ಗೋವಾ ಗಡಿಯಲ್ಲಿ ಕರ್ನಾಟಕ ಲಾರಿ ಚಾಲಕರಿಗೆ ನಿಷೇಧ!, ಉತ್ತರ ಗೋವಾ ಜಿಲ್ಲಾಧಿಕಾರಿ ಆದೇಶಕ್ಕೆ ಆಕ್ರೋಶ

By Suvarna NewsFirst Published Sep 26, 2022, 6:25 PM IST
Highlights

ಗೋವಾ ಗಡಿಯಲ್ಲಿ ಕರ್ನಾಟಕ ಸೇರಿ ಇತರ ವಿವಿಧ ರಾಜ್ಯಗಳ ಲಾರಿ ಚಾಲಕರು ಪರದಾಡುತ್ತಿದ್ದಾರೆ. ಸಂಚಾರ ಸಮಸ್ಯೆ ನೆಪ ಹೇಳಿ ಭಾರಿ ಲಾರಿಗಳ ಪ್ರವೇಶಕ್ಕೆ ಗೋವಾ  ನಿಷೇಧ ಹೇರಿದೆ. ಉತ್ತರ ಗೋವಾ ಜಿಲ್ಲಾಧಿಕಾರಿ ಹೊರಡಿಸಿದ ಅಧಿಸೂಚನೆಗೆ  ಲಾರಿ ಮಾಲೀಕರು ಗರಂ ಆಗಿದ್ದಾರೆ.

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ (ಸೆ.26): ಬೆಳಗಾವಿಯಿಂದ ಗೋವಾಗೆ ಚೋರ್ಲಾ ಘಾಟ್ ಮೂಲಕ ಕೇರಿ ಚೆಕ್‌ಪೋಸ್ಟ್ ಮಾರ್ಗವಾಗಿ ತೆರಳುವ ಭಾರಿ ಲಾರಿಗಳ ಪ್ರವೇಶಕ್ಕೆ ಉತ್ತರ ಗೋವಾ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ. ಇತ್ತೀಚೆಗೆ ಉತ್ತರ ಗೋವಾದ ಕೇರಿ ಗ್ರಾಮಸ್ಥರು ಭಾರಿ ವಾಹನಗಳ‌ ಓಡಾಟದಿಂದ ಸಮಸ್ಯೆಯಾಗುತ್ತಿದ್ದು ಸಮರ್ಪಕ ರಸ್ತೆ ಸಂಚಾರ ಸಾಧ್ಯವಾಗುತ್ತಿಲ್ಲ ಎಂದು ಪ್ರತಿಭಟನೆ ಸಹ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಬೆಳಗಾವಿ ಮಾರ್ಗವಾಗಿ ಚೋರ್ಲಾ ಘಾಟ್‌ ಮಾರ್ಗವಾಗಿ ಕೇರಿ - ಬೆಳಗಾವಿ ರಸ್ತೆಯಲ್ಲಿ ನಿತ್ಯ ಹಗಲು ರಾತ್ರಿಯೆನ್ನದೇ ಅನ್ಯ ರಾಜ್ಯಗಳಿಂದ ಭಾರಿ ಲಾರಿಗಳು ಪ್ರವೇಶಿಸುತ್ತಿವೆ. ಇದರಿಂದ  ಸಂಚಾರ ಸಮಸ್ಯೆ ಆಗುತ್ತಿದೆ. ಹೀಗಾಗಿ ಟ್ರಾಫಿಕ್ ವಿಭಾಗದ ಉತ್ತರ ಗೋವಾ ಎಸ್‌ಪಿ ನೀಡಿದ ಪತ್ರ ಉಲ್ಲೇಖಿಸಿ ಗೋವಾ ಉತ್ತರ ಜಿಲ್ಲಾಧಿಕಾರಿ ಮಮು ಹಗೆ ಅಧಿಸೂಚನೆ ಹೊರಡಿಸಿದ್ದಾರೆ. ಸೆಪ್ಟೆಂಬರ್ 21ರಂದು ಅಧಿಸೂಚನೆ ಹೊರಡಿಸಿರುವ ಉತ್ತರ ಗೋವಾ ಡಿಸಿ ಕೇರಿ ಮಾರ್ಗವಾಗಿ ಭಾರಿ ಲಾರಿಗಳ ಸಂಚಾರಕ್ಕೆ ನಿಷೇಧ ಹೇರಿದ್ದಾರೆ. 2023ರ ಮಾರ್ಚ್ 19ರವರೆಗೆ ಈ ಆದೇಶ ಪಾಲಿಸುವಂತೆ ಅಧಿಸೂಚನೆ ಹೊರಡಿಸಲಾಗಿದೆ. ಹೀಗಾಗಿ ಕೇರಿ ಚೆಕ್ ಪೋಸ್ಟ್‌ನಲ್ಲಿ ಬೃಹತ್ ಗಾತ್ರದ ಲಾರಿಗಳ ಪ್ರವೇಶಕ್ಕೆ ಪೊಲೀಸರು, ಆರ್‌ಟಿಒ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ನಿನ್ನೆಯಿಂದ ಗೋವಾದ ಚೋರ್ಲಾ, ಕೇರಿ ಚೆಕ್‌ಪೋಸ್ಟ್ ಬಳಿ ನಿಂತಲ್ಲೇ ಲಾರಿಗಳು ನಿಂತಿವೆ. ರಸ್ತೆಯಲ್ಲೇ ಸಾಲುಗಟ್ಟಿ ಲಾರಿಗಳು ನಿಂತಿದ್ದು ಆಹಾರ ಸಾಮಗ್ರಿ ಸೇರಿ ಗೂಡ್ಸ್ ಸಾಮಗ್ರಿಗಳು ಹಾಳಾಗುವ ಆತಂಕದಲ್ಲಿ ಲಾರಿ ಮಾಲೀಕರಿದ್ದಾರೆ. ಗೋವಾಕ್ಕೆ ಲಾರಿಗಳ ಓಡಾಟಕ್ಕೆ ಇರುವ ಒಂದೇ ಒಂದು ಮಾರ್ಗವೂ ಬಂದ್ ಹಿನ್ನೆಲೆ ಗೋವಾ ಪೊಲೀಸರು, ಆರ್‌ಟಿಒ ಅಧಿಕಾರಿಗಳ ವಿರುದ್ಧ ಲಾರಿ ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಮೂರು ತಿಂಗಳ ಹಿಂದೆಯೂ ಇದೇ ರೀತಿ ಪರಿಸ್ಥಿತಿ ಉಂಟಾಗಿ ಎರಡು ಬಾರಿ ಈ ಮಾರ್ಗದಲ್ಲಿ ಲಾರಿ ಸಂಚಾರ ಸ್ಥಗಿತಗೊಳಿಸಿದ್ದರಂತೆ. ಬೆಳಗಾವಿಯಿಂದ ರಾಮನಗರ ಮಾರ್ಗವಾಗಿ ಗೋವಾಗೆ ತೆರಳುವ ರಸ್ತೆ ದುರಸ್ತಿ ಕಾರ್ಯ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದು ಆ ಭಾಗದಲ್ಲಿ ಸಂಚಾರ ಮಾಡೋಕೆ ಸಾಧ್ಯವಿಲ್ಲ ಎಂದು ಲಾರಿ ಮಾಲೀಕರು ಅಸಮಾಧಾನ ಹೊರಹಾಕಿದ್ದಾರೆ‌‌. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬೆಳಗಾವಿ ಮೂಲದ ಲಾರಿ ಮಾಲೀಕ ಎಂ‌.ಎಸ್‌‌.ಸೋಮನಟ್ಟಿ, 'ನಿನ್ನೆಯಿಂದ ಬೆಳಗಾವಿಯ 60ಕ್ಕೂ ಹೆಚ್ಚು ಲಾರಿಗಳು ನಿಂತಲ್ಲೇ ನಿಂತಿವೆ. ಸಂಚಾರ ಸಮಸ್ಯೆ ಆಗುತ್ತೆ ಎಂದು ಕೇರಿ ಚೆಕ್‌ಪೋಸ್ಟ್ ಬಳಿ ಲಾರಿಗಳನ್ನು ತಡೆದರೆ ನಾವು ಏನ್ ಮಾಡಬೇಕು.

ಬೆಳಗಾವಿಯಿಂದ ರಾಮನಗರ ಮೂಲಕ ಗೋವಾಗೆ ಹೋಗುವ ರಸ್ತೆ ಮೂರು ವರ್ಷಗಳಿಂದ ಬಂದ್ ಇದೆ. ನಾವು ಗೋವಾಗೆ ಹೋಗಬೇಕೆಂದರೆ ಕಾರವಾರ ಮಾರ್ಗವಾಗಿ ಗೋವಾಗೆ ಹೋಗಬೇಕು. ಅದಕ್ಕೆ 250ಕಿಮೀಗೂ ಹೆಚ್ಚು ಪ್ರಯಾಣಿಸಬೇಕಾದ ಅನಿವಾರ್ಯತೆ ಇರೋದ್ರಿಂದ ನಮಗೆ ಬಾಡಿಗೆ ವರ್ಕೌಟ್ ಆಗಲ್ಲ. ಹೀಗಾಗಿ ನಮಗೆ ಗೋವಾ ಪ್ರವೇಶಕ್ಕೆ ಕೇರಿ ಚೆಕ್‌ಪೋಸ್ಟ್ ಮೂಲಕ ಅವಕಾಶ ಕೊಡಲಿ, ಬೇಕಾದ್ರೆ ನಾವು ಸರಕು ಇಳಿಸಿ ಕಾರವಾರ ಮಾರ್ಗವಾಗಿ ವಾಪಸ್ ಬರ್ತೇವೆ. ಏನಾದರೂ ಮಾಡಿ ಸಮಸ್ಯೆ ಬಗೆಹರಿಸಿ' ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿಗೆ ಲಾರಿ ಮಾಲೀಕರ ಸಂಘ ಮನವಿ:
ಬೆಳಗಾವಿ ಜಿಲ್ಲಾ ಲಾರಿ ಮಾಲೀಕರ ಸಂಘ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಗೆ ಚೋರ್ಲಾ ಅಥವಾ ರಾಮನಗರ ಎರಡು ರೂಟ್‌ಗಳ ಪೈಕಿ ಒಂದು ರೂಟ್‌ನಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲು ಮನವಿ ಮಾಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗೆ ಲಾರಿ ಮಾಲೀಕರ ಸಂಘದ ವತಿಯಿಂದ ಪತ್ರ ಬರೆದಿದ್ದು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ‌.

Light Combat Helicopter: ರಾಜಸ್ಥಾನ ಗಡಿಯಲ್ಲಿ ಸ್ವದೇಶಿ ಅಟ್ಯಾಕ್‌ ಹೆಲಿಕಾಪ್ಟರ್‌ ನಿಯೋಜಿಸಲಿರುವ ಏರ್‌ಫೋರ್ಸ್‌!

ಒಟ್ಟಾರೆಯಾಗಿ ಗೋವಾಗೆ ಸರಕು ಸಾಗಾಟ ಮಾಡುವ ಬೃಹತ್ ಗಾತ್ರದ ಲಾರಿಗಳ ಚಾಲಕರು ಸಮಸ್ಯೆ ಎದುರಿಸುತ್ತಿದ್ದು ಇದರಿಂದ ಗೋವಾದ ವ್ಯಾಪಾರಿಗಳಿಗೂ ಸಹ ತೊಂದರೆ ಆಗುತ್ತಿದೆ. ಹೀಗಾಗಿ ಬೆಳಗಾವಿ ರಾಮನಗರ ಗೋವಾ ಮಾರ್ಗದ ರಸ್ತೆ ದುರಸ್ತಿ ಕಾರ್ಯ ಮುಗಿಯುವವರೆಗೂ ಈ ಮಾರ್ಗದಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂಬುದು ಲಾರಿ ಮಾಲೀಕರ ಆಗ್ರಹ. ಈ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.

ಗೋವಾ ದಾಟಂಗಿಲ್ಲ, ಹುಬ್ಳೀಲಿ ಸಿಗಂಗಿಲ್ಲ; ಗಡಿ ಚೆಕ್‌ಪೋಸ್ಟ್ ಬಳಿ ಕಾರು ಡೆಲಿವರಿ ಪಡೆದ ಉದ್ಯಮಿ!

ತರಕಾರಿ ವಾಹನಗಳ ಗೋವಾ ಪ್ರವೇಶಕ್ಕೆ ಯಾವುದೇ ಸಮಸ್ಯೆ ಇಲ್ಲ
ಇನ್ನು ಗೋವಾದ ಕೇರಿ ಚೆಕ್‌ಪೋಸ್ಟ್‌ನಲ್ಲಿ ಭಾರಿ ಲಾರಿಗಳಿಗೆ ಮಾತ್ರ ಪ್ರವೇಶ ನಿಷೇಧ ಹೇರಿದ್ದು ಗೋವಾಗೆ ರಾಜ್ಯದ ತರಕಾರಿ ವಾಹನಗಳು ಹೋಗಲು ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಈ ಕುರಿತು ಮಾಹಿತಿ ನೀಡಿರುವ ತರಕಾರಿ ವಾಹನಗಳ ಯೂನಿಯನ್ ಅಧ್ಯಕ್ಷ ದೀಪಕ್ ಪಾಟೀಲ್ ಬೆಳಗಾವಿಯಿಂದ ಗೋವಾಗೆ ಪ್ರತಿದಿನ 65 ರಿಂದ 70 ತರಕಾರಿ ವಾಹನಗಳು ಸಂಚರಿಸುತ್ತವೆ‌‌. ಗೋವಾ ಬಿಜೆಪಿ ಶಾಸಕ ಬಾಬು ಅಜಗಾವಕರ್‌ಗೆ ಸೇರಿದ 2 ವಾಹನಗಳು ಸಹ ಬೆಳಗಾವಿ ಗೋವಾ ಮಧ್ಯೆ ನಿತ್ಯ ಸಂಚರಿಸುತ್ತವೆ. ಬೆಳಗಾವಿಯಲ್ಲಿಯೂ ಗೋವಾ ರಾಜ್ಯದ 4 ಜನ ತರಕಾರಿ ಗುತ್ತಿಗೆದಾರರು ಇರುತ್ತಾರೆ. ಅವರು ಬೆಳಗಾವಿಯಲ್ಲಿ ತರಕಾರಿಯನ್ನು ತಗೆದುಕೊಂಡು ಗೋವಾ ತರಕಾರಿ ಅಂಗಡಿಗಳಿಗೆ ಪೂರೈಸುತ್ತಾರೆ' ಎಂದು ಮಾಹಿತಿ ನೀಡಿದ್ದಾರೆ.

click me!