ಇಬ್ಬರು ಕಾಂಗ್ರೆಸ್ ಶಾಸಕರ ವಿರುದ್ಧ ಜಾಮೀನುರಹಿತ ವಾರಂಟ್‌

By Web DeskFirst Published Oct 4, 2018, 11:22 AM IST
Highlights

50 ಸಾವಿರ ಮೆಟ್ರಿಕ್‌ ಟನ್‌ ಅದಿರು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಗೇಂದ್ರ ಹಾಗೂ ಆನಂದಸಿಂಗ್‌ ಮೇಲೆ ಲೋಕಾಯುಕ್ತ ವಿಶೇಷ ತನಿಖಾ ದಳ ಪ್ರಕರಣ ದಾಖಲಿಸಿದ್ದು, ಇದೀಗ ಈ ಮುಖಂಡರ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿಯಾಗಿದೆ.

ಬಳ್ಳಾರಿ: ಅಕ್ರಮ ಅದಿರು ಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹಾಗೂ ಹೊಸಪೇಟೆ ಶಾಸಕ ಆನಂದ ಸಿಂಗ್‌ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯದಿಂದ ಬುಧವಾರ ಜಾಮೀನುರಹಿತ ವಾರಂಟ್‌ ಜಾರಿಯಾಗಿದೆ.

50 ಸಾವಿರ ಮೆಟ್ರಿಕ್‌ ಟನ್‌ ಅದಿರು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಗೇಂದ್ರ ಹಾಗೂ ಆನಂದಸಿಂಗ್‌ ಮೇಲೆ ಲೋಕಾಯುಕ್ತ ವಿಶೇಷ ತನಿಖಾ ದಳ ಪ್ರಕರಣ ದಾಖಲಿಸಿತ್ತು. ವಿಚಾರಣೆ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಈ ಇಬ್ಬರು ಶಾಸಕರಿಗೆ ಜಾಮೀನುರಹಿತ ವಾರಂಟ್‌ ಜಾರಿ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಮಾಹಿತಿ ಕೊರತೆಯಿಂದ ಅದು ಸಾಧ್ಯವಾಗಿರಲಿಲ್ಲ. ಸಹಜವಾಗಿಯೇ ವಾರಂಟ್‌ ಜಾರಿಯಾಗಿದೆ. ಆಗಿರುವ ಪ್ರಮಾದವನ್ನು ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ಶಾಸಕ ನಾಗೇಂದ್ರ ಪ್ರತಿಕ್ರಿಯಿಸಿದ್ದಾರೆ.

ಸಚಿವ ಸ್ಥಾನಕ್ಕೆ ಕುತ್ತು:

ಅಕ್ರಮ ಅದಿರು ಸಾಗಣೆ ಹಾಗೂ ಬೇಲೆಕೇರಿ ಪ್ರಕರಣದಲ್ಲಿ ಈ ಇಬ್ಬರು ಶಾಸಕರು ವಿಚಾರಣೆ ಎದುರಿಸುತ್ತಿದ್ದಾರೆ. ಹೀಗಾಗಿ ಆಗಾಗ್ಗೆ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದಾರೆ. ಇಬ್ಬರೂ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ಈ ಸಂಬಂಧ ಹೈಕಮಾಂಡ್‌ ಮೇಲೆ ಒತ್ತಡವನ್ನೂ ಹಾಕುತ್ತಿದ್ದಾರೆ.

click me!