ಮುಸ್ಲಿಮರಿಗೆ ತೊಂದರೆ ಆದರೆ ಬಿಜೆಪಿ ಹೋರಾಟ: ರಕ್ಷಣಾ ಸಚಿವ ರಾಜನಾಥ್ ಅಭಯ!

By Kannadaprabha News  |  First Published Jan 28, 2020, 7:56 AM IST

ಮುಸ್ಲಿಮರಿಗೆ ತೊಂದರೆ ಆದರೆ ಬಿಜೆಪಿ ಹೋರಾಟ| ಸಿಎಎಯಿಂದ ಮುಸ್ಲಿಮರಿಗೆ ಅಪಾಯವಿಲ್ಲ| ಮುಸ್ಲಿಮರು ಹೊರಹೋಗುವಂತಾದರೆ ಹೋರಾಟಕ್ಕೆ ಕೈಜೋಡಿಸುತ್ತೇವೆ: ರಾಜನಾಥ್‌ ಅಭಯ| ಕರಾವಳಿಯಲ್ಲಿ ಬಿಜೆಪಿಯಿಂದ ಬೃಹತ್‌ ಜನಜಾಗೃತಿ ಸಮಾವೇಶ| 1.5 ಲಕ್ಷ ಮಂದಿ ಭಾಗಿ| ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ


ಮಂಗಳೂರು[ಜ.28]: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕಾಂಗ್ರೆಸ್‌ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ನಡೆಸುತ್ತಿರುವ ಹೋರಾಟಕ್ಕೆ ಪ್ರತಿಯಾಗಿ ಬಿಜೆಪಿ ಸೋಮವಾರ ಮಂಗಳೂರಿನಲ್ಲಿ ನಡೆಸಿದ ಕಾಯ್ದೆ ಪರ ಜನಜಾಗೃತಿ ಬೃಹತ್‌ ಸಮಾವೇಶ ಕರಾವಳಿಯಲ್ಲಿ ಕೇಸರಿ ಪಡೆಯ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಯಿತು. ನಗರದ ಹೊರವಲಯದಲ್ಲಿರುವ ಗೋಲ್ಡ್‌ಫಿಂಚ್‌ ಸಿಟಿ ಮೈದಾನದಲ್ಲಿ ನೆರೆದ ಸುಮಾರು ಒಂದೂವರೆ ಲಕ್ಷ ಬಿಜೆಪಿ ಕಾರ್ಯಕರ್ತರ ಮುಂದೆ ಪಕ್ಷದ ಉನ್ನತ ನಾಯಕ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿಪಕ್ಷಗಳ ವಿರುದ್ಧ ಹರಿಹಾಯ್ದರು.

ಈ ಕಾಯ್ದೆಯಿಂದ ಭಾರತದಲ್ಲಿ ವಾಸವಾಗಿರುವ ಮುಸ್ಲಿಮರಿಗೆ ಯಾವುದೇ ಅಪಾಯ ಇಲ್ಲ. ಆದರೂ ವಿನಾ ಕಾರಣ ಮುಸ್ಲಿಮರನ್ನು ಹಾದಿತಪ್ಪಿಸುವ ಕೆಲಸವನ್ನು ವಿಪಕ್ಷಗಳು ಮಾಡುತ್ತಿವೆ. ಕೇಂದ್ರ ಸರ್ಕಾರ ರಾಷ್ಟ್ರಧರ್ಮವನ್ನು ಪಾಲಿಸುತ್ತಿರುವಾಗ ವಿಪಕ್ಷಗಳು ವಿಪಕ್ಷ ಧರ್ಮ ಪಾಲಿಸಬೇಕು. ದೇಶದ ವಿಚಾರದಲ್ಲಿ ವಿಪಕ್ಷಗಳು ರಚನಾತ್ಮಕವಾಗಿ ಕಾರ್ಯನಿರ್ವಹಿಸಬೇಕು. ಈ ಕಾಯ್ದೆಯಿಂದ ದೇಶದಲ್ಲಿರುವ ಒಬ್ಬನೇ ಒಬ್ಬ ಮುಸ್ಲಿಂ ಹೊರಗೆ ಹೋಗುವಂತಾದರೆ, ಅವರ ಜೊತೆ ಹೋರಾಟಕ್ಕೆ ಬಿಜೆಪಿ ಕೈಜೋಡಿಸಲಿದೆ ಎಂದು ಹೇಳಿದರು.

Tap to resize

Latest Videos

ತ್ರಿವಳಿ ತಲಾಖ್‌ ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ಮುಸ್ಲಿಂ ಮಹಿಳೆಯರಿಗೆ ಸ್ವಾಭಿಮಾನದ ಬದುಕನ್ನು ಕಲ್ಪಿಸಿದೆ. ದೇಶದ ಹಿತಾಸಕ್ತಿಯನ್ನು ಕಾಪಾಡುವ ಯಾವುದೇ ಯೋಜನೆಗಳನ್ನು ಜಾರಿಗೊಳಿಸುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಜಾತಿ, ಮತ, ಧರ್ಮ, ಪಂಥ ಎಂಬ ಭೇದಭಾವ ತೋರಿಸಿಲ್ಲ ಎಂದು ಸಚಿವ ರಾಜನಾಥ್‌ ಸಿಂಗ್‌ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ಅವರು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ಭಾರತ ದೇಶಕ್ಕೆ ಒಂದೇ ಬಾವುಟ ನಮ್ಮ ಗುರಿ. ದೇಶಕ್ಕೆ ಪ್ರತ್ಯೇಕ ಧ್ವಜ ಇಲ್ಲ. ಇಂದು ದೇಶದಲ್ಲಿ ಒಬ್ಬನೇ ಪ್ರಧಾನಿ, ಒಂದೇ ಸಂವಿಧಾನ, ಒಂದೇ ಧ್ವಜವಿದೆ. ಇದಕ್ಕೆ ಕಾಂಗ್ರೆಸ್‌ ಕಾರಣವಲ್ಲ, ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಕಾರಣ. ಕಾಂಗ್ರೆಸ್‌ ಪಕ್ಷವು ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಿದೆ. ಈ ವಿಭಜನೆಯೇ ಸಮಸ್ಯೆಗೆ ಮೂಲ ಕಾರಣ ಎಂದವರು ಹೇಳಿದರು.

Thank you Mangaluru for coming out in large numbers to express your support for Citizenship Amendment Act 2019.

We had promised to give citizenship to minorities facing religious persecution in Pakistan, Bangladesh & Afghanistan.

PM has fulfilled that commitment. pic.twitter.com/4JsdZ8Ml29

— Rajnath Singh (@rajnathsingh)

ಪಿಒಕೆ ವಶಪಡಿಸಿಕೊಳ್ಳುತ್ತೇವೆ

ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಎಂದು ಈಗಾಗಲೇ ತೋರಿಸಿಕೊಟ್ಟಿದ್ದೇವೆ. ಇನ್ನು ಮುಂದೆ ಪಾಕ್‌ ಆಕ್ರಮಿತ ಕಾಶ್ಮೀರ(ಪಿಒಕೆ) ಕೂಡ ಭಾರತದ ಸ್ವಾಧೀನಕ್ಕೆ ಬರಲಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದರು. ಈಗ ಕಾಶ್ಮೀರದಲ್ಲಿ ನಡೆಯುತ್ತಿರುವ ಅಭಿವೃದ್ಧಿಯನ್ನು ನೋಡಿ ನೆರೆ ರಾಷ್ಟ್ರಗಳು ಜೊಲ್ಲು ಸುರಿಸುವಂತಾಗಲಿದೆ. ದೇಶದ ಏಕತೆ ಹಾಗೂ ಅಖಂಡತೆಗೆ ಧಕ್ಕೆ ತಲೆದೋರಿದಾಗ ಭಾರತ ತನ್ನ ಶಕ್ತಿ, ಸಾಮರ್ಥ್ಯವನ್ನು ಪ್ರದರ್ಶಿಸಿ ದಿಟ್ಟತನ ಮೆರೆದಿದೆ. ಇದು ಜಗತ್ತಿಗೆ ಭಾರತದ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಂತಾಗಿದೆ. ನಮ್ಮನ್ನು ಯಾರು ಛೇಡಿಸುತ್ತಾರೋ ಅವರನ್ನು ನಾವು ಬಿಡುವುದೇ ಇಲ್ಲ ಎಂದರು.

ಒಂದೂವರೆ ವರ್ಷದಲ್ಲಿ ಮಂದಿರ

ಅಯೋಧ್ಯೆಯಲ್ಲಿ ರಾಮಮಂದಿರ ಪರವಾಗಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಇನ್ನು ಒಂದೂವರೆ ವರ್ಷದಲ್ಲಿ ಅಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಇದು ದೇಶದ ಜನತೆಯ ಬಹುಕಾಲದ ಬೇಡಿಕೆಯನ್ನು ಈಡೇರಿಸಲಿದೆ ಎಂದು ರಾಜನಾಥ್‌ ಸಿಂಗ್‌ ತಿಳಿಸಿದರು.

ಕಟೀಲು ಕ್ಷೇತ್ರಕ್ಕೆ ಭೇಟಿ

ಮೂಲ್ಕಿ: ಪೌರತ್ವ ತಿದ್ದುಪಡಿ ಕಾಯ್ದೆ ಜಗಜಾಗೃತಿ ಸಮಾವೇಶದಲ್ಲಿ ಭಾಗವಹಿಸುವ ಸಲುವಾಗಿ ಸೋಮವಾರ ಮಂಗಳೂರಿಗೆ ಆಗಮಿಸಿದ್ದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಂಜೆ ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು. ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ದೇವಸ್ಥಾನಕ್ಕೆ ಆಗಮಿಸಿದ ರಕ್ಷಣಾ ಸಚಿವರಿಗೆ ತೀರ್ಥ ಪ್ರಸಾದಗಳೊಂದಿಗೆ ದೇವರ ಶೇಷ ವಸ್ತ್ರ , ಬೆಳ್ಳಿಯ ದೇವರ ಭಾವಚಿತ್ರ ನೀಡಿ ಗೌರವಿಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಇದ್ದರು.

click me!