭವಾಗಿದೆ. ಸಂಘಟನೆ ಸ್ವಾವಲಂಬಿಯಾಗಲು ಆರ್ಥಿಕ ಸ್ವಾವಲಂಬನೆ ಮುಖ್ಯ. ಸ್ವಯಂ ಸೇವಕರು ಗುರುದಕ್ಷಿಣೆ ಅರ್ಪಿಸಲು ಮೊದಲಿಗೆ ಗುರು ಬೇಕಾಗಿತ್ತು. ವ್ಯಕ್ತಿಯ ಬದಲಿಗೆ ಭಗವಾಧ್ವಜವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ತ್ರಿವರ್ಣ ಧ್ವಜಕ್ಕೆ ಸಂಘವು ಎಂದಿಗೂ ಗೌರವ ನೀಡಿದೆ. ಆಗಸ್ಟ್ 15 ಹಾಗೂ ಜನವರಿ 26ರಂದು ದೇಶದ ಎಲ್ಲ ಸಂಘ ಕಾರ್ಯಾಲಯಗಳ ಮೇಲೆ ತ್ರಿವರ್ಣ ಧ್ವಜ ಹಾರುತ್ತದೆ. ನಮ್ಮಲ್ಲಿ ಭಗವಾ ವರ್ಸಸ್ ತಿರಂಗಾ ಎಂಬ ಭಾವನೆಯಿಲ್ಲ ಎಂದರು.

ಮಹಿಳೆಯರಿಗೂ ಅವಕಾಶ:

ಸಂಘವು ಯುವಕರ ನಡುವೆ ಕಾರ್ಯ ಮಾಡುವ ಸಂಘಟನೆ. ಇದರೊಂದಿಗೆ ಯುವತಿಯರನ್ನೂ ಒಳಗೊಂಡರೆ ಗಾಳಿ ಸುದ್ದಿಗೆ ಅವಕಾಶ ನೀಡುತ್ತಿತ್ತು. ಯುವ ಸಂಘಟನೆಯನ್ನು ಹಾಗೆ ಮಾಡುವುದು ಹಾನಿ ಮಾಡುತ್ತದೆ ಎಂಬ ಕಾರಣಕ್ಕೆ ಯುವಕರಿಗೆ ಶಾಖೆ ಆರಂಭಿಸಲಾಯಿತು. ಆದರೆ ತಾವೇ ಈ ಕಾರ್ಯವನ್ನು ಮುನ್ನಡೆಸುವುದಾಗಿ ಸ್ವಯಂ ಸೇವಕರ ತಾಯಿಯೊಬ್ಬರು ಮುಂದೆ ಬಂದಾಗ ಹೆಡಗೆವಾರರು ಸಂಪೂರ್ಣ ಸಹಕಾರ ನೀಡಿದರು. ರಾಷ್ಟ್ರ ಸೇವಿಕಾ ಸಮಿತಿಯು ಇಂದು ಸಾಕಷ್ಟು ಬೆಳೆದಿದೆ. ದೇಶಾದ್ಯಂತ 10 ಸಾವಿರ ಶಾಖೆಗಳಿವೆ. ಸಂಘದಲ್ಲಿ ಪ್ರಚಾರಕರಂತೆ 50ಕ್ಕೂ ಹೆಚ್ಚು ಪ್ರಚಾರಕಿಯರಿದ್ದಾರೆ. ಶಾಖೆಯನ್ನು ಹೊರತುಪಡಿಸಿ ಸ್ವಯಂ ಸೇವಕರು ನಡೆಸುವ ಸಂಘಟನೆಗಳಲ್ಲಿ ಮಹಿಳೆಯರು ಸರಿಸಮನಾಗಿ ಭಾಗವಹಿಸುತ್ತಿದ್ದಾರೆ ಎಂದು ಭಾಗವತ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರಾಜಕೀಯೇತರ ಸಂಘಟನೆ:

ಸಂಘವು ಸಮಾಜವನ್ನು ಒಗ್ಗೂಡಿಸಲು ಕೆಲಸ ಮಾಡುತ್ತದೆ. ಹಾಗೆ ನೋಡಿದರೆ ರಾಜಕೀಯ ಕ್ಷೇತ್ರ ಎನ್ನುವುದು ಅದರ ಮೂಲ ಸ್ವಭಾವದಲ್ಲೇ ಸಮಾಜದಲ್ಲಿ ಭಿನ್ನತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ನಾವು ರಾಜಕೀಯದಿಂದ ದೂರವಿದ್ದೇವೆ. ನಾವು ನೀತಿಯನ್ನು ಬೆಂಬಲಿಸುತ್ತೇವೆ. ಈಗಂತೂ ನಾವೊಂದು ಶಕ್ತಿಯಾಗಿದ್ದೇವೆ. ಹಾಗಾಗಿ ಉತ್ತಮ ನೀತಿಗಳನ್ನು ಬೆಂಬಲಿಸಲು ಈ ಶಕ್ತಿಯನ್ನು ಬಳಸುತ್ತೇವೆ. ವ್ಯಕ್ತಿ, ಪಕ್ಷವನ್ನಲ್ಲ, ನೀತಿಗೆ ನಮ್ಮ ಬೆಂಬಲ ಎಂದರು.

ಎಲ್ಲ ವರ್ಗ ತಲುಪಲು ನಮ್ಮದೇ ಮಾರ್ಗ:

ಒಂದು ಸಂಘಟನೆಯಾಗಿ ನಾವು ಎಲ್ಲ ವರ್ಗವನ್ನೂ ನಾವು ತಲುಪಬೇಕು. ಆದರೆ ಅದಕ್ಕೆ ನಮ್ಮದೇ ಮಾರ್ಗವಿದೆ. ಪ್ರಚಾರ ಅಥವಾ ಅಬ್ಬರದ ಮೂಲಕ ಹೋಗುವುದಿಲ್ಲ. ನಮ್ಮನ್ನು ಪರಿಚಯಿಸಿಕೊಳ್ಳುತ್ತೇವೆ, ಪ್ರತಿನಿತ್ಯ ದೇಶಕ್ಕೆ ಏನಾದರೂ ಮಾಡಬೇಕೆಂದು ವಿನಂತಿಸುತ್ತೇವೆ. ಇದಕ್ಕೆ ಸಮಯ ತಗಲುತ್ತದೆ. ಸಂಘದಲ್ಲಿ ಹಿಂದೂ ಸಮಾಜದ ವಿವಿಧ ವರ್ಗಗಳಿಂದ ಪ್ರಾತಿನಿಧಿತ್ವವು ಹೆಚ್ಚುತ್ತಿರುವುದನ್ನು ಕ್ಷೇತ್ರೀಯ ಮಟ್ಟದವರೆಗೂ ಕಾಣುತ್ತಿದ್ದೇವೆ. ಅಖಿಲ ಭಾರತದ ಮಟ್ಟದವರೆಗೆ ಅದು ಶೀಘ್ರದಲ್ಲೇ ಬರಲಿದೆ ಭಾಗವತ್‌ ಹೇಳಿದರು.

ವಿದೇಶಾಂಗ ನೀತಿ ಸಫಲ:

ಇಂಡೋ-ಚೀನಾ ನೀತಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಎಲ್ಲರೊಂದಿಗೆ ಸ್ನೇಹ ಬೆಳೆಸಬೇಕು ಎನ್ನುವುದು ಭಾರತದ ದೃಷ್ಟಿಕೋನ. ಚೀನಾ ಜೊತೆಗೆ ಸರ್ಕಾರ ಕೆಲವು ಭಿನ್ನಾಭಿಪ್ರಾಯ ಹೊಂದಿದೆ. ಚೀನಾದ ಉದ್ದೇಶ ಕುರಿತು ನಮ್ಮಲ್ಲಿ ಅನೇಕರಿಗೂ ಬಲವಾದ ಅನುಮಾನಗಳಿವೆ. ಗಡಿಯಲ್ಲೂ ವಿವಾದ ಹುಟ್ಟಿಸುತ್ತಿದ್ದಾರೆ. ಬೆಳೆಯುತ್ತಿರುವ ಭಾರತ ಅವರಿಗೆ ಅನುಕೂಲವಲ್ಲ ಎಂಬ ಕಾರಣಕ್ಕೆ ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಇಂತಹ ಸಂಕೀರ್ಣತೆಗಳ ನಡುವೆ ನಾವು ಸದೃಢವಾಗಿರಬೇಕು. ಈವರೆಗೆ ನಮ್ಮ ವಿದೇಶಾಂಗ ನೀತಿ ಸಾಕಷ್ಟು ಸಫಲವಾಗಿದೆ, ಭವಿಷ್ಯದಲ್ಲೂ ಹೀಗೇ ಇರುತ್ತದೆ ಎಂದು ಭಾವಿಸಬಹುದು ಎಂದು ಹೇಳಿದರು.

ವೇದಿಕೆಯಲ್ಲಿ ಆರ್‌ಎಸ್‌ಎಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕ್ಷೇತ್ರೀಯ ಸಂಘಚಾಲಕ ಡಾ. ಪಿ.ವಾಮನ ಶೆಣೈ, ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಜಿ.ಎಸ್. ಉಮಾಪತಿ ಉಪಸ್ಥಿತರಿದ್ದರು.

ಎಲ್ಲಾ ಪ್ರಶ್ನೆಗೂ ಉತ್ತರಿಸುವ ಅಗತ್ಯವಿಲ್ಲ: ಭಾಗವತ್‌

ಸಂಘವು ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವ ಅಗತ್ಯವಿಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಕೆಲವರು ಸುಖಾಸುಮ್ಮನೆ ಪ್ರಶ್ನೆ ಕೇಳುತ್ತಾರೆ, ಅವರಿಗೆ ಉತ್ತರಿಸುವ ಅಗತ್ಯವಿಲ್ಲ. ಆ ರೀತಿ ಎಲ್ಲರಿಗೂ ಉತ್ತರಿಸುತ್ತಾ ನಮ್ಮ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ, ನಮಗೆ ಮಾಡಲು ಬೇರೆ ಕೆಲಸಗಳಿವೆ ಎಂದರು. ಇಷ್ಟು ವರ್ಷಗಳ ನಂತರವೂ ಟೀಕೆಗಳೇ ನಮ್ಮನ್ನು ಹೆಚ್ಚು ಪ್ರಸಿದ್ಧಿ ಮಾಡುತ್ತಿವೆ. ಪ್ರಸ್ತುತ ಕರ್ನಾಟಕ ಇದಕ್ಕೆ ಸಾಕ್ಷಿಯಾಗಿದೆ. ನೈಜ ಉದ್ದೇಶದ ಪ್ರಶ್ನೆಗಳಿಗೆ ನಾವು ಉತ್ತರಿಸಿದ್ದೇವೆ. ಅಗತ್ಯ ಬಿದ್ದಾಗ ಪ್ರತಿಕ್ರಿಯಿಸಿದ್ದೇವೆ ಎಂದು ತಿಳಿಸಿದರು. ತನ್ಮೂಲಕ ಸಂಘದ ಮೇಲೆ ವಾಗ್ದಾಳಿ ಮಾಡುತ್ತಿರುವ ಕಾಂಗ್ರೆಸ್ಸಿಗರಿಗೆ ಚಾಟಿ ಬೀಸಿದರು.

ರಾಮಮಂದಿರ ಕಟ್ಟಿದ್ದರೆ ಕಾಂಗ್ರೆಸ್‌ಗೂ ಬೆಂಬಲ ನೀಡುತ್ತಿದ್ದೆವು: ಭಾಗವತ್‌

ನಾವು ರಾಮಮಂದಿರ ಬೇಕೆಂದು ಬಯಸಿದೆವು. ಯಾರು ಈ ನಿರ್ಮಾಣಕ್ಕೆ ಬೆಂಬಲಿಸಿದರೋ ಆ ಪಕ್ಷವಾದ ಬಿಜೆಪಿಯನ್ನು ಸ್ವಯಂ ಸೇವಕರು ಬೆಂಬಲಿಸಿದರು. ಕಾಂಗ್ರೆಸ್ ಇದಕ್ಕೆ ಮುಂದಾಗಿದ್ದರೆ ಬಹುಶಃ ಸ್ವಯಂಸೇವಕರು ಆ ಪಕ್ಷವನ್ನೂ ಬೆಂಬಲಿಸುತ್ತಿದ್ದರು. ನಮಗೆ ಒಂದು ಪಕ್ಷದ ಮೇಲೆ ನಮಗೆ ವಿಶೇಷ ಪ್ರೀತಿ ಇಲ್ಲ. ಸಂಘದ ಪಕ್ಷ ಎನ್ನುವುದು ಯಾವುದೂ ಇಲ್ಲ ಎಲ್ಲ ಪಕ್ಷಗಳೂ ನಮ್ಮವೆ. ನಾವು ರಾಷ್ಟ್ರನೀತಿಯನ್ನು ಬೆಂಬಲಿಸುತ್ತೇವೆಯೇ ವಿನಃ ರಾಜನೀತಿಯನ್ನಲ್ಲ ಎಂದು ಮೋಹನ ಭಾಗವತ್‌ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ